Asianet Suvarna News Asianet Suvarna News

ಬಿಪಿಎಲ್‌ ಕುಟುಂಬಕ್ಕೆ ಇಬ್ಬರು ಮುಖ್ಯಸ್ಥರಿದ್ದರೆ ಈ ತಿಂಗಳು ಅಕ್ಕಿ ಹಣ ಇಲ್ಲ: ಯಾಕೆ ಗೊತ್ತಾ?

ಪಡಿತರ ಪಡೆಯುವ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರು ಇದ್ದರೆ ಆ ಕುಟುಂಬದ ಮುಖ್ಯಸ್ಥರು ಯಾರು ಎಂಬ ಸಮಸ್ಯೆ ಇತ್ಯರ್ಥವಾಗದ ಹೊರತು ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಅಕ್ಕಿ ಬದಲಿಗೆ ಹಣ ಕೊಡದಿರಲು ಸರ್ಕಾರ ನಿರ್ಧರಿಸಿದೆ. 

If a BPL Card family has two heads there is no rice money this month gvd
Author
First Published Jul 7, 2023, 10:35 AM IST

ಬೆಂಗಳೂರು (ಜು.07): ಪಡಿತರ ಪಡೆಯುವ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರು ಇದ್ದರೆ ಆ ಕುಟುಂಬದ ಮುಖ್ಯಸ್ಥರು ಯಾರು ಎಂಬ ಸಮಸ್ಯೆ ಇತ್ಯರ್ಥವಾಗದ ಹೊರತು ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಅಕ್ಕಿ ಬದಲಿಗೆ ಹಣ ಕೊಡದಿರಲು ಸರ್ಕಾರ ನಿರ್ಧರಿಸಿದೆ. ಗುರುವಾರ ಅನ್ನಭಾಗ್ಯ ಯೋಜನೆ ಜಾರಿ ಕುರಿತು ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಅಂತ್ಯೋದಯ ಕಾರ್ಡು ಹೊಂದಿರುವ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಕ್ಕೆ ನಗದು ವರ್ಗಾವಣೆ ಸೌಲಭ್ಯ ಸಿಗುವುದಿಲ್ಲ. ಏಕೆಂದರೆ ಅವರು ಈಗಾಗಲೇ 30 ಕೆ.ಜಿ. ಅಕ್ಕಿ ಪಡೆಯುತ್ತಿರುತ್ತಾರೆ. ಆದರೆ, ಅಂತ್ಯೋದಯ ಕಾರ್ಡು ಹೊಂದಿರುವ ಕುಟುಂಬದಲ್ಲಿ 4 ಸದಸ್ಯರಿದ್ದರೆ ಸದರಿ ಕುಟುಂಬವು 170 ರು.ಗಳನ್ನು, 5 ಸದಸ್ಯರಿದ್ದರೆ 340 ರು., ಆರು ಸದಸ್ಯರಿದ್ದರೆ 510 ರು.ಗಳನ್ನು ಪಡೆಯುತ್ತದೆ. ಹೆಚ್ಚಿನ ಸದಸ್ಯರು ಇದ್ದಲ್ಲಿ ಇದೇ ಅನುಪಾತದಲ್ಲಿ ನಗದು ಪಡೆಯಲಿದೆ.

ಕಳೆದು ಹೋದ ಪಾಸ್‌ಪೋರ್ಟ್‌ ಮತ್ತೆ ಪಡೆಯಲು ಎಫ್‌ಐಆರ್‌ ಕಾಪಿ ಕಡ್ಡಾಯ: ಹೈಕೋರ್ಟ್‌

ಕಳೆದ ಮೂರು ತಿಂಗಳುಗಳಲ್ಲಿ ಪಡಿತರ ಆಹಾರ ಧಾನ್ಯವನ್ನು ಪಡೆದಿರುವ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯ ಪಡೆಯಲು ಅರ್ಹವಾಗಿವೆ. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳನ್ನು ನಗದು ವರ್ಗಾವಣೆ ಸೌಲಭ್ಯದಿಂದ ಹೊರಗಿಡಲು ನಿರ್ಧರಿಸಲಾಗಿದೆ. ಕುಟುಂಬದ ಮುಖ್ಯಸ್ಥರನ್ನು ನಿಗದಿಪಡಿಸದ ಕುಟುಂಬಗಳು ಮುಖ್ಯಸ್ಥರನ್ನು ಆಯ್ಕೆ ಮಾಡಿಕೊಳ್ಳಬೇಕು. ಮಹಿಳಾ ಸದಸ್ಯರಿರುವ ಪಡಿತರ ಚೀಟಿಯಲ್ಲಿನ ಮಹಿಳೆಯನ್ನು ಕುಟುಂಬದ ಮುಖ್ಯಸ್ಥರನ್ನಾಗಿ ನೇಮಿಸಬೇಕು. ಆಹಾರ ಇಲಾಖೆಯ ಸಿಬ್ಬಂದಿಗಳು ಸಂಬಂಧಪಟ್ಟಕುಟುಂಬದ ಮುಖ್ಯಸ್ಥೆಯನ್ನು ಗುರುತಿಸಲು ಸಹಕರಿಸಬೇಕು ಎಂದು ತಿಳಿಸಲಾಗಿದೆ.

ಮುಖ್ಯವಾಗಿ ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಜೋಡಣೆ ಮಾಡಬೇಕು. ಜುಲೈ 20ರೊಳಗಾಗಿ ತಮ್ಮ ಸಕ್ರಿಯ ಬ್ಯಾಂಕ್‌ ಖಾತೆಯ ಮಾಹಿತಿಯನ್ನು ನೀಡಿದ ಪಡಿತರ ಚೀಟಿ ಕುಟುಂಬಗಳಿಗೆ ಆಗಸ್ಟ್‌ ತಿಂಗಳಿನಲ್ಲಿ ನಗದು ವರ್ಗಾವಣೆ ಸೌಲಭ್ಯ ದೊರಕಲಿದೆ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಬ್ಯಾಂಕ್‌ ಖಾತೆಯ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಯಲ್ಲೇ ನೀಡಬೇಕು.

ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ (ಬಿಪಿಎಲ್‌) ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ 5 ಕೆ.ಜಿ. ಅಕ್ಕಿ ವಿತರಣೆ ಆಗುತ್ತಿದೆ. ಅದರೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 5 ಕೆ.ಜಿ. ಆಹಾರ ಧಾನ್ಯ ಸೇರಿಸಿ ಪ್ರತಿ ತಿಂಗಳು ಫಲಾನುಭವಿಗೆ ತಲಾ 10 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಲು ಸರ್ಕಾರ ನಿರ್ಧರಿಸಿದೆ.

ಈ ಉದ್ದೇಶಕ್ಕಾಗಿ ಅಗತ್ಯವಿರುವ ಆಹಾರಧಾನ್ಯವನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಮುಕ್ತ ಟೆಂಡರ್‌ ಕರೆಯಲು ತೀರ್ಮಾನಿಸಲಾಗಿದೆ. ಈ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಬಿಡ್‌ದಾರರು ಆಹಾರ ಧಾನ್ಯವನ್ನು ಸರಬರಾಜು ಮಾಡುವವರೆಗೆ ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್‌ ಕಾರ್ಡುಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿ.ಗೆ 34 ರು.ನಂತೆ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾಯಿಸಲು ಮಾರ್ಗಸೂಚಿಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ಹಫ್ತಾ ವಸೂಲಿಗೆ ಒತ್ತಡ: ಕಲಬುರಗಿಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಕಾನ್​ಸ್ಟೇಬಲ್​​ಗಳು

ಆಹಾರ ತಂತ್ರಾಂಶದಲ್ಲಿ ಲಭ್ಯವಿರುವ ದತ್ತಾಂಶ ಮಾಹಿತಿ ಬಳಸಿಕೊಂಡು ಜುಲೈನಿಂದ ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್‌ ಕುಟುಂಬಗಳ ಫಲಾನುಭವಿಗಳಿಗೆ ನಗದು ವರ್ಗಾವಣೆ ಪ್ರಾರಂಭಿಸಲಾಗಿದೆ. ಸಚಿವ ಸಂಪುಟ ನಿರ್ಣಯದಂತೆ 5 ಕೆ.ಜಿ. ಅಕ್ಕಿಯ ಬದಲಾಗಿ ಪ್ರತಿ ಕೆ.ಜಿ.ಗೆ 34 ರು.ನಂತೆ ಒಟ್ಟು 170 ರು.ಗಳನ್ನು ಪಡಿತರ ಕುಟುಂಬದ ಮುಖ್ಯಸ್ಥರ ಖಾತೆಗೆ ನಗದು ವರ್ಗಾವಣೆ ಮಾಡಲಾಗುವುದು.

Follow Us:
Download App:
  • android
  • ios