ಬೆಂಗಳೂರು(ಆ.19): ರಾಜಧಾನಿಯಲ್ಲಿ ಗಣೇಶಮೂರ್ತಿ ಮಾರಾಟಗಾರರೇ ಉಚಿತವಾಗಿ ಗಣೇಶಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಿದ್ದು, ವಿಸರ್ಜನೆ ಬಳಿಕ ಆ ಮೂರ್ತಿಯನ್ನು ಕ್ರಷಿಂಗ್‌ ಮಷಿನ್‌ನಲ್ಲಿ ಪುಡಿ ಮಾಡಿ ಮುಂದಿನ ವರ್ಷ ಮರುಬಳಕೆ ಮಾಡಲು ತೀರ್ಮಾನಿಸಿದ್ದಾರೆ.

ಗಣೇಶಮೂರ್ತಿ ಮಾರಾಟಗಾರ ಎಂ.ಶ್ರೀನಿವಾಸ್‌ ಎಂಬುವವರು ಆರ್‌.ವಿ.ರಸ್ತೆಯ ಲಾಲ್‌ಬಾಗ್‌ ಪಶ್ಚಿಮ ದ್ವಾರದ ಸಮೀಪದ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ದೊಡ್ಡಪಾತ್ರೆ ಇರಿಸಿ ಗಣೇಶಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಿದ್ದಾರೆ. 15 ಅಡಿ ಉದ್ದ, 15 ಅಡಿ ಅಗಲ ಹಾಗೂ 6 ಅಡಿ ಆಳದ ಎರಡು ಅಲ್ಯೂಮಿನಿಯಂ ಪಾತ್ರೆ ಸೇರಿದಂತೆ 8 ಅಡಿ ಅಗಲ 8 ಅಡಿ ಉದ್ದ ಹಾಗೂ ಆರು ಅಡಿ ಅಗಲದ ಆರು ಪಾತ್ರೆ ಸೇರಿದಂತೆ ಒಟ್ಟು ಎಂಟು ದೊಡ್ಡ ಪಾತ್ರೆ ಇರಿಸಿ ಗಣೇಶಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಿದ್ದಾರೆ.

ಗೌರಿ ಗಣೇಶ ವಿಸರ್ಜನೆಗೆ ಕೆರೆ ಕಲ್ಯಾಣಿಗಳಲ್ಲಿ ಅವಕಾಶವಿಲ್ಲ..!

ಗಣೇಶ ಹಬ್ಬದ ಸಂದರ್ಭದಲ್ಲಿ ಯಾರು ಬೇಕಾದರೂ ಈ ಪಾತ್ರೆಗಳಲ್ಲಿ ಗಣೇಶಮೂರ್ತಿ ವಿಸರ್ಜಿಸಬಹುದು. ನಗರದ ಬೇರೆ ಕಡೆ ವಿಸರ್ಜನೆಗೆ ಪಾತ್ರೆಯ ಬೇಕಿದ್ದಲ್ಲಿ ಉಚಿತವಾಗಿ ಪಡೆದು ಬಳಿಕ ಮರಳಿಸಬಹುದು. ಗರಿಷ್ಠ ಆರು ಅಡಿ ಎತ್ತರದ ಗಣೇಶಮೂರ್ತಿಯನ್ನು ಈ ಪಾತ್ರೆಗಳಲ್ಲಿ ವಿಸರ್ಜಿಸಬಹುದು.

ಬಿಬಿಎಂಪಿ ಈ ಬಾರಿ ನಗರದ ಕೆರೆ, ಕಟ್ಟೆ, ಕಲ್ಯಾಣಿಗಳಲ್ಲಿ ಗಣೇಶಮೂರ್ತಿ ವಿಸರ್ಜನೆಗೆ ಅವಕಾಶವಿಲ್ಲ ಎಂದು ಹೇಳಿದಾಗ ಈ ಪಾತ್ರೆಯ ಆಲೋಚನೆ ಬಂದಿತು. ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ಈ ದೊಡ್ಡ ಪಾತ್ರೆಗಳನ್ನು ಇರಿಸಿ ನಾವೇ ನೀರು ತುಂಬಿ ವಿಸರ್ಜನೆಗೆ ಅವಕಾಶ ಕಲ್ಪಿಸುವ ನಿರ್ಧಾರ ಮಾಡಿದೆ. ಅದರಂತೆ ಈಗ ಲಾಗ್‌ಬಾಗ್‌ ಪಶ್ಚಿಮ ದ್ವಾರದ ಸಮೀಪ ಎರಡು ದೊಡ್ಡ ಪಾತ್ರೆಗಳನ್ನು ಇರಿಸಿದ್ದೇವೆ. ಆ.22ರಿಂದ ಸಾರ್ವಜನಿಕರು ತಮ್ಮ ಗಣೇಶಮೂರ್ತಿಗಳನ್ನು ಈ ಪಾತ್ರೆಗಳಲ್ಲಿ ವಿಸರ್ಜಿಸಬಹುದು. ಮಣ್ಣು ಮತ್ತು ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಗಣೇಶಮೂರ್ತಿ ಪ್ರತ್ಯೇಕ ವಿಸರ್ಜನೆಗೂ ಅವಕಾಶ ಕಲ್ಪಿಸಿದ್ದೇವೆ ಎಂದು ಶ್ರೀನಿವಾಸ್‌ ಹೇಳಿದರು.

ಮರು ಬಳಕೆ

ವಿಸರ್ಜನೆಯಾದ ಮಣ್ಣು ಹಾಗೂ ಫ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶಮೂರ್ತಿಗಳನ್ನು ನಾವೇ ಬೇರೆಡೆಗೆ ವಿಲೇವಾರಿ ಮಾಡಿ, ಕ್ರಷಿಂಗ್‌ ಮಿಷಿನ್‌ ಮುಖಾಂತರ ಪುಡಿ ಮಾಡುತ್ತೇವೆ. ಇದರಿಂದ ಮುಂದಿನ ವರ್ಷ ಇದೇ ಮಣ್ಣು ಬಳಸಿಕೊಂಡು ಗಣೇಶಮೂರ್ತಿ ತಯಾರಿಸಲು ತೀರ್ಮಾನಿಸಿದ್ದೇವೆ. ಇನ್ನು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶಮೂರ್ತಿಗಳನ್ನು ಸಹ ಈ ಕ್ರಷಿಂಗ್‌ ಮಿಷನ್‌ನಲ್ಲಿ ಪುಡಿ ಮಾಡಲು ನಿರ್ಧರಿಸಿದ್ದೇವೆ. ಈ ಪುಡಿ ಮರುಬಳಕೆ ಮಾಡಿ ಗಣೇಶಮೂರ್ತಿ ತಯಾರಿಸಬಹುದು ಅಥವಾ ಹಲೋ ಬ್ರಿಕ್‌ ಇಟ್ಟಿಯನ್ನೂ ತಯಾರಿಸಬಹುದು ಎಂದು ಮಾಹಿತಿ ನೀಡಿದರು.