ವನ್ಯಜೀವಿ ಮಾನವ ಸಂಘರ್ಷ: ಕಂಟ್ರೋಲ್ ರೂಂ ಸ್ಥಾಪಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ರಾಜ್ಯದಲ್ಲಿ ವನ್ಯಜೀವಿ-ಮಾನವ ಸಂಘರ್ಷದಲ್ಲಿ ಗಾಯಗೊಂಡವರ ಕುರಿತು ಹತ್ತಿರದ ತಾಲೂಕು, ಜಿಲ್ಲಾ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ರವಾನಿಸಿ ಅಗತ್ಯ ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ಕಲ್ಪಿಸಲು ದಿನದ 24 ಗಂಟೆ ಕಾರ್ಯ ನಿರ್ವಹಿಸುವಂತಹ ಕಂಟ್ರೋಲ್ ರೂಂ ಸ್ಥಾಪನೆ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರು (ಜು.12): ರಾಜ್ಯದಲ್ಲಿ ವನ್ಯಜೀವಿ-ಮಾನವ ಸಂಘರ್ಷದಲ್ಲಿ ಗಾಯಗೊಂಡವರ ಕುರಿತು ಹತ್ತಿರದ ತಾಲೂಕು, ಜಿಲ್ಲಾ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ರವಾನಿಸಿ ಅಗತ್ಯ ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ಕಲ್ಪಿಸಲು ದಿನದ 24 ಗಂಟೆ ಕಾರ್ಯ ನಿರ್ವಹಿಸುವಂತಹ ಕಂಟ್ರೋಲ್ ರೂಂ ಸ್ಥಾಪನೆ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಹಾಸನದಲ್ಲಿ ಮಾನವ-ಆನೆ ಸಂಘರ್ಷ ತಡೆಯಲು 2013ರಲ್ಲಿ ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಸಮರ್ಪಕವಾಗಿ ಜಾರಿಗೊಳಿಸಲು ನಿರ್ದೇಶಿಸುವಂತೆ ಕೋರಿ ಕರ್ನಾಟಕ ಬೆಳೆಗಾರರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ಈ ಸೂಚನೆ ನೀಡಿದೆ.
ರಾಜ್ಯದಲ್ಲಿ ಅರಣ್ಯ ಸುತ್ತುವರಿದ ಪ್ರದೇಶದಲ್ಲಿ ವನ್ಯಜೀವಿ-ಮಾನವ ಸಂಘರ್ಷದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಕಲ್ಪಿಸಲು ಸಮೀಪದ ತಾಲೂಕು, ಜಿಲ್ಲಾ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ರವಾನಿಸಲು ದಿನದ 24 ಗಂಟೆ ಕಾಲ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ಸ್ಥಾಪಿಸಬೇಕು. ಘಟನೆಯ ಮಾಹಿತಿಯನ್ನು ಕೂಡಲೇ ಕಂಟ್ರೋಲ್ ರೂಂ, ಆಸ್ಪತ್ರೆಗೆ ರವಾನಿಸಬೇಕು. ಹೀಗೆ ಮಾಹಿತಿ ಪಡೆದ ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡವರಿಗೆ ಅಗತ್ಯ ವೈದ್ಯಕೀಯ ನೆರವು ಅಥವಾ ಪ್ರಥಮ ಚಿಕಿತ್ಸೆ ಕಲ್ಪಿಸಬೇಕು ನ್ಯಾಯಪೀಠ ನಿರ್ದೇಶಿಸಿದೆ.
ಆಸ್ತಿ ವಿವರ ಸಲ್ಲಿಸದ ಗ್ರಾ.ಪಂ ಸದಸ್ಯರನ್ನು ವಜಾಗೊಳಿಸಲು ಶೋಕಾಸ್ ನೋಟಿಸ್ ಅಗತ್ಯವಿಲ್ಲ: ಹೈಕೋರ್ಟ್
ಅಲ್ಲದೆ, ಆನೆ-ಮಾನವ ಸಂಘರ್ಷ ಪ್ರಕರಣಗಳು ಹೆಚ್ಚು ಸಂಭವಿಸುವ ಹಾಸನ ಜಿಲ್ಲೆಯಲ್ಲಿ ತಾಲೂಕು ಮಟ್ಟದಲ್ಲಿ ಕುಂದು ಕೊರತೆ ಪರಿಹಾರ ಘಟಕ ಸ್ಥಾಪಿಸಬೇಕು. ಅದರಲ್ಲಿ ವಲಯ ಅರಣ್ಯಾಧಿಕಾರಿ ಹಾಗೂ ತಹಶೀಲ್ದಾರ್ ಇರಬೇಕು. ಈ ಘಟಕ ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಸ್ವೀಕರಿಸಿದ ಕುಂದು ಕೊರತೆಗಳ ಬಗ್ಗೆ ದಾಖಲೆ ನಿರ್ವಹಿಸಬೇಕು. ಅವುಗಳನ್ನು ವಲಯ ಅರಣ್ಯಾಧಿಕಾರಿಯ ಮಟ್ಟದಲ್ಲಿ ಪರಿಹಾರ ಕೊಡಬಹುದಾದರೆ ಅವರು ದೂರು ಸ್ವೀಕರಿಸಿದ 24 ಗಂಟೆಯೊಳಗೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.
ಕುಂದು-ಕೊರತೆ ಪರಿಹಾರ ಘಟಕದ ಕುರಿತು ಪತ್ರಿಕೆಗಳು ಮತ್ತು ಸುದ್ದಿವಾಹಿನಿಯಲ್ಲಿ ವ್ಯಾಪಕ ಪ್ರಚಾರ ನೀಡಬೇಕು. ಸ್ಥಾಪನೆ ಮಾಡಿದ ಘಟಕದ ಮಾಹಿತಿಯನ್ನು ಪ್ರತಿ ಗ್ರಾಮ ಪಂಚಾಯತಿಗಳ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿತು. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿ, ಹಾಸನ ಜಿಲ್ಲಾದ್ಯಂತ ಆನೆ-ಮಾನವ ನಡುವಿನ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆನೆ ಕಾರ್ಯ ಪಡೆಗೆ (ಇಟಿಎಫ್) ಅಗತ್ಯ ಸಿಬ್ಬಂದಿ, ವಾಹನ ಹಾಗೂ ಸಲಕರಣೆ ಪೂರೈಸಲಾಗಿದೆ. ಆನೆ-ಮಾನವ ಸಂಘರ್ಷ ಕುರಿತು ಮಾಹಿತಿ ಸ್ವೀಕರಿಸಲು 24*7 ಕಂಟ್ರೋಲ್ ರೂಂ ಸಹ ಸ್ಥಾಪಿಸಲಾಗಿದೆ.
ಕಳೆದು ಹೋದ ಪಾಸ್‌ಪೋರ್ಟ್ ಮತ್ತೆ ಪಡೆಯಲು ಎಫ್‌ಐಆರ್ ಕಾಪಿ ಕಡ್ಡಾಯ: ಹೈಕೋರ್ಟ್
ಆನೆಗಳ ಸಂಚಾರ ಬಗ್ಗೆ ಎಚ್ಚರಿಕೆ ನೀಡಲು ಎಲ್‌ಇಡಿ ಡಿಸ್‌ಪ್ಲೇ ಬೋರ್ಡ್ ಮತ್ತು ಸೈರನ್ ಒಳಗೊಂಡ ಸುಧಾರಿತ ಎಚ್ಚರಿಕೆ ವ್ಯವಸ್ಥೆ ಮತ್ತು ಬಲ್‌್ಕ ಎಸ್‌ಎಂಎಸ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ಈ ಪ್ರಮಾಣ ಪತ್ರವನ್ನು ಪರಿಗಣಿಸಿದ ಹೈಕೋರ್ಟ್, ಆನೆ-ಮಾನವ ಸಂಘರ್ಷ ಪ್ರಕರಣಗಳನ್ನು ತಪ್ಪಿಸಲು ಸುರಕ್ಷಿತ ಆನೆ ಕಾರಿಡಾರ್ ನಿರ್ಮಿಸಬೇಕು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪಾಲಕರು ವನ್ಯಜೀವಿ-ಮಾನವ ಸಂಘರ್ಷ ಪ್ರಕರಣಗಳ ಮೇಲ್ವಿಚಾರಣೆ ವಹಿಸಬೇಕು. ಅದಕ್ಕಾಗಿ ಅಧಿಕಾರಿಗಳು ವರ್ಷಕ್ಕೆ ನಾಲ್ಕು ಬಾರಿ ಸಭೆ ಸೇರಿ ಚರ್ಚಿಸಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.