ಹಾಸನ[ಫೆ.03]: ರಾಜ್ಯದಲ್ಲಿ ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕೆಂಬ ಬಗ್ಗೆ ಮೈತ್ರಿ ಪಕ್ಷಗಳ ನಡುವೆ ಚರ್ಚೆಯೇ ಆಗಿಲ್ಲ. ಅದಕ್ಕೂ ಮೊದಲೇ ಹಾಸನದಿಂದ ಪ್ರಜ್ವಲ್‌ ರೇವಣ್ಣ ಸ್ಪರ್ಧಿಸುತ್ತಾರೆ ಎಂದು ಹೇಳುವುದು ಸರಿಯಲ್ಲ ಎಂದು ಮಾಜಿ ಸಚಿವ ಎ.ಮಂಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ… ರೇವಣ್ಣ ಅವರೇ ಅಭ್ಯರ್ಥಿ ಎನ್ನುವ ಹೇಳಿಕೆಗೆ ಯಾವುದೇ ಮಹತ್ವ ಇಲ್ಲ. ಯಾವ ಕ್ಷೇತ್ರ, ಯಾರಿಗೆ ಎನ್ನುವುದು ಹಂಚಿಕೆಯಾಗಿಲ್ಲ, ಈ ಸಂಬಂಧ ಎರಡೂ ಪಕ್ಷಗಳ ನಾಯಕರ ನಡುವೆ ಚರ್ಚೆಯೂ ಆಗಿಲ್ಲ. ಅದಕ್ಕೂ ಮೊದಲೇ ಪ್ರಜ್ವಲ… ಅವರೇ ಹಾಸನ ಕ್ಷೇತ್ರದ ಅಭ್ಯರ್ಥಿ ಎನ್ನುವ ಸಚಿವ ರೇವಣ್ಣ ಅವರಿಗೆ ತಿಳಿವಳಿಕೆ ಕಡಿಮೆ ಎಂದು ವ್ಯಂಗ್ಯವಾಡಿದರು.

ದೇವೇಗೌಡರ ಸ್ಪರ್ಧೆಗೆ ಅಭ್ಯಂತರ ಇಲ್ಲ:

ಹಾಸನ ಕ್ಷೇತ್ರದಿಂದ ದೇವೇಗೌಡರು ಈ ಬಾರಿಯೂ ಸ್ಪರ್ಧಿಸಿದರೆ ನನ್ನ ಅಭ್ಯಂತರವಿಲ್ಲ. ಅವರೇ ನಿಲ್ಲಬೇಕು ಎಂಬುದು ನನ್ನ ಆಸೆಯೂ ಆಗಿದೆ. ಆದರೆ ಮಂಡ್ಯವನ್ನು ನಮಗೆ ಬಿಟ್ಟು ಕೊಡಬೇಕೆಂಬ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಗೌಡರು ಸ್ಪರ್ಧಿಸುವುದು ಬೇಡ ಎನ್ನುವುದು ರೇವಣ್ಣ ಅವರ ವೈಯಕ್ತಿಕ ಅನಿಸಿಕೆ. ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಕೊಟ್ಟು ಹಾಸನದಿಂದ ದೇವೇಗೌಡರೇ ಸ್ಪರ್ಧಿಸಿದರೆ ಅವರ ಪರ ಕೆಲಸ ಮಾಡುವೆ ಎಂದರು.

ಕಾಂಗ್ರೆಸ್‌ಗಿಂತ ಬಿಜೆಪಿಯೇ ಉತ್ತಮ ಎಂಬ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿಕೆಯನ್ನು ಖಂಡಿಸಿದ ಅವರಿಗೆ ಎಲ್ಲರ ಜತೆ ಸಂಸಾರ ಮಾಡಿ ಅಭ್ಯಾಸ ಅಗಿದೆ. ಆಕಸ್ಮಿಕವಾಗಿ ಮಂತ್ರಿಯಾಗಿರುವ ಪುಟ್ಟರಾಜು ಹೀಗೆ ಮಾತನಾಡಬಾರದು. ನಾವು ಏನಾದರೂ ಮಾತನಾಡಿದರೆ ತಪ್ಪು, ಅವರು ಮಾತನಾಡಿದರೆ ಸರಿಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಸದ್ಯಕ್ಕೀಗ ನಾವು ಗಂಡ-ಹೆಂಡತಿ ಇದ್ದಂತೆ

ಸದ್ಯಕ್ಕೆ ಈಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಗಂಡ-ಹೆಂಡತಿ ಇದ್ದ ಹಾಗೆ. ಇಬ್ಬರ ನಡುವೆ ಜಗಳ ಸಾಮಾನ್ಯ, ಇದೇ ಕಾರಣಕ್ಕೆ ಡೈವೋರ್ಸ್‌ ಆಗಲ್ಲ. ಏನೇ ಆದರೂ ಸರ್ಕಾರಕ್ಕೆ ಧಕ್ಕೆ ಆಗಲ್ಲ. ನಮ್ಮನ್ನು ಬಿಟ್ಟು ಅವರಿಗೆ ವಿಧಿಯಿಲ್ಲ, ಅವರನ್ನು ಬಿಟ್ಟು ನಮಗೆ ವಿಧಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಮಂಜು ಪ್ರತಿಕ್ರಿಯಿಸಿದರು.

10 ವರ್ಷದಿಂದ ಜಿಲ್ಲೆ ಅಭಿವೃದ್ಧಿಯಾಗಿಲ್ಲ ಎಂಬ ರೇವಣ್ಣ ಹೇಳಿಕೆಯನ್ನು ಖಂಡಿಸಿದ ಮಂಜು, ನಾವು ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿಲ್ಲ. ಆದರೆ ಅವರು ಹೊಳೆನರಸೀಪುರ ಬಿಟ್ಟು ಬೇರೆಡೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆಗೆ ಬಂದರೆ ಮಾತನಾಡಲು ಸಿದ್ಧ ಎಂದರು.

ಜತೆಗೆ, ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾಡಿರುವ ಅಭಿವೃದ್ಧಿಯನ್ನು ಹಾಸನ ಜಿಲ್ಲೆಯಲ್ಲಿ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳುವ ಮೂಲಕ ರೇವಣ್ಣ ಕಾಲೆಳೆದರು ಮಂಜು.