ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿ ಸಾರ್ವಜನಿಕರು ಪರದಾಡಿದರು. ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಬಿರುಸಿನ ಮಳೆಯಿಂದಾಗಿ ಕೆಲವೆಡೆ ಜನಜೀವನ ಅಸ್ತವ್ಯಸ್ತವಾಯಿತು. ಮರ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಯಿತು. ಬಸ್ ಅಪಘಾತವೂ ಸಂಭವಿಸಿದೆ. ಬುಧವಾರವೂ ರೆಡ್ ಅಲರ್ಟ್ ಮುಂದುವರಿದಿದ್ದು, ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚಿಸಿದೆ.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ 20): ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇಂದು ಮುಂಗಾರು ಪೂರ್ವ ಮಳೆ ಅಬ್ಬರಿಸಿದ ಪರಿಣಾಮ ಸಾರ್ವಜನಿಕರು ಪರದಾಡುವಂತಾಯಿತು. ಮಧ್ಯಾಹ್ನದ ವೇಳೆಗೆ ಎಲ್ಲೆಡೆ ಮಳೆಯ ಅಬ್ಬರ ತಗ್ಗಿದರೆ, ಮತ್ತೆ ಕೆಲವೆಡೆ ಬಿಡುವು ನೀಡಿದೆ.ಹವಾಮಾನ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರ ನಿನ್ನೆಯಷ್ಟೇ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಈ ಕಾರಣಕ್ಕೆ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಇದರ ಬೆನ್ನಲ್ಲೇ ಬೆಳಗಿನಿಂದಲೇ ಎಡಬಿಡದೆ ಮಳೆ ಸುರಿಯಲಾರಂಭಿಸಿತು.
ಜನತೆ ಮನೆಯಿಂದ ಹೊರ ಬರಲು ಹಿಂದೇಟು : ಚಿಕ್ಕಮಗಳೂರು ನಗರದಲ್ಲಿ ಬೆಳಗ್ಗೆ ಸಾರ್ವಜನಿಕರ ದೈನಂದಿನ ಕೆಲಸ ಕಾರ್ಯಗಳಿಗೆ ತೊಡಕಾಯಿತು. ಬೀದಿ ಬದಿ ವ್ಯಾಪಾರಿಗಳು, ಕಾರ್ಮಿಕರು, ನೌಕರ, ಸಿಬ್ಬಂದಿಗಳು ಪರದಾಡುವಂತಾಯಿತು. ಜನತೆ ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಗಿತ್ತು.ಚಿಕ್ಕಮಗಳೂರು ಮತ್ತು ಮೂಡಿಗೆರೆ ತಾಲ್ಲೂಕುಗಳಲ್ಲಿ ಬಿರುಸಿನ ಮಳೆಯಾಗಿದ್ದರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲ್ಲೂಕಿನ ವಿವಿಧೆಡೆ ಜೋರು ಮಳೆ ಸುರಿದಿದೆ ಬಯಲಿನ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲ್ಲೂಕುಗಳಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಕೆಲವಡೆ ಬಿರುಸಿನ ಮಳೆಯಾಗಿದೆ.
ಬೀಗರೂಟಕ್ಕೆ ತೊಡಕಾದ ಗಾಳಿ ಮಳೆ ಅಬ್ಬರ: ಬಾರಿ ಬಿರುಗಾಳಿ ಮಳೆಯ ಪರಿಣಾಮ ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರದಲ್ಲಿ ಬೀಗರೂಟದ ಕಾರ್ಯಕ್ರಮವೊಂದಕ್ಕೆ ತೊಡಕಾಗಿದೆ. ಮಳೆಗೆ ಶಾಮಿಯಾನ ತೋಯ್ದು ತೊಪ್ಪೆಯಾಗಿದ್ದು, ಗ್ಯಾಸ್ ಸಹ ಹತ್ತಿಸಲಾಗದೆ ಪರದಾಡಿದ್ದಾರೆ. ಕಳೆದ ರಾತ್ರಿ ಕೊಟ್ಟಿಗೆಹಾರ ಭಾಗದಲ್ಲಿ ಎರಡೂವರೆ ಇಂಚಿನಷ್ಟು ಮಳೆ ಸುರಿದಿದೆ.ಗಾಳಿ ಮಳೆಯಿಂದಾಗಿ ಮಿನಿ ಬಸ್ ಹಾಗೂ ಬೈಕ್ ಮೇಲೆ ಮರವೊಂದು ಬಿದ್ದಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಸುಂಕಸಾಲೆ ಗ್ರಾಮದಲ್ಲಿ ನಡೆದಿದ್ದು, ಬೈಕ್ ಸಂಪೂರ್ಣ ಜಖಂಗೊಂಡು ಚಾಲಕ ಗಾಯಗೊಂಡಿದ್ದಾನೆ. ರಸ್ತೆ ಮಧ್ಯೆ ಮರ ಬಿದ್ದಿರುವ ಕಾರಣ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೂಡಿಗೆರೆ-ಕಳಸ ಮಾರ್ಗದಲ್ಲಿ ಪ್ರಯಾಣಿಕರು ಪರದಾಡಿದರು.
ಬಸ್ ನಿಯಂತ್ರಣ ತಪ್ಪಿ ಕಾರ್ ಡಿಕ್ಕಿ: ಚಾರ್ಮಾಡಿ ಘಾಟ್ ತಪ್ಪಲಿನಲ್ಲೂ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಕೊಟ್ಟಿಗೆಹಾರ, ಬಾಳೂರು, ಬಣಕಲ್, ದೇವರಮನೆ, ದುರ್ಗದಹಳ್ಳಿ ಭಾಗದಲ್ಲಿ ಹೆಚ್ಚು ಮಳೆ ಸುರಿದಿದೆ.ಕಳೆದ ಒಂದೂವರೆ ತಿಂಗಳ ವಾಡಿಕೆಗಿಂತ ಶೇ. ೫೬ ರಷ್ಟು ಹೆಚ್ಚು ಪ್ರಮಾಣದ ಮಳೆ ಸುರಿದಿದೆ. ಮೂಡಿಗೆರೆ ತಾಲ್ಲೂಕು ಬಡವನ ದಿಣ್ಣೆ ಗ್ರಾಮದಲ್ಲಿ ಮಳೆಯಿಂದ ಕೆಎಸ್ಆರ್ಟಿಸಿ ಬಸ್ ನಿಯಂತ್ರಣ ತಪ್ಪಿ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ರೆಡ್ ಅಲರ್ಟ್: ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಬುಧವಾರವೂ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಎಚ್ಚರದಿಂದಿರುವಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಸೂಚಿಸಿದೆ. ಗುರುವಾರ ಆರೆಂಜ್ ಅಲರ್ಟ್ ಘೊಷಿಸಲಾಗಿದೆ. ಕಂಟ್ರೋಲ್ ರೂಂ ತೆರೆಯಲಾಗಿದ್ದು, ಹಳ್ಳ, ನದಿ, ತಗ್ಗು ಪ್ರದೇಶಗಳ ಬಳಿ ಹೋಗದಂತೆ ಎಚ್ಚರಿಸಲಾಗಿದೆ. ಜಾನುವಾರು, ಬಟ್ಟೆ ತೊಳೆಯಲು ಹಳ್ಳ-ಕೆರೆಕಟ್ಟೆ ಬಳಿ ಹೋಗದಂತೆ ತಿಳಿಸಲಾಗಿದೆ. ಧರೆ, ಗುಡ್ಡ ಕುಸಿಯುವ ಸಾಧ್ಯತೆಯಿರುವ ಕಾರಣ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.


