Asianet Suvarna News Asianet Suvarna News

ನಿರುದ್ಯೋಗಿ ಕನ್ನಡಿಗರ ಗುರುತಿಸುವುದು ಹೇಗೆ? ಕನ್ನಡತಿ ಪೂಜಾ ಗಾಂಧಿ ಲೇಖನ

ಕರ್ನಾಟಕ ಸರ್ಕಾರದ ಆದೇಶ ಪಾಲನೆಗೆ ಮತ್ತು ಈ ನೆಲದ ಮೇಲಿನ ಪ್ರೀತಿಯಿಂದ ಕೈಗಾರಿಕೆಗಳು ಸಿ ಮತ್ತು ಡಿ ಗುಂಪಿನ ಉದ್ಯೋಗದಲ್ಲಿ ಮೀಸಲಾತಿ ನೀಡಲಿಚ್ಛಿಸಿದರೂ, ನಿರುದ್ಯೋಗಿ ಕನ್ನಡಿಗ - ಕನ್ನಡತಿಯರನ್ನು ಗುರುತಿಸಲು ಸದ್ಯಕ್ಕೆ ಯಾವ ಸಾಧನವೂ ಇಲ್ಲ.
 

How to identify unemployed kannadigas actress kannadati pooja gandhi article rav
Author
First Published Jun 22, 2024, 7:23 AM IST

- ಪೂಜಾ ಗಾಂಧಿ, ಚಿತ್ರ ನಟಿ
ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು, ಕರ್ನಾಟಕ ಕೈಗಾರಿಕಾ ಉದ್ಯೋಗ ನಿಯಮಗಳಲ್ಲಿ ತಿದ್ದುಪಡಿ ತರುವುದರ ಮೂಲಕ, ಸಿ ಮತ್ತು ಡಿ ಗುಂಪಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇಕಡಾ 100ರಷ್ಟು ಮೀಸಲಾತಿ ಜಾರಿಗೊಳಿಸಲು ಮುಂದಾಗಿದೆ. ಇದು ಐತಿಹಾಸಿಕ ಮತ್ತು ಸ್ವಾಗತಾರ್ಹ ನಿರ್ಧಾರ.

ಈ ನಿಟ್ಟಿನಲ್ಲಿ ನನ್ನ ಕೆಲವು ಸಲಹೆಗಳನ್ನು ಸಚಿವರಾದ ಸಂತೋಷ್ ಎಸ್. ಲಾಡ್ ಅವರಿಗೆ ತಲುಪಿಸಿದಾಗ ಕೆಲವೇ ಗಂಟೆಗಳಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರಿಗೆ ಅದರ ಪ್ರತಿಯನ್ನು (ತಮ್ಮ ಟಿಪ್ಪಣಿಯೊಂದಿಗೆ) ತಲುಪಿಸಿರುವುದು ಅವರ ಕನ್ನಡ ಪ್ರೇಮಕ್ಕೆ ಮತ್ತು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಯ ಬಗೆಗೆ ಅವರಿಗಿರುವ ಬದ್ಧತೆಗೆ ಸಾಕ್ಷಿಯಾಗಿದೆ.

ಕನ್ನಡಿಗರ ಸಮಸ್ಯೆ

ಸರ್ಕಾರ ಹೊಸ ನಿಯಮಗಳನ್ನು ಅನುಷ್ಠಾನಗೊಳಿಸಿದರೂ, ಸದ್ಯದ ಸ್ಥಿತಿಯಲ್ಲಿ ಸರ್ಕಾರವಾಗಲಿ, ಕನ್ನಡಿಗರಾಗಲಿ ಅಥವಾ ಕೈಗಾರಿಕೆಗಳಾಗಲಿ ನಿರುದ್ಯೋಗಿ ಕನ್ನಡಿಗ-ಕನ್ನಡತಿಯರಾರೆಂದು ಗುರುತಿಸಲು ಯಾವ ಸಾಧನವೂ ಇಲ್ಲ.

ಆದ್ದರಿಂದ ಅತ್ಯಂತ ಮುಖ್ಯವಾಗಿ ಆಗಬೇಕಾದ ಕೆಲಸವೆಂದರೆ ನಿರುದ್ಯೋಗಿ ಕನ್ನಡಿಗ ಯುವಕ-ಯುವತಿಯರನ್ನು ಗುರುತಿಸುವುದು. ಅದನ್ನು ಮಾಡುವುದು ಹೇಗೆ?

‘ಕನ್ನಡಿಗ’ ಪ್ರಮಾಣಪತ್ರ ನೀಡಿ

ಕರ್ನಾಟಕದಲ್ಲಿ 15 ವರ್ಷಗಳಿಗಿಂತ ಹೆಚ್ಚು ವಾಸವಾಗಿದ್ದು, ಕನ್ನಡವನ್ನು ಓದಲು ಮತ್ತು ಬರೆಯಲು ಕಲಿತಿದ್ದರೆ ಅವರನ್ನು ಕನ್ನಡಿಗರೆಂದು ನಮ್ಮ ನಾಡಿನ ಕಾನೂನು ಗುರುತಿಸುತ್ತದೆ.

ಆದರೆ ಈ ಎಲ್ಲಾ ಪೂರಕ ಮಾಪನಗಳಿದ್ದರೂ, ಅವುಗಳನ್ನು ಸರ್ಕಾರದ ಮಟ್ಟದಲ್ಲಿ ಸಲ್ಲಿಸಿ, ಕರುನಾಡಿಗರೆಂಬ ಪ್ರಮಾಣಪತ್ರ ಪಡೆಯಲು ಯಾವುದೇ ರೀತಿಯ ಸೌಲಭ್ಯಗಳು ಸದ್ಯದ ಸ್ಥಿತಿಯಲ್ಲಿ ಇಲ್ಲ.

ಆದ್ದರಿಂದ ತ್ವರಿತವಾಗಿ ಆಗಬೇಕಾದ ಕಾರ್ಯವೆಂದರೆ ಅರ್ಜಿ ಸಲ್ಲಿಸಲು ಮತ್ತು ಕನ್ನಡ ಓದಲು ಬರೆಯಲು ಬರುವ ಬಗ್ಗೆ ಪ್ರಮಾಣೀಕರಿಸಿ, ಅವುಗಳನ್ನು ಸಲ್ಲಿಸಿ ಸರ್ಕಾರದಿಂದ ಪ್ರಮಾಣ ಪತ್ರ ಮತ್ತು ಅದರ ಅನನ್ಯ ಸಂಖ್ಯೆ (ಆಧಾರ್ ಸಂಖ್ಯೆ ಜೋಡಣೆಯೊಂದಿಗೆ) ಪಡೆಯಲು ಅನವು ಮಾಡಿಕೊಡುವುದು.

 

ಅಮೆರಿಕದ ಗ್ರೀನ್‌ ಕಾರ್ಡ್‌ ರೀತಿ ಕನ್ನಡಿಗರಿಗೆಲ್ಲ ಕೊಡಿ ‘ಕನ್ನಡ ಕಾರ್ಡ್’! - ನಟಿ ಪೂಜಾ ಗಾಂಧಿ

ಅನನ್ಯ ಸಂಖ್ಯೆ ನೀಡುವ ವಿಧಾನ

10ನೇ ತರಗತಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಸ್ವೀಕರಿಸಿ ಉತ್ತೀರ್ಣರಾಗಿದ್ದರೆ, ಅಂಕ ಪಟ್ಟಿ ಮತ್ತು 15 ವರ್ಷ ಕರ್ನಾಟಕದಲ್ಲಿ ವಾಸವಿರುವ ಸಂಬಂಧದ ದಾಖಲೆಗಳನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ಅಥವಾ ನಾಡಕಚೇರಿಯ ಮೂಲಕ ಸಲ್ಲಿಸಿ ಪಡೆಯಲು ಅನುವು ಮಾಡಿಕೊಡಬಹುದು.

15 ವರ್ಷ ಕರ್ನಾಟಕದಲ್ಲಿ ವಾಸವಿದ್ದು ಕನ್ನಡವನ್ನು ಒಂದು ಭಾಷೆಯಾಗಿ ಸ್ವೀಕರಿಸಿ ಉತ್ತೀರ್ಣರಾಗಿರದಿದ್ದರೆ, ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ನಡೆಸುವ ಆನ್ಲೈನ್ ಅಥವಾ ಆಫ್ಲೈನ್ (ಕನ್ನಡ ಓದಲು-ಬರೆಯಲು ಬರುವ ಬಗ್ಗೆ) ಪರೀಕ್ಷೆಗಳಲ್ಲಿ ತೇರ್ಗಡೆಯಾದ ಪ್ರಮಾಣ ಪತ್ರದ ಜೊತೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಅಥವಾ ನಾಡಕಚೇರಿಯಲ್ಲಿ ಸಲ್ಲಿಸುವ ಮೂಲಕ ಪಡೆಯಲು ನೀತಿ ರೂಪಿಸಬಹುದು.

ಹೊರನಾಡ ಕನ್ನಡಿಗರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿ 10ನೇ ತರಗತಿಯಲ್ಲಿ ತೇರ್ಗಡೆಯಾಗಿದ್ದರೆ, ಅಂತಹವರಿಗೆ 15 ವರ್ಷ ವಾಸವಿರುವ ದಾಖಲೆಗಳಿಂದ ವಿನಾಯತಿ ನೀಡಿ, ಅಂಕ ಪಟ್ಟಿಯ ಆಧಾರದಲ್ಲಿ ಕನ್ನಡಿಗ ಪ್ರಮಾಣ ಪತ್ರ ಮತ್ತು ಅನನ್ಯ ಸಂಖ್ಯೆ ವಿತರಿಸುವುದು. ಇದು ಗಡಿ ಭಾಗದ ಅನ್ಯ ರಾಜ್ಯದ ಕನ್ನಡಿಗರಿಗಾಗಿ.

ನಿರುದ್ಯೋಗಿ ಅಥವಾ ಉದ್ಯೋಗವನ್ನು ಅರಸುತ್ತಿರುವ ಕನ್ನಡಿಗರು ತಮ್ಮನ್ನು ಕನ್ನಡಿಗರು ಎಂದು ಗುರುತಿಸಿಕೊಳ್ಳಲು ಸರ್ಕಾರದಿಂದ ನೀಡುವ ಪ್ರಮಾಣಪತ್ರ ಮತ್ತು ಅನನ್ಯ ಸಂಖ್ಯೆ ಅತ್ಯವಶ್ಯವಾಗಿದೆ.

ಕೈಗಾರಿಕೆಗಳ ಸಮಸ್ಯೆ

ಕರ್ನಾಟಕ ಸರ್ಕಾರದ ಆದೇಶ ಪಾಲನೆಗೆ ಮತ್ತು ಈ ನೆಲದ ಮೇಲಿನ ಪ್ರೀತಿಯಿಂದ ಕೈಗಾರಿಕೆಗಳು ಸಿ ಮತ್ತು ಡಿ ಗುಂಪಿನ ಉದ್ಯೋಗದಲ್ಲಿ ಮೀಸಲಾತಿ ನೀಡಲಿಚ್ಛಿಸಿದರೂ, ನಿರುದ್ಯೋಗಿ ಕನ್ನಡಿಗ - ಕನ್ನಡತಿಯರನ್ನು ಗುರುತಿಸಲು ಯಾವ ಸಾಧನವೂ ಇಲ್ಲ.

ಇದಕ್ಕೆ ಪರಿಹಾರವೆಂದರೆ, ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆ ಈಗಾಗಲೇ ಸ್ಕಿಲ್ ಕನೆಕ್ಟ್ ಪೋರ್ಟಲ್ ಹೊಂದಿದೆ. ಅದರಲ್ಲಿ ಅಥವಾ ಕಾರ್ಮಿಕ ಇಲಾಖೆಯ ನೂತನ ಪೋರ್ಟಲ್ ನಲ್ಲಿ ನಿರುದ್ಯೋಗಿ ಕನ್ನಡಿಗ - ಕನ್ನಡತಿಯರು ತಮ್ಮ ವಿದ್ಯಾರ್ಹತೆ, ಸ್ಥಳ ಮತ್ತು ಇತರ ದಾಖಲೆಗಳ ಜೊತೆ ತಾವು ಕನ್ನಡಿಗರೆಂಬ ಪ್ರಮಾಣಪತ್ರದ ಅನನ್ಯ ಸಂಖ್ಯೆಯನ್ನು ನೊಂದಾಯಿಸಿಕೊಳ್ಳಲು ಅವಕಾಶ ನೀಡಬಹುದು.

ಕೌಶಲ್ಯಾಭಿವೃದ್ಧಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಉದ್ಯೋಗದಲ್ಲಿ ಮೀಸಲಾತಿಯಷ್ಟೇ ಪ್ರಮುಖ ಮತ್ತು (ಸಂವಿಧಾನಿಕ ಅಥವಾ ಕಾನೂನಾತ್ಮಕ) ತೊಡಕುಗಳಿಲ್ಲದ ಮತ್ತೊಂದು ಪರಿಹಾರವೆಂದರೆ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ.

ಬರೀ ಕೈಗಾರಿಕೆಗಳು ಮಾತ್ರವಲ್ಲದೆ ಐಟಿ ಮತ್ತು ಬಿಟಿ ಕಂಪನಿಗಳನ್ನು ಕೂಡ ಈ ಯೋಜನೆಯಲ್ಲಿ ಭಾಗಿದಾರರಾಗಲು ಹಕ್ಕೊತ್ತಾಯದ ರೂಪದಲ್ಲಿ ನಿಯಮಗಳನ್ನು ರೂಪಿಸಬಹುದಾಗಿದೆ.

ಸರ್ಕಾರದ ಸ್ಕಿಲ್ ಕನೆಕ್ಟ್ ಅಥವಾ ಕಾರ್ಮಿಕ ಇಲಾಖೆಯ ನೂತನ ಪೋರ್ಟಲ್ ನಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಇತರ ಖಾಸಗಿ ಕಂಪನಿಗಳು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಕನ್ನಡಿಗ ಉದ್ಯೋಗಾಕಾಂಕ್ಷಿಗಳ ಪಟ್ಟಿ ಅವರಿಗೆ ಲಭ್ಯವಾಗುವಂತೆ ಮಾಡುವುದರ ಮೂಲಕ ಕನ್ನಡಿಗರಿಗೆ ಅಲ್ಪ-ದೀರ್ಘ ಕಾಲದ ತರಬೇತಿ ಶಿಬಿರಗಳಿಗೆ ಪ್ರಾಮುಖ್ಯತೆ ನೀಡಿ ಕೌಶಲ್ಯ, ಮರುಕೌಶಲ್ಯ ಮತ್ತು ಉನ್ನತ ಕೌಶಲ್ಯಗಳಿಗೆ ಬೇಕಾದಂತಹ ಕಾರ್ಯಾಗಾರಗಳನ್ನು (ನಿಗದಿತ ಸಂಖ್ಯೆ ಮತ್ತು ನಿಗದಿತ ಪ್ರಮಾಣದಲ್ಲಿ) ನಡೆಸಲೇಬೇಕಾದಂತಹ ಕಾನೂನಿನ ಶಕ್ತಿಯನ್ನು ತುಂಬಿ ಕನ್ನಡಿಗರಿಗೆ (ನಿಗದಿತ ಸ್ಟೈಪೆಂಡ್) ಹಾಗೂ ಉದ್ಯೋಗದಲ್ಲಿ ಪ್ರಥಮ ಪ್ರಾಶಸ್ತ್ಯ ಸಿಗುವಂತೆ ನೋಡಿಕೊಳ್ಳಬಹುದು.

ಕೊನೆಯ ಮಾತು

ಮೂಲತಃ ಖಾಸಗಿ ಸಂಸ್ಥೆಗಳು ಹೇಳುವ ಪ್ರಕಾರ ಸಿ ಮತ್ತು ಡಿ ಗ್ರೂಪ್‌ನ ಉದ್ಯೋಗಗಳಿಗೆ ಕನ್ನಡಿಗರನ್ನು ನೇಮಕ ಮಾಡಲು ಅರ್ಹತೆಯನ್ನೂ ಸೇರಿ ಯಾವುದೇ ರೀತಿಯ ತೊಡಕುಗಳಿಲ್ಲದಿದ್ದರೂ, ಕನ್ನಡಿಗರನ್ನು ಗುರುತಿಸುವುದು ಮತ್ತು ಅವರಿಗೆ ಉನ್ನತ ತರಬೇತಿ ನೀಡುವುದೇ ಸಮಸ್ಯೆಯಾಗಿದೆ. ಯಾರಿಗೆ ಉದ್ಯೋಗದ ಅವಶ್ಯಕತೆ ಇದೆ ಎಂದು ತಿಳಿಯುವ ತಂತ್ರಾಂಶ ಇಲ್ಲದಿರುವುದು ಕೂಡ ಕೊರತೆಯಾಗಿದೆ.

ಅರಬರ ನಾಡಿನಲ್ಲಿ ಕನ್ನಡ ಡಿಂಡಿಮ ಮೊಳಗಿಸಿದ ಕನ್ನಡಿಗರು!

ಅಲ್ಲದೆ ಮಧ್ಯಮ ಮತ್ತು ಉನ್ನತ ಹುದ್ದೆಗಳಿಗೆ ಉದ್ಯೋಗಾಕಾಂಕ್ಷೆ ಇರುವ ಕನ್ನಡಿಗರ ಪಟ್ಟಿ ಪೋರ್ಟಲ್‌ನಲ್ಲಿ ನಿರಂತರವಾಗಿ ದೊರೆಯುವುದಾದರೆ, ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯಾಗಿ ತರಬೇತಿ, ಸ್ಟೈಪೆಂಡ್, ನೇಮಕಾತಿ ಮತ್ತು ಕಾರ್ಯಾಗಾರಗಳನ್ನು ನಡೆಸುವುದು ಕೈಗಾರಿಕೆಗಳ ವಿಷಯದಲ್ಲಿ ಕೂಡ ಉತ್ತಮವಾದ ಬೆಳವಣಿಗೆಯಾಗುತ್ತದೆ.

ಆದ್ದರಿಂದ ಕನ್ನಡಿಗರಿಗೆ ಅದರಲ್ಲೂ ಮುಖ್ಯವಾಗಿ ನಿರುದ್ಯೋಗಿ ಯುವಕ -ಯುವತಿಯರಿಗೆ ಕರುನಾಡಿಗರೆಂಬ ಪ್ರಮಾಣಪತ್ರ ಮತ್ತು ಅನನ್ಯ ಸಂಖ್ಯೆ ವಿತರಣೆ ಮತ್ತು ವೆಬ್ ಸೈಟಿನಲ್ಲಿ ನಿರುದ್ಯೋಗಿಗಳು ತಮ್ಮ ಅನನ್ಯ ಸಂಖ್ಯೆಯ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶ ನೀಡುವುದರ ಮೂಲಕ ಕನ್ನಡಿಗರಿಗೆ ತರಬೇತಿ ಮತ್ತು ಉದ್ಯೋಗ ಅವಕಾಶಗಳಲ್ಲಿ ಪ್ರಥಮ ಪ್ರಾಶಸ್ತ್ಯ ನೀಡುವಂತಹ ವಾತಾವರಣವನ್ನು ಕನ್ನಡಿಗರ ಮತ್ತು ಖಾಸಗಿ ಕಂಪನಿಗಳ ನಡುವೆ ಏರ್ಪಡಿಸಿ, ಘರ್ಷಣೆಗೆ ಅವಕಾಶವಿಲ್ಲದಂತಹ ರೀತಿಯಲ್ಲಿ ಈ ಆಶಯವನ್ನು ನೆರವೇರಿಸಬಹುದು.

Latest Videos
Follow Us:
Download App:
  • android
  • ios