ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಹೆಣಕ್ಕೆ ಬಳಸುವ ಉಪ್ಪು ಕೈದಿಗಳ ಆಹಾರಕ್ಕೆ?: ವಿಡಿಯೋ ವೈರಲ್
ಹೆಣಕ್ಕೆ ಹಾಕುವ ಉಪ್ಪುನ್ನೇ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಆಹಾರಕ್ಕೆ ಉಪಯೋಗಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ.
ಜಗದೀಶ ವಿರಕ್ತಮಠ
ಬೆಳಗಾವಿ (ಆ.28): ಹೆಣಕ್ಕೆ ಹಾಕುವ ಉಪ್ಪುನ್ನೇ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಆಹಾರಕ್ಕೆ ಉಪಯೋಗಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ. ಸದಾ ಒಂದಿಲ್ಲೊಂದು ಅಕ್ರಮ ಚಟುವಟಿಕೆಗಳ ಮೂಲಕ ಹೆಸರು ಕೆಡಿಸಿಕೊಳ್ಳುತ್ತಿರುವ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಅಡುಗೆಗೆ ಮೃತದೇಹಕ್ಕೆ ಉಪಯೋಗಿಸುವ ಉಪ್ಪನ್ನು ಬಳಸುತ್ತಿದೆಯಂತೆ!? ಈ ಕುರಿತು ಕಾರಾಗೃಹದಲ್ಲಿ ಬಂಧಿಯಾಗಿರುವ ಕೈದಿಯೋರ್ವ ವಿಡಿಯೋ ಮಾಡಿ ಹರಿಬಿಟ್ಟಿರುವುದು ಸದ್ಯ ಚರ್ಚಿತ ಪ್ರಕರಣವಾಗಿದೆ.
ಅಂತ್ಯಕ್ರಿಯೆ ಹಾಗೂ ಮರಣೋತ್ತರ ಪರೀಕ್ಷೆ ವೇಳೆ ಮೃತದೇಹ ಬೇಗ ಹಾಳಾಗಬಾರದು ಎಂಬ ಕಾರಣಕ್ಕೆ ಹಾಗೂ ಹೆಣವನ್ನು ಸಂರಕ್ಷಿಸಿಡಲು ಕ್ರಿಸ್ಟಲ್ ಉಪ್ಪನ್ನು ಬಳಕೆ ಮಾಡಲಾಗುತ್ತದೆ. ಸದ್ಯ ಹಿಂಡಲಗಾ ಜೈಲಿನ ಕೈದಿಗಳ ಆಹಾರಕ್ಕೂ ಇದೇ ಉಪ್ಪು ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದೆ. ಉಪ್ಪಿನ ಪ್ಯಾಕೆಟ್ ಮೇಲೆ ಈ ಉಪ್ಪನ್ನು ಆಹಾರವಾಗಿ ಬಳಸಲು ನಿಷೇಧಿಸಲಾಗಿದೆ. ಇದನ್ನು ಸಂರಕ್ಷಣೆಯ ಸಾಧನವಾಗಿ ಮಾತ್ರ ಬಳಸಬೇಕು ಎಂಬ ಎಚ್ಚರಿಕೆಯ ಬರಹವನ್ನು ದೊಡ್ಡ ಅಕ್ಷರಗಳಲ್ಲಿಯೇ ನಮೂದಿಸಲಾಗಿದೆ. ಹಾಗಿದ್ದರೂ ಕೈದಿಗಳಿಗೆ ಮಾತ್ರ ಇದೇ ಉಪ್ಪನ್ನು ನೀಡಲಾಗುತ್ತಿದೆ. ಈ ಉಪ್ಪು ಆಯೋಡಿನ್ ರಹಿತವಾಗಿದ್ದು, ಇದೇ ಉಪ್ಪನ್ನು ಸೇವಿಸಬೇಕಾದ ಅನಿವಾರ್ಯತೆ ಕೈದಿಗಳಿಗೆ ಎದುರಾಗಿದೆ.
ಮಾನವ-ಪ್ರಾಣಿ ಸಂಘರ್ಷ ಪರಿಹಾರಕ್ಕೆ ಅವಿರತ ಪ್ರಯತ್ನವಿರಲಿ: ರಿಷಬ್ ಶೆಟ್ಟಿ
ಅಲ್ಲದೇ, ಇಲ್ಲಿ ಲಂಚ ಕೊಟ್ಟರೆ ರೂಮ್‌ಗೆ ಟಿವಿ ಬರುತ್ತದೆ. ಕೈಗೆ ಮೊಬೈಲ್ ಕೂಡ ಸಿಗುತ್ತದೆ! ಮೊಬೈಲ್ ಬಳಕೆ ನಿಷೇಧವಿದ್ದರೂ ಹಿಂಡಲಗಾ ಜೈಲಿನಲ್ಲಿ ರಾಜಾರೋಷವಾಗಿ ಕೈದಿಗಳು ಮೊಬೈಲ್, ಟಿವಿ ಬಳಸುತ್ತಿರುವ ದೃಶ್ಯ ಸದ್ಯ ಲಭ್ಯವಾಗಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಜುಲೈ 12ರಂದು ಹಿಂಡಲಗಾ ಜೈಲಿನಲ್ಲಿ ರೆಕಾರ್ಡ್ ಅದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಹ ಕೈದಿಗಳ ಜತೆ ಮಾತನಾಡುತ್ತ ವಿಡಿಯೋ ರೆಕಾರ್ಡ್ ಮಾಡಿರುವ ಅನಾಮಧೇಯ ಕೈದಿ, ಈ ಜೈಲಿನಲ್ಲಿ ಮನುಷ್ಯರು ತಿನ್ನಲು ಯೋಗ್ಯವಲ್ಲದ ಉಪ್ಪನ್ನು ಬಳಸಲಾಗುತ್ತಿದೆ. ಧರ್ಮಟ್ಟಿಮತ್ತು ಭಜಂತ್ರಿ ಎಂಬುವವರು ಕೈದಿಗಳಿಗೆ ಮೊಬೈಲ್ ಮಾರಾಟ ಮಾಡುತ್ತಾರೆ. ಜೈಲಿನ ಸಿಬ್ಬಂದಿಗೆ ಹತ್ತು ಸಾವಿರ ರೂಪಾಯಿ ಕೊಟ್ಟರೆ ಸಾಕು ಸ್ಯಾಮ್‌ಸಂಗ್ ಬೇಸಿಕ್ ಮೊಬೈಲ್ ಫೋನ್ ಕೈದಿಗಳ ಕೈ ಸೇರುತ್ತಿದೆ ಎಂದು ಆರೋಪಿಸಿದ್ದಾನೆ.
ದೇವೇಗೌಡರ ಬದುಕಿನ ತಪಸ್ಸಿಗೆ ಫಲ ಸಿಗಲಿದೆ: ನಿರ್ಮಲಾನಂದನಾಥ ಶ್ರೀ
ಕ್ರಿಸ್ಟಲ್ ಉಪ್ಪು ಸೇವನೆಗೆ ಅರ್ಹವಲ್ಲ: ಕ್ರಿಸ್ಟಲ್ ಉಪ್ಪು ಬಹಳ ಗಡುಸಾಗಿರುವುದರಿಂದ ಅದನ್ನು ಆಹಾರ ತಯಾರಿಸಲು ಬಳಕೆ ಮಾಡುವುದಿಲ್ಲ. ಸರ್ಕಾರ ಆಯೋಡಿನ್‌ಯುಕ್ತ ಉಪ್ಪನ್ನೇ ಬಳಕೆ ಮಾಡುವಂತೆ ತಿಳಿಸಿದೆ. ಅಲ್ಲದೇ ಉಪ್ಪಿನ ಪ್ಯಾಕೆಟ್‌ಗಳ ಮೇಲೆ ಮನುಷ್ಯರು ಸೇವನೆ ಮಾಡಬಾರದೆಂದು ನಮೂದಿಸಿದೆ. ಹೀಗಿರುವಾಗ ಇಂಥ ಉಪ್ಪನ್ನು ಯಾವುದೇ ಕಾರಣಕ್ಕೂ ಅಡುಗೆಗೆ ಬಳಸಬಾರದು. ಕ್ರಿಸ್ಟಲ್ ಉಪ್ಪನ್ನು ಮೃತದೇಹ ಬೇಗನೇ ಹಾಳಾಗದಂತೆ ತಡೆಯಲು ಸಂರಕ್ಷಣಾ ಸಾಧನವನ್ನಾಗಿ ಬಳಕೆ ಮಾಡಲಾಗುತ್ತದೆ ಎಂದು ತಜ್ಞ ವೈದ್ಯರೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.