ಬೆಂಗಳೂರು(ಜೂ.11): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಸತತ ಕಳೆದ ನಾಲ್ಕು ದಿನದಲ್ಲಿ (ಜೂ.7 ರಿಂದ 10) 11 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 71ಕ್ಕೆ ಏರಿಕೆಯಾಗಿದೆ.

ರಾಜ್ಯಕ್ಕೆ ಕೊರೋನಾ ಪ್ರವೇಶಿಸಿದ ಆರಂಭದಲ್ಲಿ ಸುಮಾರು 24 ದಿನಗಳಿಗೆ ಸಾವಿನ ಪ್ರಮಾಣ 10ರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿತ್ತು. ಆದರೆ, ಈಗ ನಾಲ್ಕೇ ದಿನದಲ್ಲಿ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ಫ್ಲಾಟ್‌ಗಳಲ್ಲಿ ಹುಟ್ಟುಹಬ್ಬ, ಕಿಟ್ಟಿಪಾರ್ಟಿ ಆಚರಿಸುವ ಮುನ್ನ ಈ ಸುದ್ದಿ ನೋಡಿ!

ರಾಜ್ಯದಲ್ಲಿ ಮಾ.8ರಂದು ಮೊದಲ ಕೊರೋನಾ ಸೋಂಕು ದೃಢಪಟ್ಟಿತ್ತು. ಮಾ.13ರಂದು ಸೋಂಕಿಗೆ ಮೊದಲ ವ್ಯಕ್ತಿ ಸಾವನ್ನಪ್ಪಿದ್ದರು. ನಂತರ ಏ.5ಕ್ಕೆ ಅಂದರೆ 23 ದಿನಗಳಲ್ಲಿ ಸೋಂಕಿತರ ಸಾವಿನ ಸಂಖ್ಯೆ 10ಕ್ಕೇರಿತ್ತು. ಮುಂದಿನ 24 ದಿನಗಳಲ್ಲಿ ಅಂದರೆ ಏ.29ರ ವೇಳೆಗೆ ಇನ್ನೂ ಹತ್ತು ಸೋಂಕಿತರ ಸಾವಿನ ಮೂಲಕ ಒಟ್ಟು ಸಾವಿನ ಸಂಖ್ಯೆ 20 ದಾಟಿತು. ನಂತರದ ಎಂಟೇ ದಿನದಲ್ಲಿ (ಮೇ 7) ಸಾವಿನ ಸಂಖ್ಯೆ 30 ದಾಟಿದರೆ, ಬಳಿಕ 12 ದಿನಕ್ಕೆ (ಮೇ 19) ಈ ಸಂಖ್ಯೆ 40ಕ್ಕೆ, ನಂತರದ 9 ದಿನಗಳಿಗೆ (ಮೇ 28) 50ಕ್ಕೆ, ಅದಾದ 9 ದಿನಗಳಿಗೆ (ಜೂ.6) 60ರ ಸಂಖ್ಯೆ ದಾಟಿತ್ತು. ಜೂನ್‌ 7ರಿಂದ 10ರವರೆಗೆ ನಾಲ್ಕು ದಿನದಲ್ಲಿ ಇನ್ನೂ 11 ಜನರು ಮೃತಪಟ್ಟು ಒಟ್ಟು ಸಾವಿನ ಸಂಖ್ಯೆ 71ಕ್ಕೇರಿದೆ.

ಸೋಂಕಿತರ ಸಾವು ಬೆಂಗಳೂರು ನಗರದಲ್ಲೇ ಅತಿ ಹೆಚ್ಚು. ನಗರದಲ್ಲಿ ಇದುವರೆಗೂ 22 (ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸೇರಿ), ಕಲಬುರ್ಗಿ 8, ದಕ್ಷಿಣ ಕನ್ನಡದಲ್ಲಿ 7 (ಅನ್ಯ ಕಾರಣದ ಪ್ರಕರಣವೊಂದು ಸೇರಿ), ವಿಜಯಪುರ, ಬೀದರ್‌, ದಾವಣಗೆರೆಯಲ್ಲಿ ತಲಾ ಆರು ಮಂದಿ ಸಾವನ್ನಪ್ಪಿದ್ದಾರೆ.