ತಾಯಿಯ ಆಸ್ತಿ ಬೇಕೆಂದರೆ ಮೊದಲು ಅವರ ಹೃದಯ ಗೆಲ್ಲಬೇಕು ಆಸ್ತಿಗಾಗಿ ಕೋರ್ಟ್‌ ಮೆಟ್ಟಿಲೇರಿ ಕಾನೂನು ಹೋರಾಟ ಮಾಡುವುದಲ್ಲ ಜನ್ಮ ನೀಡಿದ ತಾಯಿಯೇ ನಿಮ್ಮ ದೇವರು ಎಂಬುದನ್ನು ಮರೆಯಬಾರದು ಎಂದ ಕೋರ್ಟ್

 ಬೆಂಗಳೂರು(ಆ.25): ‘ತಾಯಿಯ ಆಸ್ತಿ ಬೇಕೆಂದರೆ ಮೊದಲು ಅವರ ಹೃದಯ ಗೆಲ್ಲಬೇಕು. ಅದು ಬಿಟ್ಟು ಕೋರ್ಟ್‌ ಮೆಟ್ಟಿಲೇರಿ ಕಾನೂನು ಹೋರಾಟ ಮಾಡುವುದಲ್ಲ. ತಾಯಿ ಪಾದವನ್ನು ಮುಟ್ಟಿಅವರ ಮುಖವನ್ನು ನೋಡಿ. ಆಗ ತಾಯಿಯೇ ನಿಮಗೆ ಆಸ್ತಿಯನ್ನು ದಾನವಾಗಿ ನೀಡಬಹುದು. ನೀವು ದೇವರನ್ನು ನೋಡಿಲ್ಲ. ಆದರೆ, ಜನ್ಮ ನೀಡಿದ ತಾಯಿಯೇ ನಿಮ್ಮ ದೇವರು ಎಂಬುದನ್ನು ಮರೆಯಬಾರದು’

ತಾಯಿ ಹೆಸರಿನಲ್ಲಿರುವ ಆಸ್ತಿಯನ್ನು ಮಗಳು ದಾನ (ಗಿಫ್ಟ್‌ ಡೀಡ್‌) ಮಾಡಿಕೊಡಿಸಿಕೊಂಡ ಕ್ರಮವನ್ನು ರದ್ದುಪಡಿಸಿದ್ದ ಉಪ ವಿಭಾಗಾಧಿಕಾರಿ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಮಗಳಿಗೆ ಹೈಕೋರ್ಟ್‌ ಹೇಳಿದ ಬುದ್ಧಿಮಾತಿದು.

ಬೆಂಗಳೂರು; ಆಸ್ತಿ ತೆರಿಗೆ ವಿನಾಯಿತಿ, ಸಚಿವ ಡಾ. ಸಿಎನ್ ಅಶ್ವತ್ಥನಾರಾಯಣ ಗುಡ್ ನ್ಯೂಸ್

ಜೆ.ಪಿ.ನಗರದ ಶಾಂತಮ್ಮ ಎಂಬುವರು ತನ್ನ ತಾಯಿ ಜಯಮ್ಮ (70) ಹೆಸರಿನಲ್ಲಿದ್ದ ಆಸ್ತಿಯನ್ನು ‘ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ’ ಅಡಿ ದಾನ ಪತ್ರ ಮಾಡಿಸಿಕೊಂಡ ನಂತರ ತಾಯಿಯನ್ನು ಹೊರಹಾಕಿದ್ದರು ಎಂಬುದು ಆರೋಪ. ಆದರೆ ದಾನ ಪತ್ರ ಕಾನೂನು ಪ್ರಕಾರವಾಗಿರದ ಹಿನ್ನೆಲೆಯಲ್ಲಿ ದಾನ ಪತ್ರವನ್ನು ರದ್ದುಪಡಿಸಿ ಪೋಷಕರು ಹಾಗೂ ಹಿರಿಯ ನಾಗರಿಕ ಕಲ್ಯಾಣ ನ್ಯಾಯಾಧೀಕರಣ (ಉಪ ವಿಭಾಗಾಧಿಕಾರಿ) ಆದೇಶಿಸಿತ್ತು.

ಈ ಆದೇಶ ರದ್ದು ಕೋರಿ ಮಗಳು ಶಾಂತಮ್ಮ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅದನ್ನು ಏಕ ಸದಸ್ಯ ನ್ಯಾಯಪೀಠ ವಜಾಗೊಳಿಸಿದ್ದರಿಂದ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯು ಮಂಗಳವಾರ ಹಿರಿಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಶಾಂತಮ್ಮ ಅವರ ನಡೆಗೆ ಬೇಸರ ವ್ಯಕ್ತಪಡಿಸಿತು.

ನಂತರ ಈ ವಿಚಾರದಲ್ಲಿ ಮೇಲ್ಮನವಿದಾರರು ಯಾವುದೇ ಅನುಕಂಪಕ್ಕೆ ಅರ್ಹವಾಗಿಲ್ಲ. ಅವರ ನಡೆಯನ್ನು ನ್ಯಾಯಾಲಯ ಒಪ್ಪುವುದಿಲ್ಲ ಹಾಗೂ ಅವರ ಪರವಾಗಿ ಯಾವುದೇ ಆದೇಶ ನೀಡಲಾಗದು. ಉಪ ವಿಭಾಗಾಧಿಕಾರಿಯ ಆದೇಶವು ಸೂಕ್ತವಾಗಿದ್ದು, ಅದರಲ್ಲಿ ಹೈಕೋರ್ಟ್‌ ಮಧ್ಯಪ್ರವೇಶ ಅಗತ್ಯವಿಲ್ಲ ಎಂದು ಅಭಿಪ್ರಾಯ ಪಟ್ಟು ಮೇಲ್ಮನವಿ ವಜಾಗೊಳಿಸಿದರು.

ಮಗಳನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ತಾಯಿಯ ಆಸ್ತಿಗಾಗಿ ಕೋರ್ಟ್‌ಗೆ ಬಂದಿದ್ದೀರಿ. ತಾಯಿಯು ಯಾವತ್ತೂ ಮಕ್ಕಳ ವಿರುದ್ಧ ಇರುವುದಿಲ್ಲ. ಮಕ್ಕಳು ಮಾತ್ರ ತಾಯಿ ವಿರುದ್ಧ ನಡೆದುಕೊಳ್ಳುತ್ತಾರೆ. ನಿಮಗೆ ಆಸ್ತಿ ಬೇಕಾದರೆ ಮೊದಲು ಆಕೆಯ ಹೃದಯ ಗೆಲ್ಲಬೇಕು ಎಂದು ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಹೇಳಿದರು.