ರಾಜ್ಯಸಭೆಗೆ ಹೋಗೊಲ್ಲ, ಚನ್ನಪಟ್ಟಣ ಬಿಡೊಲ್ಲ: ಎಚ್‌ಡಿಕೆ
ಚನ್ನಪಟ್ಟಣ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಈ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ನಿಖಿಲ್ ರಾಜಕೀಯದ ಅನುಭವ ಪಡೆಯಲು ನನ್ನ ಜತೆ ಬರುತ್ತಿದ್ದಾನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು (ಜೂ.03): ನಾನು ರಾಜ್ಯ ಸಭಾ ಚುನಾವಣೆಗೆ ಸ್ಪರ್ಧೆಮಾಡುತ್ತೇನೆ ಎಂಬುದು ಶುದ್ಧ ಸುಳ್ಳಾಗಿದ್ದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಲ್ಲಗೆಳೆದಿದ್ದಾರೆ. ಇದೇವೇಳೆ ಈ ಕ್ಷೇತ್ರವನ್ನು ಪುತ್ರ ನಿಖಿಲ್‌ಗೂ ಬಿಟ್ಟು ಕೊಡುವ ಬಗ್ಗೆ ಊಹಾಪೋಹಗಳಿಗೂ ಅವರು ತೆರೆ ಎಳೆದಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಈ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ನಿಖಿಲ್ ರಾಜಕೀಯದ ಅನುಭವ ಪಡೆಯಲು ನನ್ನ ಜತೆ ಬರುತ್ತಿದ್ದಾನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ಟ್ರಾಕ್ಟರ್ ಸ್ಟೀರಿಂಗ್ ಏರಿದ ಮಾಜಿ ಸಿಎಂ ಎಚ್‌ಡಿಕೆ
ಯಾರ ಋುಣದಲ್ಲೂ ಇಲ್ಲ:
ಇದೇವೇಳೆ ಕೆಲವರು ಮಾಜಿ ಸಿಎಂ ಕಾಂಗ್ರೆಸ್ ಋುಣದಲ್ಲಿದ್ದಾರೆ, ಅದನ್ನು ತೀರಿಸಬೇಕು ಎಂದು ಹೇಳುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮಾತನ್ನಾಡುತ್ತಿದ್ದಾರೆ. ಆದರೆ ನನಗೆ ಯಾವುದೇ ಋುಣ ಇಲ್ಲ, ನನಗಿರುವುದು ಕೇವಲ ರೈತರ ಋುಣ ಎಂದು ಹೇಳುವ ಮೂಲಕ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಮಾತ್ರವಲ್ಲದೆ ಕಾಂಗ್ರೆಸ್ ಜತೆಗಿನ ಮೈತ್ರಿ ಸಾಧ್ಯತೆ ರಾಜ್ಯದಲ್ಲಿ ಯಾವ ಮೈತ್ರಿಯೂ ಇಲ್ಲ ಎಂದು ಖಂಡಾತುಂಡವಾಗಿ ಹೇಳಿದರು. ಎಲ್ಲಿದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ? ರೈತರಿಗೆ ದನಿಯಾಗಿರುವ ಈ ಪಕ್ಷವನ್ನು ದಿವಾಳಿ ಮಾಡಿ ಇನ್ಯಾರಿಗೋ ನಾನು ಅಧಿಕಾರ ತರಲು ಓಡಾಡಲಾ ಎಂದು ಪ್ರಶ್ನಿಸಿದರು.
ಅಧಿಕಾರಕ್ಕೆ ಅಂಟಿಕೊಂಡಿಲ್ಲ:
ಪ್ರಧಾನಿ ನರೇಂದ್ರ ಮೋದಿ ಅವರು ಕರೆಮಾಡಿ ನಾಲ್ಕು ವರ್ಷ ನೀವೇ ನಿರಾತಂಕವಾಗಿ ಆಡಳಿತ ನಡೆಸಿ ಎಂದು ಹೇಳಿದ್ದರು. ಆದರೆ, ನಾನು ಅವರ ಜತೆಗೆ ಹೋಗಲಿಲ್ಲ. ನನಗೆ ಅಧಿಕಾರ ಮುಖ್ಯವಲ್ಲ. ಕಾಂಗ್ರೆಸ್ ಮುಖಂಡರು ನನ್ನ ಮನೆಬಾಗಿಲಿಗೆ ಬಂದು ಸರ್ಕಾರ ರಚಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ನಾನು ಸರ್ಕಾರ ನಡೆಸಲು ಒಪ್ಪಿಕೊಂಡೆ. ನಾನಾಗಲಿ ನಮ್ಮ ಕುಟುಂಬವಾಗಲಿ ಎಂದೂ ಅಧಿಕಾರಕ್ಕೆ ಅಂಟಿ ಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
'ಡಿ.ಕೆ.ಶಿವಕುಮಾರ್ ಸಿಎಂ ಮಾಡಲು ಎಚ್‌ಡಿಕೆ ಕೈಜೋಡಿಸಲಿ'
ಗೌಡರು ಹಿಂಬಾಗಿಲಿನ ರಾಜಕಾರಣ ಮಾಡಿಲ್ಲ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಯಾವತ್ತೂ ಹಿಂಬಾಗಿಲಿನಿಂದ ರಾಜಕಾರಣ ಮಾಡಿಲ್ಲ ಎನ್ನುವ ಮೂಲಕ ಅವರು ರಾಜ್ಯಸಭೆಗೆ ಪ್ರವೇಶಿಸುವ ಸಾಧ್ಯತೆಗಳನ್ನು ಎಚ್.ಡಿ.ಕುಮಾರಸ್ವಾಮಿ ಅಲ್ಲಗೆಳೆದಿದ್ದಾರೆ. ರಾಜ್ಯಸಭೆ ಚುನಾವಣೆ ಬಗ್ಗೆ ಪಕ್ಷದಿಂದ ಯಾವುದೇ ನಿರ್ಧಾರ ಮಾಡಿಲ್ಲ.
ದೇವೇಗೌಡರು ಸಹ ಯಾವುದೇ ತೀರ್ಮಾನ ಮಾಡಿಲ್ಲ. ದೇವೇಗೌಡರು ಜನರ ಮಧ್ಯೆ ಹೋಗಿ ತೀರ್ಮಾನ ಮಾಡುತ್ತಾರೆ. ಅವರು ಯಾವತ್ತೂ ಹಿಂಬಾಗಿಲಿನಿಂದ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ. ಕೆಲವು ಗಾಳಿಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದು ರಾಜ್ಯಸಭಾ ಚುನಾವಣೆ ಬಗ್ಗೆ ಸ್ಪಷ್ಟೀಕರಣ ನೀಡಿದರು.