ಬೆಂಗಳೂರು[ಡಿ.30]: ಸಾಮಾಜಿಕ ಜಾಲ ತಾಣದಲ್ಲಿ ರಾಜ್ಯ ಗೃಹ ರಕ್ಷಕ ದಳದ ಐಜಿಪಿ ಡಿ.ರೂಪಾ ಅವರ ಹೆಸರಿನಲ್ಲಿ ದುಷ್ಕರ್ಮಿಗಳು ನಕಲಿ ಖಾತೆ ತೆರೆದು ದೇಣಿಗೆ ಸಂಗ್ರಹಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಈ ನಕಲಿ ಖಾತೆಗೆ ಬಗ್ಗೆ ವಿಚಾರ ತಿಳಿದ ಕೂಡಲೇ ಐಜಿಪಿ ಅವರು ಟ್ವೀಟರ್‌ನಲ್ಲಿ ದೇಣಿಗೆ ನೀಡದಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಕಿಡಿಗೇಡಿಗಳ ವಿರುದ್ಧ ಸಿಐಡಿ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡುವುದಾಗಿ ಸಹ ಹೇಳಿದ್ದಾರೆ.

‘ಇನ್‌ಸ್ಟಾಗ್ರಾಂ’ನಲ್ಲಿ ಡಿ.ರೂಪಾ ಅವರ ಹೆಸರಿನಲ್ಲಿ ಖಾತೆ ತೆರೆದು, ಬಡ ಹೆಣ್ಣು ಮಕ್ಕಳ ಏಳಿಗೆಗೆ ಸಹಾಯ ಮಾಡಿ ಎಂದು ಕಿಡಿಗೇಡಿಗಳು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಕೆಲವು ಸಾರ್ವಜನಿಕರು, 10 ರಿಂದ 1 ಸಾವಿರ ರೂಪಾಯಿವರೆಗೆ ಧನ ಸಹಾಯ ಮಾಡಿದ್ದರು. ಆದರೆ ಆ ಖಾತೆ ಬಗ್ಗೆ ಅನುಮಾನಗೊಂಡ ಕೆಲವರು, ಯಾವ ಕಾರಣಕ್ಕಾಗಿ ನೀವು ಹಣ ಸಂಗ್ರಹಿಸುತ್ತಿದ್ದೀರಾ? ಎಂದು ಟ್ವೀಟರ್‌ನಲ್ಲಿ ರೂಪ ಅವರನ್ನು ಪ್ರಶ್ನಿಸಿದ್ದರು. ಆಗಲೇ ಐಜಿಪಿ ಅವರಿಗೆ ನಕಲಿ ಖಾತೆ ವಿಚಾರ ಗೊತ್ತಾಗಿದೆ.

ಈ ಬಗ್ಗೆ ಡಿಐಜಿ ರೂಪಾ ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು,  ‘ ನಾನು ಇನ್‌ಸ್ಟಾಗ್ರಾಂನಲ್ಲಿ ಯಾವುದೇ ಖಾತೆ ಹೊಂದಿಲ್ಲ’ ಎಂದು ಟ್ವೀಟರ್‌ ಮೂಲಕವೂ ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೇ ಸಾರ್ವಜನಿಕರು ಹಣ ನೀಡಿ ವಂಚಿತನಾದ ಜಾಲಕ್ಕೆ ಬೀಳದಂತೆ ಮನವಿಯನ್ನೂ ಮಾಡಿಕೊಂಡಿದ್ದಾರೆ.