* ಮಾಸ್ಟರ್‌ಮೈಂಡ್‌ ವಸೀಂ ಟ್ಯಾಬ್‌ ವಶ, ಡಿಜಿಟಲ್‌ ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರ ಯತ್ನ* ಮತ್ತೆ 8 ಮಂದಿ ಬಂಧನ, ಎಂಐಎಂ ನಗರಾಧ್ಯಕ್ಷ ದಾದಾ​ಪೀರ್‌ ಸೆರೆ*  ಹುಬ್ಬಳ್ಳಿ ಗಲಭೆ, ಬಂಧಿತರ ಸಂಖ್ಯೆ 146ಕ್ಕೇರಿಕೆ 

ಹುಬ್ಬಳ್ಳಿ(ಏ.25): ಹಳೆ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿ ಎಐಎಂಐಎಂ ಮುಖಂಡರ ಬಂಧನ ಸರಣಿ ಮುಂದುವರಿದಿದ್ದು, ಇದೀಗ ಪಕ್ಷದ ನಗರ ಘಟಕದ ಅಧ್ಯಕ್ಷ ದಾದಾಪೀರ್‌ ಬೆಟಗೇರಿ ಪೊಲೀ​ಸರ ಬಲೆಗೆ ಬಿದ್ದಿ​ದ್ದಾ​ನೆ. ಗಲ​ಭೆಗೆ ಸಂಬಂಧಿ​ಸಿ ಭಾನುವಾರ ದಾದಾ​ಪೀರ್‌ ಸೇರಿ ಒಟ್ಟು ಎಂಟು ಆರೋಪಿಗಳನ್ನು ಪೊಲೀ​ಸರು ಬಂಧಿ​ಸಿ​ದ್ದಾ​ರೆ.

ಮಹಮ್ಮದ್‌ ರಫಿಕ್‌ ಪಿಂಜಾರ, ಇಮ್ರಾನ್‌ಖಾನ್‌ ಸೌದಾಗರ್‌, ಅಕ್ಬರ್‌ಲಿ ಯಾದವಾಡ, ಸಮೀರ ಹರಿಹರ, ಸಾದಿಕ್‌ ಖಾನ್‌ ಪಠಾಣ್‌, ಸೈಫ್‌ಖಾನ್‌ ಜಾಗೀರ್‌ದಾರ್‌, ಸಾದಿಕ್‌ ಮಕಾಂದಾರ್‌ ಬಂಧಿತ ಇತರೆ ಆರೋ​ಪಿ​ಗ​ಳು. ಈ ಮೂಲಕ ಪ್ರಕರಣದಲ್ಲಿ ಒಟ್ಟಾರೆ ಬಂಧಿ​ತರ ಸಂಖ್ಯೆ 146ಕ್ಕೇರಿದೆ. ಎಐ​ಎಂಐ​ಎಂನ ಮೂರು ಮಂದಿ ಪ್ರಮು​ಖ​ರನ್ನು ಈವ​ರೆಗೆ ಬಂಧಿ​ಸಲಾ​ಗಿ​ದೆ.

ಇನ್ನೊಂದೆಡೆ ಇಡೀ ಗಲ​ಭೆಯ ಮಾಸ್ಟರ್‌ಮೈಂಡ್‌ ಎನ್ನಲಾಗುತ್ತಿರುವ ವಸೀಂ ಪಠಾಣ್‌ ಟ್ಯಾಬ್‌ ವಶಪಡಿಸಿಕೊಂಡಿರುವ ಪೊಲೀಸರು ಡಿಜಿಟಲ್‌ ಸಾಕ್ಷ್ಯ ಕಲೆಹಾಕುವ ಕೆಲಸ ಆರಂಭಿ​ಸಿ​ದ್ದಾ​ರೆ. ಗಲಭೆ ಬಳಿಕ ವಸೀಂ ಪಠಾಣ್‌ ತನ್ನ ಮೊಬೈಲ್‌ ಹಾಗೂ ಸಿಮ್‌ ಅನ್ನು ಬದಲಿಸಿದ್ದಾನೆ. ವಶಪಡಿಸಿಕೊಂಡ ಟ್ಯಾಬ್‌ನಲ್ಲಿ ಕೆಲ ಸಂಘಟನೆಗಳ ಜತೆ ನಡೆಸಿರುವ ಇ-ಮೇಲ್‌ ಕೂಡ ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ನೀಲಿ ಬಾವುಟ: ಇನ್ನು ಗಲಭೆ ವೇಳೆ ಕೆಲಹೊತ್ತು ಸಂಘಟನೆಯೊಂದರ ನೀಲಿ ಧ್ವಜ ಕೂಡ ಹಾರಾಡಿದೆ. ಈ ಕುರಿತು ವಿಡಿಯೋ ಸಹ ಹರಿದಾಡುತ್ತಿದ್ದು, ಇದಕ್ಕೆ ಸಂಬಂಧಿಸಿ ಕೆಲವರನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

12 ಸಾವಿರಕ್ಕೂ ಹೆಚ್ಚು ಕಾಲ್‌!: ಗಲಭೆ ನಡೆದ ಏ.16ರಂದು ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆ ಸುತ್ತಲಿನ ನಾಲ್ಕೈದು ಟವರ್‌ಗಳಿಂದ ರಾತ್ರಿ 8ರಿಂದ 12ರ ವರೆಗೆ 12 ಸಾವಿರಕ್ಕೂ ಹೆಚ್ಚು ಮೊಬೈಲ್‌ ಕರೆಗಳು ಹೋಗಿವೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ರಾತ್ರಿ ವಿನಿಮಯವಾಗಿರುವ ಕರೆಗಳ ಮಾಹಿತಿ ಸಂಗ್ರಹಕ್ಕಾಗಿಯೇ ಪ್ರತ್ಯೇಕ ತಂಡ ರಚಿಸಲಾಗಿದೆ. ಪ್ರತಿನಿತ್ಯ ಅಲ್ಲಿರುವ ಮೊಬೈಲ್‌ ಟವರ್‌ ಮೂಲಕ ಗರಿಷ್ಠ 80 ಸಾವಿರ ಕರೆಗಳು ವಿನಿಮಯವಾಗುತ್ತಿದ್ದವು. ಆದರೆ, ಗಲಭೆ ನಡೆದ ದಿನ 90 ಸಾವಿ​ರಕ್ಕೂ ಹೆಚ್ಚು ಕರೆಗಳು ಹೋಗಿವೆ.

ಮುಲಾಜಿಲ್ಲದೆ ಕ್ರಮ-ಕಮಿಷನರ್‌: ಹಳೇ ಹುಬ್ಬಳ್ಳಿ ಗಲಭೆ ಪ್ರಕ​ರ​ಣದಲ್ಲಿ ಆರೋ​ಪಿ​ಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವರು ಗಲಭೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ. ಅಲ್ಲದೆ, ನಗರದ ಇತರೆಡೆ ಕೂಡ ಕ್ರಿಮಿನಲ್‌ ಪ್ರಕರಣದಲ್ಲಿ ಪಾಲ್ಗೊಂಡರೂ ಗೂಂಡಾ ಕಾಯ್ದೆ​ಯಡಿ ಕಠಿಣ ಕ್ರಮ ವಹಿಸಲಾಗುವುದು. ಬಂಧಿತರಲ್ಲಿ ಇಬ್ಬರು ರೌಡಿ ಶೀಟರ್‌ಗಳಿದ್ದಾರೆ. ಹೊಸದಾಗಿ ರೌಡಿ ಶೀಟರ್‌ ತೆರೆಯುವ ಕುರಿತು ಕ್ರಮ ಕೈಗೊಳ್ಳಲಾಗುವುದು. ವಿಡಿಯೋ, ಸಿಸಿಟಿವಿ ಫುಟೇಜ್‌ ಸೇರಿ ಇತರ ಸಾಕ್ಷ್ಯ ಆಧರಿಸಿ ಬಂಧನ ಮುಂದುವರಿದಿದೆ ಎಂದು ಕಮಿಷನರ್‌ ಲಾಬೂರಾಮ್‌ ತಿಳಿ​ಸಿ​ದ್ದಾ​ರೆ.

ಗಲಭೆಕೋರರ ನಿಯಂತ್ರಣಕ್ಕೆ ಕರ್ನಾಟಕ ಮಾಡೆಲ್‌: ಸಿಎಂ

ಗಲಭೆ ಆರೋಪಿಗಳ ಅಕ್ರಮ ಮನೆ, ಆಸ್ತಿಯನ್ನು ಬುಲ್ಡೋಜರ್‌ ಬಳಸಿ ಧ್ವಂಸಗೊಳಿಸುವ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌ ಮಾದರಿ ನೀತಿಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಎಂಬ ಬಗ್ಗೆ ಬಿಜೆಪಿಗರಿಂದಲೇ ಆಗ್ರಹ ಕೇಳಿಬರುತ್ತಿರುವಾಗಲೇ, ಮುಖ್ಯಮಂತ್ರಿಗಳು ‘ಕರ್ನಾಟಕ ಮಾಡೆಲ್‌’ ಬಗ್ಗೆ ಮಾತನಾಡಿದ್ದಾರೆ. ಕೋಮು ಗಲಭೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕರ್ನಾಟಕ ಮಾಡೆಲ್‌ ಇರಲಿದ್ದು, ಇದಕ್ಕೆ ಕಾನೂನಿನ ಬಲ ತುಂಬಲಿದ್ದೇವೆ ಎಂದು ತಿಳಿಸಿದ್ದಾರೆ. ಡಿಜೆ ಹಳ್ಳಿ- ಕೆಜೆ ಹಳ್ಳಿ ಗಲಭೆಯಲ್ಲಿ ಕ್ರಮ ಆಗಿದೆ. ಇಲ್ಲಿ ಕರ್ನಾಟಕ ಮಾಡೆಲ್‌ ಇರಲಿದ್ದು, ಕಾನೂನು ಬಲ ತುಂಬಲಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು. ವಿವರ ಪುಟ 6