ಬೆಳಗಾವಿ/ಹುಬ್ಬಳ್ಳಿ[ಜ.13]: ‘‘ಬಿಜೆಪಿಯವರು ಸಂಕ್ರಾಂತಿಗೆ ಏನ್‌ ಕ್ರಾಂತಿ ಮಾಡುತ್ತಾರೆ ಎಂಬುದು ನಮಗೆ ಗೊತ್ತು. ಅವರು ಎಂದಾದರೂ ಕ್ರಾಂತಿ ಮಾಡಿದ್ದಾರೆಯೇ? ಸ್ವಾತಂತ್ರ್ಯ ಹೋರಾಟದಲ್ಲಿಲ್ಲದವರು ಈಗೇನು ಕ್ರಾಂತಿ ಮಾಡುತ್ತಾರೆ’’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಕ್ಕಾಗಿ ಬಿಜೆಪಿಯವರು ಹಾಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಮೇಶ್‌ ಇನ್ನೂ ಸಿಕ್ಕಿಲ್ಲ:

ಸಚಿವ ಸಂಪುಟದಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ನನಗೆ ಇನ್ನೂ ಸಿಕ್ಕಿಲ್ಲ. ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ತೊರೆಯುವುದಿಲ್ಲ ಎಂದರು.

ನನ್ನ ಮೇಲೆ ಅವರಿಗೆ ಕೋಪವಿಲ್ಲ. ನನ್ನ ಜತೆ ಆತ್ಮೀಯರಾಗಿದ್ದಾರೆ. ರಮೇಶ್‌, ನಾಗೇಂದ್ರ ಸೇರಿ ಅತೃಪ್ತರಾಗಿರುವ ಯಾವುದೇ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿಯವರು ಸುಮ್ಮನೇ ಸುದ್ದಿ ಮಾಡುತ್ತಿದ್ದಾರೆ ಅಷ್ಟೆಎಂದು ಇದೇ ವೇಳೆ ಸಿದ್ದರಾಮಯ್ಯ ತಿಳಿಸಿದರು.

ಧರ್ಮವಿರೋಧಿ ಎಂದು ಬಿಂಬಿಸಿದರು:

ಎಲ್ಲ ಜಾತಿ ಪರ ನಿಂತ ವ್ಯಕ್ತಿ ನಾನು. ಆದರೆ, ನನ್ನ ರಾಜಕೀಯ ವಿರೋಧಿಗಳು ನಾನು ಧರ್ಮ ವಿರೋಧಿ ಎಂದು ಬಿಂಬಿಸಿದರು ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಶಿವಾಜಿ ಮಹಾರಾಜರ ಕಾಲದಲ್ಲಿ ರಾಜರ ನಡುವೆ ಸಂಘರ್ಷವಾಗಿತ್ತೇ ಹೊರತು ಧರ್ಮದ ನಡುವೆ ಅಲ್ಲ. ಆದರೆ, ಇಂದು ಧರ್ಮದ ನಡುವೆ ಸಂಘರ್ಷ ನಡೆಯುತ್ತಿದೆ. ಧರ್ಮ ಮನುಷ್ಯರಿಗೋಸ್ಕರ ಇದೆಯೇ ಹೊರತು ಮನುಷ್ಯನಿಗೆ ಧರ್ಮವಿಲ್ಲ. ಆದರೆ, ಧರ್ಮದ ಬಗ್ಗೆ ತಪ್ಪು ವ್ಯಾಖ್ಯಾನ ನಡೆಯುತ್ತಿವೆ. ಯಾವುದೇ ಧರ್ಮ ಧರ್ಮಾಂಧರಾಗಬೇಕು ಎಂದು ಹೇಳಿಲ್ಲ. ನನ್ನ ಅಧಿಕಾರವಧಿಯಲ್ಲಿ ಎಲ್ಲ ಧರ್ಮಗಳಿಗೆ ಆದ್ಯತೆ ನೀಡಿದ್ದೇನೆ ಎಂದು ಹೇಳಿದರು.

ಸೀಟು ಹಂಚಿಕೆಯಾಗಿಲ್ಲ-ಸಿದ್ದು

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಲಿದೆ. ಜೆಡಿಎಸ್‌ಗೆ ಎಷ್ಟುಸ್ಥಾನ ಬಿಟ್ಟು ಕೊಡಬೇಕೆಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಆದಷ್ಟುಶೀಘ್ರ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.