ರಾಜ್ಯದಲ್ಲಿ 29 ಸಾವಿರಕ್ಕೂ ಹೆಚ್ಚಿನ ಗ್ರಾಮದ ಪ್ರತಿ ಮನೆಗಳನ್ನು ತಲುಪಿ ಸಂಪರ್ಕ ಅಭಿಯಾನ ಆಯೋಜಿಸಿದ್ದೇವೆ. ಜ.7ರಂದು ಮಹಾಸಂಪರ್ಕ ಅಭಿಯಾನ ನಡೆಯಲಿದೆ. ಅಭಿಯಾನದ ಪ್ರಯುಕ್ತ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಶ್ರೀರಾಮ ಮಂದಿರದ ಚಿತ್ರ ಹಾಗೂ ಮಂದಿರ ನಿರ್ಮಾಣದ ಇತಿಹಾಸ ತಿಳಿಸುವ ನಿವೇದನಾ ಪತ್ರ ವಿತರಣೆ ಮಾಡಲಾಗುತ್ತಿದೆ.
ಬೆಂಗಳೂರು(ಡಿ.28): ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ವ್ಯಾಪ್ತಿಯಲ್ಲಿ ಜ.1ರಿಂದ ಜ.15ರವರೆಗೆ ಮಂತ್ರಾಕ್ಷತೆ, ನಿವೇದನಾ ಪತ್ರ ನೀಡುವ ಸಂಪರ್ಕ ಅಭಿಯಾನ ಹಮ್ಮಿಕೊಂಡಿರುವುದಾಗಿ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ 29 ಸಾವಿರಕ್ಕೂ ಹೆಚ್ಚಿನ ಗ್ರಾಮದ ಪ್ರತಿ ಮನೆಗಳನ್ನು ತಲುಪಿ ಸಂಪರ್ಕ ಅಭಿಯಾನ ಆಯೋಜಿಸಿದ್ದೇವೆ. ಜ.7ರಂದು ಮಹಾಸಂಪರ್ಕ ಅಭಿಯಾನ ನಡೆಯಲಿದೆ. ಅಭಿಯಾನದ ಪ್ರಯುಕ್ತ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಶ್ರೀರಾಮ ಮಂದಿರದ ಚಿತ್ರ ಹಾಗೂ ಮಂದಿರ ನಿರ್ಮಾಣದ ಇತಿಹಾಸ ತಿಳಿಸುವ ನಿವೇದನಾ ಪತ್ರ ವಿತರಣೆ ಮಾಡಲಾಗುತ್ತಿದೆ ಎಂದರು.
ಅಯೋಧ್ಯೆ ಧರ್ಮಪಥದಲ್ಲಿ 40 ಸೂರ್ಯಸ್ತಂಭ ನಿರ್ಮಾಣ: ಉರಿದಾಗ ಸೂರ್ಯನಂತೆ ಕಂಗೊಳಿಸಲಿರುವ ಬೀದಿದೀಪಗಳು
ಈ ಅಭಿಯಾನದಲ್ಲಿ ವಿಹಿಂಪದ 1.50 ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದು, ಇವರು ಮನೆಮನೆಗೆ ತೆರಳಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯ ಜ. 22ರಂದು ಪ್ರತಿ ಗ್ರಾಮದ ದೇವಸ್ಥಾನಗಳಲ್ಲಿ ಎಲ್ಲರೂ ಸೇರಿ ಭಜನೆ, ಸತ್ಸಂಗ, ರಾಮತಾರಕ ಮಂತ್ರವನ್ನು 108 ಬಾರಿ ಜಪಿಸುವಂತೆ ಕೋರಲಿದ್ದಾರೆ. ಅಂದು ಸಂಜೆ ಗ್ರಾಮದ ಮನೆಗಳ ಎದುರು ದೀಪಾವಳಿ ಹಬ್ಬದ ರೀತಿ ಐದು ದೀಪವನ್ನು ಬೆಳಗುವಂತೆ ಕರೆ ಕೊಡಲಿದ್ದಾರೆ. ದೇವಸ್ಥಾನಗಳಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಿ ಭಕ್ತರಿಗೆ ಅಯೋಧ್ಯೆ ಕಾರ್ಯಕ್ರಮ ನೇರ ವೀಕ್ಷಣೆಗೆ ಅನುವು ಮಾಡಿಕೊಡಲಿದ್ದೇವೆ ಎಂದು ತಿಳಿಸಿದರು.
ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ನಿಧಿ ಸಂಗ್ರಹ ಅಭಿಯಾನದಲ್ಲಿ ರಾಜ್ಯದಿಂದ ಸುಮಾರು ₹180 ಕೋಟಿ-₹200 ಕೋಟಿಯಷ್ಟು ದೇಣಿಗೆ ಸಂಗ್ರಹವಾಗಿತ್ತು. ಆಗಲೂ ಸುಮಾರು 1 ಲಕ್ಷ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈಗ ಉದ್ಘಾಟನೆ ಸಂಬಂಧ ನಡೆಸುತ್ತಿರುವ ಸಂಪರ್ಕ ಅಭಿಯಾನದಲ್ಲಿ ಯಾವುದೇ ರೀತಿಯ ಹಣ, ನಿಧಿ ಸಂಗ್ರಹಿಸುತ್ತಿಲ್ಲ. ಭಕ್ತರೂ ನೀಡಬಾರದು ಎಂದು ಹೇಳಿದರು.
ಇನ್ನು ರಾಮ ಮಂದಿರ ನಿರ್ಮಾಣದಲ್ಲಿ ಶ್ರಮಿಸಿದ, ವಿವಿಧ ಹಂತದಲ್ಲಿ ದುಡಿದ ಸುಮಾರು 3500 ಕಾರ್ಯಕರ್ತರು ಫೆ. 17ರಂದು ರಾಜ್ಯದಿಂದ ಅಯೋಧ್ಯೆಗೆ ತೆರಳಲಿದ್ದಾರೆ. ಫೆ. 19ರಂದು ದರ್ಶನ ಪಡೆದು ವಾಪಸ್ಸಾಗುವರು. ಇವರಿಗೆ ಊಟ, ವಸತಿಯನ್ನು ಅಯೋಧ್ಯೆ ಟ್ರಸ್ಟ್ ವ್ಯವಸ್ಥೆ ಮಾಡಿದೆ ಎಂದರು.
