ಬೆಳಗಾವಿ (ಡಿ.02): ಮಹದಾಯಿ ವಿಚಾರದಲ್ಲಿ ಕಾನೂನು ಬದ್ಧವಾಗಿ ನಾವು ನಮ್ಮ ಸರ್ಕಾರ ತಯಾರಿದ್ದು, ನಮ್ಮ ರಾಜ್ಯದ ಹಿತದಿಂದ ಈ ಕುರಿತು ಮಾಧ್ಯಮಗಳಲ್ಲಿ ಮಾತನಾಡುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವ ರಮೇಶ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. 

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ಅವರ ಹೇಳಿಕೆ ಕುರಿತು ಮಂಗಳವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಗೋವಾದವರು ಯಾವುದೇ ರೂಪದಲ್ಲಿ ಬಂದರೂ ಉತ್ತರ ಕೊಡಲು ನಾವು ಸಿದ್ಧರಿದ್ದೇವೆ. ಪಾಪ ಅವರಿಗೆ ಅನಿವಾರ್ಯವಿದೆ. ಹೀಗಾಗಿ ಗೋವಾ ಮುಖ್ಯಮಂತ್ರಿ ಅವರ ರಾಜ್ಯದ ಪರವಾಗಿ ಮಾತನಾಡಿದ್ದಾರೆ. ನಮ್ಮ ರಾಜ್ಯದ ಹಿತಾಸಕ್ತಿ ಪರವಾಗಿ ನಾವಿದ್ದೇವೆ. ಈ ವಿಚಾರವಾಗಿ ಈಗಾಗಲೇ ನಾನು ಸ್ಪಷ್ಟವಾಗಿ ಹೇಳಿಕೆ ನೀಡಿದ್ದೇನೆ. ಪದೇ ಪದೆ ಹೇಳಿಕೆ ನೀಡುವುದಿಲ್ಲ ಎಂದರು.

ಕರ್ನಾಟಕ ವಿರುದ್ಧ ಅಮಿತ್‌ ಶಾಗೆ ಗೋವಾ ದೂರು

 ಮಹದಾಯಿ ನದಿ ತಿರುವು ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ನಮ್ಮ ಕಳವಳ ತಿಳಿಸಿದ್ದೇವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮಂಗಳವಾರ ಹೇಳಿದ್ದಾರೆ.

ಚಾಲೇಂಜ್ ಹಾಕಿದ ಸಾಹುಕಾರ್ : ನನ್ನ ರಾಜೀನಾಮೆ ಖಚಿತ ಎಂದ ರಮೇಶ್ ಜಾರಕಿಹೊಳಿ

ಸುದ್ದಿಗಾರರ ಜತೆ ಮಾತನಾಡಿದ ಸಾವಂತ್‌, ‘ಶಾ ಅವರಿಗೆ ನಮ್ಮ ಕಳವಳ ತಿಳಿಸಿದ್ದೇವೆ. ಕರ್ನಾಟಕ ನದಿ ತಿರುವು ಮಾಡಿದ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಎಲ್ಲ ಸಾಕ್ಷ್ಯ ಕೂಡ ಕೊಟ್ಟಿದ್ದೇವೆ’ ಎಂದರು.

ಅಲ್ಲದೆ, ‘ಕರ್ನಾಟಕದ ಯಾವುದೇ ಸಚಿವರ ಜತೆ ನದಿ ವಿವಾದ ಕುರಿತು ಮುಖಾಮುಖಿ ಮಾತುಕತೆಗೆ ನಾನು ಸಿದ್ಧನಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸೋಮವಾರವಷ್ಟೇ ಕರ್ನಾಟಕದ ಜಲ ಸಚಿವ ರಮೇಶ ಜಾರಕಿಹೊಳಿ ಅವರು, ‘ಕರ್ನಾಟಕ ಮಹದಾಯಿ ತಿರುಗಿಸಿದೆ ಎಂಬ ಗೋವಾ ಆರೋಪ ಸುಳ್ಳು. ಅದು ಸಾಬೀತಾದರೆ ರಾಜೀನಾಮೆಗೆ ಸಿದ್ಧ. ಬೇಕಿದ್ದರೆ ಗೋವಾ ಮುಖ್ಯಮಂತ್ರಿಯು ಕಳಸಾ ಬಂಡೂರಿಗೆ ಬಂದು ನೋಡಲಿ’ ಎಂದು ಸವಾಲು ಹಾಕಿದ್ದರು. ಅದರ ಬೆನ್ನಲ್ಲೇ ಸಾವಂತ್‌ ಅವರ ಈ ಹೇಳಿಕೆ ಬಂದಿದೆ.