ಬೆಂಗಳೂರು :  ರಾಜ್ಯ ಗೃಹರಕ್ಷಕ ದಳದ ಐಜಿಪಿ ಡಿ.ರೂಪಾ ಅವರ ಮೊಬೈಲ್‌ ಕಳವು ಮಾಡಿದ್ದ ಆರೋಪ ಸಂಬಂಧ ಆರೋಗ್ಯ ಇಲಾಖೆ ನಿರೀಕ್ಷಕ ರಾಮಪ್ಪ ವಿರುದ್ಧ ಬಿಡದಿ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ರದ್ದುಪಡಿಸಿ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಹಾಸನ ಜಿಲ್ಲೆಯ ಗಂಡಸಿ ಗ್ರಾಮದ ನಿವಾಸಿಯಾದ ಆರೋಗ್ಯ ಇಲಾಖೆ ನಿರೀಕ್ಷಕ ರಾಮಪ್ಪ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ತಮ್ಮ ಮೊಬೈಲ್‌ ಕಳುವಾಗಿದೆ ಎಂದು ರೂಪ ಅವರು ದೂರಿನಲ್ಲಿ ಹೇಳಿದ್ದಾರೆ. ಆದರೆ, ಅರ್ಜಿದಾರ ರಾಮಪ್ಪ, ತಾವು ಮೊಬೈಲ್‌ ಕಳವು ಮಾಡಿಲ್ಲ. ಇನ್ನೋವೇಟಿವ್‌ ಫಿಲ್ಮ್‌ ಸಿಟಿಯಲ್ಲಿ ರೂಪಾ ಅವರ ಮೊಬೈಲ್‌ ಸಿಕ್ಕಿತ್ತು ಎಂದು ಪೊಲೀಸ್‌ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ರಾಮಪ್ಪ ಈಗಾಗಲೇ ಮೊಬೈಲ್‌ ಅನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆದ್ದರಿಂದ ಪ್ರಕರಣ ಮುಂದುವರಿಸುವ ಅಗತ್ಯ ಇಲ್ಲವಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ರಾಮಪ್ಪ ವಿರುದ್ಧದ ಮೊಬೈಲ್‌ ಕಳವು ಆರೋಪ ಬಗ್ಗೆ ಬಿಡದಿ ಠಾಣಾ ಪೊಲೀಸರ ದಾಖಲಿಸಿದ್ದ ಎಫ್‌ಐಆರ್‌ ರದ್ದುಪಡಿಸಿತು.

‘2018ರ ಅ.21ರಂದು ರಾಮನಗರ ಜಿಲ್ಲೆಯ ಇನ್ನೋವೇಟಿವ್‌ ಫಿಲ್ಮ್‌ ಸಿಟಿಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ಮೊಬೈಲ್‌ ಸ್ಯಾಮ್‌ಸಂಗ್‌ ಗೆಲಾಕ್ಸಿ ಸಿ3 ಮೊಬೈಲ್‌ ಮಧ್ಯಾಹ್ನ 2ಕ್ಕೆ ಕಳುವು ಆಗಿದೆ. ನನ್ನ ಮೊಬೈಲ್‌ ಕಳವು ಮಾಡಿದವರನ್ನು ಪತ್ತೆ ಮಾಡಿ ಅತಿ ಶೀಘ್ರದಲ್ಲಿ ಮೊಬೈಲ್‌ ಹುಡುಕಿಕೊಡಬೇಕೆಂದು ಕೋರುತ್ತೇನೆ’ ಎಂದು ರೂಪಾ ಅವರು ಬಿಡದಿ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು, ರಾಮಪ್ಪ ಅವರನ್ನು ವಿಚಾರಣೆ ನಡೆಸಿ ಡಿ.ರೂಪಾ ಅವರ ಮೊಬೈಲ್‌ ವಶಕ್ಕೆ ಪಡೆದಿದ್ದರು. ನಂತರ ರಾಮಪ್ಪ ವಿರುದ್ಧ ಮೊಬೈಲ್‌ ಕಳವು ಪ್ರಕರಣ ದಾಖಲಿಸಿದ್ದರು.

ರೂಪಾ ವಿರುದ್ಧ ಕೋರ್ಟ್‌ ಅತೃಪ್ತಿ

ಇದೇ ವೇಳೆ ತಮ್ಮ ಮೊಬೈಲ್‌ ಕಳುವಾಗಿದೆ ಎಂದು ಹೇಳಿ ಒಂದು ದಿನ ವಿಳಂಬವಾಗಿ ದೂರು ದಾಖಲಿಸಿದ್ದ ಐಜಿಪಿ ರೂಪ ಅವರ ನಡೆಗೆ ಹೈಕೋರ್ಟ್‌ ಅತೃಪ್ತಿ ವ್ಯಕ್ತಪಡಿಸಿದೆ.

ರೂಪಾ ತಮ್ಮ ಮೊಬೈಲ್‌ 2018ರ ಅ.21ರಂದು ಕಳುವಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ. ಆದರೆ, ಮರುದಿನ ಅ.23ರಂದು ದೂರು ನೀಡಿದ್ದಾರೆ. ಐಪಿಎಸ್‌ ಅಧಿಕಾರಿಯಾಗಿರುವ ರೂಪಾ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅಂತಹವರೇ ಒಂದು ದಿನ ವಿಳಂಬವಾಗಿ ದೂರು ದಾಖಲಿಸಿರುವುದು ಸರಿಯಲ್ಲ ಎಂದು ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.