ಬೆಂಗಳೂರು(ಜು.24): ಕೊರೋನಾ ಸೋಂಕಿನ ಭೀತಿಯಿಂದಾಗಿ ನಗರದ ಖಾಸಗಿ ಆಸ್ಪತ್ರೆಗಳು ಮುಚ್ಚಿದ ಪರಿಣಾಮ ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೆರಿಗೆ ಸಂಖ್ಯೆ ತಿಂಗಳಿಗೆ ಸುಮಾರು 700 ರಿಂದ 1500ಕ್ಕೆ ಏರಿಕೆಯಾಗಿದೆ.

ಕೊರೋನಾ ಸೋಂಕಿನ ಭೀತಿಯಿಂದ ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು ಬಂದ್‌ ಆಗಿವೆ. ಇನ್ನೂ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕು ಪರೀಕ್ಷಾ ವರದಿ ಇಲ್ಲದೇ ಗರ್ಭಿಣಿಯನ್ನು ದಾಖಲಿಸಿಕೊಳ್ಳುತ್ತಿಲ್ಲ. ಹೀಗಾಗಿ, ಬಿಬಿಎಂಪಿಯ ಹೆರಿಗೆ ಆಸ್ಪತ್ರೆಗಳಿಗೆ ದಾಖಲಾಗುವ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದೆ.

ಆನ್‌ಲೈನ್‌ ಕ್ಲಾಸ್‌ಗೆ ಅಡ್ಡಿಯಾದ ಲೋಡ್‌ ಶೆಡ್ಡಿಂಗ್‌, ನೆಟ್‌ವರ್ಕ್

3 ತಿಂಗಳಲ್ಲಿ 4000 ಹೆರಿಗೆ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 26 ಹೆರಿಗೆ ಆಸ್ಪತ್ರೆಗಳಿದ್ದು, ಏಪ್ರಿಲ್‌ನಿಂದ ಪ್ರತಿ ತಿಂಗಳು ಒಂದು ಸಾವಿರದಿಂದ 1,500ರ ವರೆಗೆ ಗರ್ಭಿಣಿಯರು ದಾಖಲಾಗುತ್ತಿದ್ದಾರೆ. ಮೂರು ತಿಂಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಲಾಗಿದೆ. ಏಪ್ರಿಲ್‌ಗಿಂತ ಮುನ್ನ ತಿಂಗಳಿಗೆ ಸುಮಾರು 700ರ ವರೆಗೆ ಮಾತ್ರ ಹೆರಿಗೆ ಮಾಡಿಸಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ ನಾಲ್ಕು ಆಸ್ಪತ್ರೆ ನವೀಕರಣ ನಡೆಯುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿನ ಲಕ್ಷಣವಿರುವ ಗರ್ಭಿಣಿಯರ ಆರೈಕೆಗೆಂದು ವಿಲ್ಸನ್‌ ಗಾರ್ಡನ್‌ ಹೆರಿಗೆ ಆಸ್ಪತ್ರೆಯನ್ನು ಮೀಸಲಿಡಲಾಗಿದೆ. ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಅಗತ್ಯ ಪಿಪಿಇ ಕಿಟ್‌ ಧರಿಸಿ ಹೆರಿಗೆ ಮಾಡಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗರ್ಭಿಣಿಯರಿಗೆ ಪ್ರಸವದ ದಿನಕ್ಕಿಂತ 15 ದಿನಗಳ ಮುಂಚೆ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಈ ವೇಳೆ ಸೋಂಕು ದೃಢಪಟ್ಟರೆ ವಾಣಿವಿಲಾಸ ಆಸ್ಪತ್ರೆ, ಸೋಂಕಿನ ಲಕ್ಷಣಗಳಿದ್ದವರು ಮತ್ತು ಕೊರೋನಾ ಪರೀಕ್ಷೆ ವರದಿ ವಿಳಂಬವಾದರೆ ಅವರನ್ನು ವಿಲ್ಸನ್‌ ಗಾರ್ಡನ್‌ ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಸೋಂಕು ಇಲ್ಲದವರಿಗೆ ಸಾಮಾನ್ಯ ಹೆರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.