ಮಂಗಳೂರು ದಸರಾದಲ್ಲಿ ದೈವಗಳ ಸ್ತಬ್ಧಚಿತ್ರಕ್ಕೆ ಬ್ರೇಕ್, ಡಿಜೆ ನಿಷೇಧ!

ಈ ಬಾರಿಯ ಮಂಗಳೂರು ದಸರಾದಲ್ಲಿ ದೈವಗಳ ಸ್ತಬ್ಧ ಚಿತ್ರಗಳಿಗೆ ಬ್ರೇಕ್ ಹಾಕಲಾಗಿದೆ. ಡಿಜೆ ಸಂಸ್ಕೃತಿಗೂ ಕಡಿವಾಣ ಹಾಕೋ ಮೂಲಕ ವಿಭಿನ್ನ ದಸರಾ ಆಚರಣೆಗೆ ಮಂಗಳೂರಿನ ಕುದ್ರೋಳಿ ದೇವಸ್ಥಾನದ ಆಡಳಿತ ಹೆಜ್ಜೆ ಇಟ್ಟಿದೆ.

In Mangaluru dasara festival stop the tablo and ban DJ dakshina kannada rav

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಅ.14): ಕಾಂತಾರ ಅನ್ನೋ ಸಿನಿಮಾ ಕರಾವಳಿಯ ದೈವಗಳ ಖ್ಯಾತಿಯನ್ನ ಜಗದಗಲ ಪಸರಿಸ್ತು ಅನ್ನೋ ಖುಷಿ ಒಂದೆಡೆ, ಸಿನಿಮಾದ ಕಾರಣಕ್ಕೆ ಇದೇ ದೈವಗಳು ಕೆಲವರಿಗೆ ತಮಾಷೆಯ ವಸ್ತುವಾಗಿದೆ ಅನ್ನೋ ಬೇಸರ‌ ಮತ್ತೊಂದೆಡೆ. ಹೀಗಾಗಿಯೇ ಈ ಬಾರಿಯ ಮಂಗಳೂರು ದಸರಾದಲ್ಲಿ ದೈವಗಳ ಸ್ತಬ್ಧ ಚಿತ್ರಗಳಿಗೆ ಬ್ರೇಕ್ ಹಾಕಲಾಗಿದೆ. ಡಿಜೆ ಸಂಸ್ಕೃತಿಗೂ ಕಡಿವಾಣ ಹಾಕೋ ಮೂಲಕ ವಿಭಿನ್ನ ದಸರಾ ಆಚರಣೆಗೆ ಮಂಗಳೂರಿನ ಕುದ್ರೋಳಿ ದೇವಸ್ಥಾನದ ಆಡಳಿತ ಹೆಜ್ಜೆ ಇಟ್ಟಿದೆ.

ಕಾಂತಾರ ಭಾರತೀಯ ಸಿನಿಮಾ ರಂಗದಲ್ಲಿ ದಾಖಲೆ ಬರೆದ ಸಿನಿಮಾ. ಅದರಲ್ಲೂ ತುಳು ಮಣ್ಣಿಗಷ್ಟೇ ಸೀಮಿತವಾಗಿದ್ದ ಕರಾವಳಿಯ ದೈವಗಳ ಕಾರ್ಣಿಕವನ್ನ ಜಗದಗಲ ಪಸರಿಸಿದ ದಕ್ಷಿಣ ಭಾರತದ ಬ್ಲಾಕ್ ಬಸ್ಟರ್ ಸಿನಿಮಾ. ಸಿನಿಮಾದ ಆಚೆಗೂ ತುಳುನಾಡಿನ ಸಂಸ್ಕೃತಿ, ಸಂಸ್ಕಾರ, ನಂಬಿಕೆ, ಆಚರಣೆ ಜೊತೆಗೆ ದೈವಾರಧನೆಯ ಕಟ್ಟುಕಟ್ಟಲೆಗಳತ್ತ ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ಮತ್ತು ದೈವಾರಾಧನೆ ಅಂದ್ರೆ ಏನು? ದೈವಗಳ ಕಾರ್ಣಿಕ ಎಂಥಾದ್ದು ಅನ್ನೋದನ್ನ ಇಡೀ ಜಗತ್ತೇ ಕುತೂಹಲದಿಂದ ಅಧ್ಯಯನ ಮಾಡುವಂತೆ ಮಾಡಿದ ದಂತಕಥೆ ಕಾಂತಾರ. ಆದರೆ ಇದೇ ಸಿನಿಮಾದ ಕಾರಣದಿಂದ ದೈವಗಳ ಅವಹೇಳನವೂ ಹೆಚ್ಚಾಗಿದೆ. ನಂಬಿಕೆಯ ದೈವಗಳನ್ನ ಬೀದಿಗೆ ತಂದು ಕುಣಿದು ಕುಪ್ಪಳಿಸಲಾಗ್ತಿದೆ. ಸ್ತಬ್ಧ ಚಿತ್ರಗಳ ಹೆಸರಿನಲ್ಲಿ ದೈವಗಳ ಅವಹೇಳನ ನಡೀತಾ ಇದೆ. ಹೀಗಾಗಿಯೇ ಈ ಬಾರಿಯ ಪ್ರಖ್ಯಾತ ಮಂಗಳೂರು ದಸರಾದಲ್ಲಿ ದೈವಗಳ ಸ್ತಬ್ಧ ಚಿತ್ರಗಳಿಗೆ ಬ್ರೇಕ್ ಹಾಕಲಾಗಿದೆ. 

In Mangaluru dasara festival stop the tablo and ban DJ dakshina kannada rav

ಉಚ್ಚಿಲ ದಸರಾ: ಸಮುದ್ರ ತೀರದಲ್ಲಿ ನವದೇವಿಯರಿಗೆ ಕಡಲಾರತಿ

ವಿಶ್ವವಿಖ್ಯಾತ ಮಂಗಳೂರು ದಸರಾಕ್ಕೆ ಕುದ್ರೋಳಿ ಶ್ರೀಕ್ಷೇತ್ರ ಸಜ್ಜಾಗುತ್ತಿದೆ‌. ಈ ಬಾರಿಯ ದಸರಾ ಮೆರವಣಿಗೆ ಅ.25ರಂದು ನಡೆಯಲಿದ್ದು, ತುಳುನಾಡಿನ ದೈವಗಳ ಟ್ಯಾಬ್ಲೊ, ಸ್ತಬ್ಧಚಿತ್ರಕ್ಕೆ ಅವಕಾಶವಿಲ್ಲ ಎಂದು ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಖಡಕ್ ನಿರ್ಧಾರ ತಳೆದಿದೆ. ತುಳುನಾಡಿನಲ್ಲಿ ದೈವಗಳ ಬಗ್ಗೆ ಅಪಾರ ನಂಬಿಕೆಯಿದೆ. ಭಕ್ತರ ಈ ನಂಬಿಕೆಗೆ ಘಾಸಿಯಾಗುವಂತಹ ಕಾರ್ಯ ಆಗಬಾರದೆಂದು ದೈವಗಳನ್ನು ಅವಹೇಳನ ಮಾಡುವಂತಹ ಟ್ಯಾಬ್ಲೊಗಳಿಗೆ ಅವಕಾಶ ನೀಡುತ್ತಿಲ್ಲ‌. ಆದ್ದರಿಂದ ಇಂತಹ ಟ್ಯಾಬ್ಲೊಗಳು ಬಂದಲ್ಲಿ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟ ಪಡಿಸಲಾಗಿದೆ. ಯಾವುದೇ ಜಾತಿ, ಧರ್ಮ, ಮತದವರಿಗೆ ನಿಂದನೆ, ಅವಮಾನ ಮಾಡುವಂತಹ ಟ್ಯಾಬ್ಲೊಗಳಿಗೂ ಅವಕಾಶ ಕೊಡುವುದಿಲ್ಲ ಎಂದು ಸೂಚನೆ ನೀಡಲಾಗಿದೆ.

ಡಿಜೆ ನಿಷೇಧ, ಭಜನಾ ತಂಡಕ್ಕೆ ಅವಕಾಶ: ಪದ್ಮರಾಜ್ ಆರ್, ಕೋಶಾಧಿಕಾರಿ, ಕುದ್ರೋಳಿ ದೇವಸ್ಥಾನ

ಇನ್ನು ಈ ಬಾರಿಯ ಮಂಗಳೂರು ದಸರಾ(Mangaluru dasara)ದ ಮೆರವಣಿಗೆಯಲ್ಲಿ ಹಲವು‌ ಬದಲಾವಣೆಗಳನ್ನು ಮಾಡಲಾಗಿದೆ. ಡಿಜೆಗೆ ನಿಷೇಧ ಹಾಕಲಾಗಿದ್ದು, ಭಜನಾ ತಂಡಗಳ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಗಿದೆ. ನೂರಾರು ಟ್ಯಾಬ್ಲೋಗಳು ಭಾಗವಹಿಸೋ ಹಿನ್ನೆಲೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಸಾಮರಸ್ಯದ ದಸರಾಕ್ಕೆ ಈ ಬಾರಿ ಮಂಗಳೂರು ದಸರಾ ಸಾಕ್ಷಿಯಾಗಲಿದೆ. ಎಲ್ಲಾ ಜಾತಿ ಮತ, ಧರ್ಮದವರು ಈ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ‌. ಅದರಂತೆ ಕ್ರೈಸ್ತ ಧರ್ಮದವರು ಸೇರಿದಂತೆ ಬೇರೆ ಬೇರೆ ಧರ್ಮದವರು ಅವರವರ ಟ್ಯಾಬ್ಲೊಗಳನ್ನು ಮೆರವಣಿಗೆಯಲ್ಲಿ ತರಲಿದ್ದಾರೆ. 

ಮಂಗಳೂರು ದಸರಾ ಮೆರವಣಿಗೆ: ನಾಳೆ ಸಂಚಾರಕ್ಕೆ ಬದಲಿ ವ್ಯವಸ್ಥೆ

ಮಂಗಳೂರು ದಸರಾದಲ್ಲಿ ಪ್ರತೀ ವರ್ಷ ಒಂದೊಂದು ವಿಶೇಷವಿರುತ್ತದೆ. ಈ ಬಾರಿ ಅಕ್ಟೋಬರ್ 15ರಂದು ರಾತ್ರಿ 8ಗಂಟೆಗೆ ಶ್ರಿಕ್ಷೇತ್ರದಿಂದ ಮಂಗಳೂರು ದಸರಾ ಮ್ಯಾರಥಾನ್(Mangalore dasara Marathon) ನಡೆಸಲಿದ್ದೇವೆ. ಜ್ಯೂಯೀಸ್ ಫಿಟ್ ನೆಸ್ ಕ್ಲಬ್ ಹಾಗೂ ಶ್ರೀಕ್ಷೇತ್ರ ಜೊತೆಯಾಗಿ ಸೇರಿ ಈ ಮ್ಯಾರಥಾನ್ ನಡೆಸಲಿದೆ. ಸಾವಿರಾರು ಮಂದಿ ಈ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಮಾಹಿತಿ ನೀಡಿದ್ದಾರೆ. ಒಟ್ಟಾರೆ ದೈವಗಳ ಅವಹೇಳನ ವಿರುದ್ದ ಈ ಬಾರಿಯ ಮಂಗಳೂರು ದಸರಾ ಹೊಸ ಸಂದೇಶ ಸಾರಿದೆ. ದೇವಸ್ಥಾನದ ಆಡಳಿತ ಮಂಡಳಿಯ ಈ ನಡೆ ಭಾರೀ ಪ್ರಸಂಶೆಗೆ ಕಾರಣವಾಗಿದೆ.

Latest Videos
Follow Us:
Download App:
  • android
  • ios