ದಿನಗೂಲಿ ಆಧಾರದಲ್ಲಿ ಸತತ 30 ವರ್ಷ ಅರಣ್ಯ ವೀಕ್ಷಕ/ಚಾಲಕ ಉದ್ಯೋಗದಲ್ಲಿ ಕಾರ್ಯನಿರ್ವಹಿಸಿದ ದಿನಗೂಲಿ ನೌಕರನ ಸೇವೆ ಕಾಯಂಗೊಳಿಸಲು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಆದೇಶ ಮಾಡಿರುವ ಹೈಕೋರ್ಟ್, ಮಂಜೂರಾತಿ ಹುದ್ದೆಯಲ್ಲಿ 10 ವರ್ಷ ನಿರಂತರವಾಗಿ ಕೆಲಸ ಮಾಡಿದ ಉದ್ಯೋಗಿ ಸೇವೆ ಕಾಯಂಗೆ ಅರ್ಹನಾಗುತ್ತಾನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಬೆಂಗಳೂರು (ಏ.19) : ದಿನಗೂಲಿ ಆಧಾರದಲ್ಲಿ ಸತತ 30 ವರ್ಷ ಅರಣ್ಯ ವೀಕ್ಷಕ/ಚಾಲಕ ಉದ್ಯೋಗದಲ್ಲಿ ಕಾರ್ಯನಿರ್ವಹಿಸಿದ ದಿನಗೂಲಿ ನೌಕರನ ಸೇವೆ ಕಾಯಂಗೊಳಿಸಲು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಆದೇಶ ಮಾಡಿರುವ ಹೈಕೋರ್ಟ್, ಮಂಜೂರಾತಿ ಹುದ್ದೆಯಲ್ಲಿ 10 ವರ್ಷ ನಿರಂತರವಾಗಿ ಕೆಲಸ ಮಾಡಿದ ಉದ್ಯೋಗಿ ಸೇವೆ ಕಾಯಂಗೆ ಅರ್ಹನಾಗುತ್ತಾನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ತಮ್ಮ ಸೇವೆ ಕಾಯಂಗೊಳಿಸಲು ನಿರಾಕರಿಸಿ ಅರಣ್ಯ ಇಲಾಖೆ ನೀಡಿದ್ದ ಹಿಂಬರಹ ಮತ್ತು ಹಿಂಬರಹ ಪುರಸ್ಕರಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ (ಕೆಎಟಿ) ಆದೇಶ ರದ್ದುಪಡಿಸುವಂತೆ ಕೋರಿ ಆನೇಕಲ್ ವಲಯದಲ್ಲಿ ಅರಣ್ಯ ವೀಕ್ಷಕ (ಫಾರೆಸ್ಟ್ ವಾಚರ್) ಪಿ.ಜುಂಜಪ್ಪ (53) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರ ಪೀಠ ಈ ಆದೇಶ ಮಾಡಿದೆ.
ಇದನ್ನೂ ಓದಿ: ವಕ್ಫ್ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ: ರಸ್ತೆ ಸಂಚಾರ ನಿರ್ಬಂಧಿಸದಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ!
ದಿನಗೂಲಿ ನೌಕರನಾಗಿರುವ ಜುಂಜಪ್ಪ ಅವರು ಕಾಯಂ ಉದ್ಯೋಗಿಗೆ ಸರಿಸಮಾನವಾಗಿ 30 ವರ್ಷ ನಿರಂತರವಾಗಿ ಅರಣ್ಯ ವೀಕ್ಷಕ/ಚಾಲಕ ಉದ್ಯೋಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆ ಇವರ ಸೇವೆ ಕಾಯಂಗೊಳಿಸಲು ನಿರಾಕರಿಸಿರುವ ಜೊತೆಗೆ 30 ವರ್ಷ ಆತ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿಲ್ಲ. ಜುಂಜಪ್ಪ ಅವರ ವೇತನ, ಸೇವಾ ದಾಖಲೆಗಳು ಮತ್ತು ಅರಣ್ಯ ಇಲಾಖೆಯ ಅಧಿಕೃತ ಪತ್ರ ವ್ಯವಹಾರಗಳನ್ನು ಮೌಲ್ಯಮಾಪನ ಮಾಡುವಲ್ಲಿ ಕೆಎಟಿ ವಿಫಲವಾಗಿದೆ. ಔಪಚಾರಿಕ ನೇಮಕ ಪತ್ರವನ್ನು ಹಾಜರುಪಡಿಸಿಲ್ಲ ಎಂಬ ಏಕೈಕ ಅಂಶ ಸೇವೆ ಸಲ್ಲಿಸಿರುವ ಉದ್ಯೋಗಿಯ ಸೇವಾ ಕಾಯಮಾತಿಯ ಕಾನೂನುಬದ್ಧ ಹಕ್ಕನ್ನು ನಿರಾಕರಿಸುವುದಕ್ಕೆ ಆಧಾರವಾಗುವುದಿಲ್ಲ ಎಂದು ಪೀಠ ಆದೇಶಿಸಿದೆ.
ಅಂತಿಮವಾಗಿ ಕೆಎಟಿ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಜುಂಜಪ್ಪ ಅವರನ್ನು ಸೇವೆಗೆ ಕಾಯಂಗೊಳಿಸುವಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಜುಂಜಪ್ಪ ದಿನಗೂಲಿ ಆಧಾರದ ಮೇಲೆ 30 ವರ್ಷ ನಿರಂತರವಾಗಿ ಅರಣ್ಯ ವೀಕ್ಷಕ ಹಾಗೂ ಚಾಲಕನಾಗಿ ಕೆಲಸ ಮಾಡಿದ್ದರು. ಅಡೆತಡೆಯಿಲ್ಲದೆ ಕಾರ್ಯ ನಿರ್ಹಹಿಸಿದ್ದರೂ ಅವರ ಸೇವೆ ಕಾಯಂಗೊಳಿಸಲು ನಿರಾಕರಿಸಿ 2016ರ ಆ.29ರಂದು ಅರಣ್ಯ ಇಲಾಖೆ ಹಿಂಬರಹ ನೀಡಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೆಎಟಿ ವಜಾಗೊಳಿಸಿ 2019ರ ಜು.31ರಂದು ಆದೇಶಿಸಿತ್ತು. ಇದರಿಂದ ಜುಂಜಪ್ಪ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಕೀಲರು, ಜುಂಜಪ್ಪ ಕಾಯಂ ನೌಕರರಂತೆ 30 ವರ್ಷ ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸೇವೆ ಕಾಯಮಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಹಲವು ಆದೇಶದಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಜುಂಜಪ್ಪ ಪೂರೈಸುತ್ತಾರೆ. ಅವರ ಸೇವೆ ಕಾಯಂಗೊಳಿಸಲು ನಿರಾಕರಿಸುವುದು ಸಂವಿಧಾನದ ಪರಿಚ್ಛೇದ 14 ಮತ್ತು 16ರ ಉಲ್ಲಂಘನೆಯಾಗಿದೆ. ಮಂಜೂರಾದ ಹುದ್ದೆಗಳಲ್ಲಿ 10 ವರ್ಷ ನಿರಂತರವಾಗಿ ಸೇವೆ ಸಲ್ಲಿಸಿದವರ ಸೇವೆ ಕಾಯಂಗೊಳಿಸಬೇಕು ಎಂದು ಈಗಾಗಲೇ ಹೈಕೋರ್ಟ್ ಧಾರವಾಡ ನ್ಯಾಯಾಲಯವು ಆದೇಶಿಸಿದೆ ಎಂದು ವಿವರಿಸಿದ್ದರು.
ಇದನ್ನೂ ಓದಿ: ಎಸ್ಸಿ ಕುಟುಂಬಕ್ಕೆ ಹೈಕೋರ್ಟ್‌ನಿಂದ 25 ಸಾವಿರ ರೂ. ದಂಡ! ಕಾರಣವೇನು?
ಈ ಮನವಿಗೆ ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ಮಂಜೂರಾತಿ ಹುದ್ದೆಯಲ್ಲಿ ಅರ್ಜಿದಾರರು ಸೇವೆ ಸಲ್ಲಿಸಿಲ್ಲ. ದಿನಗೂಲಿ ನೌಕರರು ಸೇವೆ ಕಾಯಂಗೊಳಿಸಲು ಕ್ಲೇಮು ಮಾಡುವ ಹಕ್ಕು ಹೊಂದಿರುವುದಿಲ್ಲ. ಮಂಜೂರಾತಿ ಹುದ್ದೆಯ ಸೇವೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿರುವುದನ್ನು ದೃಢಪಡಿಸಲು ಅರ್ಜಿದಾರರು ಯಾವುದೇ ಔಪಚಾರಿಕ ನೇಮಕಾತಿ ಪತ್ರವನ್ನು ಹಾಜರುಪಡಿಸಿಲ್ಲ. ಅರಣ್ಯ ಇಲಾಖೆ ನೇಮಕಾತಿಗಳನ್ನು ನಿಗದಿತ ಆಯ್ಕೆ ಪ್ರಕ್ರಿಯೆ ಮೂಲಕವೇ ನಡೆಯಬೇಕಿದೆ. ಅರ್ಜಿದಾರರ ಸೇವೆ ಕಾಯಂಗೊಳಿಸಬೇಕು ಎಂಬ ವಾದ ನೇಮಕಾತಿ ನಿಯಮಗಳನ್ನು ಬದಿಗೆ ಸರಿಸುವುದಾಗಿದೆ ಮತ್ತು ವ್ಯತಿರಿಕ್ತ ಪರಿಣಾಮ ಉಂಟಾಗಲು ಕಾರಣವಾಗುತ್ತದೆ ಎಂದು ವಾದಿಸಿದ್ದರು. ಸರ್ಕಾರಿ ವಕೀಲರ ವಾದ ಒಪ್ಪದ ಹೈಕೋರ್ಟ್, ಜುಂಜಪ್ಪ ಅವರ ಸೇವೆ ಕಾಯಂಗೊಳಿಸಲು ಆದೇಶಿಸಿದೆ.
