ಬೆಂಗಳೂರು(ಮೇ.24): ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಸೋಂಕು ತೀವ್ರ ಪ್ರಮಾಣದಲ್ಲಿ ಉಲ್ಬಣಗೊಳ್ಳುತ್ತಿದ್ದು, ಸೋಂಕಿತರ ಸಂಖ್ಯೆ ಕೇವಲ 9 ದಿನಗಳಲ್ಲೇ ದ್ವಿಗುಣಗೊಂಡಿದೆ. ತನ್ಮೂಲಕ ರಾಷ್ಟ್ರೀಯ ಸರಾಸರಿಗಿಂತ (14 ದಿನಕ್ಕೆ ದ್ವಿಗುಣ) ವೇಗವಾಗಿ ರಾಜ್ಯದಲ್ಲಿ ಸೋಂಕು ದುಪ್ಪಟ್ಟು ಆಗಲು ಆರಂಭವಾಗಿದ್ದು, ತೀವ್ರ ಆತಂಕ ಹುಟ್ಟಿಸಿದೆ.

ಕೊರೋನಾ ರಣಕೇಕೆ: ರಾಜ್ಯದಲ್ಲಿ ಒಂದೇ ದಿನ 216 ಕೇಸ್, ಹೊರರಾಜ್ಯದವರ ಪಾಲು 196!

ಮೇ 14ರಂದು 27 ಪ್ರಕರಣ ವರದಿಯಾಗುವ ಮೂಲಕ ಸೋಂಕು ಸಂಖ್ಯೆ 987ಕ್ಕೆ ಹೆಚ್ಚಾಗಿತ್ತು. ಮೊದಲ 980 ಪ್ರಕರಣಕ್ಕೆ ಮಾ.9ರಿಂದ ಮೇ 14ರವರೆಗೆ ಬರೋಬ್ಬರಿ 65 ದಿನ ತೆಗೆದುಕೊಂಡಿದ್ದ ಸೋಂಕು, ನಂತರ ಒಂಬತ್ತು ದಿನಗಳಲ್ಲೇ ದುಪ್ಪಟ್ಟಾಗಿದೆ. ಮೇ 14ರಿಂದ 9 ದಿನಗಳಲ್ಲೇ ಬರೋಬ್ಬರಿ 980 ಪ್ರಕರಣ ವರದಿಯಾಗುವ ಮೂಲಕ ಸೋಂಕಿನ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ.

ಇದಲ್ಲದೆ ರಾಜ್ಯದಲ್ಲಿ ಸರಾಸರಿ ಸೋಂಕು ದ್ವಿಗುಣಗೊಳ್ಳುವ ದಿನಗಳ ಸಂಖ್ಯೆಯೂ ಕಡಿಮೆಯಾಗಿದ್ದು, ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ದಿನಗಳಲ್ಲಿ ಸೋಂಕು ದುಪ್ಪಟ್ಟಾಗುವ ಮೂಲಕ ಆತಂಕ ಹೆಚ್ಚಿಸಿದೆ. ರಾಜ್ಯದಲ್ಲಿ ಮೇ ಮೊದಲ ವಾರದಲ್ಲಿ ಪ್ರತಿ 21 ದಿನಗಳಿಗೆ ಪ್ರಕರಣಗಳು ದ್ವಿಗುಣಗೊಳ್ಳುತ್ತಿದ್ದವು. ಈ ವೇಳೆ ರಾಷ್ಟ್ರ ಮಟ್ಟದಲ್ಲಿ ಸರಾಸರಿ 12 ದಿನಗಳಿಗೆ ಸೋಂಕು ದ್ವಿಗುಣಗೊಳ್ಳುತ್ತಿತ್ತು. ಹೀಗಾಗಿ ದೇಶಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಸೋಂಕು ಭಾರೀ ನಿಯಂತ್ರಣದಲ್ಲಿತ್ತು. ಆದರೆ, ಮೇ 22ರ ವೇಳೆಗೆ ಸೋಂಕು ದ್ವಿಗುಣಗೊಳ್ಳುವ ಅವಧಿ 12 ದಿನಗಳಿಗೆ ಕುಸಿದಿದೆ. ಇನ್ನು ದೇಶದ ಸರಾಸರಿ 14ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ದೇಶದ ಸರಾಸರಿಗಿಂತ ಹೆಚ್ಚು ಪ್ರಮಾಣದಲ್ಲಿ ಸೋಂಕು ವರದಿಯಾಗುತ್ತಿದೆ. ಶೇ.5.6ರಷ್ಟಿದ್ದ ನಿತ್ಯದ ಸೋಂಕು ಪ್ರಕರಣಗಳ ಬೆಳವಣಿಗೆ ದರ ಏಕಾಏಕಿ ಶೇ.10ಕ್ಕೂ ಹೆಚ್ಚಾಗಿದೆ.

ಕ್ವಾರಂಟೈನ್‌ನಲ್ಲಿರುವ ಅನ್ಯ ರಾಜ್ಯದಿಂದ ವಾಪಸಾಗಿರುವವರಲ್ಲೇ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಆತಂಕವಿಲ್ಲ. ಆದರೆ ಅಕ್ರಮವಾಗಿ ರಾಜ್ಯಕ್ಕೆ ವಾಪಸಾಗಿ ಕ್ವಾರಂಟೈನ್‌ ತಪ್ಪಿಸಿಕೊಂಡವರಲ್ಲಿ ಸೋಂಕು ಉಂಟಾಗಿದ್ದರೆ ಮುಂದಿನ ಒಂದು ವಾರದಲ್ಲಿ ರಾಜ್ಯಕ್ಕೆ ಮತ್ತಷ್ಟುಅಪಾಯ ಉಂಟಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.