ಸಲಿಂಗಿಗಳ ವಿವಾಹಕ್ಕೆ ಸುಪ್ರೀಂ ಅನುಮತಿಸಿದ್ರೆ ತಪ್ಪು ಸಂದೇಶ ರವಾನೆ: ಪೇಜಾವರ ಶ್ರೀ
ಸುಪ್ರೀಂ ಕೋರ್ಟ್ ನೇರವಾಗಿ ಅನುಮತಿ ನೀಡುವ ಬದಲು ಹಿಂದೂ ಧರ್ಮದ ವಿದ್ವಾಂಸರು, ಧರ್ಮ ಪಂಡಿತರ ಒಟ್ಟು ಅಭಿಪ್ರಾಯವನ್ನು ಕೇಳಬೇಕು. ಸಲಿಂಗಿಗಳಿಗೆ ವೈವಾಹಿಕ ಸಂಬಂಧಕ್ಕೆ ಅನುಮತಿ ನೀಡಿ ಎಲ್ಲ ಸೌಲಭ್ಯ ಒದಗಿಸಬೇಕೆಂಬ ಸಲಹೆ ಪ್ರಸ್ತಾಪ ಕೂಡ ಅತ್ಯಂತ ಮಾರಕ ಎಂದ ಪೇಜಾವರ ಶ್ರೀ.
ಬಾಗಲಕೋಟೆ(ಏ.29): ಸಲಿಂಗಿಗಳಿಗೆ ವೈವಾಹಿಕ ಸಂಬಂಧಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದರೆ ಅದು ತಪ್ಪು ಸಂದೇಶ ಹೋಗುತ್ತದೆ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಆತಂಕ ವ್ಯಕ್ತಪಡಿಸಿದರು. ಶ್ರೀಕೃಷ್ಣಮಠದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಮಾಜದ ವೈವಾಹಿಕ ಪವಿತ್ರ ಸಂಬಂಧಕ್ಕೆ ಧಕ್ಕೆ ತರುತ್ತದೆ. ಸುಪ್ರೀಂ ಕೋರ್ಟ್‌ನಲ್ಲಿ ನಡೆದಿರುವ ವಿಚಾರಣೆ ಊರ್ಜಿತಗೊಳಿಸುವ ಸಾಧ್ಯತೆಗಳು ಕಾಣುತ್ತಿವೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ನೇರವಾಗಿ ಅನುಮತಿ ನೀಡುವ ಬದಲು ಹಿಂದೂ ಧರ್ಮದ ವಿದ್ವಾಂಸರು, ಧರ್ಮ ಪಂಡಿತರ ಒಟ್ಟು ಅಭಿಪ್ರಾಯವನ್ನು ಕೇಳಬೇಕು. ಸಲಿಂಗಿಗಳಿಗೆ ವೈವಾಹಿಕ ಸಂಬಂಧಕ್ಕೆ ಅನುಮತಿ ನೀಡಿ ಎಲ್ಲ ಸೌಲಭ್ಯ ಒದಗಿಸಬೇಕೆಂಬ ಸಲಹೆ ಪ್ರಸ್ತಾಪ ಕೂಡ ಅತ್ಯಂತ ಮಾರಕ ಎಂದರು.
ಸಮಗ್ರ ಅಧಿಕಾರ ಬಳಸಿ ಸಲಿಂಗ ವಿವಾಹಕ್ಕೆ ಮನ್ನಣೆ ನೀಡಿ: ಸುಪ್ರೀಂಕೋರ್ಟ್‌ಗೆ ಸಲಿಂಗಿಗಳ ಪರ ವಕೀಲರ ಮನವಿ
ಒಂದು ವೇಳೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದರೇ ಅದನ್ನು ಗೌರವಿಸಬೇಕಾಗುತ್ತದೆ. ಆದರೆ ಸುಪ್ರೀಂ ಕೋರ್ಟ್ ಕೂಡ ರಾಜಪ್ರಭುತ್ವದ ಇನ್ನೊಂದು ಮುಖವಾಗಬಾರದೆಂದು ಅವರು ಹೇಳಿದರು. ಈಗಾಗಲೇ ಮೀಸಲಾತಿ ಸಂಬಂಧ ಅನೇಕ ಗೊಂದಲಗಳು ಇರುವಾಗ ಸಲಿಂಗ ದಂಪತಿಗಳಿಗೆ ಮೀಸಲಾತಿ ಸೌಲಭ್ಯ ಒದಗಿಸಿದರೇ ಅದು ಮತ್ತಷ್ಟುಸಮಸ್ಯೆಯನ್ನು ಜಟಿಲಗೊಳಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಶ್ನೆವೊಂದಕ್ಕೆ ಉತ್ತರಿಸಿದ ಶ್ರೀಗಳು, ಕೆನೆ ಪದರು ಸಮುದಾಯಗಳ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಒದಗಿಸುವ ಕೇಂದ್ರ ಸರ್ಕಾರದ ಪ್ರಸ್ತಾಪ ರಾಜ್ಯದಲ್ಲಿ ಜಾರಿಗೆ ಬಂದಿಲ್ಲ. ಸರ್ಕಾರ ಇದಕ್ಕೆ ಹಿಂದೇಟು ಹಾಕಬಾರದು. ಚುನಾವಣೆ ನಂತರ ಬರುವ ಸರ್ಕಾರವಾದರೂ ಈ ಬಗ್ಗೆ ಯೋಚಿಸಬೇಕು ಎಂದರು.
ಬರಲಿರುವ ಚುನಾವಣೆಯಲ್ಲಿ ಮತದಾರ ಪ್ರಬುದ್ಧತೆಯಿಂದ ಮತ ಚಲಾಯಿಸಬೇಕು. ಜಾತಿ, ಕೋಮು ವೈಭವೀಕರಣ ಮಾಡುವ ಪಕ್ಷಗಳನ್ನು ಬೆಂಬಲಿಸಬಾರದೆಂದು ಶ್ರೀಗಳು ಸಲಹೆ ನೀಡಿದರು. ವಿಶ್ವ ಹಿಂದೂ ಪರಿಷತ್ತಿನ ಶಿವು ಮೇಲ್ನಾಡ, ಮನೋಜ ಕರೋಡಿವಾಲ ಉಪಸ್ಥಿತರಿದ್ದರು.