12 ದಿನದಲ್ಲಿ 46 ಸಾವಿರ ಕಿಮೀ ಚಲಿಸಿದ ಸರ್ಕಾರಿ ಕಾರು: ಗೋಲ್‌ಮಾಲ್ ಬಯಲು!
12 ದಿನದಲ್ಲಿ 46 ಸಾವಿರ ಕಿಮೀ ಚಲಿಸಿದ ಸರ್ಕಾರಿ ಕಾರು!| ಶೋರೂಮ್-ಲಾಗ್‌ಬುಕ್ ಲೆಕ್ಕ ತಾಳೆಯಾಗುತ್ತಿಲ್ಲ| ಮಾಹಿತಿ ಹಕ್ಕು ಕಾಯ್ದೆಯಡಿ ಗೋಲ್‌ಮಾಲ್ ಬಯಲು
ಮುನಿರಾಬಾದ್[ಜ.12]: ಪಟ್ಟಣದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಕಚೇರಿಗೆ ಸಂಬಂಧಿಸಿದ ಕಾರೊಂದು 12 ದಿನದಲ್ಲಿ ಬರೋಬ್ಬರಿ 45.801 ಕಿಲೋ ಮೀಟರ್ ಸಂಚರಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಹಾಗಾದರೆ ಅಧಿಕಾರಿಗಳು ಹಗಲು-ರಾತ್ರಿಯನ್ನದೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ್ದಾರಾ? ಇದಕ್ಕೆ ಯಾರ ಬಳಿ ಉತ್ತರವಿಲ್ಲ.
ಕಾಡ ಕಚೇರಿಯ ಕೆಎ 37, ಎನ್. 1038 ಇನೋವಾ ಕಾರು ಮಾ. 29, 2018ರಿಂದ ಏ. 9,2018ರ 12 ದಿನಗಳ ಅವಧಿಯಲ್ಲಿ 45.801 ಕ್ರಮಿಸಿದೆ. 12 ದಿನದಲ್ಲಿ ಇಷ್ಟೊಂದು ದೂರ ಕ್ರಮಿಸಲು ಸಾಧ್ಯವೇ ಎಂಬ ಚರ್ಚೆ ಇದೀಗ ಆರಂಭವಾಗಿದೆ.
ಆರ್‌ಟಿಐನಿಂದ ಬಯಲು:
ಗುತ್ತಿಗೆದಾರ ಎಫ್.ಜೆಡ್. ರೆಹೆಮತುಲ್ಲಾಖಾಮ್ ಕಾಡಾ ಕಚೇರಿಯ ಕಾರು ಎಷ್ಟುದೂರ ಕ್ರಮಿಸಿದೆ ಎಂಬುವುದರ ಮಾಹಿತಿ ಪಡೆಯಲು ಮಾಹಿತಿ ಹಕ್ಕಿನಡಿ ಪ್ರಶ್ನಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಮಾ.29,2018ರಂದು ಕಾರು ಶೋರೂಮ್‌ಗೆ ಸರ್ವಿಸ್‌ಗೆ ಹೋದಾಗ ಬಿಲ್‌ನಲ್ಲಿ ಮೈಲೇಜ್ ರೀಡಿಂಗ್ 67.130 ಇದೆ. ಬಳಿಕ 12 ದಿನಗಳ ಬಳಿಕ ಇದೇ ಕಾರನ್ನು ಮತ್ತೆ ಶೋರೂಮ್‌ಗೆ ತೆಗೆದುಕೊಂಡು ಹೋದಾಗ ರಶೀದಿಯಲ್ಲಿ ಕಾರಿನ ಮೈಲೇಜ್ ರಿಡಿಂಗ್ 1.12.931 ಕಿಲೋ ಮೀಟರ್ ಇದೆ. ಅಂದರೆ 12 ದಿನಗಳ ಅಂತರದಲ್ಲಿ ಕಾರು ಬರೋಬರಿ 45.801 ಕ್ರಮಿಸಿತೇ ಎಂಬ ಅನುಮಾನ ಎದುರಾಗಿದೆ. ಇನೋವಾ ಕಾರು 10 ಸಾವಿರ ಕಿಲೋ ಮೀಟರ್ ಕ್ರಮಿಸಿದಾಗ ಆಯಿಲ್ ಹಾಗೂ ಟಯರ್ ಬದಲಾಯಿಸಬೇಕು. ಆದರೆ, ಇದ್ಯಾವುದನ್ನು ಮಾಡಿಲ್ಲ.
ಭಾರೀ ಗೋಲ್‌ಮಾಲ್:
ಶೋರೂಂ ಮಾಹಿತಿಗೂ ಲಾಗ್ ಬುಕ್ ಮಾಹಿತಿಗೂ ಹೊಂದಾಣಿಕೆ ಆಗುತ್ತಿಲ್ಲ. ಸರ್ಕಾರಿ ಕಾರು ನಿತ್ಯ ಎಷ್ಟುಕಿಲೋ ಮೀಟರ್ ಸಂಚರಿಸಿದೆ ಎಂಬುವುದನ್ನು ಲಾಗ್‌ಬುಕ್‌ನಲ್ಲಿ ಬರೆದು ಸಂಬಂಧಪಟ್ಟಅಧಿಕಾರಿಗಳು ಸಹಿ ಮಾಡುತ್ತಾರೆ. ಆದರೆ, ಲಾಗ್‌ಬುಕ್‌ನಲ್ಲಿ 45.801 ಕಿಲೋ ಮೀಟರ್ ಸಂಚರಿಸಿದ ಮಾಹಿತಿಯೇ ಇಲ್ಲ. ಲಾಗ್‌ಬುಕ್ ಮಾಹಿತಿ ಪ್ರಕಾರ ಮಾ. 29, 2018ರಂದು ಮುನಿರಾಬಾದ್‌ನಿಂದ ಹೊಸಪೇಟೆಗೆ ಸರ್ವಿಸ್‌ಗಾಗಿ ಶೋರೂಂಗೆ ಚಲಿಸಿದ ಮಾಹಿತಿ ಮಾತ್ರ ನಮೂದಿಸಿದ್ದು ಅಂದು 50 ಲೀಟರ್ ಪೆಟ್ರೋಲ್ ಹಾಕಿಸಲಾಗಿದೆ. ಮಾ. 31, 2018ರಂದು ಅದೇ ವಾಹನ ಮುನಿರಾಬಾದ್‌ನಿಂದ ಕೊಪ್ಪಳಕ್ಕೆ ಹೋಗಿರುವುದಾಗಿ ನಮೂದಿಸಲಾಗಿದೆ. ಏ. 1ಮತ್ತು 2, 2018ರಂದು ವಾಹನ ಚಲಿಸಿಲ್ಲ.
ನಿಮ್ಮ ಗಮನಕ್ಕೆ: ಸೀಜ್ ಮಾಡಿದ ಮಲ್ಯ ಆಸ್ತಿ ಏನ್ಮಾಡಬೇಕೆಂದು ಹೇಳಿದ ಕೋರ್ಟ್!
ಏ. 3ರಂದು ವಾಹನ ಕೊಪ್ಪಳದಿಂದ ಹೊಸಪೇಟೆಗೆ ಟೆಸ್ಟ್ ಅಂಡ್ ಟ್ರೈಯಲ್ ಗೆ ಹೊಸಪೇಟೆಯ ಟೋಯೋಟಾ ಶೋರೂಂಗೆ ಹೋಗಿದೆ. ಏ. 4ರಂದು ಹೊಸಪೇಟೆಯಿಂದ ಕೊಪ್ಪಳಕ್ಕೆ ಹೋಗಿ ಬಂದಿದೆ. ಏ. 5ರಿಂದ ಏ. 8ರ ವರೆಗೆ ವಾಹನ ಕೊಪ್ಪಳದಲ್ಲಿದ್ದು ಚಲಿಸಿಲ್ಲ. ಏ. 9ರಂದು ಮುಂಭಾಗದ ಗ್ಲಾಸ್ ಬದಲಾವನೆಗಾಗಿ ಶೋರೂಮ್‌ಗೆ ಹೋಗಿದೆ. ವಾಹನವು ಏ. 9,10ರಂದು ಶೋರೂಂನಲ್ಲಿ ಇದೆ ಎಂದು ಲಾಗ್‌ಬುಕ್‌ನಲ್ಲಿ ನಮೂದಿಸಲಾಗಿದೆ. ಆದರೆ ಕಂಪನಿಯ ಓರಿನಜಿನಲ್ ರಶೀದಿಯಲ್ಲಿ ಇನೋವಾ ಕಾರ್ ಅದೇ ದಿನ ಕಂಪನಿಯಿಂದ ಹೊರೆಗೆ ಹೋಗಿರುವುದಾಗಿ ನಮೂದಿಸಲಾಗಿದೆ. ಅಫೀಸಿನ ಲಾಗ್‌ಬುಕ್‌ನಲ್ಲಿ ಎಷ್ಟುಕಿಮೀ ಓಡಿದೆ ಎಂಬ ನಿಖರ ಮಾಹಿತಿ ಹಾಗೂ ವಾಹನ ಚಾಲಕನ ಸಹಿ, ಸಂಬಂಧಪಟ್ಟಅಧಿಕಾರಿ ಸಹಿ ಸಹ ಇಲ್ಲದೆ ಇರುವುದು ಅನುಮಾನಕ್ಕೆ ಎಡೆ ಮಾಡಿದೆ. ಕಾಡಾದ ಉಪ ಅಡಳಿತಾಧಿಕಾರಿ ಶೋರೂಂನ ಎರಡು ರಶೀದಿ ಹಾಗೂ ಕಚೇರಿಯ ಎರಡು ಲಾಗ್‌ಬುಕ್‌ಗೆ ದೃಢೀಕರಣ ಮಾಡಿ ಸಹಿ ಹಾಕಿ ಮಾಹಿತಿದಾರರಿಗೆ ನೀಡಿದ್ದಾರೆ.
ಅಂದಾಜು 5 ಲಕ್ಷ ನಷ್ಟ:
ಇನೋವಾ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 7ರಿಂದ 8 ಕಿಲೋ ಮೀಟರ್ ನೀಡುತ್ತದೆ. ಹಾಗಾದರೆ 45.801 ಕಿಲೋ ಮೀಟರ್‌ಗೆ ಒಟ್ಟು . 5 ಲಕ್ಷಕ್ಕೂ ಅಧಿಕ ಸರ್ಕಾರದ ಹಣ ದುರುಪಯೋಗವಾಗಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ತನಿಖೆ ನಡೆಸಿದರೆ ಸತ್ಯಾಂಶ ತಿಳದು ಬರಲಿದೆ.
ನಾನು ದೂರವಾಣಿಯಲ್ಲಿ ಈ ವಿಷಯವನ್ನು ಚರ್ಚಿಸುವುದಿಲ್ಲ. ಈ ವಿಷಯ ಮಾಹಿತಿ ಹಕ್ಕು ಆಯೋಗಕ್ಕೆ ಹೋಗಿದ್ದು ಅಲ್ಲಿ ಕಾಡಾ ಅಧಿಕಾರಿಗಳು ಸಮಜಾಯಿಸಿ ನೀಡಲಿದ್ದಾರೆ.
ಪಾಟೀಲ್ ಕಾಡಾ ಉಪ ಅಡಳಿತಾಧಿಕಾರಿ
ಕಾಡಾ ಅಧಿಕಾರಗಳು ನೀಡಿರುವ ಲಾಗ್‌ಬುಕ್‌ನಲ್ಲಿ ಸಮಪರ್ಕವಾದ ಮಾಹಿತಿ ಇಲ್ಲ. ಒಂದು ಸರ್ಕಾರಿ ಕಾರು 12 ದಿನದಲ್ಲಿ 45,801 ಕಿಮಿ. ಕ್ರಮಿಸಿದೆ. ಇಷ್ಟೊಂದು ದೂರ ಕ್ರಮಿಸಲು ಯಾವ ಅಧಿಕಾರಿ ನಿರ್ದೇಶನ ನೀಡಿದ್ದಾರೆ? ಹಾಗೂ ಎಷ್ಟುಲಕ್ಷ ರುಪಾಯಿ ಪೆಟ್ರೋಲ್ ಇದಕ್ಕೆ ವ್ಯಯವಾಗಿದೆ ಎಂಬುವುದರ ಬಗ್ಗೆ ಸಮಗ್ರ ತನಿಖೆ ಆಗಬೇಕು.
ಎಫ್.ಜೆಡ್. ರೆಹಮತುಲ್ಲಾ ಖಾನ್ ಗುತ್ತಿಗೆದಾರ