ಹಿರಿಯ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರು ಮುಖ್ಯಮಂತ್ರಿಗಳ ಕಚೇರಿಯಿಂದ ಬಂದಿದ್ದ ಭೇಟಿಯ ಆಹ್ವಾನವನ್ನು ನಿರ್ಲಕ್ಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಕರ್ತವ್ಯ ಲೋಪ ಮತ್ತು ಶಿಸ್ತು ನಿಯಮ ಉಲ್ಲಂಘನೆಗಾಗಿ ಮುಖ್ಯ ಕಾರ್ಯದರ್ಶಿಗಳ ಮೂಲಕ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಬೆಂಗಳೂರು (ಜ.23): ರಾಜ್ಯ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರ ನಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ. ಕರ್ತವ್ಯ ಲೋಪ ಹಾಗೂ ಶಿಸ್ತು ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ಮೂಲಕ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಸಿಎಂ ಕಚೇರಿ ನೀಡಿದ ಸೂಚನೆಗೂ ಕ್ಯಾರೆ ಎನ್ನದ ಐಎಎಸ್ ಆಫೀಸರ್!
ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿರುವ ಪಂಕಜ್ ಕುಮಾರ್ ಪಾಂಡೆ ಅವರ ವಿರುದ್ಧ ಕೆಲವು ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಪಡೆಯಲು ಮುಖ್ಯಮಂತ್ರಿಗಳ ಕಚೇರಿಯಿಂದ ಭೇಟಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಸಿಎಂ ಕಚೇರಿಯಿಂದ ಅಧಿಕೃತ ಮಾಹಿತಿ ತಲುಪಿದ್ದರೂ ಸಹ ಪಂಕಜ್ ಕುಮಾರ್ ಪಾಂಡೆ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹಿರಿಯ ಅಧಿಕಾರಿಯ ಈ ನಡೆಯನ್ನು ಸಿಎಂ ಕಚೇರಿ ಗಂಭೀರವಾಗಿ ಪರಿಗಣಿಸಿದೆ.
ಮುಖ್ಯಮಂತ್ರಿಗಳಿಗೆ ಅವಮಾನ: ಮುಖ್ಯ ಕಾರ್ಯದರ್ಶಿಯಿಂದ ನೋಟಿಸ್
ರಾಜ್ಯದ ಆಡಳಿತ ಮುಖ್ಯಸ್ಥರಾದ ಮುಖ್ಯಮಂತ್ರಿಗಳ ಭೇಟಿಗೆ ಆಹ್ವಾನವಿದ್ದರೂ ಅದನ್ನು ಲೆಕ್ಕಿಸದ ಅಧಿಕಾರಿಯ ನಡೆಯು ಸಿಎಂಗೆ ಮಾಡಿದ ಅವಮಾನ ಎಂದು ಭಾವಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪಂಕಜ್ ಕುಮಾರ್ ಪಾಂಡೆ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. 'ನೋಟಿಸ್ ನೀಡಿದ ದಿನವೇ ಲಿಖಿತ ವಿವರಣೆ ನೀಡಬೇಕು' ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದ್ದು, ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ದಟ್ಟವಾಗಿದೆ.
ಹಲವು ಆರೋಪಗಳ ಸುಳಿಯಲ್ಲಿ ಹಿರಿಯ ಅಧಿಕಾರಿ
ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರ ಮೇಲೆ ಈಗಾಗಲೇ ಹಲವು ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿವೆ. ಈ ದೂರುಗಳ ವಿಚಾರವಾಗಿಯೇ ಚರ್ಚಿಸಲು ಸಿಎಂ ಕಚೇರಿ ಅವರನ್ನು ಕರೆಸಿಕೊಂಡಿತ್ತು ಎನ್ನಲಾಗಿದೆ. ಆದರೆ, ಭೇಟಿಗೆ ನಿರಾಕರಿಸುವ ಮೂಲಕ ಅಧಿಕಾರಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಶಿಸ್ತು ನಿಯಮಗಳನ್ನು ಗಾಳಿಗೆ ತೂರಿ ವರ್ತಿಸಿದ ಅಧಿಕಾರಿಗೆ ಈ ಬಾರಿ ಸರ್ಕಾರ ಬಿಸಿ ಮುಟ್ಟಿಸುವುದು ಖಚಿತವಾಗಿದೆ.


