Mekedatu Project: ಮೇಕೆದಾಟು ಪಾದಯಾತ್ರೆಗೆ ರಾಮನಗರದಲ್ಲಿ ಭರ್ಜರಿ ಸಿದ್ಧತೆ
ಜೆಡಿಎಸ್ ಭದ್ರಕೋಟೆ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕರ್ಮಭೂಮಿ ರಾಮನಗರ ಕ್ಷೇತ್ರದಲ್ಲಿ 2ನೇ ಹಂತದ ಮೇಕೆದಾಟು ಪಾದಯಾತ್ರೆ ಮೂಲಕ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ.
ಅಫ್ರೋಜ್ ಖಾನ್
ರಾಮನಗರ (ಫೆ.26): ಜೆಡಿಎಸ್ (JDS) ಭದ್ರಕೋಟೆ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumarswamy) ಕರ್ಮಭೂಮಿ ರಾಮನಗರ (Ramanagara) ಕ್ಷೇತ್ರದಲ್ಲಿ 2ನೇ ಹಂತದ ಮೇಕೆದಾಟು ಪಾದಯಾತ್ರೆ (Mekedatu Padayatre) ಮೂಲಕ ಕಾಂಗ್ರೆಸ್‌ನ (Congress) ಶಕ್ತಿ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ. ಕೋವಿಡ್ ನಿಯಮ, ವೀಕೆಂಡ್ ಕಫ್ರ್ಯೂ, ರಾಜ್ಯ ಸರ್ಕಾರದ ಕಠಿಣ ನಿರ್ಬಂಧದ ನಡುವೆಯೂ ಜ.9ರಿಂದ 12ರವರೆಗೆ (4 ದಿನ 60.5 ಕಿ.ಮೀ.) ಮೇಕೆದಾಟು ಪಾದಯಾತ್ರೆ ನಿರೀಕ್ಷೆಗೂ ಮೀರಿದ ಜನ ಬೆಂಬಲದೊಂದಿಗೆ ಯಶಸ್ವಿಯಾಯಿತು. ಪಾದಯಾತ್ರೆಯನ್ನು 2ನೇ ಹಂತದಲ್ಲಿ ಪೂರ್ಣಗೊಳಿಸಲು ಕಾಂಗ್ರೆಸ್ಸಿಗರು ಸಿದ್ಧರಾಗಿದ್ದಾರೆ.
‘ನೀರಿಗಾಗಿ ನಡಿಗೆ’ ಘೋಷಣೆಯಡಿ ಮೊದಲ ಹಂತದಲ್ಲಿ ಕಾಂಗ್ರೆಸ್ಸಿಗರು 11 ದಿನ, 169 ಕಿ.ಮೀ ಪಾದಯಾತ್ರೆಗೆ ಉದ್ದೇಶಿಸಿದ್ದರು. ಸಂಗಮದಿಂದ ರಾಮನಗರದವರೆಗೆ 60.6 ಕಿ.ಮೀ. ಸಾಗಿದ ಪಾದಯಾತ್ರೆಗೆ ಕೊರೋನಾ ಹೆಚ್ಚಳ, ನ್ಯಾಯಾಲಯದ ಮಧ್ಯ ಪ್ರವೇಶದಿಂದಾಗಿ ಸ್ಥಗಿತಗೊಳಿಸಿದ್ದರು. ಮಾರ್ಚ್ 4ಕ್ಕೆ ಬಜೆಟ್ ಅಧಿವೇಶನ ನಡೆಯಲಿದ್ದು, ಪಾದಯಾತ್ರೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. 7 ದಿನ 109 ಕಿ.ಮೀ ಬದಲಾಗಿ 5 ದಿನ 80 ಕಿ.ಮೀ. ಪಾದಯಾತ್ರೆ ನಡೆಸಲಾಗುತ್ತದೆ. ಪ್ರತಿನಿತ್ಯ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 9 ಕಿ.ಮೀ. ಹಾಗೂ ಮಧ್ಯಾಹ್ನದಿಂದ 6 ಕಿ.ಮೀ. ಸೇರಿ ಒಟ್ಟು 15 ಕಿ.ಮೀ.ವರೆಗೆ ಪಾದಯಾತ್ರೆ ನಡೆಯಲಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯು ಅನುಮತಿ ನೀಡದಿದ್ದರೂ ಪಾದಯಾತ್ರೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
Mekedatu Padayatre ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮತ್ತೆ ಶುರು, ಕೊಂಚ ಬದಲಾವಣೆ ಅಷ್ಟೇ
ಬೃಹತ್ ವೇದಿಕೆ ನಿರ್ಮಾಣ: ಫೆ.27ರಂದು ರಾಮನಗರ ಶಕ್ತಿ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಕನಕಪುರ ವೃತ್ತದ ಬಳಿಯ ಮೈದಾನದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಇದಕ್ಕಾಗಿ ಬೃಹತ್ ವೇದಿಕೆಯನ್ನೇ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ 9 ಕಿ.ಮೀ. ಅಂತರದಲ್ಲಿ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ. ಪಾದಯಾತ್ರೆಯಲ್ಲಿ ಪ್ರತಿ ದಿನ 25ರಿಂದ 30 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೆಜ್ಜೆ ಹೆಜ್ಜೆಗೂ ಕುಡಿಯುವ ನೀರು, ತಂಪು ಪಾನೀಯ, ಪಾನಕ, ಮಜ್ಜಿಗೆ, ಬಿಸ್ಕೆಟ್, ಹಣ್ಣು ಹಂಪಲು ನೀಡಲು ಪ್ರತ್ಯೇಕ ಸಮಿತಿಗಳನ್ನು ರಚನೆ ಮಾಡಿದ್ದಾರೆ.
ರಾಮನಗರದಿಂದ-ಬೆಂಗಳೂರವರೆಗೆ ರಸ್ತೆ ಬದಿಯಲ್ಲಿ ಇ-ಟಾಯ್ಲೆಟ್ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಮುಖ ನಾಯಕರ ವಾಸ್ತವ್ಯಕ್ಕಾಗಿ ಈಗಲ್ ಟನ್ ರೆಸಾರ್ಟ್, ವಂಡರ್ ಲಾ, 2ನೇ ಹಂತದ ನಾಯಕರಿಗಾಗಿ ಬಿಡದಿಯಲ್ಲಿ ಡಿಕೆಶಿ ಒಡೆತನದ ಐಕಾನ್ ಕಾಲೇಜು, ವಿಧಾನ ಪರಿಷತ್ ಸದಸ್ಯ ಲಿಂಗಪ್ಪ ಅವರ ಜ್ಞಾನ ವಿಕಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಹಾಸಿಗೆ ಸಿದ್ಧಪಡಿಸಲಾಗಿದೆ. ರಾಮನಗರದ ಲಾಡ್ಜ್‌ಗಳೆಲ್ಲವು ಬಹುತೇಕ ಬುಕ್ ಆಗಿವೆ.
ಏನೇನು ಸಿದ್ಧತೆ?
-ಪ್ರತಿ 9 ಕಿಮೀಗೆ ಊಟ, ತಿಂಡಿ ಕೌಂಟರ್ ನಿರ್ಮಾಣ
-ಯಾತ್ರಿಗಳಿಗೆ ದಾರಿಯಲ್ಲಿ ಬಿಸ್ಕತ್, ಹಣ್ಣು, ಮಜ್ಜಿಗೆ ಕೌಂಟರ್
-ದಾರಿಯುದ್ಧಕ್ಕೂ ಅಲ್ಲಲ್ಲಿ ಇ-ಟಾಯ್ಲೆಟ್ ನಿರ್ಮಾಣ
-ನಾಯಕರ ವಾಸ್ತವ್ಯಕ್ಕೆ ಈಗಲ್‌ಟನ್ ರೆಸಾರ್ಟ್, ವಂಡರ್‌ಲಾದಲ್ಲಿ ರೂಂ ಬುಕ್
ನಗರದಲ್ಲಿ 3 ದಿನ ಕಾಂಗ್ರೆಸ್ ಪಾದಯಾತ್ರೆ: ಕೊರೋನಾ ಕಾರಣದಿಂದ ಅರ್ಧಕ್ಕೆ ಮೊಟಕುಗೊಳಿಸಿದ್ದ ಮೇಕೆದಾಟು ಪಾದಯಾತ್ರೆ ಫೆ.27ರಂದು ರಾಮನಗರದಿಂದ ಪುನರ್ ಆರಂಭಗೊಳ್ಳುತ್ತಿದ್ದು, ಮಾ.1ರಿಂದ 3ರ ವರೆಗೆ ಮೂರು ದಿನ ಬೆಂಗಳೂರು ನಗರ ಭಾಗದಲ್ಲಿ ಬೃಹತ್ ಪಾದಯಾತ್ರೆ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.28ರ ವೇಳೆಗೆ ಪಾದಯಾತ್ರೆ ಕೆಂಗೇರಿ ತಲುಪಲಿದೆ. ಬಳಿಕ ಬೆಂಗಳೂರಿನಲ್ಲೇ 5 ದಿನ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿತ್ತು.
Mekedatu Padayatre: 27 ರಿಂದ ಮೇಕೆದಾಟು ಪಾದಯಾತ್ರೆ ಪುನಾರಂಭ
ಆದರೆ ಮಾ.4ರಂದು ಬಜೆಟ್ ಅಧಿವೇಶನ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಮೂರು ದಿನಗಳಿಗೆ ಸೀಮಿತಗೊಳಿಸಲಾಗಿದೆ. ಅಂತಿಮ ದಿನವಾದ ಮಾ.3ರಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ತನ್ಮೂಲಕ ಯೋಜನೆಗೆ ಕೂಡಲೇ ಚಾಲನೆ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಕಿರಿಕಿರಿ ಆಗುತ್ತದೆ ಅನುಸರಿಸಿಕೊಳ್ಳಿ: ಸಾವಿರಾರು ಜನ ಪಾದಯಾತ್ರೆಯಲ್ಲಿ ಭಾಗವಹಿಸುವುದರಿಂದ ಸಹಜವಾಗಿಯೇ ಸಂಚಾರದಟ್ಟಣೆ ಆಗುತ್ತದೆ. ಜನರಿಗೂ ಕಿರಿಕಿರಿಯಾಗುತ್ತದೆ. ಬೆಂಗಳೂರಿನ ಜನರಿಗೆ ನೀರೊದಗಿಸಲು ಪಾದಯಾತ್ರೆ ಮಾಡಲಾಗುತ್ತಿದೆ. ಹೀಗಾಗಿ ಸ್ವಲ್ಪ ಅನುಸರಿಸಿಕೊಳ್ಳಬೇಕು. ಬೆಂಗಳೂರಿನ ನೀರಿಗಾಗಿ ಕಾಳಜಿ ಇರುವವರೆಲ್ಲರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದು ಕರೆ ನೀಡಿದರು.