ರಾಜ್ಯದಲ್ಲಿ ಮೊದಲ 1000 ಕೇಸ್‌ಗೆ 68 ದಿನ, ಈಗ 10 ದಿನ!
ಕರ್ನಾಟಕದಲ್ಲಿ ಮೊದಲ 1000 ಕೇಸ್‌ಗೆ 68 ದಿನ, ಈಗ 10 ದಿನ!| ರಾಜ್ಯದಲ್ಲಿ ಕೊರೋನಾ ಹರಡುವ ವೇಗ ತೀವ್ರ ಏರಿಕೆ
ಬೆಂಗಳೂರು(ಮೇ.25): ರಾಜ್ಯದಲ್ಲಿ ಮೊದಲ 500 ಪ್ರಕರಣ ವರದಿಯಾಗಲು 48 ದಿನ ತೆಗೆದುಕೊಂಡಿದ್ದ ಕೊರೋನಾ ಸೋಂಕು ಈಗ ಶರವೇಗದಲ್ಲಿ ಹರಡುತ್ತಿದ್ದು, ಕಳೆದ 4 ದಿನಗಳಲ್ಲೇ ಬರೋಬ್ಬರಿ 631 ಹೊಸ ಪ್ರಕರಣಗಳು ವರದಿಯಾಗಿವೆ. ಅಂತೆಯೇ, ಮೊದಲ 1000 ಪ್ರಕರಣ ದೃಢಗೊಳ್ಳಲು 68 ದಿನ ತಗುಲಿದ್ದರೆ, ನಂತರ ಕೇವಲ 10 ದಿನಗಳಲ್ಲಿ ಸೋಂಕಿತರ ಸಂಖ್ಯೆ 2000 ಗಡಿ ದಾಟಿದೆ.
ರಾಜ್ಯದಲ್ಲಿ ಮಾ.9ರಂದು ಮೊದಲ ಸೋಂಕು ವರದಿಯಾಗಿತ್ತು. 22 ದಿನಗಳ ಬಳಿಕ 100 ಪ್ರಕರಣದ ಮೈಲುಗಲ್ಲು ದಾಟಿದ್ದ ಸೋಂಕು ಏ.25ಕ್ಕೆ 500ರ ಗಡಿ ತಲುಪಿತ್ತು. ಈ ಮೂಲಕ ಮೊದಲ 500 ಸೋಂಕು ಹರಡಲು ಬರೋಬ್ಬರಿ 48 ದಿನ ತೆಗೆದುಕೊಂಡಿತ್ತು.
ರಾಜ್ಯದ ಅರ್ಧಕ್ಕರ್ಧ ಕೊರೋನಾ ಸೋಂಕು ‘ಅನ್ಯ ರಾಜ್ಯದವರದು’!
ಬಳಿಕ ಏ.26ರಿಂದ ಮೇ 15ಕ್ಕೆ ಸೋಂಕು ಸಂಖ್ಯೆ 1,000ಕ್ಕೆ ಏರಿಕೆಯಾಗಿದ್ದು, 20 ದಿನದಲ್ಲೇ 500ರಿಂದ 1000ಕ್ಕೆ ಸೋಂಕು ಪ್ರಕರಣ ಹೆಚ್ಚಾಗಿದೆ. ಇದಕ್ಕೆ ಒಟ್ಟಾರೆ 68 ದಿನ ತಗಲಿತ್ತು. ಬಳಿಕ ಮೇ 16ರಿಂದ 21ಕ್ಕೆ 1,000ದಿಂದ 1500ರ ಗಡಿ ತಲುಪಿದ್ದ ಸೋಂಕು, ಇದಕ್ಕಾಗಿ ಕೇವಲ 6 ದಿನ ತೆಗೆದುಕೊಂಡಿದೆ. ಇದೀಗ ಮೇ 24ರಂದು 2 ಸಾವಿರ ಪ್ರಕರಣಗಳ ಗಡಿ ದಾಟಿ ಬರೋಬ್ಬರಿ 2,089 ಪ್ರಕರಣಗಳು ವರದಿಯಾಗಿವೆ. ಕೊನೆಯ 631 ಪ್ರಕರಣಗಳಿಗೆ ಕೇವಲ 4 ದಿನ ತೆಗೆದುಕೊಂಡಿರುವುದು ತೀವ್ರ ಆತಂಕ ಸೃಷ್ಟಿಸಿದೆ.
ಕಳೆದ ಒಂದು ವಾರದಿಂದ ಬರೋಬ್ಬರಿ 946 ಪ್ರಕರಣ ವರದಿಯಾಗಿದ್ದು, ಇದರಲ್ಲಿ 703 ಸೋಂಕಿತರು ಹೊರ ರಾಜ್ಯದವರೇ ಆಗಿದ್ದಾರೆ. ಕಳೆದ ಒಂದು ವಾರದಿಂದ ವರದಿಯಾಗುತ್ತಿರುವ ಬಹುತೇಕ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಲ್ಲೇ ವರದಿಯಾಗುತ್ತಿವೆ. ಹೀಗಾಗಿ ಸೋಂಕಿನ ವೇಗ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ರಾಜ್ಯದ ಅರ್ಧಕ್ಕರ್ಧ ಕೊರೋನಾ ಸೋಂಕು ‘ಅನ್ಯ ರಾಜ್ಯದವರದು’!
ಸೋಂಕು ದಿನಗಳು
1-500 : 48 ದಿನ
500 : 1000 - 20 ದಿನ
1000-1500: 6 ದಿನ
1,500 - 2000: 4 ದಿನ
(ಕಳೆದ 4 ದಿನದಲ್ಲಿ 631 ಪ್ರಕರಣ)
ದಿನಾಂಕ ಸೋಂಕು
ಮಾ.9 - 1
ಏ.25 - 500
ಮೇ 15 -1000
ಮೇ 21 -1500
ಮೇ 24 - 2000 (2,089)