ಚುನಾವಣೆ ಘೋಷಣೆ ಬಳಿಕ ದೊಡ್ಡ ಬೇಟೆ: ಒಂದೇ ದಿನ 36 ಕೋಟಿ ರು. ಜಪ್ತಿ!
ಲೋಕಸಭಾ ಚುನಾವಣೆ ಘೋಷಣೆ ಬಳಿಕ ರಾಜ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ನೀತಿ ಸಂಹಿತೆ ಜಾರಿಯಾದ ಬಳಿಕ ಮೊದಲ ಬಾರಿಗೆ ಒಂಭತ್ತು ಲಕ್ಷ ರು. ಮೌಲ್ಯದ ವಜ್ರಗಳನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರು (ಮಾ.23): ಲೋಕಸಭಾ ಚುನಾವಣೆ ಘೋಷಣೆ ಬಳಿಕ ರಾಜ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ನೀತಿ ಸಂಹಿತೆ ಜಾರಿಯಾದ ಬಳಿಕ ಮೊದಲ ಬಾರಿಗೆ ಒಂಭತ್ತು ಲಕ್ಷ ರು. ಮೌಲ್ಯದ ವಜ್ರಗಳನ್ನು ಜಪ್ತಿ ಮಾಡಲಾಗಿದೆ. ಚುನಾವಣಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ತನಿಖಾ ತಂಡಗಳು 9.64 ಕೋಟಿ ರು. ನಗದು ಸೇರಿದಂತೆ 36.41 ಕೋಟಿ ರು. ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿವೆ. 15.67 ಲಕ್ಷ ರು. ಉಚಿತ ಉಡುಗೊರೆ, 1.63 ಕೋಟಿ ರು. ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.
22.85 ಕೋಟಿ ರು. ಮೌಲ್ಯದ 7.20 ಲಕ್ಷ ಲೀಟರ್ ಮದ್ಯ, 53.37 ಲಕ್ಷ ರು. ಮೌಲ್ಯದ 52.12 ಕೆಜಿ ಮಾದಕ ವಸ್ತುಗಳು, 1.27 ಕೋಟಿ ರು. ಮೌಲ್ಯದ 2 ಕೆಜಿ ಚಿನ್ನ, 9 ಲಕ್ಷ ರು. ಮೌಲ್ಯದ ವಜ್ರಗಳನ್ನು ಜಪ್ತಿ ಮಾಡಲಾಗಿದೆ. ನಗದು, ಮದ್ಯ, ಮಾದಕ ವಸ್ತುಗಳು, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 402 ಎಫ್‌ಐಆರ್ ದಾಖಲಿಸಲಾಗಿದೆ. 65,432 ಶಸ್ತಾಸ್ತ್ರಗಳನ್ನು ಠೇವಣಿ ಮಾಡಲಾಗಿದೆ. 831 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಂಟು ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಸಿಆರ್‌ಪಿಸಿ ತಡೆಗಟ್ಟುವ ವಿಭಾಗದಡಿ 3,853 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದೆ.
ಕೆ.ಎಸ್.ಈಶ್ವರಪ್ಪ ಮನವೊಲಿಕೆಯಾಗಲಿದೆ: ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು?
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ 38 ಲಕ್ಷ ರು. ನಗದು, ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 12.68 ಲಕ್ಷ ರು. ನಗದು, ಬೆಂಗಳೂರು ನಗರದ ಸಂಪಗಿರಾಮನಗರದಲ್ಲಿ 28.75 ಲಕ್ಷ ರು. ನಗದು, ಕೋರಮಂಗಲದಲ್ಲಿ ಪ್ರತ್ಯೇಕವಾಗಿ 24 ಲಕ್ಷ ರು. ನಗದು ಮತ್ತು 86.50 ಲಕ್ಷ ರು. ನಗದನ್ನು ಜಪ್ತಿ ಮಾಡಲಾಗಿದೆ. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 33 ಲಕ್ಷ ರು. ಮೌಲ್ಯದ ವಿಮಲ್ ಪಾನ್ ಮಸಾಲ ಗುಟ್ಕಾದ 180 ಚೀಲಗಳು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 13.20 ಲಕ್ಷ ರು. ಮೌಲ್ಯದ ಚಿನ್ನಾಭರಣ, ಧಾರವಾಡ ಕ್ಷೇತ್ರದಲ್ಲಿ 38.50 ಲಕ್ಷ ರು. ಮೌಲ್ಯದ ಚಿನ್ನಾಭರಣ, ಬೆಂಗಳೂರಲ್ಲಿ 71.17 ಲಕ್ಷ ರು. ಮೌಲ್ಯದ ಚಿನ್ನ, 9 ಲಕ್ಷ ರು. ಮೌಲ್ಯದ 21.17 ಕ್ಯಾರೆಟ್ ವಜ್ರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದೆ.