Asianet Suvarna News Asianet Suvarna News

ರೈತರೇ, ಸಮಸ್ಯೆಯಿದ್ದರೆ ನನ್ನ ಬಳಿ ಬನ್ನಿ: ಸಿಎಂ

ಯಾವುದೇ ರೀತಿಯಾದ ಸಮಸ್ಯೆ ಇದ್ದರೂ ಕೂಡ ರೈತರು ನನ್ನ ಬಳಿ ಬಂದು ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ ಎಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. 

Im Always Help You Says CM HD Kumaraswamy to Farmers
Author
Bengaluru, First Published Nov 21, 2018, 9:11 AM IST

ಬೆಂಗಳೂರು :  ಕಬ್ಬು ಬೆಳೆಗಾರರು ಸೇರಿದಂತೆ ಯಾವುದೇ ರೈತರು ಸಮಸ್ಯೆ ಇದ್ದರೆ ಮುಕ್ತವಾಗಿ ಬಂದು ನನ್ನನ್ನು ಭೇಟಿ ಮಾಡಬಹುದು. ರೈತರು ನನ್ನೊಂದಿಗೆ ಮಾತುಕತೆ ನಡೆಸಲು ಪೂರ್ವಾನುಮತಿ ಬೇಕಾಗಿಲ್ಲ. ಹೀಗಾಗಿ ಪ್ರತಿಭಟನೆ ಬಿಟ್ಟು ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರೈತರಿಗೆ ಮನವಿ ಮಾಡಿದ್ದಾರೆ.

ಕಬ್ಬು ಬೆಳೆಗಾರರೊಂದಿಗಿನ ಸಭೆ ಬಳಿಕ ಮಾತನಾಡಿದ ಅವರು, ಹಲವು ವರ್ಷಗಳಿಂದ ರೈತ ಪರ ಹೋರಾಟ ಹಾಗೂ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ. 45 ಸಾವಿರ ಕೋಟಿ ರು. ರೈತರ ಸಾಲ ಮನ್ನಾ ಮಾಡಿದ್ದೇನೆ. ರೈತರಿಗಾಗಿ ಹಲವಾರು ಕಾರ್ಯಕ್ರಮ ನೀಡಿದ್ದೇನೆ. ಹೀಗಾಗಿ ರೈತರ ಏನೇ ಕಷ್ಟಗಳಿದ್ದರೂ ಬಗೆಹರಿಸಲು ಸರಕಾರ ಸಿದ್ಧವಿದೆ. ಆದರೆ, ತಮ್ಮ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತನ್ನಿ ಬದಲಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದರು.

ಕಬ್ಬು ಬೆಳೆಗಾರರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಚರ್ಚೆಗೆ ಬರುವಂತೆ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ, ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಇದೀಗ ಚರ್ಚೆಗೆ ಬಂದು ತಾವು ನೀಡಿರುವ ಭರವಸೆಗಳ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳನ್ನು ಸಂಪೂರ್ಣ ಜಾರಿಗೆ ತರುವ ಮೂಲಕ ರೈತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಸರ್ಕಾರದ ಮೇಲೆ ವಿಶ್ವಾಸವಿಡಿ:  ಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ಅವರು, ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನವನ್ನು ತಾವು ಮಾಡುವುದಿಲ್ಲ. ಹೋರಾಟ ನಡೆಸಲು ಅಥವಾ ಸರಕಾರದ ಜತೆ ಚರ್ಚೆ ನಡೆಸಲು ಮುಕ್ತ ಅವಕಾಶ ನೀಡಿದ್ದೆವು. ಆದರೆ, ಆ ಮಹಿಳೆ ನಾಲಾಯಕ್‌ ಮುಖ್ಯಮಂತ್ರಿ ಎಂದು ಮಾತನಾಡಿದ್ದಾರೆ. ಅವರಿಗೆ ಗ್ರಾಮೀಣ ಸೊಗಡಿನಲ್ಲಿ ಇಲ್ಲಿವರೆಗೆ ಎಲ್ಲಿ ನಿದ್ದೆ ಮಾಡುತ್ತಿದ್ದೆ ತಾಯಿ ಎಂದು ಕೇಳಿದ್ದೇನೆ ಹೊರತು ಬೇರೆ ಅರ್ಥದಲ್ಲಿ ಕೇಳಿಲ್ಲ. ಹೀಗಾಗಿ ಸರಕಾರದ ಜತೆ ನೀವು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಬ್ಬು ಬೆಳೆಗಾರರಿಗೆ ನಾವು ಅಧಿಕಾರಕ್ಕೆ ಬಂದಾಗ ಎರಡು ಸಾವಿರ ಕೋಟಿ ರು. ಹಣ ಪಾವತಿ ಬಾಕಿ ಉಳಿದಿತ್ತು. ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ 1,963 ಕೋಟಿ ರು. ಹಣ ಕೊಡಿಸಿದ್ದೇವೆ. ಜತೆಗೆ ಹೋರಾಟ ನಿರತ ರೈತರ ಮೇಲಿನ ಪ್ರಕರಣ ರದ್ದುಪಡಿಸುವುದಾಗಿ ಹೇಳಿದ್ದೇವೆ. ಹೀಗಾಗಿ ರೈತರು ಸರಕಾರದ ಮೇಲೆ ವಿಶ್ವಾಸವಿಡಿ. ನೀವು ಸಮಸ್ಯೆಹೊತ್ತು ಬಂದರೆ ವಿಧಾನಸೌಧದ ಬಾಗಿಲು ಮುಕ್ತವಾಗಿರಲಿದೆ ಎಂದು ರೈತರಿಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios