ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನರಾಗಿದ್ದಾರೆ. ಈ ದುರಂತದ ಬೆನ್ನಲ್ಲೇ, ನಾಲ್ಕು ವರ್ಷಗಳ ಹಿಂದೆ ತಮ್ಮ ಆರೋಗ್ಯದ ಬಗ್ಗೆ ಹಬ್ಬಿದ್ದ ಸುಳ್ಳು ಸುದ್ದಿಗೆ ಸ್ಪಷ್ಟನೆ ನೀಡಿದ್ದ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಅವರ ಅಂತ್ಯಕ್ರಿಯೆ ಸ್ವಗ್ರಾಮ ರಾಮದುರ್ಗದಲ್ಲಿ ನಡೆಯಲಿದೆ.
ಬೆಂಗಳೂರು: ಕಲಬುರಗಿ ಜಿಲ್ಲೆ ಜೇವರ್ಗಿ ಹೊರವಲಯದ ಗೌನಳ್ಳಿ ಕ್ರಾಸ್ ಬಳಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಮೃತರಾಗಿದ್ದಾರೆ. ಇದೀಗ ಮಹಾಂತೇಶ್ ಬೀಳಗಿ ಅವರ ನಾಲ್ಕು ವರ್ಷ ಹಿಂದಿನ ಹಳೆಯ ವಿಡಿಯೋ ಮುನ್ನಲೆಗೆ ಬಂದಿದೆ. ಈ ವಿಡಿಯೋದಲ್ಲಿ ಹೇಳಿದಂತೆ ನಿಜವಾಗಲಿ ಎಂದು ಸಾರ್ವಜನಿಕರ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ದಾವಣಗೆರೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಮಹಾಂತೇಶ್ ಬೀಳಗಿ ಅವರ ಆರೋಗ್ಯದ ಕುರಿತ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವದಂತಿಗೆ ಮಹಾಂತೇಶ್ ಬೀಳಗಿ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದರು. ನಾನು ಆರೋಗ್ಯವಾಗಿದ್ದು, ಹೃದಯಾಘಾತ ಆಗಿಲ್ಲ. ಯಾರೂ ಸಹ ಆತಂಕಕ್ಕೊಳಗಾಗಬಾರದು ಎಂದು ಮನವಿ ಮಾಡಿಕೊಂಡಿದ್ದರು.
ಸುಳ್ಳು ಸುದ್ದಿಯನ್ನು ಯಾರು ನಂಬಬೇಡಿ
ಯಾರೋ ಕಿಡಿಗೇಡಿಗಳು ನನಗೆ ಹೃದಯಾಘಾತ ಆಗಿದೆ ಅಂತೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಈ ವಿಡಿಯೋ ನೋಡ್ರಿ ನಾನು ಪಕ್ಕಾ ಆರಾಮ ಇದ್ದೀನಿ, ಮಸ್ತ್ ಇದ್ದೀನಿ. ಯಾವುದನ್ನು ನಂಬಬೇಡಿ. ನಾನು ತುಂಬಾ ಆರೋಗ್ಯವಾಗಿದ್ದು ಕೆಲಸ ಮಾಡುತ್ತಿದ್ದೇನೆ. ಈ ಸುಳ್ಳು ಸುದ್ದಿಯನ್ನು ಯಾರು ನಂಬಬೇಡಿ ಎಂದು ಮಹಾಂತೇಶ್ ಬೀಳಗಿ ಮನವಿ ಮಾಡಿಕೊಂಡಿದ್ದರು.
ನಾನು ಮಹಾಂತೇಶ್ ಬೀಳಗಿ, ಕಳೆದ ಎರಡು ವರ್ಷಗಳಿಂದ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಬಹಳಷ್ಟು ಕ್ರಿಯಾಶೀಲನಾಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಜನರ ಆಶೀರ್ವಾದವೂ ನನ್ನ ಮೇಲಿದೆ. ಇಂದು ಬೆಳಗ್ಗೆ ಸೆಂಟ್ರಲ್ ಹೆಲ್ತ್ ಟೀಂ ಬಂದು ನಮ್ಮನ್ನು ಮಾತನಾಡಿಸಿಕೊಂಡು ಪರಿಶೀಲನೆಗೆ ತೆರಳಿದ್ದಾರೆ. ಈಗ ನಾನು ಮುಂದಿನ ಸಭೆಯ ಕುರಿತು ನಮ್ಮ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇನೆ ಎಂದು ಮಹಾಂತೇಶ್ ಬೀಳಗಿ ಹೇಳಿದ್ದರು .
ಇದನ್ನೂ ಓದಿ: ಇದೀಗ ಆಸ್ಟ್ರೇಲಿಯಾ, ಸೌದಿ, ಅಮೆರಿಕಕ್ಕೂ ನಂದಿನಿ ತುಪ್ಪ ರಫ್ತು: ಸಿದ್ದರಾಮಯ್ಯ ಹಸಿರು ನಿಶಾನೆ
ರಾಮದುರ್ಗದಲ್ಲಿಂದು ಅಂತ್ಯಕ್ರಿಯೆ
ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸೇರಿದಂತೆ ನಾಲ್ವರು ಮೃತರಾಗಿದ್ದಾರೆ. ಪಾರ್ಥಿವಶರೀರಗಳನ್ನು ಬೀಳಗಿ ಅವರ ಸ್ವಗ್ರಾಮ ರಾಮದುರ್ಗಕ್ಕೆ ತೆಗೆದುಕೊಂಡು ಬರಲಾಗಿದೆ. ರಾಮದುರ್ಗ ಪಟ್ಟಣದ ಪಂಚಗಟಿ ಮಠದಲ್ಲಿ ಬೆಳಗ್ಗೆ 9 ಗಂಟೆಯಿಂದ ಮದ್ಯಾಹ್ನ 2ರವೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಿಂದೂ ಧರ್ಮದ ವಿಧಿ ವಿಧಾನಗಳೊಂದಿಗೆ ನಡೆಯಲಿರುವ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 115 ಪುಸ್ತಕ ರಚಿಸಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ: ಓದುವ ಅಭಿರುಚಿ ಹೆಚ್ಚಿಸುತ್ತಿರುವ ತಮ್ಮನಗೌಡರ!



