Asianet Suvarna News Asianet Suvarna News

ಹುಂಡಿ ಹಣ ದೇಗುಲ ಬಿಟ್ಟು ಬೇರೆಲ್ಲೂ ಬಳಕೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕ ಜಾರಿಯಾಗಿದ್ದು 1997ರಲ್ಲಿ, ಅದಾದ ನಂತರ 2003ರಲ್ಲಿ ಅದು ಅನುಷ್ಠಾನಕ್ಕೆ ಬಂದಿತ್ತು. 2007ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅದಕ್ಕೆ ತಿದ್ದುಪಡಿ ತಂದರು: ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ 

Hundi Money is not used Anywhere Except the Temples Says Minister Ramalinga Reddy grg
Author
First Published Feb 29, 2024, 12:02 PM IST

ಬೆಂಗಳೂರು(ಫೆ.29): ರಾಜ್ಯದಲ್ಲಿನ ಸೂಕ್ಷ್ಮ ಇಲಾಖೆಯಲ್ಲಿ ಮುಜರಾಯಿ ಇಲಾಖೆ ಮುಂಚೂಣಿಯಲ್ಲಿದೆ. ಇಲಾಖೆಯಲ್ಲಿ ಯಾವುದೇ ಬದಲಾವಣೆ ತರಬೇಕಾದಾಗಲೂ ಅದು ಸಾಕಷ್ಟು ಸುದ್ದಿ ಮಾಡುತ್ತದೆ. ದೇವಸ್ಥಾನಗಳ ವ್ಯವಸ್ಥೆಯಲ್ಲಿ ಬದಲಾವಣೆಯೇ ಇರಬಹುದು ಅಥವಾ ದೇವಸ್ಥಾನಗಳ ಅಭಿವೃದ್ಧಿ, ಅಲ್ಲಿ ಕಾರ್ಯನಿರ್ವಹಿಸುವವರ ಅನುಕೂಲಕ್ಕೆ ತರುವ ಯೋಜನೆಗಳೂ ವಿವಾದಕ್ಕೆ ಗುರಿಯಾಗುತ್ತವೆ. ಅಂತಹದ್ದೇ ಪರಿಸ್ಥಿತಿ ಇದೀಗ 'ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ 2024 ಕ್ಕೆ ಎದುರಾಗಿದೆ. ರಾಜ್ಯ ಸರ್ಕಾರ ತಿದ್ದುಪಡಿ ವಿಧೇಯಕ ದಿಂದ 'ಸಿ' ದರ್ಜೆ ದೇವಸ್ಥಾನಗಳ ಅಭಿವೃದ್ಧಿ ಹಾಗೊಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರು ಮತ್ತು ಅವರ ಕುಟುಂಬದವರ ಅನುಕೂಲಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳುತ್ತಿದೆ. ಆದರೆ ವಿರೋಧ ಪಕ್ಷ ಬಿಜೆಪಿ ಮಾತ್ರ ವಿಧೇಯಕಕ್ಕೆ ತಿದ್ದುಪಡಿ ತರುವ ಮೂಲಕ ಸರ್ಕಾರ ದೇವಸ್ಥಾನಗಳ ಹುಂಡಿಗೆ ಕೈ ಹಾಕುತ್ತಿದೆ ಎಂದು ಆರೋಪಿಸುತ್ತಿದೆ ಹಾಗೂ ವಿಧಾನಪರಿಷತ್‌ನಲ್ಲಿ ವಿಧೇಯಕಕ್ಕೆ ಸೋಲಾಗುವಂತೆ ಮಾಡಿದೆ. ನಿಜಕ್ಕೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕದಲ್ಲಿನ ಅಂಶಗಳು, ವಿಧೇಯಕಕ್ಕೆ ತಿದ್ದುಪಡಿ ತರಲು ಇರುವ ಕಾರಣಗಳು ಸೇರಿದಂತೆ ಮುಜರಾಯಿ ಇಲಾಖೆ ಬಗೆಗಿನ ವಿಚಾರಗಳನ್ನು ಮಾತನಾಡಲು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕನ್ನಡಪ್ರಭಕ್ಕೆ ಮುಖಾಮುಖಿಯಾಗಿದ್ದಾರೆ.

• ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ವಿಧೇಯಕಕ್ಕೆ ತಿದ್ದುಪಡಿ ತರುವ ಉದ್ದೇಶವೇನಿತ್ತು?

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕ ಜಾರಿಯಾಗಿದ್ದು 1997ರಲ್ಲಿ, ಅದಾದ ನಂತರ 2003ರಲ್ಲಿ ಅದು ಅನುಷ್ಠಾನಕ್ಕೆ ಬಂದಿತ್ತು. 2007ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅದಕ್ಕೆ ತಿದ್ದುಪಡಿ ತಂದರು. ಆಗ ಮುಜರಾಯಿ ಇಲಾಖೆಯ ದೇವಸ್ಥಾನಗಳ ಆದಾಯದ ವೆಚ್ಚದ ನಂತರ ಉಳಿಕೆ ಹಣವನ್ನು ಶೇಕಡಾವಾರು ಪಡೆಯುವ ವ್ಯವಸ್ಥೆ ಜಾರಿಗೆ ತಂದರು. 2007ಕ್ಕೂ ಹಿಂದೆ ಉಳಿಕೆ ಹಣದ ಶೇ 5ರಷ್ಟನ್ನು ಧಾರ್ಮಿಕ ಪರಿಷತ್‌ಗೆ ಕೊಡುವ ನಿಯಮವಿತ್ತು. ಅದನ್ನು ಬದಲಿಸಿದ ಬಿ.ಎಸ್. ಯಡಿಯೂರಪ್ಪ 5ರಿಂದ 10 ಲಕ್ಷ ರು. ಆದಾಯ ಇರುವ ದೇವಸ್ಥಾನಗಳಿಂದ ಶೇ.5ರಷ್ಟು ಹಾಗೂ 10 ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವ ದೇವಸ್ಥಾನ ಗಳಿಂದ ಶೇ.10ರಷ್ಟು ಹಣ ಪಡೆಯುವ ವ್ಯವಸ್ಥೆ ಜಾರಿಗೆ ತಂದರು. ಆದರೆ, ಅದರಿಂದ ದೇವಸ್ಥಾನಗಳ ಅಭಿವೃದ್ಧಿ ಸಾಧ್ಯ ವಾಗಿರಲಿಲ್ಲ. ಹೀಗಾಗಿ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ.

ಚಾಮರಾಜನಗರ: ಮಲೆಮಹದೇಶ್ವರ ಹುಂಡಿ ಎಣಕೆ, 2.16 ಕೋಟಿ ರೂಪಾಯಿ ಸಂಗ್ರಹ

• ಸರ್ಕಾರ ದೇವಸ್ಥಾನಗಳ ಹುಂಡಿಗೂ ಕೈ ಹಾಕಿದೆ ಎಂಬ ಆರೋಪವಿದೆ?

ನೋಡಿ, ಈಗ 10 ಲಕ್ಷ ರು.ನಿಂದ 1 ಕೋಟಿ ರು. ಆದಾಯದ ದೇವಸ್ಥಾನಗಳಿಂದ ಶೇ.5ರಷ್ಟು ಹಾಗು 1 ಕೋಟಿ ರು.ಗೂ ಹೆಚ್ಚಿನ ಆದಾಯದ ದೇವಸ್ಥಾನಗಳಿಂದ ಶೇ.10ರಷ್ಟು ಹಣ ಪಡೆಯಲುವಿಧೇಯಕಕ್ಕೆಸೇರಿಸಲಾಗಿದೆ.ಈ ತಿದ್ದುಪಡಿಯಿಂದ ಧಾರ್ಮಿಕ ಪರಿಷತ್‌ಗೆ ವಾರ್ಷಿಕ 50ರಿಂದ 60 ಕೋಟಿ ರು. ಆದಾಯ ಬರುವ ನಿರೀಕ್ಷೆಯಿದೆ. ರಾಜ್ಯದಲ್ಲಿನ 34 ಸಾವಿರಕ್ಕೂ ಹೆಚ್ಚಿನ 'ಸಿ' ದರ್ಜೆ ದೇವಸ್ಥಾನಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ. ಜತೆಗೆ ಆರ್ಚಕರು ಮತ್ತು ಅವರ ಕುಟುಂಬದವರಿಗೆ ಅನುಕೂಲವಾಗುವಂತಹ ಅನುಷ್ಠಾನಕ್ಕೆ ಅನುದಾನ ದೊರೆಯಲಿದೆ. 

• ತಿದ್ದುಪಡಿ ಬಳಿಕ ದೇಗುಲದ ಹಣ ದುರುಪಯೋಗವಾಗುತ್ತದೆ ಎಂಬ ಆತಂಕವಿದೆಯಲ್ಲ?

ವಿಧೇಯಕದಂತೆ ಧಾರ್ಮಿಕ ಪರಿಷತ್‌ನಲ್ಲಿ ಸಂಗ್ರಹವಾಗುವ ಹಣವನ್ನು ನಿಗದಿತ ಯೋಜನೆಗಳಿಗೆ ಮಾತ್ರ ಬಳಸುವಂತೆ ಉಲ್ಲೇಖಿಸಲಾಗಿದೆ. ಪ್ರಮುಖವಾಗಿ'ಸಿ' ದರ್ಜೆ ದೇವಸ್ಥಾನಗಳ ಅಭಿವೃದ್ಧಿ, ಎಲ್ಲ ದೇವಸ್ಥಾನಗಳ ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದು, ವಸತಿ ನಿರ್ಮಾಣಕ್ಕೆ ಧನಸ ಸಹಾಯ ಹೀಗೆ ಹಲವು ಯೋಜನೆಗಳನ್ನು ರೂಪಿಸಿ ಅದಕ್ಕೆ ಧಾರ್ಮಿಕ ಪರಿಷತ್ ಮೂಲಕ ಹಣ ನೀಡಲಾಗುವುದು. ಈವರೆಗೆ ಅರ್ಚಕರು ಸತ್ತರೆ ಅವರ ಕುಟುಂಬದವರಿಗೆ 35 ಸಾವಿರ ರು. ಹಣ ನೀಡಲಾಗುತ್ತಿತ್ತು, ಅದರಿಂದ ಅಂತ್ಯ ಸಂಸ್ಕಾರವನ್ನೂ ಮಾಡಲು ಸಾಧ್ಯವಿರುತ್ತಿರಲಿಲ್ಲ. ಹೀಗಾಗಿ ಆ ಮೊತ್ತವನ್ನು 2 ಲಕ್ಷ ರು.ಗೆ ಏರಿಕೆ ಮಾಡಲಾಗಿದೆ. ಹೀಗೆ ಪ್ರತಿ ಯೋಜನೆಗೂ ಇಂತಿಷ್ಟು ಹಣ ನಿಗದಿ ಮಾಡಲಾಗುವುದು. ಅದನ್ನು ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ ಎಂಬ ಅಂಶವನ್ನೂ ವಿಧೇಯಕದಲ್ಲಿ ಸೇರಿಸಲಾಗಿದೆ. ಅದರಿಂದ ಯಾವುದೇ ರೀತಿಯ ದುರುಪಯೋಗವಾಗುವುದಿಲ್ಲ.

• ಹಾಗಿದ್ದರೆ, ಈ ವಿವಾದ, ವಿರೋಧ ಹುಟ್ಟಿಕೊಂಡಿದ್ದೇಕೆ?

ಇದೆಲ್ಲವೂ ರಾಜಕೀಯ ಉದ್ದೇಶದ ವಿರೋಧಗಳು, ಹಿಂದೂ ದೇವಸ್ಥಾನಗಳ ಅಭಿವೃದ್ಧಿಗೆ ವಿರೋಧಿಸಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರು ವಿಧೇಯಕ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದರು. ಕೊನೆಗೆ ಅದನ್ನು ಅಳಿಸಿ ಹಾಕಿದರು. ಒಳ್ಳೆಯ ಕೆಲಸ ಮಾಡುವಾಗ ಇವೆಲ್ಲ ಇರುತ್ತವೆ.

• ದೇಗುಲಗಳಿಗೆ 50 ಕೋಟಿ ಅನುದಾನ ಹೊರೆಯೇ? ಅದಕ್ಕೂ ಹುಂಡಿ ಹಣ ಬೇಕೆ?

ರಾಜ್ಯ ಸರ್ಕಾರವನ್ನು ಕೇಳಿದರೆ ಅನುದಾನ ನೀಡುತ್ತದೆ. ಆದರೆ, ಈ ವರ್ಷ ಅನುದಾನ ಕೊಡುತ್ತದೆ. ಮುಂದೆ ಅನುದಾನ ಕೊಡುತ್ತಾರೆ ಎಂಬ ಗ್ಯಾರಂಟಿಯಿಲ್ಲ. ಹೀಗಾಗಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಸ್ಥಾನಗಳ ಅಭಿವೃದ್ಧಿ ಶಾಶ್ವತ ಆದಾಯ ರೂಪಿಸಲು ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ ಅಷ್ಟೇ, ದೇವಸ್ಥಾನಗಳಿಂದ ಬರುವ ಆದಾಯವನ್ನು ಹೊರತುಪಡಿಸಿ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಅನುದಾನ ತಂದು, ಅಭಿವೃದ್ಧಿ ಕಾರ್ಯ ಮಾಡಲಾಗುವುದು.

• ದೇಗುಲ ಆಡಳಿತ ಮಂಡಳಿಗೆ ಬೇರೆ ಧರ್ಮೀಯರ ನೇಮಕದ

ಆ ರೀತಿಯ ಯಾವುದೇ ಚಿಂತನೆ ಸರ್ಕಾರದ ಮುಂದಿಲ್ಲ, ಆದರೆ, ಬೇರೆಬೇರೆ ಧರ್ಮಗಳ ದೇವಸ್ಥಾನಗಳು ಒಂದೇ ಕಡೆ ಇದ್ದರೆ, ಅದನ್ನು ಸಂಯೋಜಿತ ಸಂಸ್ಥೆಗಳೆಂದು ಕರೆಯುತ್ತೇವೆ. ಅಂತಹ ದೇವಸ್ಥಾನಗಳಿಗೆ ಮಾತ್ರ ಬೇರೆ ಧರ್ಮದವರನ್ನು ನೇಮಿಸಲಾಗುತ್ತದೆ. ರಾಜ್ಯದಲ್ಲಿ ಬಾಬಾಬುಡನ್ ಗಿರಿ ಹಾಗೂ ಭೂತರಾಯ-ಚೌಡೇಶ್ವರಿ ದೇವಸ್ಥಾನ-ಸಾದತ್ ಅಲಿಖಾನ್ ದರ್ಗಾಗಳಲ್ಲಿ ಮಾತ್ರ ಆ ರೀತಿಯ ವ್ಯವಸ್ಥೆಯಿದೆ. ಅವನ್ನು ಹೊರತುಪಡಿ ಬೇರೆ ಕಡೆ ನೇಮಕಕ್ಕೆ ಅವಕಾಶವಿಲ್ಲ.

ದೇವಸ್ಥಾನ, ಧಾರ್ಮಿಕ ಪರಿಷತ್ ನಲ್ಲಿ ಹಣ ಉಳಿದರೆ ಸರ್ಕಾರಕ್ಕೆ ಪಡೆಯುತ್ತದೆಯೇ?
ಯಾವುದೇ ಕಾರಣಕ್ಕೂ ದೇವಸ್ಥಾನ ಹಾಗೂ ಧಾರ್ಮಿಕ ವರ್ಗಾವಣೆಯಾಗುವುದಿಲ್ಲ. ಸರ್ಕಾರಕ್ಕೆ ಈಗಾಗಲೇ ಹೇಳಿದಂತೆ ಹಣವನ್ನು ನಿರ್ದಿಷ್ಟ ಯೋಜನೆಗೆ ಮಾತ್ರ ವ್ಯಯಿಸಲಾಗುತ್ತದೆ. ಒಂದು ವೇಳೆ ಹಣ ಉಳಿದರೆ ಅದು ದೇವಸ್ಥಾನ ಅಥವಾ ಧಾರ್ಮಿಕ ಪರಿಷತ್ ಖಾತೆಯಲ್ಲಿಯೇ ಇರಲಿದೆ.

• ವಿಧೇಯಕ ತಿದ್ದುಪಡಿಗೆ ಪ್ರಮುಖವಾಗಿ ಬಿಜೆಪಿ ವಿರೋಧ ಮಾಡುತ್ತಿದೆ?

ಬಿಜೆಪಿ ಅಧಿಕಾರದಲ್ಲಿದ್ದಾಗ 'ಸಿ' ದರ್ಜೆಯ ದೇವಸ್ಥಾನಗಳ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ. ಅವರ ಸರ್ಕಾರದ ಸಚಿವರು ದೇವಸ್ಥಾನಗಳಿಂದ ಬರುವ ಆದಾಯದಲ್ಲಿ ಬಹುಪಾಲನ್ನು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗಳಿಗೆ ಬಳಸಿಕೊಂಡಿದ್ದಾರೆ. ಅವರ ಅವಧಿಯಲ್ಲಿ 'ಸಿ' ದರ್ಜೆ ದೇವಸ್ಥಾನಗಳ ಅಭಿವೃದ್ಧಿ ಹಾಗೂ ನೌಕರರ ಏಳಿಗೆ ಬಗ್ಗೆ ಯೋಜನೆ ಜಾರಿಗೊಳಿಸಲುಮನಸ್ಸಿರಲಿಲ್ಲ. ಈಗ ನಾವು ಅದನ್ನು ಮಾಡಲು ಹೊರಟರೆ ಅಡ್ಡಗಾಲು ಹಾಕುತ್ತಿದ್ದಾರೆ ಅಷ್ಟೇ.

• ವಿಧಾನಪರಿಷತ್ತಲ್ಲಿ ವಿಧೇಯಕಕ್ಕೆ ಸೋಲಾಗಿದೆ. ಹಾಗಾದರೆ ವಿಧೇಯಕದ ಕಥೆ?

ವಿಧಾನಸಭೆಯಲ್ಲಿ ಈಗಾಗಲೇ ವಿಧೇಯಕಕ್ಕೆ ಅನುಮೋದನೆ ದೊರೆತಿದೆ. ವಿಧಾನಪರಿಷತ್‌ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿ ಅನುಮೋದನೆ ಪಡೆದು, ನಂತರ ಅನುಷ್ಠಾನಕ್ಕೆ ತರಲಾಗುವುದು.'

• 'ಶಕ್ತಿ' ಯೋಜನೆ ನಿರೀಕ್ಷೆಗೂ ಮೀರಿ ಯಶಸ್ಸಾಗಿದೆ. ಸರ್ಕಾರದ ಅನುದಾನ ಸಾಕೇ?

ಶಕ್ತಿ ಯೋಜನೆಯಿಂದ ದೇವಸ್ಥಾನಗಳ ಆದಾಯವೂ ವೃದ್ಧಿಯಾಗಿದೆ. ಪ್ರಸಕ್ತ ಬಜೆಟ್‌ ನಲ್ಲಿ ಶಕ್ತಿ ಯೋಜನೆಗಾಗಿಯೇ 5.100 ಕೋಟಿ ರು. ಘೋಷಿಸಲಾಗಿದೆ. ಆದರೆ, ಅದು ಸಾಕಾಗುವುದಿಲ್ಲ. ನಮ್ಮ ಅಂದಾಜಿನಂತೆ 6,500 ಕೋಟಿ ರು. ಅವಶ್ಯಕತೆಯಿದೆ. ಮುಂದೆ ಅನುದಾನ ಹೊಂದಾಣಿಕೆಯಲ್ಲಿ ಹೆಚ್ಚುವರಿ ಅನುದಾನ ಘೋಷಿಸುವ ನಿರೀಕ್ಷೆಯಿದೆ.

• ಶಕ್ತಿ ಯೋಜನೆ ನಂತರವೂ ನಾಲ್ಕೂ ನಿಗಮಗಳು ಬಲಗೊಂಡಿಲ್ಲವಲ್ಲ?

ಹಿಂದಿನ ಸರ್ಕಾರ ನಾಲ್ಕೂನಿಗಮಗಳಲ್ಲಿ 5 ಸಾವಿರ ಕೋಟಿ ರು. ಗೂ ಹೆಚ್ಚಿನ ಸಾಲವನ್ನು ಬಿಟ್ಟು ಹೋಗಿದೆ. 2015ರ ನಂತರ ಪ್ರಯಾಣ ಟಿಕೆಟ್ ಬೆಲೆ ಏರಿಕೆಯಾಗಿಲ್ಲ. ಡೀಸೆಲ್, ಬಿಡಿ ಭಾಗಗಳಬೆಲೆ ಭಾರೀಹೆಚ್ಚಾಗಿದೆ. ಈ ಎಲ್ಲದರಿಂದನಿಗಮಗಳಿಗೆ ಪ್ರತಿದಿನ 2-3 ಕೋಟಿರು.ನಷ್ಟವುಂಟಾಗುತ್ತಿದೆ. ನಿಗಮಗಳನ್ನು ಸಾಲದಿಂದ ಹೊರತರಲು ಪ್ರಯತ್ನಿಸಲಾಗುತ್ತಿದೆ.

• ಹಾಗಾದರೆ, ಬಸ್ ಪ್ರಯಾಣ ಟಿಕೆಟ್ ದರ ಹೆಚ್ಚಿಸುವ ಚಿಂತನೆ ಇದೆಯೇ?

ಬಸ್ ಪ್ರಯಾಣ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಬೇಕು. ಆದರೆ, 2015ರಿಂದ ಯಾವುದೇ ಸರ್ಕಾರ ಅದಕ್ಕೆ ಅನುಮತಿ ನೀಡಿಲ್ಲ, ಆದರೂ, ಸದ್ಯ ಕ್ಕೆ ಬಸ್ ಪ್ರಯಾಣ ಟಿಕೆಟ್ ದರ ಹೆಚ್ಚಳ ಮಾಡುವ ಬಗ್ಗೆ ಚಿಂತಿಸಿಲ್ಲ, ಅಲ್ಲದೆ, ಅದರಿಂದಾಗುತ್ತಿರುವ ನಷ್ಟವನ್ನು ರಾಜ್ಯ ಸರ್ಕಾರ ನೀಡಲಿ ಎಂಬ ಬೇಡಿಕೆ ಮಾತ್ರ ಇಡುತ್ತೇವೆ.

• ಮಹಿಳಾ ಪ್ರಯಾಣಿಕರಿಗೆ ಸ್ಟಾರ್ಟ್ ಕಾರ್ಡ್ ನೀಡುವ ವಿಚಾರ ಯಾವ ಹಂತದಲ್ಲಿದೆ?

ಸಾರಿಗೆ ಇಲಾಖೆಯಲ್ಲಿ ಕಾರ್ಯಗಳು ಸಮರ್ಪಕವಾಗಿ ನಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ವಾಹನ ಚಾಲನಾ ಪರವಾಗಿ ವಿತರಣೆ ಸೇರಿದಂತೆ ಕೆಲ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ವಾಹನ ಚಾಲನಾ ಪರವಾಗಿ ಸ್ಮಾರ್ಟ್ ಕಾಡ್ ್ರನಲ್ಲಿ ಅಳವಡಿಸಲಾಗುವ ಚಿಪ್ ಬದಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅದು ಶೀಘ್ರದಲ್ಲಿ ಪೂರ್ಣಗೊಂಡು ಸಮಸ್ಯೆ ನಿವಾರಣೆಯಾಗಲಿದೆ.

• ಬೆಂಗಳೂರು ಪ್ರಿಯ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಅಂತಿಮವಾಗಿದೆಯೇ?

ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ ಅಲ್ಪಸಂಖ್ಯಾತರನ್ನು ಹಾಗೂ ಉತ್ತರ ಕ್ಷೇತ್ರದಲ್ಲಿ ಒಕ್ಕಲಿಗರನ್ನು ಕಣಕ್ಕಿಳಿಸುತ್ತೇವೆ. ಆದರೆ, ದಕ್ಷಿಣ ಕ್ಷೇತ್ರದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ದಕ್ಷಿಣದಲ್ಲಿ ಸ್ಪರ್ಧಿಸುವ ಶಕ್ತಿ ಇರುವವರೆಲ್ಲ ಶಾಸಕರು, ಸಚಿವರಾಗಿದ್ದಾರೆ. ಹೀಗಾಗಿ ಅದರ ಬಗ್ಗೆ ನಿರ್ಧಾರ ತಡವಾಗುತ್ತಿದೆ.

• ಬೆಂಗಳೂರಿನ ಶಾಸಕರು, ಸಚಿವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ?

ಹೈಕಮಾಂಡ್ ಹೇಳಿದರೆ ಸ್ಪರ್ಧಿಸಲೇಬೇಕು. ಈಗಿರುವಂತೆ ಕೇಂದ್ರ ಕ್ಷೇತ್ರಕ್ಕೆ ಶಾಸಕ ಎನ್.ಎ. ಹ್ಯಾರೀಸ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಉತ್ತರದಲ್ಲಿ ಕುಸುಮಾ ಅಥವಾ ರಾಜೀವ್ ಗೌಡ ಸ್ಪರ್ಧಿಸಬಹುದು. ದಕ್ಷಿಣ ಕ್ಷೇತ್ರದಲ್ಲಿ ಸೌಮ್ಯಾ ರೆಡ್ಡಿ ಕಣಕ್ಕಿಳಿಸುವ ಬಗ್ಗೆ ಒತ್ತಡವಿದೆ. ಆದರೆ, ನಾನು ಬೇಡ ಎಂದು ಹೇಳಿದ್ದೇನೆ. ಹೈಕಮಾಂಡ್ ಏನು ಹೇಳುತ್ತೋ ನೋಡಬೇಕು.

ಮಂತ್ರಾಲಯದ ರಾಯರ ಮಠದ ಹುಂಡಿಯಲ್ಲಿ ದಾಖಲೆ ದೇಣಿಗೆ ಸಂಗ್ರಹ

• ಲೋಕಸಭೆ ಚುನಾವಣೆ ನಂತರ ಸಚಿವ ಸಂಪುಟ ಪುನಾರಚನೆ ಯಾಗುತ್ತದೆಯೇ? ಆಗ ನೀವು ಖಾತೆ ಬದಲಾವಣೆ ಬಗ್ಗೆ ಕೋರಲಿದ್ದೀರಾ?

ಈ ಹಿಂದೆ 4 ವರ್ಷಗಳ ಕಾಲ ಸಾರಿಗೆ ಸಚಿವನಾಗಿ ಕೆಲಸ ಮಾಡಿದ್ದೆ. ಹೀಗಾಗಿ ಬೇರೆ ಖಾತೆ ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದೆ. ಆದರೂ, ಕೊಟ್ಟ ಖಾತೆ ನಿಭಾಯಿಸುತ್ತಿದ್ದೇನೆ. ಇನ್ನು ಸಚಿವ ಸಂಪುಟ ಪುನಾರಚನೆ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ

• ಲೋಕಸಭೆ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂಬ ಮಾತಿದೆಯಲ್ಲ

ಆ ರೀತಿ ಏನೂ ಬದಲಾವಣೆ ಆಗುವುದಿಲ್ಲ, ಬಿಜೆಪಿಯವರು ಮಾತ್ರ ಸರ್ಕಾರ ಬದಲಾಗುತ್ತದೆ ಎಂದು ಮಾತನಾಡುತ್ತಿದ್ದಾರೆ. ಅದು ಸಾಧ್ಯವಿಲ್ಲ ಬಿಡಿ.

Follow Us:
Download App:
  • android
  • ios