ಕಾವೇರಿ ಆರತಿಯಿಂದ ಸೃಷ್ಟಿಯಾಗುವ ಉದ್ಯೋಗ ಸೇರಿ ಆಗುವ ಪ್ರಯೋಜನಗಳ ಬಗ್ಗೆ ರೈತ ಸಂಘಗಳಿಗೆ ತಿಳಿವಳಿಕೆ ಇಲ್ಲ. ಈ ಸಂಬಂಧ ಅವರ ಜೊತೆ ಮಾತನಾಡಲಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು (ಜೂ.19): ಕಾವೇರಿ ಆರತಿಯಿಂದ ಸೃಷ್ಟಿಯಾಗುವ ಉದ್ಯೋಗ ಸೇರಿ ಆಗುವ ಪ್ರಯೋಜನಗಳ ಬಗ್ಗೆ ರೈತ ಸಂಘಗಳಿಗೆ ತಿಳಿವಳಿಕೆ ಇಲ್ಲ. ಈ ಸಂಬಂಧ ಅವರ ಜೊತೆ ಮಾತನಾಡಲಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಗರದಲ್ಲಿ ಜಲಮಂಡಳಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಾವೇರಿ ಆರತಿಯನ್ನು ಗಂಗಾ ಆರತಿಗಿಂತ ಉತ್ತಮವಾಗಿ ಮಾಡಲಿದ್ದೇವೆ. ಕೊಡಗು, ಮಂಡ್ಯ, ತಮಿಳುನಾಡು, ಪುದುಚೆರಿಯ , ಕೇರಳದಿಂದಲೂ ಜನ ಬಂದು ನೋಡುವಂತೆ ಕಾರ್ಯಕ್ರಮ ಮಾಡಲಾಗುವುದು. ಅಲ್ಲಿ ನಡೆವ ಧಾರ್ಮಿಕ ಕಾರ್ಯಕ್ರಮ, ಲೈಟ್ ಶೋ ಸೇರಿ ಇತರೆ ಕಾರ್ಯಗಳಿಂದ ಸ್ಥಳೀಯ ಮಟ್ಟದಲ್ಲಿ 1500 ಉದ್ಯೋಗ ಸೃಷ್ಟಿಯಾಗಲಿದೆ. ಕಾವೇರಿ ಆರತಿ ಬಗ್ಗೆ ಅಲ್ಲಿನ ರೈತ ಸಂಘಗಳಿಗೆ ಅರಿವಿಲ್ಲ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯರ ಜೊತೆ ನಾನೇ ಮಾತನಾಡಲಿದ್ದೇನೆ ಎಂದರು.
ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿಗೆ ವಿರೋಧ ಬೇಡ: ರಾಜ್ಯ ಸರ್ಕಾರ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ಧಾರ್ಮಿಕ ಕಾರ್ಯಕ್ರಮ ನಡೆಸಲುದ್ದೇಶಿಸಿರುವುದನ್ನು ವಿರೋಧಿಸುವುದು ಹಾಸ್ಯಾಸ್ಪದ ಎಂದು ಬಜರಂಗಸೇನ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ತಿಳಿಸಿದರು. ಕಾವೇರಿ ಆರತಿ ಧಾರ್ಮಿಕ ಕಾರ್ಯಕ್ರಮ ಪ್ರಾರಂಭ ಮಾಡುತ್ತಿರುವುದು ಸಂತೋಷದ ಸಂಗತಿ. ಜೀವನಾಡಿಯಾಗಿರುವ ಕಾವೇರಿ ಮಾತೆಗೆ ಕೃತಜ್ಞತೆ ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಉತ್ತರ ಭಾರತದಲ್ಲಿ ಗಂಗಾರತಿಯಿಂದಾಗಿ ಅಲ್ಲಿನ ಸ್ಥಳೀಯ ಆಡಳಿತಕ್ಕೆ ವರ್ಷಕ್ಕೆ ೨೦೦ ಕೋಟಿಗೂ ಹೆಚ್ಚಿನ ಆದಾಯ ಸಂಗ್ರಹವಾಗುತ್ತಿದೆ.
ಅದೇ ಮಾದರಿಯಲ್ಲಿ ಕಾವೇರಿ ಆರತಿಯನ್ನು ಆರಂಭಿಸಿದರೆ ಸರ್ಕಾರಕ್ಕೆ ಕೋಟ್ಯಂತ ರು. ಆದಾಯ ಹರಿದುಬರುವುದಲ್ಲದೆ ಪ್ರವಾಸೋದ್ಯಮ ಬೆಳವಣಿಗೆಗೂ ಉತ್ತೇಜನ ನೀಡಿದಂತಾಗುತ್ತದೆ ಎಂದರು. ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡುವುದಕ್ಕೆ ನಮ್ಮ ವಿರೋಧವೂ ಇದೆ. ಆ ಜಾಗವನ್ನು ಹೊರತುಪಡಿಸಿ ಶ್ರೀರಂಗಪಟ್ಟಣದ ಬೇರೆ ಯಾವುದಾದರೂ ಸ್ಥಳದಲ್ಲಿ ಕಾವೇರಿ ಆರತಿ ಮಾಡುವಂತೆ ಒತ್ತಾಯಿಸಿದರು. ಕಾವೇರಿ ಆರತಿ ಬೇಡ ಅದು ಬಿಟ್ಟು ಶಾಲೆಗಳನ್ನು ಅಭಿವೃದ್ಧಿಪಡಿಸಿ ಎಂದು ಕೆಲವರು ಹೇಳುತ್ತಿದ್ದಾರೆ. ಕಾವೇರಿ ಆರತಿ ಮಾಡುವುದು ಒಂದು ನಮ್ಮ ಸಂಸ್ಕೃತಿ, ಪರಂಪರೆಗೆ ನಾವು ನೀಡುವ ಗೌರವ ಮತ್ತು ಪ್ರವಾಸೋಧ್ಯಮ ಅಭಿವೃದ್ಧಿಗೆ ಇದು ಒಳ್ಳೆಯ ಯೋಜನೆಯಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನ ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರತಿಯೊಂದು ಮಗುವಿಗೆ ವರ್ಷಕ್ಕೆ ಸರ್ಕಾರ ೩.೮೦ ಲಕ್ಷ ರು. ವೆಚ್ಚ ಮಾಡುತ್ತದೆ. ಈ ಹಣವನ್ನು ಒಳ್ಳೆಯ ಶಾಲೆ ನಿರ್ಮಿಸಿ ಹೈಟೆಕ್ ಶಿಕ್ಷಣ ನೀಡಬಹುದಾಗಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಯಾವ ಪ್ರಮಾಣದ ಶಿಕ್ಷಣ ನೀಡುತ್ತಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸರ್ಕಾರಿ ಶಾಲೆಯ ಶಿಕ್ಷಕರೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಹಿಂದೇಟು ಹಾಕುವಂತಹ ಸ್ಥಿತಿ ಇದೆ ಎಂದು ಉದಾಹರಣೆ ಸಮೇತ ವಿವರಿಸಿದರು. ಸೇನೆಯ ಹರ್ಷ ವೈ.ಎಚ್. ಆರ್.ಚೇತನ್‌ಕುಮಾರ್, ಸತೀಶ್‌ಕುಮಾರ್, ಶಿವು, ಸ್ನೇಕ್ ಮಹೇಶ್, ಶೇಷಾದ್ರಿ ಗೋಷ್ಠಿಯಲ್ಲಿದ್ದರು.
