ಬೆಂಗಳೂರು[ಡಿ.21]: 2019ರ ಡಿಸೆಂಬರ್ 19ರಂದು ಬೆಂಗಳೂರು ಪೊಲೀಸರು ಸೆಕ್ಷನ್ 144 ಜಾರಿಗೊಳಿಸಿದ್ದರು. ಇದರಿಂದ ಪ್ರತಿಭಟನೆಗೆ ಸಜ್ಜಾಗಿದ್ದ ವಿದ್ಯಾರ್ಥಿಗಳಿಗೆ ತೊಡಕುಂಟಾಗಿದೆ. ಎಲ್ಲರೂ ಒಂದಾಗಿ ಪ್ರತಿಭಟನೆ ಮಾಡುವುದಾದರೂ ಹೇಗೆ ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಮೂಡಿದೆ. ಆದರೆ ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕ್ರಿಯೇಟಿವಿಟಿ ಕ್ಲಿಕ್ ಆಗಿದೆ. ಪ್ರತಿಭಟನೆ ನಡೆಸಲು ಬೆಂಗಳೂರಿನ IIM ವಿದ್ಯಾರ್ಥಿಗಳು ವಿನೂತನ ದಾರಿ ಕಂಡುಕೊಂಡಿದ್ದಾರೆ. ಈ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಈ ಉಪಾಯದಿಂದ ಪೊಲೀಸರೂ ಏನೂ ಮಾಡಲಾಗದೆ ಸುಮ್ಮನಾಗಿದ್ದಾರೆ.

ಗೇಟ್ ಹೊರಗೇ ಚಪ್ಪಲಿ, ಶೂಗಳ ರಾಶಿ

ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಆವರಣದ ಹೊರಗೇ ತಮ್ಮ ಚಪ್ಪಲಿ ಹಾಗೂ ಶೂಗಳನ್ನು ಇರಿಸಿ, ತಾವು ಗೇಟಿನ ಒಳ ಭಾಗದಲ್ಲಿ ನಿಂತಿದ್ದಾರೆ. ಪೊಲೀಸ್ ಇಲಾಖೆ ಹೊರಡಿಸಿದ್ದ ಪ್ರಕಟನೆಯನ್ವಯ ವಿದ್ಯಾರ್ಥಿಗಳು ಆವರಣದ ಹೊರಗೆ ಹೆಜ್ಜೆ ಇರಿಸಿದರೆ ಅರೆಸ್ಟ್ ಮಾಡುವುದಾಗಿ ಹೇಳಲಾಗಿತ್ತು. ಹೀಗಿರುವಾಗ ವಿದ್ಯಾರ್ಥಿಗಳ ಚಪ್ಪಲಿ ಹಾಗೂ ಶೂ ಪ್ರತಿಭಟನೆಗೆ ಸಜ್ಜಾಗಿದ್ದವು. ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿತ್ತು. ವಿದ್ಯಾರ್ಥಿಗಳ ಕ್ರಿಯೇಟಿವಿಟಿಯಿಂದ ಪ್ರತಿಭಟನೆಯೂ ನಡೆದಿತ್ತು ಆದರೆ ಕಾನೂನು ಕೂಡಾ ಉಲ್ಲಂಘಟನೆಯಾಗಿರಲಿಲ್ಲ.

ವಿಡಿಯೋ ಕೂಡಾ ವೈರಲ್

IIM ಬೆಂಗಳೂರಿನ ವಿದ್ಯಾರ್ಥಿಗಳು ನಡೆಸಿದ ಈ ಕ್ರಿಯೇಟಿವಿಟಿಯ ವಿಡಿಯೋ ಕೂಡಾ ವೈರಲ್ ಆಗಿದೆ.  

ಪೌರತ್ವ ಕಾಯ್ದೆ ಜಾರಿಗೊಂಡದಿನಿಂದ ಇದನ್ನು ವಿರೋಧಿಸಿ ದೇಶದಾದ್ಯಂತ ಭಾರೀ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯ ಕಾವು ರಾಜ್ಯಕ್ಕೂ ವ್ಯಾಪಿಸಿದ್ದು, ಬೆಂಗಲೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳನ್ನು ಜನರು ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರಿನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ನಡೆಸಿದ್ದ ಗೋಲೀಬಾರ್‌ಗೆ ಬಲಿಯಾಗಿದ್ದಾರೆ.