Asianet Suvarna News Asianet Suvarna News

ಕೆಇಎ ಪರೀಕ್ಷೆ: ಬ್ಲೂಟೂತಷ್ಟೇ ಅಲ್ಲ, ಒಎಂಆರ್‌ನಲ್ಲೂ ಅಕ್ರಮ?

ಹುಬ್ಬಳ್ಳಿ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬನ ಒಎಂಆರ್ ಶೀಟ್‌, ಪ್ರಶ್ನೆಪತ್ರಿಕೆ ಪ್ಯಾಟರ್ನ್‌ ಹಾಗೂ ಅಭ್ಯರ್ಥಿಯ ಮೂಲ ಫೋಟೋ ಹಾಜರುಪಡಿಸದೆ ಮೇಲ್ವಿಚಾರಕರು ಹಾಲ್‌ ಟಿಕೆಟ್‌ ಮೇಲೆ ಸಹಿ ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನೊಂದ ಅಭ್ಯರ್ಥಿಗಳ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

Illegal in OMR Sheet also of KEA Exam in Karnataka grg
Author
First Published Nov 2, 2023, 4:24 AM IST

ಆನಂದ್‌ ಎಂ. ಸೌದಿ

ಯಾದಗಿರಿ(ನ.02):  ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದ ನಂತರ ಇತ್ತೀಚೆಗಷ್ಟೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ವಿವಿಧ ನಿಗಮ-ಮಂಡಳಿಗಳ ಎಫ್‌ಡಿಎ ಪರೀಕ್ಷೆಯಲ್ಲೂ ಬ್ಲೂತ್‌ ಟೂತ್‌ ಅಕ್ರಮ ಬಯಲಾಗಿ ಕಲಬುರಗಿ, ಯಾದಗಿರಿಯಲ್ಲಿ 25 ಮಂದಿಯನ್ನು ಬಂಧಿಸಲಾಗಿತ್ತು. ಆದರೆ, ಈ ಅಕ್ರಮ ಕೇವಲ ಎರಡು ಜಿಲ್ಲೆಗಳಿಗಷ್ಟೇ ಸೀಮಿತವಾಗದೆ ಹುಬ್ಬಳ್ಳಿ, ಬೆಳಗಾವಿ ಸೇರಿ ರಾಜ್ಯದ ವಿವಿಧೆಡೆಯೂ ವ್ಯಾಪಿಸಿದೆ ಎನ್ನುವ ಆರೋಪಗಳು ಇದೀಗ ನೊಂದ ಅಭ್ಯರ್ಥಿಗಳ ವಲಯದಿಂದ ಕೇಳಿಬಂದಿದೆ.

ಹುಬ್ಬಳ್ಳಿ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬನ ಒಎಂಆರ್ ಶೀಟ್‌, ಪ್ರಶ್ನೆಪತ್ರಿಕೆ ಪ್ಯಾಟರ್ನ್‌ ಹಾಗೂ ಅಭ್ಯರ್ಥಿಯ ಮೂಲ ಫೋಟೋ ಹಾಜರುಪಡಿಸದೆ ಮೇಲ್ವಿಚಾರಕರು ಹಾಲ್‌ ಟಿಕೆಟ್‌ ಮೇಲೆ ಸಹಿ ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನೊಂದ ಅಭ್ಯರ್ಥಿಗಳ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

ಗುಪ್ತಾಂಗದಲ್ಲಿ ಬ್ಲೂಟೂತ್‌ ಇಟ್ಟುಕೊಂಡ ಎಫ್‌ಡಿಎ ಪರೀಕ್ಷಾರ್ಥಿಗಳು: ಮೆಟಲ್‌ ಡಿಟೆಕ್ಟರ್‌ಗೂ ಸಿಗ್ತಿರಲಿಲ್ಲ

ಪರೀಕ್ಷಾ ಕೇಂದ್ರದೊಳಕ್ಕೆ ಪರೀಕ್ಷಾರ್ಥಿ ಮೊಬೈಲ್‌ ಒಯ್ಯುವಂತಿಲ್ಲ. ತಪಾಸಣೆ ಮಾಡಿದ ಬಳಿಕವೇ ಅಭ್ಯರ್ಥಿಗಳನ್ನು ಒಳಬಿಡಲಾಗುತ್ತದೆ. ಆದರೆ ಇಲ್ಲಿ ಪ್ರಶ್ನೆಪತ್ರಿಕೆ ಪ್ಯಾಟರ್ನ್‌ ಸಂಖ್ಯೆ, ಖಾಲಿ ಬಿಟ್ಟಿರುವ ಒಎಂಆರ್‌ ಮೂಲ ಪ್ರತಿ ಫೋಟೋ ಹೇಗೆ ಬಹಿರಂಗವಾಯಿತು ಎನ್ನುವುದೇ ಅಚ್ಚರಿಯ ವಿಚಾರ.

ಜೊತೆಗೆ, ಅಭ್ಯರ್ಥಿ ಹಾಲ್‌ ಟಿಕೆಟ್‌ ಮೇಲೆ ಈಗಾಗಲೇ ಮುದ್ರಿತ ಫೋಟೋ ಹೊರತುಪಡಿಸಿ, ಮತ್ತೊಂದು ಹಾರ್ಡ್‌ ಕಾಪಿ ಫೋಟೋ ಅಂಟಿಸಿ ಅಭ್ಯರ್ಥಿ ಎಂದು ಖಾತ್ರಿ ಪಡಿಸಿಕೊಂಡು ಮೇಲ್ವಿಚಾರಕರು ಸಹಿ ಮಾಡುತ್ತಾರೆ. ಇಲ್ಲಿ ಒಂದೇ ಫೋಟೋವಿದ್ದರೂ ಮೇಲ್ವಿಚಾರಕರು ಸಹಿ ಮಾಡಿರುವುದು ಅನುಮಾನಗಳಿಗೆ ಕಾರಣವಾಗಿದೆ ಎನ್ನುತ್ತಾರೆ ಧಾರವಾಡದ ರವಿಶಂಕರ್‌ ಮಾಲೀಪಾಟೀಲ್‌.

ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್‌ ಹಾಗೂ ಒಎಂಆರ್‌ ಶೀಟ್‌ ಅಕ್ರಮದ ಸಾಧ್ಯತೆಗಳ ಕುರಿತು ಮಾಲೀಪಾಟೀಲ್‌ ಪರೀಕ್ಷೆಗೂ ವಾರ ಮುನ್ನವೇ ಸಂಬಂಧಪಟ್ಟವರಿಗೆ ಪತ್ರ ಬರೆದು ದೂರು ನೀಡಿದ್ದರು. ಈಗ ಹರಿದಾಡುತ್ತಿರುವ ಒಎಂಆರ್‌ ಶೀಟ್‌ನ ಫೋಟೋಗಳನ್ನು ನೋಡಿದರೆ ಕೆಇಎ ಪರೀಕ್ಷೆ ಅಕ್ರಮ ಕೇವಲ ಕಲಬುರಗಿ ಹಾಗೂ ಯಾದಗಿರಿಗಷ್ಟೇ ಸೀಮಿತವಾಗಿಲ್ಲ. ಹುಬ್ಬಳ್ಳಿ ಸೇರಿ ರಾಜ್ಯದ ವಿವಿಧೆಡೆಯೂ ಇಂಥ ಅಕ್ರಮ ನಡೆದಿರಬಹುದಾದ ಸಾಧ್ಯತೆಗಳು ದಟ್ಟವಾಗಿವೆ. ಈ ಕುರಿತು ತನಿಖೆ ಕೈಗೊಂಡರೆ ಎಲ್ಲವೂ ಬಯಲಾಗಬಹುದು ಎಂದು ಮಾಲಿಪಾಟೀಲ್ ಆಗ್ರಹಿಸಿದ್ದಾರೆ.

ಪ್ರಶ್ನೆಗಳು ಬಹಿರಂಗ ಹೇಗಾದವು?

ಕಲಬುರಗಿ ಹಾಗೂ ಯಾದಗಿರಿಯಲ್ಲಿ ಪರೀಕ್ಷಾ ಕೇಂದ್ರದೊಳಗೆ ಬ್ಲೂಟೂತ್‌ ಇಟ್ಟುಕೊಂಡಿದ್ದ ಅಭ್ಯರ್ಥಿಗಳು ಹಾಗೂ ಇವರಿಗೆ ಮೊಬೈಲ್‌ ಮೂಲಕ ಉತ್ತರ ಹೇಳುತ್ತಿದ್ದ 25 ಮಂದಿಯನ್ನು ಬಂಧಿಸಲಾಗಿದೆ. ಆದರೆ, ಹೊರಗಿನವರಿಗೆ ಇವೇ ಪ್ರಶ್ನೆಗಳು ಬಂದಿವೆ ಎಂಬುದು ಬಹಿರಂಗವಾಗಿದ್ದು ಹೇಗೆ ಎಂಬ ಕುರಿತೂ ತನಿಖೆಯಾಗಬೇಕಿದೆ. ಪರೀಕ್ಷಾ ಕೇಂದ್ರದಲ್ಲಿ ನಿಯೋಜನೆಗೊಂಡ ಕೆಲವರೂ ಈ ಅಕ್ರಮದಲ್ಲಿ ಸಾಥ್‌ ನೀಡಿರುವ ಸಾಧ್ಯತೆ ಇದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಏನಿದು ಬ್ಲೂಟೂತ್‌ ಅಕ್ರಮ?

ಸರ್ಕಾರದ ವಿವಿಧ ನಿಗಮ-ಮಂಡಳಿಗಳಲ್ಲಿ ಖಾಲಿಯಿರುವ ಎಫ್‌ಡಿಎ/ಎಸ್‌ಡಿಎ ಹುದ್ದೆಗಳ ಭರ್ತಿಗೆ ಅ.28, 29 ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಅ.28 ರಂದು ನಡೆದಿದ್ದ ಬೆಳಗ್ಗಿನ ಪರೀಕ್ಷೆಯಲ್ಲಿ ಬ್ಲೂಟೂತ್‌ ನೆರವಿನೊಂದಿಗೆ ಉತ್ತರ ಬರೆಯುತ್ತಿದ್ದ ಹಾಗೂ ಇವರಿಗೆ ಉತ್ತರ ಹೇಳುತ್ತಿದ್ದ 25 ಮಂದಿಯನ್ನು ಕಲಬುರಗಿ ಹಾಗೂ ಯಾದಗಿರಿಯಲ್ಲಿ ಬಂಧಿಸಲಾಗಿತ್ತು.

ಅನುಮಾನ ಏನು?

- ಅಭ್ಯರ್ಥಿಯೊಬ್ಬನ ಒಎಂಆರ್‌ ಶೀಟ್‌, ಪ್ರಶ್ನೆಪತ್ರಿಕೆ ಪ್ಯಾಟರ್ನ್‌, ಹಾಲ್‌ ಟಿಕೆಟ್‌ ಫೋಟೋ ಜಾಲತಾಣಗಳಲ್ಲಿ ಪ್ರತ್ಯಕ್ಷ
- ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಮೊಬೈಲ್‌ ಒಯ್ಯುವಂತಿಲ್ಲ. ಆದರೂ ಈ ಫೋಟೋಗಳನ್ನು ತೆಗೆದಿದ್ದು ಹೇಗೆ?
- ಹಾಲ್‌ ಟಿಕೆಟ್‌ನ ಮುದ್ರಿತ ಫೋಟೋ ಮೇಲೆ ಅಸಲಿ ಫೋಟೋ ಅಂಟಿಸಿ ಮೇಲ್ವಿಚಾರಕರು ಸಹಿ ಮಾಡಬೇಕು
- ವೈರಲ್‌ ಆಗಿರುವ ಹಾಲ್‌ ಟಿಕೆಟ್‌ನಲ್ಲಿ ಒಂದೇ ಫೋಟೋ ಇದೆ. ಅದಕ್ಕೆ ಮೇಲ್ವಿಚಾರಕರು ಸಹಿ ಮಾಡಿದ್ದಾರೆ. ಇದು ಹೇಗೆ?

ಎಸ್‌ಐ ಪರೀಕ್ಷೆ ಅಕ್ರಮ ಸಂಚುಕೋರನೇ ಕೆಇಎ ಅಕ್ರಮಕ್ಕೂ ಕಿಂಗ್‌ಪಿನ್‌!

ಇತರೆ ಕೇಂದ್ರಗಳಲ್ಲೂ ಪರೀಕ್ಷಾ ಅಕ್ರಮ

ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್‌ ಹಾಗೂ ಒಎಂಆರ್‌ ಶೀಟ್‌ ಅಕ್ರಮದ ಸಾಧ್ಯತೆಗಳ ಕುರಿತು ವಾರ ಮುನ್ನವೇ ಸಂಬಂಧಪಟ್ಟವರಿಗೆ ಪತ್ರ ಬರೆದು ದೂರು ನೀಡಲಾಗಿತ್ತು. ಈಗ ಹರಿದಾಡುತ್ತಿರುವ ಒಎಂಆರ್‌ ಶೀಟ್‌ನ ಫೋಟೋಗಳನ್ನು ನೋಡಿದರೆ ಕೆಇಎ ಪರೀಕ್ಷೆ ಅಕ್ರಮ ಕೇವಲ ಕಲಬುರಗಿ ಹಾಗೂ ಯಾದಗಿರಿಗಷ್ಟೇ ಸೀಮಿತವಾಗಿಲ್ಲ. ಹುಬ್ಬಳ್ಳಿ ಸೇರಿ ರಾಜ್ಯದ ವಿವಿಧೆಡೆಯೂ ಇಂಥ ಅಕ್ರಮ ನಡೆದಿರಬಹುದಾದ ಸಾಧ್ಯತೆಗಳು ದಟ್ಟವಾಗಿವೆ. ಈ ಕುರಿತು ತನಿಖೆ ಆಗಬೇಕು ಎಂದು ಧಾರವಾಡದ ರವಿಶಂಕರ್‌ ಮಾಲೀಪಾಟೀಲ್‌ ತಿಳಿಸಿದ್ದಾರೆ. 

ಉತ್ತರಪ್ರದೇಶದಲ್ಲಿ ಆರ್‌.ಡಿ.ಪಾಟೀಲ?

ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಬಂಧನಕ್ಕೊಳಗಾಗಿ ನಂತರ ಜಾಮೀನು ಮೇಲೆ ಬಿಡುಗಡೆಯಾಗಿರುವ ಆರ್‌.ಡಿ.ಪಾಟೀಲ್ ಕೆಇಎ ಪರೀಕ್ಷೆ ಅಕ್ರಮದಲ್ಲೂ ಪ್ರಮುಖ ಆರೋಪಿ. ಅಫಜಲ್ಪುರದ ಪರೀಕ್ಷಾ ಕೇಂದ್ರದಲ್ಲಿ ಬಹಿರಂಗಗೊಂಡ ಬ್ಲೂಟೂತ್‌ ಅಕ್ರಮಕ್ಕೆ ಸಂಬಂಧಿಸಿ ಈತನ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ರುದ್ರಗೌಡ ಪಾಟೀಲ್ ಉತ್ತರ ಪ್ರದೇಶಕ್ಕೆಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರ್‌.ಡಿ. ಪಾಟೀಲ ಅಫಜಲ್ಪುರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ.

Follow Us:
Download App:
  • android
  • ios