Asianet Suvarna News Asianet Suvarna News

ಭಾರೀ ಅಕ್ರಮ ಸಂಪತ್ತು ಪತ್ತೆ: ಲೋಕಾ ಬಲೆಗೆ ಬಿದ್ದ ಇಬ್ಬರ ಬಳಿ 15 ಸೈಟ್‌, 14 ಫ್ಲಾಟ್‌

ಬಿಬಿಎಂಪಿಯ ಗಂಗಾಧರಯ್ಯ ಬಳಿ 14 ಫ್ಲಾಟ್‌, 3 ದೇಶಗಳ ಕರೆನ್ಸಿ ಪತ್ತೆ, ಬಸವಕಲ್ಯಾಣದ ಉಪ ತಹಶೀಲ್ದಾರ್‌ ವಿಜಯಕುಮಾರ ಬಳಿ 15 ನಿವೇಶನ, 8 ಸರ್ಕಾರಿ ಅಧಿಕಾರಿಗಳ ಬಳಿ ಭಾರೀ ಅಕ್ರಮ ಸಂಪತ್ತು ಪತ್ತೆ. 

Illegal Wealth Found in Lokayukta Raid in Karnataka grg
Author
First Published Apr 26, 2023, 7:33 AM IST

ಬೆಂಗಳೂರು(ಏ.26): ಅಕ್ರಮ ಆಸ್ತಿ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯಲ್ಲಿ ಕುಬೇರರ ಆಸ್ತಿಯ ಮಾಹಿತಿ ಲಭ್ಯವಾಗಿದ್ದು, ಕೋಟ್ಯಂತರ ರು. ಮೌಲ್ಯದ ಸ್ಥಿರಾಸ್ತಿ ಸಂಪಾದನೆ ಮಾಡಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಬಿಬಿಎಂಪಿಯ ಯಲಹಂಕ ವಲಯದ ಸಹಾಯಕ ನಿರ್ದೇಶಕ ಕೆ.ಎಲ್‌. ಗಂಗಾಧರಯ್ಯ ಬಳಿ 14 ಫ್ಲಾಟ್‌ಗಳು, ವಿದೇಶಿ ಕರೆನ್ಸಿ ಗಳು ಪತ್ತೆಯಾದರೆ, ಬಸವಕಲ್ಯಾಣ ತಾಲೂಕು ಉಪತಹಶೀಲ್ದಾರ್‌ ವಿಜಯಕುಮಾರ ಸ್ವಾಮಿ ಬಳಿ 15 ಖಾಲಿ ನಿವೇಶನಗಳು ಇರುವುದು ಪತ್ತೆಯಾಗಿವೆ. ನಿವೃತ್ತ ಡಿಸಿಎಫ್‌ ಐ.ಎಂ.ನಾಗರಾಜ ಬಳಿ ಬೆಂಗಳೂರು, ಶಿವಮೊಗ್ಗ, ಹೊನ್ನಾಳಿಯಲ್ಲಿ ಮನೆ, ಫ್ಲಾಟ್‌ಗಳಿರುವುದು ಗೊತ್ತಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

ಸೋಮವಾರ ಲೋಕಾಯುಕ್ತ ಪೊಲೀಸರು ಬೆಂಗಳೂರು, ಕೋಲಾರ, ಬೀದರ್‌, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲಿ ಎಂಟು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಒಟ್ಟು 34 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಚರಣೆ ಕೈಗೊಂಡಿದ್ದರು. ಈ ವೇಳೆ ಕೋಟ್ಯಂತರ ರು. ಅಕ್ರಮ ಆಸ್ತಿ ಪತ್ತೆಯಾಗಿದೆ.

ಕೋಲಾರದ ಇಒ ವೆಂಕಟೇಶಪ್ಪ ಮನೆ ಮೇಲೆ ಲೋಕಾಯಕ್ತ ದಾಳಿ: ಬಿದ್ದು ಒದ್ದಾಡಿ ಅಧಿಕಾರಿಯಿಂದ ಹೈ ಡ್ರಾಮಾ !

ಅಧಿಕಾರಿಗಳ ಆಸ್ತಿಯ ವಿವರ:

ಹುಸೇನ್‌ಸಾಬ್‌, ಕಾರ್ಯಪಾಲಕ ಎಂಜಿನಿಯರ್‌, ಜೆಸ್ಕಾಂ, ಬಳ್ಳಾರಿ- ಒಟ್ಟು 6 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಬಳ್ಳಾರಿಯಲ್ಲಿ ಮೂರು ವಾಸದ ಮನೆ, ಹೊಸಪೇಟೆಯಲ್ಲಿ ಒಂದು ಖಾಲಿ ನಿವೇಶನ, ಹಡಗಲಿ ತಾಲೂಕಿನಲ್ಲಿ 6.20 ಎಕರೆ ಕೃಷಿ ಜಮೀನು, 4 ನಾಲ್ಕುಚಕ್ರದ ವಾಹನ, 2 ದ್ವಿಚಕ್ರ ವಾಹನ, 23.69 ಲಕ್ಷ ರು. ನಗದು, 1487 ಗ್ರಾಂ ಚಿನ್ನಾಭರಣ, 680 ಗ್ರಾಂ ಬೆಳ್ಳಿ ಪತ್ತೆಯಗಿದೆ.

ಕೆ.ಎಲ್‌.ಗಂಗಾಧರಯ್ಯ, ಸಹಾಯಕ ನಿರ್ದೇಶಕ, ನಗರ ಯೋಜನೆ, ಬಿಬಿಎಂಪಿ, ಯಲಹಂಕ ವಲಯ- ಏಳು ಸ್ಥಳಗಳಲ್ಲಿ ಪರಿಶೀಲನೆ ಮಾಡಲಾಗಿದೆ. 14 ಫ್ಲಾಟ್‌ಗಳು, 73 ಲಕ್ಷ ರು. ಮೌಲ್ಯದ ಚಿನ್ನಾಭರಣ, 1.47 ಕೋಟಿ ರು. ನಗದು, ನೆಲಮಂಗಲ ಬಳಿ 5 ಎಕರೆ ಕೃಷಿ ಜಮೀನು, 10298 ಅಮೆರಿಕ ಡಾಲರ್‌, 1180 ದುಬೈ ದೀರಂ, 35 ಈಜಿಪ್ಟ್‌ ದೇಶದ ಕರೆನ್ಸಿ, 50 ಲಕ್ಷ ರು.ಗಿಂತ ಹೆಚ್ಚಿನ ಮೌಲ್ಯದ ಗೃಹೋಪಯೋಗಿ ವಸ್ತುಗಳು ಇರುವುದು ಗೊತ್ತಾಗಿದೆ.

ಸುರೇಶ ಮೇಡ, ಕಾರ್ಯಪಾಲಕ ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ, ಬೀದರ್‌- ಮೂರು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಬೀದರ್‌ ನಗರದಲ್ಲಿ ಎರಡು ಮನೆ, ಮೂರು ಖಾಲಿ ನಿವೇಶನ. 3 ನಾಲ್ಕು ಚಕ್ರದ ವಾಹನಗಳು, 3 ದ್ವಿಚಕ್ರ ವಾಹನಗಳು, 11.34 ಲಕ್ಷ ರು. ನಗದು, 1892 ಗ್ರಾಂ ಚಿನ್ನಾಭರಣ, 6 ಕೆಜಿ 628 ಗ್ರಾಂ ಬೆಳ್ಳಿ ವಸ್ತುಗಳು, 45 ಲಕ್ಷ ರು. ಮೌಲ್ಯದ ಎಲ್‌ಐಸಿ ಬಾಂಡ್‌ಗಳು ಪತ್ತೆಯಾಗಿವೆ.

ವಿಜಯಕುಮಾರಸ್ವಾಮಿ, ಉಪತಹಶೀಲ್ದಾರ್‌, ನಾಡಾ ಕಚೇರಿ ಮುಡುಬಿ ಹೋಬಳಿ, ಬಸವಕಲ್ಯಾಣ ತಾಲೂಕು- ಮೂರು ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ. ಬೀದರ್‌ನಲ್ಲಿ ಒಂದು ಮನೆ, ಬಸವಕಲ್ಯಾಣದಲ್ಲಿ 15 ಖಾಲಿ ನಿವೇಶನಗಳು, ಒಂದು ಸಾಯಿ ಸರ್ವಿಸ್‌ ಆಟೋ ಗ್ಯಾರೇಜ್‌, 2 ನಾಲ್ಕು ಚಕ್ರದ ವಾಹನಗಳು, 1 ದ್ವಿಚಕ್ರ ವಾಹನ ಇವೆ.

ಟಿ.ಹನುಮಂತಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ರಾಜಕಾಲುವೆ ವಿಭಾಗ, ಬಿಬಿಎಂಪಿ ಬೊಮ್ಮನಹಳ್ಳಿ ವಲಯ- ಮೂರು ಸ್ಥಳದಲ್ಲಿ ತಪಾಸಣೆ ಮಾಡಲಾಗಿದೆ. ಹಿರಿಯೂರು ತಾಲೂಕಿನಲ್ಲಿ 25.23 ಎಕರೆ ಅಡಿಕೆ, ಬಾಳೆತೋಟ, 1 ಫಾರ್ಮ್‌ ಹೌಸ್‌, 2 ಪೌಲ್ಟ್ರಿ ಫಾರ್ಮ್‌ಗಳು, ಎರಡು ನಿವೇಶನ, ಬೆಂಗಳೂರಲ್ಲಿ ಒಂದು ಮನೆ ಪತ್ತೆ.

ಐ.ಎಂ.ನಾಗರಾಜ, ಡಿಸಿಎಫ್‌ (ನಿವೃತ್ತ)- ಮೂರು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಹೊನ್ನಾಳಿಯಲ್ಲಿ ಮನೆ, ಶಿವಮೊಗ್ಗದಲ್ಲಿ ಮನೆ ಮತ್ತು ಮಳಿಗೆ, ಫಾರ್ಮ್‌ ಹೌಸ್‌, 10 ಎಕರೆ ಅಡಿಕೆ ತೋಟ, ಸರ್ವಿಸ್‌ ಸ್ಟೇಷನ್‌, ಭದ್ರಾವತಿ-ಚನ್ನಗಿರಿ ರಸ್ತೆಯಲ್ಲಿ ಸರ್ವಿಸ್‌ ಸ್ಟೇಷನ್‌, 2 ನಿವೇಶನ, 4 ಫ್ಲ್ಯಾಟ್‌, 4 ವಾಣಿಜ್ಯ ಸಂಕೀರ್ಣಗಳು, ಬೆಂಗಳೂರಿನ ಕಗ್ಗಲಿಪುರದಲ್ಲಿ 1 ಫ್ಲಾಟ್‌, 16 ಲಕ್ಷ ರು. ಮೌಲ್ಯದ ಚಿನ್ನಾಭರಣ.

ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ತಿಮಿಂಗಲ: ಗಂಗಾಧರಯ್ಯನ ಇತಿಹಾಸವೇ ಬೆಚ್ಚಿ ಬೀಳಿಸುತ್ತೆ!

ಎನ್‌.ಜೆ.ನಾಗರಾಜ, ತಹಶೀಲ್ದಾರ್‌, ಹೊಳಲ್ಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ- ನಾಲ್ಕು ಸ್ಥಳಗಳ ಮೇಲೆ ಶೋಧ ನಡೆಸಲಾಗಿದೆ. ಶಿಕಾರಿಪುರದಲ್ಲಿ ಎರಡು ಮನೆ, ಚನ್ನಗಿರಿ ತಾಲೂಕಿನಲ್ಲಿ ಕೃಷಿ ಜಮೀನು, 244 ಗ್ರಾಂ ಚಿನ್ನಾಭರಣ, 533 ಗ್ರಾಂ ಬೆಳ್ಳಿ, ರಿಯಲ್‌ ಎಸ್ಟೇಟ್‌ನಲ್ಲಿ ಹಣ ಹೂಡಿಕೆ ಮಾಡಿರುವುದು ಪತ್ತೆ.

ವೆಂಕಟೇಶಪ್ಪ, ಕಾರ್ಯನಿರ್ವಾಹಕ ಅಧಿಕಾರಿ, ಬಾಗೇಪಲ್ಲಿ ತಾಲೂಕು ಪಂಚಾಯಿತಿ, ಕೋಲಾರ- ಐದು ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆದಿದೆ. ಬಂಗಾರಪೇಟೆಯಲ್ಲಿ 14 ಎಕರೆ ಕೃಷಿ ಜಮೀನು, ಒಂದು ನಿವೇಶನ, ಎರಡು ಮನೆ, ಹಾರ್ಡ್‌ವೇರ್‌ ಶಾಪ್‌ ಮತ್ತು ಗೋಡೌನ್‌, 4 ಪೌಲ್ಟಿ್ರ ಶೆಡ್‌ಗಳು, 550 ಗ್ರಾಂ ಚಿನ್ನಾಭರಣ, 3 ಕೆಜಿ ಬೆಳ್ಳಿ ಸಾಮಾನು ಪತ್ತೆ.

Follow Us:
Download App:
  • android
  • ios