ಈಗ, ಕಾರ್ಖಾನೆಯಲ್ಲಿ ಬಾಲಕಾರ್ಮಿಕರನ್ನಷ್ಟೇ ಅಲ್ಲ, ಅನ್ಯರಾಜ್ಯಗಳ, ಅದರಲ್ಲೂ ಅಕ್ರಮ ಬಾಂಗ್ಲಾ ವಲಸಿಗರನ್ನು ಕರೆಯಿಸಿಕೊಂಡಿರುವ ಸಾಧ್ಯತೆಯಿದೆ. ಹತ್ತಾರು ಕಾರ್ಮಿಕರು ಇಲ್ಲಿ ಇರಬಹುದಾದ ಶಂಕೆ ವ್ಯಕ್ತವಾಗಿದೆ.
ಆನಂದ್ ಎಂ. ಸೌದಿ
ಯಾದಗಿರಿ (ಮೇ.12): ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಸುಮಾರು 20ಕ್ಕೂ ಹೆಚ್ಚು ಅಪಾಯಕಾರಿ ಕೆಮಿಕಲ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸಲು ಸ್ಥಳೀಯರ ಹಿಂದೇಟು ಹಾಗೂ ಬೇಕಾಬಿಟ್ಟಿ ದುಡಿಸಿಕೊಳ್ಳಲು ಕಂಪನಿಗಳಿಗೆ ಸ್ಥಳೀಯ ಕಾರ್ಮಿಕರ ಅಲಭ್ಯತೆಯಿಂದಾಗಿ ಕೆಲವೊಂದು ಕಂಪನಿಗಳು ಅನ್ಯರಾಜ್ಯಗಳಿಂದ ಕಾರ್ಮಿಕರನ್ನು ಕರೆತಂದು ದುಡಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕ ಗುತ್ತಿಗೆದಾರರ ಮೂಲಕ ಕರೆತರುವ ಇಂತಹ ಕೆಲವರಲ್ಲಿ ಅಕ್ರಮ ಬಾಂಗ್ಲಾ ವಲಸಿಗರೂ ಸೇರಿರುವ ಶಂಕೆ ಸ್ಥಳೀಯರಿಂದ ವ್ಯಕ್ತವಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಬಾಲಕಾರ್ಮಿಕರ ಬಳಕೆ ದೂರಿನಡಿ ಕೈಗಾರಿಕಾ ಪ್ರದೇಶದ ಕೆಮಿಕಲ್ ಕಂಪನಿ ವಿರುದ್ಧ ದೂರು ದಾಖಲಾಗಿತ್ತು. ಕೆಮಿಕಲ್ ರಾಸಾಯನಿಕ ಸಾಗಾಟಕ್ಕೆಂದು 14 ರಿಂದ 17 ವರ್ಷದೊಳಗಿನ ಸಮೀಪದ ತಾಂಡಾವೊಂದರ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡಿದ್ದ ಪರಿಣಾಮ, ಮಕ್ಕಳಿಗೆ ಸುಟ್ಟ ಗಾಯ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಕಂಡು ಬಂದ ಕಾರಣ, ಬಾಲಕಾರ್ಮಿಕ ಯೋಜನಾಧಿಕಾರಿ ಭೇಟಿ ನಂತರ ಕಂಪನಿ ಮೇಲೆ ಎಫ್‌ಐಆರ್ ದಾಖಲಿಸಿ, ಮಕ್ಕಳನ್ನು ಸಿಡಬ್ಲ್ಯುಸಿ ಕೇಂದ್ರಕ್ಕೆ ಕಳುಹಿಸಲಾಗಿತ್ತು.
ರೈಲು ಕಂಪನೀಲಿ ನೌಕ್ರಿ ಕೊಡ್ತೀವೆಂದು ರೀಲು ಬಿಟ್ಟರೇ?: ಭರವಸೆಯೇ ನೀಡಿಲ್ಲವೆಂದ ರೈಲ್ವೆ ಇಲಾಖೆ
ಈಗ, ಕಾರ್ಖಾನೆಯಲ್ಲಿ ಬಾಲಕಾರ್ಮಿಕರನ್ನಷ್ಟೇ ಅಲ್ಲ, ಅನ್ಯರಾಜ್ಯಗಳ, ಅದರಲ್ಲೂ ಅಕ್ರಮ ಬಾಂಗ್ಲಾ ವಲಸಿಗರನ್ನು ಕರೆಯಿಸಿಕೊಂಡಿರುವ ಸಾಧ್ಯತೆಯಿದೆ. ಹತ್ತಾರು ಕಾರ್ಮಿಕರು ಇಲ್ಲಿ ಇರಬಹುದಾದ ಶಂಕೆ ವ್ಯಕ್ತವಾಗಿದೆ. ಕೆಲವೊಮ್ಮೆ ತಪಾಸಣೆಗೆ ಬಂದ ವೇಳೆ ಕಾರ್ಖಾನೆಯವರು ಸರ್ಕಾರಿ ಅಧಿಕಾರಿಗಳನ್ನೇ ಒಳಬಿಡಲು ತಯಾರಿರುವುದಿಲ್ಲ. ಕಂಪನಿ ಮಾಲೀಕರ ಅಪ್ಪಣೆ ಬೇಕೆಂದು ನಮಗೇ ತಿಳಿಸುತ್ತಾರೆ, ಪ್ರಭಾವಿಗಳ ಮೂಲಕ ನಮಗೇ ಬೈಯ್ದು ವಾಪಸ್ ಕಳುಹಿಸುತ್ತಾರೆ ಎಂದು ಹೆಸರೇಳಲಿಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ಅಲ್ಲಿನ ಸ್ಥಿತಿಗತಿ ತೋಡಿಕೊಂಡರು.
ಕಾರ್ಮಿಕರ ಹಿನ್ನೆಲೆ ಅರಿಯದೆ, ಕಾರ್ಮಿಕರ ಕರೆತರುವ ಗುತ್ತಿಗೆದಾರ ಕಡಮೆ ಹಣಕ್ಕಾಗಿ ಹೆಚ್ಚು ದುಡಿಯುವಂತಹ ಜನರನ್ನು ಕರೆತರುತ್ತಾನೆ. ಕಂಪನಿಗಳಿಗೂ ಇದೇ ಬೇಕಾಗಿರುತ್ತದೆ. ಸರ್ಕಾರದ ಕಾನೂನು ಕಟ್ಟಳೆಗಳನ್ನು ಗಾಳಿಗೆ ತೂರಿ ಕೆಲಸ ನಿರ್ವಹಿಸುವ ಇಂತಹ ಕಂಪನಿಗಳು, ಅಲ್ಲಿನ ಒಳಗುಟ್ಟು ಹೊರಗೆ ಬರಬಾರದು ಅಂದೆನ್ನುವ ಕಾರಣಕ್ಕೆ ಉತ್ತರ ಭಾರತ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ಕೆಲವಡೆಯಿಂದ ಕಡಮೆ ಹಣಕ್ಕೆ ದುಡಿಯುವವರನ್ನು ಕರೆತರುತ್ತಾನೆ. ಕಾರ್ಮಿಕ ಇಲಾಖೆಗೆ, ಜಿಲ್ಲಾಡಳಿತಕ್ಕೆ ಯಾವುದೇ ವಿವರ ನೀಡುವುದಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ಅವರನ್ನು ಕರೆತಂದು, ಆರೇಳು ತಿಂಗಳು - ವರ್ಷದಲ್ಲಿ ಅವರನ್ನು ವಾಪಸ್ ಕಳುಹಿಸುತ್ತಾರೆ. ಕೆಲವರು ಇಲ್ಲಿನ ವಾತಾವರಣಕ್ಕ ಒಗ್ಗದೆ ಎರಡ್ಮೂರು ತಿಂಗಳಲ್ಲೇ ವಾಪಸ್ಸಾಗುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅಪಾಯಕಾರಿ ಕೆಮಿಕಲ್ ಇಲ್ಲಿನ ಕಂಪನಿಗಳು ಬಳಸುತ್ತವೆ. ಅಪ್ಪೀತಪ್ಪೀ ಗಾಳಿಯಲ್ಲಿ ಇದರ ಸೋರಿಕೆಯಾದರೆ ದೊಡ್ಡ ದುರ್ಘಟನೆಯೇ ಸಂಭವಿಸುತ್ತದೆ. ಇದರ ಹೊಣೆಯನ್ನು ಹೊರರಾಜ್ಯದ ಕಾರ್ಮಿಕರ ಮೇಲೆ ಬಿಟ್ಟಿರುತ್ತಾರೆ. 30 ಕಿ.ಮೀ. ದೂರದಲ್ಲಿ ರಾಯಚೂರು ಜಿಲ್ಲೆ ಶಕ್ತಿನಗರದಲ್ಲಿ ಆರ್ಟಿಪಿಎಸ್ ಇದೆ. ಎಲ್ಲ ಕಡೆಗಳಲ್ಲಿ ಸುರಕ್ಷತೆ ಬೇಕು. ಆದರೆ, ಬಂದ ಕಾರ್ಮಿಕರು ಯಾರು? ಎಲ್ಲಿಂದ ಬಂದವರು ? ಅವರ ಹಾಗೂ ಕುಟುಂಬದ ಹಿನ್ನೆಲೆಯೇನು ? ನಮ್ಮ ದೇಶದವರೇ ? ನುಸುಳುಕೋರರೇ? ಅಪರಾಧ ಹಿನ್ನೆಲೆ ಇದೆಯೇ ಎಂಬ ಮುಂತಾದ ಬಗ್ಗೆ ಪರಿಶೀಲನೆ ನಡೆಸುವುದಿಲ್ಲ ಎಂದು ಆ ಅಧಿಕಾರಿ ಆತಂಕ ವ್ಯಕ್ತಪಡಿಸಿದರು.
ರೈತರಿಗೆ ಬೆಣ್ಣೆ ತೋರಿಸಿ, ಸುಣ್ಣ ತಿನ್ನಿಸಿದ ಸರ್ಕಾರ: ಭೂಸ್ವಾಧೀನ ಸಭೆಯಲ್ಲಿ ಆಗಿದ್ದೇನು?
ಕಾರ್ಮಿಕರ ಪರಿಶೀಲನೆ ವೇಳೆ ಇಂತಹ ಅನೇಕ ಅಂಶಗಳು ಕಂಡು ಬಂದಿವೆ. ಹೆಚ್ಚಿಗೆ ಕೇಳಿದರೆ ಪ್ರಭಾವಿಗಳ ಮೂಲಕ ಬಾಯಿ ಮುಚ್ಚಿಸುತ್ತಾರೆ. ಕಳೆದ ಐದಾರು ವರ್ಷಗಳಿಂದ ಇಲ್ಲಿ ಕಾರ್ಯ ನಿರ್ವಹಿಸಿದ ಕಾರ್ಮಿಕರ ಪಟ್ಟಿಯಾಗಲೀ, ಈಗ ಕಾರ್ಯನಿರ್ವಹಿಸುತ್ತಿರುವ ವಿವರಗಳಾಗಲೀ ಕಂಪನಿಗಳು ಬಹಿರಂಗ ಪಡಿಸುವುದಿಲ್ಲ, ಜಿಲ್ಲಾಡಳಿತಕ್ಕೂ ನೀಡುವುದಿಲ್ಲ. ನಾಮ್ ಕೆ ವಾಸ್ತೆಯಂತೆ ಒಂದಿಷ್ಟು ಜನರ ಪಟ್ಟಿ ತಯಾರಿಸಿ ಕೊಡಲಾಗುತ್ತದೆ. ಸ್ಥಳೀಯ ಪೊಲೀಸರೂ ಸಹ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆಧಾರ್ ಸಂಖ್ಯೆ, ಹೆಸರು ವಿಳಾಸಗಳನ್ನು ತಿದ್ದಿದ ಪ್ರಕರಣಗಳು ವೇಳೆ ಕಂಡು ಬಂದಿವೆ. ಕಾರ್ಮಿಕ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಅವಘಡ ಸಂಭವಿಸಿದರೆ ಅದಕ್ಕೆ ಅವರೇ ಹೊಣೆ ಎಂದು ಜಿಲ್ಲಾಡಳಿತದ ಪ್ರಮುಖ ಇಲಾಖೆಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.