Brahmin CM: ಬಿಜೆಪಿ ಗೆದ್ದರೆ ಪ್ರಲ್ಹಾದ್ ಜೋಶಿ ಸಿಎಂ: 'ಬ್ರಾಹ್ಮಣ ಸಿಎಂ' ಬಾಂಬ್ ಹಾಕಿದ ಎಚ್‌ಡಿಕೆ!
ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಮುಂಬರುವ ಚುನಾವಣೆ ಬಳಿಕ ಈ ರಾಜ್ಯದ ಮುಖ್ಯಮಂತ್ರಿ ಮಾಡುವ ಹುನ್ನಾರ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ನಡೆದಿದೆ.ಈ ಕುತಂತ್ರಕ್ಕೆ ಮರುಳಾಗಬೇಡಿ ಎಂದು ಎಚ್‌ಡಿ ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.
ಬೆಂಗಳೂರು (ಫೆ.6) : ‘ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಮುಂಬರುವ ಚುನಾವಣೆ ಬಳಿಕ ಈ ರಾಜ್ಯದ ಮುಖ್ಯಮಂತ್ರಿ ಮಾಡುವ ಹುನ್ನಾರ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ನಡೆದಿದೆ. ಹೀಗಾಗಿ, ವೀರಶೈವ ಲಿಂಗಾಯತ, ಒಕ್ಕಲಿಗ, ಹಿಂದುಳಿದ ಮತ್ತು ದಲಿತ ವರ್ಗದವರು ಈ ಕುತಂತ್ರಕ್ಕೆ ಮರುಳಾಗಬಾರದು’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.
ಕುಮಾರಸ್ವಾಮಿ((HD Kumaraswamy) ಅವರ ಈ ಹೇಳಿಕೆ ವಿವಾದದ ಸ್ವರೂಪ ಪಡೆದಿದ್ದು, ಆಡಳಿತಾರೂಢ ಬಿಜೆಪಿಯ ಹಲವು ನಾಯಕರು ಹಾಗೂ ಕಾಂಗ್ರೆಸಿಗರು ಕೂಡ ಕಿಡಿಕಾರಿದ್ದಾರೆ.
ಬ್ರಾಹ್ಮಣ ಸಿಎಂ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಬ್ಯಾಟಿಂಗ್: ಕುಮಾರಸ್ವಾಮಿಗೆ ಸಿ.ಟಿ.ರವಿ ಟಾಂಗ್
‘ಜೆಡಿಎಸ್‌ನವರದು ಪಂಚರತ್ನ ಯಾತ್ರೆಯಲ್ಲ, ಕುಟುಂಬದ ನವಗ್ರಹ ಯಾತ್ರೆ’ ಎಂದು ಟೀಕಿಸಿದ್ದ ಪ್ರಹ್ಲಾದ್ ಜೋಶಿ(Pralhad Joshi) ಅವರ ಹೇಳಿಕೆಗೆ ಭಾನುವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿ ಮಾತನಾಡಿದ ಕುಮಾರಸ್ವಾಮಿ ಅವರು ಜೋಶಿ ವಿರುದ್ಧ ಹರಿಹಾಯ್ದರು.
ನಮ್ಮ ಪಕ್ಷದ ಪಂಚರತ್ನ ಯಾತ್ರೆಗೆ ಪಂಚರತ್ನ ಎಂದು ಹೆಸರಿಡಬಾರದಿತ್ತು. ನವಗ್ರಹ ಯಾತ್ರೆ ಎಂದು ಹೆಸರಿಡಬೇಕಿತ್ತು ಎಂದು ಪಕ್ಷ ಮತ್ತು ನಮ್ಮ ಕುಟುಂಬದ ಬಗ್ಗೆ ಕೇಂದ್ರ ಸಚಿವ ಜೋಶಿ ಟೀಕಿಸಿದ್ದಾರೆ. ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲು ಆರ್‌ಎಸ್‌ಎಸ್‌ನಲ್ಲಿ ಹುನ್ನಾರ ಆರಂಭವಾಗಿದೆ. ಜೋಶಿಯವರು ದಕ್ಷಿಣ ಕರ್ನಾಟಕದ ಬ್ರಾಹ್ಮಣ ಸಂಸ್ಕೃತಿಗೆ ಸೇರಿದವರಲ್ಲ. ಶೃಂಗೇರಿ ಮಠ ಧ್ವಂಸ ಮಾಡಿದ ದೇಶಸ್ಥ ಬ್ರಾಹ್ಮಣರು. ಬ್ರಾಹ್ಮಣ ಸಂಸ್ಕಾರದಲ್ಲಿ ಎರಡು-ಮೂರು ವಿಧಗಳಿವೆ. ಶೃಂಗೇರಿ ಮಠ ಒಡೆದ, ದೇವರ ವಿಗ್ರಹ ನಾಶಪಡಿಸಿದ ಮರಾಠ ಪೇಶ್ವೆ ಸಮುದಾಯಕ್ಕೆ ಜೋಶಿ ಸೇರಿದವರು. ಮಹತ್ಮಾ ಗಾಂಧೀಜಿಯನ್ನು ಹತ್ಯೆ ಮಾಡಿದ ವರ್ಗದವರು. ಇವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಲು ಆರ್‌ಎಸ್‌ಎಸ್‌ನವರು ತೀರ್ಮಾನಿಸಿದ್ದಾರೆ. ಅದಕ್ಕಾಗಿ ನನ್ನ ಮೇಲೆ ಗದಾಪ್ರಹಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ದೇಶಭಕ್ತಿ ಹೆಸರಿನಲ್ಲಿ ಮಾರಣಹೋಮ:
ಶೃಂಗೇರಿ ಮಠ ಧ್ವಂಸ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಪ್ರಹ್ಲಾದ್ ಜೋಶಿ ಸೇರಿದ್ದಾರೆ. ನಮ್ಮ ಹಳೆಯ ಕರ್ನಾಟಕ ಭಾಗದ ಬ್ರಾಹ್ಮಣರು ಸರ್ವೇ ಜನಾಃ ಸುಖೀನೋಃ ಭವಂತು ಎನ್ನುತ್ತಾರೆ. ಆದರೆ ಈ ಜೋಶಿ ನಮ್ಮ ಭಾಗದ ಬ್ರಾಹ್ಮಣರಲ್ಲ. ಮಹಾರಾಷ್ಟ್ರ ಭಾಗದ ಪೇಶ್ವೆ ವಂಶಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿಯಿಲ್ಲ, ಸಂಸ್ಕೃತಿ ಬೇಕಿಲ್ಲ. ದೇಶ ವಿಭಜಿಸುವ, ಕುತಂತ್ರದ ರಾಜಕಾರಣ ಮಾಡುವ, ದೇಶಭಕ್ತಿ ಹೆಸರಿನಲ್ಲಿ ದೇಶಕ್ಕೆ ಕೊಡುಗೆ ನೀಡಿದವರನ್ನು ಮಾರಣಹೋಮ ಮಾಡುವ ಪ್ರವರ್ಗದಿಂದ ಬಂದವರು ಎಂದು ಕುಮಾರಸ್ವಾಮಿ ಇದೇ ವೇಳೆ ವಾಗ್ದಾಳಿ ನಡೆಸಿದರು.
ವೀರಶೈವ ಸಮಾಜ, ಒಕ್ಕಲಿಗ ಸಮಾಜ, ಹಿಂದುಳಿದವರು ಮತ್ತು ದಲಿತರಿಗೂ ಮನವಿ ಮಾಡುತ್ತೇನೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕುತಂತ್ರಕ್ಕೆ ಮರುಳಾಗಬೇಡಿ. ಇವರು ರಾಜ್ಯ ವಿಭಜಿಸುತ್ತಾರೆ. ಜೋಶಿಯಂತಹ ವ್ಯಕ್ತಿಗಳನ್ನು ರಾಜ್ಯದ ಮುಖ್ಯಮಂತ್ರಿ ಮಾಡುತ್ತಾರೆ. ಮೂಲಗಳ ಪ್ರಕಾರ ಜೋಶಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿ ಎಂಟು ಜನ ಉಪಮುಖ್ಯಮಂತ್ರಿಗಳನ್ನು ಮಾಡುವ ಬಗ್ಗೆ ದೆಹಲಿಯಲ್ಲಿ ಆರ್‌ಎಸ್‌ಎಸ್ ಸಭೆ ನಡೆಸಲಾಗಿದೆ ಎಂದು ಆರೋಪಿಸಿದರು.
ಬ್ರಾಹ್ಮಣ ಪ್ರಹ್ಲಾದ್ ಜೋಶಿ ಸಿಎಂ- 8 ಮಂದಿ ಡೆಪ್ಯೂಟಿ ಸಿಎಂ: ಬಿಜೆಪಿಯಲ್ಲಿ ಪ್ರಳಯ ಸೃಷ್ಟಿಸಿದ ಕುಮಾರಸ್ವಾಮಿ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜೋಶಿ ಅವರಂತಹ ವ್ಯಕ್ತಿಯನ್ನು ಮುಂದಿಟ್ಟುಕೊಂಡು ರಾಜ್ಯವನ್ನು ಕುಲಗೆಡಿಸಲು ಹೊರಟಿರುವ ಈ ರೀತಿಯ ವ್ಯವಸ್ಥೆಯ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ಎಂಟು ಜನ ಉಪ ಮುಖ್ಯಮಂತ್ರಿ ಮಾಡಲು ಹೊರಟಿರುವವರ ಹೆಸರನ್ನು ಬೇಕಾದರೂ ನೀಡುತ್ತೇನೆ ಎಂದು ಹೇಳಿದರು.