ಅಮೆರಿಕದ ಗ್ರೀನ್ ಕಾರ್ಡ್ ರೀತಿ ಕನ್ನಡಿಗರಿಗೆಲ್ಲ ಕೊಡಿ ‘ಕನ್ನಡ ಕಾರ್ಡ್’! - ನಟಿ ಪೂಜಾ ಗಾಂಧಿ
೨೦೧೧ರ ಜನಗಣತಿಯ ಆಧಾರದ ಮೇಲೆ ಕೆಲವು ಅಂದಾಜುಗಳ ಪ್ರಕಾರ ೨೦೨೩ರಲ್ಲಿ ಕರ್ನಾಟಕ ಏಳು ಕೋಟಿ ಜನ ಸಂಖ್ಯೆಯನ್ನು ಹೊಂದಿದೆ. ಅದರಲ್ಲಿ ಶೇ.೬೬ರಷ್ಟು ಕನ್ನಡಿಗರಿದ್ದು, ಶೇ.೩೪ರಷ್ಟು ಅನ್ಯಭಾಷಿಕರಿದ್ದಾರೆಂದು ಅಂದಾಜಿಸಲಾಗಿದೆ. ಬೆಂಗಳೂರಿನ ಜನಸಂಖ್ಯೆ ೧.೧ ಕೋಟಿಯಾಗಿದ್ದು, ಇಲ್ಲಿ ಶೇ.೬೦ರಷ್ಟು ಅನ್ಯಭಾಷಿಕರಿದ್ದಾರೆಂಬ ಅನುಮಾನಗಳಿವೆ.
- ಪೂಜಾ ಗಾಂಧಿ, ಚಿತ್ರನಟಿ
೨೦೧೧ರ ಜನಗಣತಿಯ ಆಧಾರದ ಮೇಲೆ ಕೆಲವು ಅಂದಾಜುಗಳ ಪ್ರಕಾರ ೨೦೨೩ರಲ್ಲಿ ಕರ್ನಾಟಕ ಏಳು ಕೋಟಿ ಜನ ಸಂಖ್ಯೆಯನ್ನು ಹೊಂದಿದೆ. ಅದರಲ್ಲಿ ಶೇ.೬೬ರಷ್ಟು ಕನ್ನಡಿಗರಿದ್ದು, ಶೇ.೩೪ರಷ್ಟು ಅನ್ಯಭಾಷಿಕರಿದ್ದಾರೆಂದು ಅಂದಾಜಿಸಲಾಗಿದೆ. ಬೆಂಗಳೂರಿನ ಜನಸಂಖ್ಯೆ ೧.೧ ಕೋಟಿಯಾಗಿದ್ದು, ಇಲ್ಲಿ ಶೇ.೬೦ರಷ್ಟು ಅನ್ಯಭಾಷಿಕರಿದ್ದಾರೆಂಬ ಅನುಮಾನಗಳಿವೆ.
ಹೊರ ರಾಜ್ಯಗಳಲ್ಲಿ ಮತ್ತು ಹೊರದೇಶಗಳಲ್ಲಿರುವ ಕನ್ನಡಿಗರ ಗಣತಿಯಾಗಲಿ, ಅಂಕಿಅಂಶಗಳಾಗಲಿ ಲಭ್ಯವಿಲ್ಲ.
ಮೇಲಿನ ಅಂಕಿ ಅಂಶಗಳು ಅಂದಾಜುಗಳಾಗಿರುವುದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಥಮ ಆದ್ಯತೆಯಲ್ಲಿ ಕನ್ನಡಿಗರ, ಪರಭಾಷಿಕರಿದ್ದು ಕನ್ನಡದ ಮಾತು-ಓದು-ಬರಹ ಬಲ್ಲವರ ನಿಖರ ಗಣತಿಯನ್ನು ಮಾಡಬೇಕಾಗಿದೆ.
ಹಿರಿಯ ನಾಗರಿಕರ ಸಮಸ್ಯೆ ಆಲಿಸಲು ನಾಳೆಯಿಂದ ನಗರದ ‘ಮನೆ ಬಾಗಿಲಿಗೆ ಸರ್ಕಾರ’
ಈ ಯೋಜನೆಯ ಮೂಲೋದ್ದೇಶವೆಂದರೆ, ಕರ್ನಾಟಕ ರಾಜ್ಯದ ಮತ್ತು ವಿಶ್ವದೆಲ್ಲೆಡೆಯಿರುವ ಕನ್ನಡಿಗರನ್ನ, ಕನ್ನಡ ಬಲ್ಲವರನ್ನ ‘ದತ್ತಾಂಶದ ಅವಿಭಕ್ತ ಕನ್ನಡ ಕುಟುಂಬದಲ್ಲಿ’ ಒಂದಾಗಿಸುವುದು. ಪ್ರಪಂಚದಲ್ಲಿರುವ ಎಲ್ಲ ಕನ್ನಡಿಗರ ಮತ್ತು ಕನ್ನಡ ಬಲ್ಲವರ ಗಣತಿ ಪ್ರತಿ ದಿನ, ಪ್ರತಿ ತಿಂಗಳು ಮತ್ತು ಪ್ರತಿ ವರ್ಷ ನಿರಂತರವಾಗಿ ಮಾಡುತ್ತಾ, ಕನ್ನಡದ ಕಂಪನ್ನು ಮನೆ, ಮನೆಗಳಲ್ಲಿ ಹರಡುತ್ತಾ, ಬೆಳೆಸುತ್ತಾ ಕನ್ನಡ ಸಂಸ್ಕೃತಿಯನ್ನು ಜಗತ್ತಿನೆಲ್ಲಡೆ ಅವಿರತವಾಗಿ ವಿಸ್ತರಿಸುವುದು. ನಮ್ಮ ಭಾಷೆಯ ಬೆಳವಣಿಗೆಯ ಬಗ್ಗೆ ಸದಾ ನಿಖರ, ನಿರಂತರ ಮತ್ತು ವೈಜ್ಞಾನಿಕ ಮಾಹಿತಿ ಇರುವುದೆಂಬ ಹೆಮ್ಮೆ, ಪ್ರತಿ ಕನ್ನಡಿಗರನ್ನೂ ಸ್ವಯಂಪ್ರೇರಣೆಯಿಂದ, ಈ ಯೋಜನೆಯಲ್ಲಿ ಭಾಗಿಯಾಗಲು ಪ್ರೇರೇಪಿಸುತ್ತದೆ.
ಕನ್ನಡಿಗರ ಗಣತಿ: ಹೇಗೆ? ಏಕೆ?
ಜಗತ್ತಿನಾದ್ಯಂತ, ಭಾರತದಾದ್ಯಂತ ಹಾಗೂ ಕರ್ನಾಟಕದಲ್ಲಿರುವ ಕನ್ನಡಿಗರ ಗಣತಿ ನಡೆಸಿ, ಅವರನ್ನು ವಿಂಗಡಿಸಿ, ಅವರಿಗೊಂದು ಅನನ್ಯ ಸಂಖ್ಯೆ (ಯೂನಿಕ್ ಐಡಿ) ನೀಡಿ, ಬಳಿಕ ಮೂರು ರೀತಿಯ ಕಾರ್ಡ್‌ಗಳನ್ನು ನೀಡಬೇಕು. ಅವು:
1. ಹಳದಿ ಮಿಶ್ರಿತ ಕೆಂಪು ಕಾರ್ಡ್
2. ಹಳದಿ ಕಾರ್ಡ್
3. ಕೆಂಪು ಕಾರ್ಡ್
ಈ ಕಾರ್ಡುಗಳ ವಿತರಣೆಯ ರೂಪ-ರೇಷೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಬೇಕು. ಅದಕ್ಕೂ ಮುನ್ನ, ಕನ್ನಡಿಗರ ಮತ್ತು ಕನ್ನಡ ಬಲ್ಲವರ ಗಣತಿಗಾಗಿ, ಪೋರ್ಟಲ್ ಸ್ಥಾಪಿಸಬೇಕು.
ಕನ್ನಡಿಗರಿಗೆ ನೀಡುವ ಕಾರ್ಡುಗಳನ್ನು ಮತ್ತು ಅನನ್ಯ ಸಂಖ್ಯೆಗಳನ್ನು ಮೂರು ಪಂಗಡಗಳಾಗಿ ವಿಭಾಗಿಸಬೇಕು. ಅವರೆಲ್ಲರಿಗೂ ಕೆಂಪು-ಹಳದಿ ಮಿಶ್ರಿತ ವಿಭಿನ್ನ ಸಂಖ್ಯೆಗಳ ಸರಣಿಯಿರುವ ಕಾರ್ಡ್ ವಿತರಿಸಬೇಕು.
ಕನ್ನಡಿಗರ ಪೋರ್ಟಲ್ ಮೂಲಕ ಆನ್‌ಲೈನ್ ಮತ್ತು ಸರ್ಕಾರಿ ಶಾಲೆಗಳಲ್ಲಿ ಆಫ್‌ಲೈನ್ ಪರೀಕ್ಷೆಗಳನ್ನು ನಿಯಮಿತವಾಗಿ ನಡೆಯುವಂತೆ ವ್ಯವಸ್ಥೆ ಮಾಡಬೇಕು. ಸರ್ಕಾರದ ಯಾವುದಾದರೂ ವರದಿಗಳಲ್ಲಿ ಕನ್ನಡಿಗ ಮತ್ತು ಅನ್ಯಭಾಷಿಕರ ವಿಂಗಡಣೆ ಈಗಾಗಲೇ ಲಭ್ಯವಿದ್ದಲ್ಲಿ ಅದನ್ನು ಅನನ್ಯ ಸಂಖ್ಯೆಗಳನ್ನಾಗಿ ಪರಿವರ್ತಿಸಿ ಕನ್ನಡ ಕಾರ್ಡ್‌ಗಳನ್ನು ವಿತರಿಸಬಹುದು.
ಕೊಡವ ಮತ್ತು ತುಳು ಈ ನಾಡಿನ ಭಾಷೆಗಳಾಗಿದ್ದು, ಅದನ್ನು ಮಾತನಾಡಲು ಮತ್ತು ಓದು- ಬರಹ ಬಲ್ಲವರು ಕೂಡ ಕೆಂಪು- ಹಳದಿ ಕಾರ್ಡ್‌ಗೆ ಅರ್ಹರಾಗುವಂತೆ ನೋಡಿಕೊಳ್ಳಬೇಕು.
ಯಾರಿಗೆ ಯಾವ ಕಾರ್ಡ್? ಅದನ್ನು ನೀಡುವುದು ಹೇಗೆ?
ಕರ್ನಾಟಕದಲ್ಲೇ ವಾಸಿಸುವವರಿಗೆ ಕೆಂಪು ಮಿಶ್ರಿತ ಹಳದಿ ಕಾರ್ಡ್
೧. ೧೫ ವರ್ಷಗಳಿಂದ ಕರ್ನಾಟಕದಲ್ಲಿ ವಾಸವಿರುವುದರ ದಾಖಲೆ ಮತ್ತು ಹತ್ತನೇ ತರಗತಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ತೇರ್ಗಡೆಯಾಗಿರುವ ಅಂಕಪಟ್ಟಿಯನ್ನು ಪೋರ್ಟಲ್‌ಗೆ ಅಪ್ಲೋಡ್ ಮಾಡುವ ಮೂಲಕ ಕೆಂಪು ಮಿಶ್ರಿತ ಹಳದಿ ಕಾರ್ಡ್ ಮತ್ತು ಅನನ್ಯ ಸಂಖ್ಯೆಯನ್ನು ಪಡೆಯುವುದು.
೨. ೧೫ ವರ್ಷಗಳಿಂದ ಕರ್ನಾಟಕದಲ್ಲಿ ವಾಸವಿರುವುದರ ದಾಖಲೆ ಮತ್ತು ಕನ್ನಡವನ್ನು ಓದಲು-ಬರೆಯಲು ನಡೆಸುವ ಆನ್ಲೈನ್ ಅಥವಾ ಆಫ್ಲೈನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಮಾಣ ಪತ್ರವನ್ನು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಕೆಂಪು ಮಿಶ್ರಿತ ಹಳದಿ ಕಾರ್ಡ್ ಮತ್ತು ಅನನ್ಯ ಸಂಖ್ಯೆಯನ್ನು ಪಡೆಯುವುದು. (ಕನ್ನಡ ಭಾಷೆಯಲ್ಲಿ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿ ಇಲ್ಲದವರಿಗಾಗಿ).
೩. ೧೫ ವರ್ಷಗಳಿಂದ ಕರ್ನಾಟಕದಲ್ಲಿ ವಾಸವಿರುವುದರ ದಾಖಲೆ ಮತ್ತು ಕನ್ನಡದಲ್ಲಿ ಮಾತನಾಡುವ ಆನ್ಲೈನ್ ಅಥವಾ ಆಫ್ಲೈನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಮಾಣ ಪತ್ರವನ್ನು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಕೆಂಪು ಮಿಶ್ರಿತ ಹಳದಿ ಕಾರ್ಡ್ ಮತ್ತು ಅನನ್ಯ ಸಂಖ್ಯೆಯನ್ನು ಪಡೆಯುವುದು. (ಓದಲು-ಬರೆಯಲು ಬಾರದವರಿಗೆ).
ಕನ್ನಡ ಓದಲು, ಬರೆಯಲು ಬಲ್ಲವರಿಗೆ ಹಳದಿ ಕಾರ್ಡ್
ಇದನ್ನು ಪಡೆಯಲು ವಾಸಸ್ಥಳದ ದಾಖಲೆಯ ಅವಶ್ಯಕತೆ ಇರಬಾರದು. ಕರ್ನಾಟಕದಲ್ಲಿರುವ ಪರಭಾಷಿಕರು, ಪರರಾಜ್ಯದವರು ಮತ್ತು ಪರ ರಾಷ್ಟ್ರಗಳ ನಾಗರೀಕರು ಆನ್ಲೈನ್ ಅಥವಾ ಆಫ್ಲೈನ್ ಮುಖಾಂತರ ಕನ್ನಡವನ್ನು ಓದಲು ಬರೆಯಲು ಕಾಲಕಾಲಕ್ಕೆ ನಡೆಯುವ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಪ್ರಮಾಣ ಪತ್ರವನ್ನು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಹಳದಿ ಕಾರ್ಡ್ ಪಡೆಯಬಹುದು.
ಕೆಂಪು ಕಾರ್ಡ್
ಇದನ್ನು ಪಡೆಯುವುದಕ್ಕೂ ವಾಸಸ್ಥಳದ ದಾಖಲೆಯ ಅವಶ್ಯಕತೆ ಇರಬಾರದು. ಕರ್ನಾಟಕದಲ್ಲಿರುವ ಪರಭಾಷಿಕರು, ಪರರಾಜ್ಯದವರು ಮತ್ತು ಪರರಾಷ್ಟ್ರಗಳ ನಾಗರೀಕರು ಆನ್ಲೈನ್ ಅಥವಾ ಆಫ್ಲೈನ್ ಮುಖಾಂತರ ಕನ್ನಡವನ್ನು ಮಾತನಾಡುವ (Spoken Kannada) ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಮಾಣ ಪತ್ರವನ್ನು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಕೆಂಪು ಕಾರ್ಡ್ ಪಡೆಯಬಹುದು.
ಕನ್ನಡಿಗರ ಗಣತಿಯ ಪ್ರಯೋಜನಗಳು
ಇಷ್ಟು ಅಗಾಧ ಪ್ರಮಾಣದ ದತ್ತಾಂಶದ ಅತಿ ಮುಖ್ಯ ಪ್ರಯೋಜನಗಳೆಂದರೆ,
೧. ವಿವಿಧ ರೂಪ ಮತ್ತು ಪ್ರಕಾರವಾಗಿ ದತ್ತಾಂಶದ ಸಂಸ್ಕರಣೆ, ಒಳನೋಟ ಮತ್ತು ವಿಶ್ಲೇಷಣೆ.
೨. ಮಾದರಿಗಳು, ಪ್ರವೃತ್ತಿಗಳು ಮತ್ತು ಪರಸ್ಪರ ಸಂಬಂಧಗಳನ್ನು ಗುರುತಿಸಲು ಮತ್ತು ವೈಜ್ಞಾನಿಕವಾಗಿ ವ್ಯಾಖ್ಯಾನಿಸಲು ಸಹಕಾರಿ.
೩. ಕನ್ನಡಿಗರ ಮತ್ತು ಕನ್ನಡ ಬಲ್ಲವರ ನಿಖರ ಮತ್ತು ನಿರಂತರ ಗಣತಿ.
೪. ಕನ್ನಡಿಗನೆಂಬ ಅಥವಾ ಕನ್ನಡ ಕಲಿತವನೆಂಬ ಪ್ರಮಾಣ ಪತ್ರ ಹೊಂದಿದ ಹಿರಿಮೆ ಮತ್ತು ಗರಿಮೆ.
೫. ಪ್ರತೀ ತಾಲೂಕು, ಜಿಲ್ಲೆ, ಹೊರ ರಾಜ್ಯ, ಹೊರದೇಶಗಳಲ್ಲಿ ಕನ್ನಡದ ಇಂದಿನ ಸ್ಥಿತಿಯ ನಿಜ ದರ್ಶನ ಮತ್ತು ಕನ್ನಡವನ್ನು ಬೆಳೆಸಲು ಬೇಕಾದ ನಿಶ್ಚಿತ-ಉದ್ದೇಶ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಹಕಾರಿ.
೬. ವರ್ಷಾನುವರ್ಷ ಕನ್ನಡಿಗರು ಮತ್ತು ಕನ್ನಡ ಕಲಿತವರ ಸಂಖ್ಯೆಯಲ್ಲಾಗಿರುವ ಶೇಕಡಾವಾರು ಏರಿಕೆಯ ನಿಖರ ಮಾಹಿತಿ ಮತ್ತು ತುಲನೆ.
೭. ಕರ್ನಾಟಕ ಸರ್ಕಾರದ ಫಲಾನುಭವಿ ಅಥವಾ ಗ್ಯಾರಂಟಿ ಯೋಜನೆಗಳಲ್ಲಿ, ಕೆಲವೊಂದು ಯೋಜನೆಗಳು ಸ್ಥಳೀಯ ಕನ್ನಡಿಗರಿಗೆ ಮಾತ್ರ ಮೀಸಲಿರಿಸುವುದಕ್ಕೆ ಅನನ್ಯ ಸಂಖ್ಯೆಗಳ ಕಾರ್ಡ್ ಉಪಯುಕ್ತ.
೮. ಕರ್ನಾಟಕ ಸರ್ಕಾರ ಮತ್ತು ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಮೀಸಲಾತಿ ಜಾರಿ ಮಾಡಲು ಅನನ್ಯ ಸಂಖ್ಯೆಗಳ ಕಾರ್ಡುಗಳು ಸಹಕಾರಿ.
೯. ಪ್ರತಿ ಖಾಸಗಿ ಕಂಪನಿಯ ಹೊರಗಡೆ ಒಟ್ಟು ನೌಕರರ ಸಂಖ್ಯೆ ಮತ್ತು ಹಳದಿ ಮಿಶ್ರಿತ ಕೆಂಪು, ಹಳದಿ ಮತ್ತು ಕೆಂಪು ಕಾರ್ಡ್ ಹೊಂದಿದವರ ಅನುಪಾತವನ್ನು ಪ್ರಕಟಿಸುವಂತೆ ಸೂಚಿಸುವುದು. ಇದರಿಂದ ಮೀಸಲಾತಿಯ ಮೊದಲ ಹೆಜ್ಜೆಯಾಗಿ ಕನ್ನಡಿಗರು, ಕನ್ನಡ ಓದಲು ಬರೆಯಲು ಕಲಿತವರು ಮತ್ತು ಕನ್ನಡ ಮಾತನಾಡಲು ಕಲಿತವರು ಯಾವ ಅನುಪಾತದಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಸಿಗುತ್ತದೆ.
೧೦. ಕನ್ನಡ ಕಾರ್ಡ್‌ಗಳನ್ನು ಹೊಂದಿದ್ದರೆ ವ್ಯಾಪಾರ ವಹಿವಾಟಿನಲ್ಲಿ ಅನುಕೂಲವಾಗುತ್ತದೆ ಎಂಬ ನಿರೀಕ್ಷೆಯನ್ನು ಹುಟ್ಟು ಹಾಕುವುದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸುವುದು.
೧೧. ಹೊರರಾಜ್ಯ, ಹೊರ ರಾಷ್ಟ್ರಗಳಲ್ಲಿ ಬೇರೂರಿರುವ ಕನ್ನಡಿಗರಿಗೆ, ಕನ್ನಡ ಮತ್ತು ಕರ್ನಾಟಕದ ಜೊತೆಗಿನ ಸಂಬಂಧದ ಕೊಂಡಿಯಾಗಿ ಇದು ಕೆಲಸ ಮಾಡುತ್ತದೆ.
೧೨. ಪರಭಾಷಿಕ ಮತ್ತು ಪರರಾಷ್ಟ್ರದವರಿಗೆ ಏಷ್ಯಾದ ಸಿಲಿಕಾನ್ ವ್ಯಾಲಿ ಬೆಂಗಳೂರು ಮತ್ತು ಕರ್ನಾಟಕದ ಜೊತೆ ಎಂದೂ ಕಳಚದ ಸಂಬಂಧವನ್ನು ಹಳದಿ ಕೆಂಪು ಕಾರ್ಡ್ ನೀಡುತ್ತದೆ.
೧೩. ಕೆಂಪು ಮತ್ತು ಹಳದಿ ಕಾರ್ಡುಗಳನ್ನು ಹೊಂದಲು ಅಭಿಮಾನ ಬರುವಂತೆ ಹೆಮ್ಮೆಯ ಜಾಹೀರಾತುಗಳ ಪ್ರಚಾರ ಕಾರ್ಯಕ್ರಮಗಳನ್ನು ಸಂಘಟಿಸಬೇಕು.
೧೪. ಅಮೆರಿಕಾದ ಹಸಿರು ಕಾರ್ಡಿಗೆ ಸರಿಸಮಾನವಾದ ಹೆಮ್ಮೆ, ಘನತೆ ಮತ್ತು ಮಾನ್ಯತೆ ಕೆಂಪು ಹಳದಿ ಕಾರ್ಡ್ ಹೊಂದಿದವರಿಗೆ ಇದೆ ಎಂಬ ಕಂಪನ ಸೃಷ್ಟಿಸಬೇಕು.
ಕನ್ನಡ ಕಾರ್ಡ್ ಏಕೆ ಬೇಕು? ಒಂದು ಪರ-ವಿರೋಧ ಚರ್ಚೆ
ಈ ಅನನ್ಯ ಸಂಖ್ಯೆ ಮತ್ತು ಕಾರ್ಡ್‌ನ ಯೋಜನೆ ನನಗೆ ಗೌರವ ಮತ್ತು ಹೆಮ್ಮೆಯ ಸಂಕೇತವಾಗಿ ಕಂಡಿತ್ತು. ಕನ್ನಡವನ್ನು ಗಡಿಭಾಗಗಳಲ್ಲಿ, ಬೆಂಗಳೂರಿನಲ್ಲಿ ಮತ್ತು ಹೊರ ರಾಜ್ಯಗಳಲ್ಲಿ ಬೆಳೆಸಲು ಉಪಯೋಗಿಸಬಹುದೆಂಬ ಆಲೋಚನೆ ಇತ್ತು.
ಈ ಯೋಜನೆಯನ್ನು ಕನ್ನಡಕ್ಕಾಗಿ ದುಡಿಯುತ್ತಿರುವ ಮಹನೀಯರ ಜೊತೆ ಚರ್ಚಿಸಿದಾಗ ಅವರ ಸಲಹೆ ಸೂಚನೆ ಮತ್ತು ಪ್ರಶ್ನೆಗಳು ನಿಜಕ್ಕೂ ಉಪಯುಕ್ತವೆಂದು ಅನಿಸಿತು. ಬರಗೂರು ರಾಮಚಂದ್ರಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ನಾಡೋಜ ಮಹೇಶ್ ಜೋಷಿ, ಬನವಾಸಿ ಬಳಗದ ಆನಂದ್, ಗ್ಯಾನ್ ಕಲ್ಲಹಳ್ಳಿ, ಕಿರಣ್ ಘೋರ್ಪಡೆ ಮತ್ತು ಪಿ.ಎಚ್.ವಿಶ್ವನಾಥ್ ಅವರ ಚಿಂತನೆಗಳು ಕೂಡ ಇಲ್ಲಿ ಸೇರ್ಪಡೆಯಾಗಿವೆ. ಆ ಎಲ್ಲಾ ಚರ್ಚೆಗಳಲ್ಲಿ ಬಂದ ಪರ ವಿರೋಧ ಮುಖ್ಯಾಂಶಗಳನ್ನು ಇಲ್ಲಿ ನೀಡಲಾಗಿದೆ.
೧. ವಿರೋಧ: ಇದೊಂದು ದುಬಾರಿ ಯೋಜನೆ. ಈ ಯೋಜನೆ ಕಾರ್ಯಗತಗೊಳಿಸಲು ೧೦೦ರಿಂದ ೨೫೦ ಕೋಟಿ ವೆಚ್ಚವಾಗಬಹುದು. ಇಷ್ಟೊಂದು ದುಂದು ವೆಚ್ಚದ ಯೋಜನೆಯ ಅವಶ್ಯಕತೆಯಿಲ್ಲ.
ಪರ: ಕನ್ನಡ ಭಾಷೆಯ ಅಭಿವೃದ್ಧಿಗೆ ಮಾಡುವ ಖರ್ಚು ಯಾವುದೇ ಕಾರಣಕ್ಕೂ ದುಂದು ವೆಚ್ಚವೆಂದು ಪರಿಗಣಿಸಬಾರದು. ಈ ಯೋಜನೆಗೆ ೫೦೦ ಕೋಟಿಯಷ್ಟು ಖರ್ಚಾದರೂ ೫೦ ಲಕ್ಷದಷ್ಟು ಜನರನ್ನು ಕನ್ನಡ ಕಲಿತವರನ್ನಾಗಿ ಮಾಡಿದರೆ ಅದು ಇತಿಹಾಸದಲ್ಲಿ ಕನ್ನಡವನ್ನು ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ತಲುಪಿಸಿದ ಮಹತ್ತರ ಯೋಜನೆಯಾಗಲಿದೆ. ಅಲ್ಲದೆ ಪ್ರಥಮ ವರ್ಷದಲ್ಲಿ ವೆಚ್ಚ ಹೆಚ್ಚಾದರೂ, ನಂತರದ ವರ್ಷಗಳಲ್ಲಿ ಅಷ್ಟೇನೂ ಹೆಚ್ಚಿನ ವೆಚ್ಚದ ಅವಶ್ಯಕತೆ ಇರುವುದಿಲ್ಲ.
೨. ವಿರೋಧ: ಸರ್ಕಾರಗಳ ಬಳಿ ಈಗಾಗಲೇ ಹಲವಾರು ರೀತಿಯ ಗಣತಿಗಳಿವೆ. ಮತ್ತೊಂದು ಗಣತಿ ಮತ್ತು ಅನನ್ಯ ಸಂಖ್ಯೆಯ ಅವಶ್ಯಕತೆಯಿಲ್ಲ.
ಪರ: ಹಲವಾರು ರೀತಿಯ ಗಣತಿಗಳು ಇವೆಯಾದರೂ, ಕನ್ನಡಿಗರ, ಕನ್ನಡ ಓದಲು-ಬರೆಯಲು ಬಲ್ಲವರ, ಕನ್ನಡ ಮಾತನಾಡಲು ಬಲ್ಲವರ ಗಣತಿಯಿಲ್ಲ. ಇರುವ ಗಣತಿಗೆ ಅನನ್ಯ ಸಂಖ್ಯೆಗಳ ಕೋಡಿಂಗ್ ಇಲ್ಲದಿರುವುದರಿಂದ ಅದನ್ನು ಸರ್ಕಾರದ ಶೈಕ್ಷಣಿಕ ಮತ್ತು ಫಲಾನುಭವಿ ಯೋಜನೆಗಳಿಗೆ ಜೋಡಿಸಲು ಸಾಧ್ಯವಿಲ್ಲ. ಆದ್ದರಿಂದ ಅನನ್ಯ ಸಂಖ್ಯೆ ಇರುವ ಗಣತಿ ಅತ್ಯವಶ್ಯ.
೩. ವಿರೋಧ: ಈ ಯೋಜನೆ ಭಾರತ ಸಂವಿಧಾನದ ಅನುಚ್ಛೇದ ನಂ.೧೫ ಮತ್ತು ನಂ.೧೬ರ ವಿರುದ್ಧವಾಗಿದೆ. ಸಂವಿಧಾನದ ಅನುಚ್ಛೇದ ನಂ.೧೫ರಲ್ಲಿ ರಾಜ್ಯವು ಯಾವುದೇ ನಾಗರೀಕರ ವಿರುದ್ಧ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳವನ್ನು ಆಧರಿಸಿ ತಾರತಮ್ಯ ಮಾಡಬಾರದು ಎಂದು ಹೇಳಿದೆ. ಸಂವಿಧಾನದ ಅನುಚ್ಛೇದ ನಂ.೧೬ರಲ್ಲಿ, ನೇಮಕಾತಿ ಅಥವಾ ಉದ್ಯೋಗಾವಕಾಶಗಳಲ್ಲಿ ಸಮಾನ ಅವಕಾಶ ನೀಡಬೇಕು ಎಂದು ಹೇಳಿದೆ. ಇದು ನಾಜಿಗಳ, ಜೂಯಿಶ್ ಬ್ಯಾಡ್ಜ್ ರೀತಿಯ ಯೋಜನೆ. (ನಾಜಿಗಳು ೧೯೩೯ರಿಂದ ೧೯೪೫ ರವರೆಗೆ ಯಹೂದಿಗಳಿಗೆ ಧರಿಸಲು ಆದೇಶಿಸಿದ ಬ್ಯಾಡ್ಜ್). ಈ ಕಾರ್ಡುಗಳು ತಾರತಮ್ಯ ಸೃಷ್ಟಿಸುತ್ತವೆ. ಅದರಲ್ಲೂ, ಮೂರು ವಿಭಿನ್ನ ರೀತಿಯ ಕಾರ್ಡಗಳು ತಾರತಮ್ಯದ ಪರಾಕಾಷ್ಠೆಯಾಗುತ್ತದೆ.
ಪರ: ಸಂವಿಧಾನದ ಅನುಚ್ಛೇದ ನಂ.೧೫ ಮತ್ತು ನಂ.೧೬ರಲ್ಲಿ ಭಾಷೆ ಸಂಬಂಧಿತ ಉದ್ಯೋಗದಲ್ಲಿ ಮೀಸಲಾತಿ ಅಥವಾ ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ತಾರತಮ್ಯವೆಂದು ಪರಿಗಣಿಸಿಲ್ಲ. ನಾಡು, ನುಡಿ, ನೆಲ, ಜಲದ ಜೊತೆ ಒಂದಾದ ನಾಗರೀಕರಿಗೆ ಕೆಲವಾದರೂ ಶೈಕ್ಷಣಿಕ ಮತ್ತು ಆರ್ಥಿಕ ಯೋಜನೆಗಳನ್ನು ರೂಪಿಸುವುದರಿಂದ, ಹೊರಗಿನಿಂದ ಬರುತ್ತಿರುವವರ ಮಧ್ಯೆ ಸಾಮಾಜಿಕ ಮತ್ತು ಔದ್ಯೋಗಿಕವಾಗಿ ಅರ್ಹತೆ ಉಳ್ಳವರಾಗಲು ಈ ಯೋಜನೆ ಮಹತ್ವದ ಮೈಲಿಗಲ್ಲಾಗಲಿದೆ. ಪ್ರತಿ ವರ್ಷವೂ ಪರಭಾಷಿಕರ, ಪರ ರಾಜ್ಯ-ರಾಷ್ಟ್ರಗಳ ನಾಗರೀಕರು ಕರ್ನಾಟಕಕ್ಕೆ ಅವಕಾಶಗಳ ಬೆನ್ನು ಹತ್ತಿ ಬರುತ್ತಿರುವುದು ಹೆಚ್ಚಾಗುತ್ತಿದೆ. ಅವರ ಬಗ್ಗೆ ದ್ವೇಷ, ಅಸೂಯೆ ಪಡುವುದಕ್ಕಿಂತ, ಕನ್ನಡಿಗರನ್ನು ಹೆಮ್ಮೆ, ಗೌರವ ಮತ್ತು ಅರ್ಹತೆ ಆಧಾರದಲ್ಲಿ ಸಜ್ಜುಗೊಳಿಸಲು ಈ ಯೋಜನೆ ಉಪಯುಕ್ತವಾಗಲಿದೆ.
೪. ವಿರೋಧ: ಈ ಕಾರ್ಡ್‌ನಿಂದ ಪ್ರತಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರ ಗಣತಿ ಅತ್ಯಂತ ಸುಲಭವಾಗುತ್ತದೆ ಮತ್ತು ಇದರಿಂದ ಕರ್ನಾಟಕಕ್ಕೆ ಬರುವ ಹೊಸ ಕಂಪನಿಗಳು ಮತ್ತು ಈಗಾಗಲೇ ಇರುವ ಕಂಪನಿಗಳು ಅರ್ಹತೆ ಇರುವ ಉದ್ಯೋಗಿಗಳನ್ನು ನೇಮಿಸಲು ತೊಡಕಾಗುತ್ತದೆ. ಇದರಿಂದ ವಿದೇಶಿ ಕಂಪನಿಗಳು ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುವ ಸಾಧ್ಯತೆಗಳೇ ಹೆಚ್ಚು. ಉದ್ಯೋಗದಲ್ಲಿ ಮೀಸಲಾತಿಯ ವಿಷಯಗಳು ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಈ ಯೋಜನೆಯ ಕೋರ್ಟ್‌ಗಳಲ್ಲಿ ನೆನೆಗುದಿಗೆ ಬೀಳಲಿದೆ.
ಪರ: ಉದ್ಯೋಗ ಮೀಸಲಾತಿಯ ವಿಷಯವನ್ನು ಈ ಯೋಜನೆಯಿಂದ ಹೊರಗಿಡಬೇಕು. ಆಗ ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗ ಮೀಸಲಾತಿ ಮತ್ತು ಅರ್ಹತೆಯ ವಿಷಯದಲ್ಲಿ ಕರ್ನಾಟಕವನ್ನು ನಿರ್ಲಕ್ಷಿಸುವ ಅಗತ್ಯವಿರುವುದಿಲ್ಲ. ಶೈಕ್ಷಣಿಕ ಮತ್ತು ಆರ್ಥಿಕ ಸವಲತ್ತುಗಳಿಗೆ ಮಾತ್ರ ಈ ಯೋಜನೆಯನ್ನು ಮೀಸಲಿರಿಸಿದರೆ ಕಾನೂನಿನ ಯಾವ ತೊಡಕು ಉದ್ಭವಿಸುವುದಿಲ್ಲ ಮತ್ತು ಈ ಯೋಜನೆ ಕೋರ್ಟ್‌ನಲ್ಲಿ ನೆನೆಗುದಿಗೆ ಬೀಳುವುದಿಲ್ಲ.
೫. ವಿರೋಧ: ಆಧಾರ್, ಪ್ಯಾನ್ ಹೀಗೆ ಹಲವಾರು ರೀತಿಯಲ್ಲಿ ಸರ್ಕಾರಗಳು ನಾಗರೀಕರ ಖಾಸಗಿ ವಿಷಯಗಳನ್ನು ಸಂಗ್ರಹಿಸುತ್ತಿದೆ. ಈ ಕಾರ್ಡ್ ಅವುಗಳ ಜೊತೆ ಮತ್ತೊಂದು ರೀತಿಯ ನಾಗರೀಕರ ಖಾಸಗಿ ಜೀವನದ ಮೇಲಿನ ದೌರ್ಜನ್ಯ ಎನ್ನಬಹುದು.
ಪರ: ಅನನ್ಯ ಸಂಖ್ಯೆಯ ಕನ್ನಡ ಕಾರ್ಡ್ ಕಡ್ಡಾಯ ಅಥವಾ ಬಲವಂತದ ಕಾರ್ಡ್ ಆಗಿರುವುದಿಲ್ಲ. ಅದು ಗೌರವದ, ಹೆಮ್ಮೆಯ, ಭಾಷೆಯ ಬಗೆಗಿನ ಪ್ರೀತಿಯ ಕಾರ್ಡ್ ಆಗಿರುತ್ತದೆ. ಆದ್ದರಿಂದ ಗೌರವ, ಹೆಮ್ಮೆ, ಶೈಕ್ಷಣಿಕ ಸವಲತ್ತು ಮತ್ತು ಫಲಾನುಭವಿ ಯೋಜನೆಗಳಿಗಾಗಿ, ಐಚ್ಚಿಕವಾಗಿ ಪಡೆಯುವ ಕಾರ್ಡ್ ಇದಾಗಿರುತ್ತದೆ. ಸರ್ಕಾರದ ಕೆಲವು ಬಡತನ ನಿರ್ಮೂಲನ ಯೋಜನೆಗಳು, ಲಾಭಾರ್ಥಿ ಅಥವಾ ಗ್ಯಾರೆಂಟಿ ಯೋಜನೆಗಳು ಕನ್ನಡಿಗರನ್ನು, ಕನ್ನಡ ಬಲ್ಲವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತಲು ಈ ಅನನ್ಯ ಸಂಖ್ಯೆ ಹೊಂದಿರುವ ಕಾರ್ಡ್‌ಗಳು ಬಹಳ ಸಹಕಾರಿ.
೬. ವಿರೋಧ: ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ಈ ಕಾರ್ಡನ್ನು ಹೊಂದಿರುವವರ ಮತ್ತು ಹೊಂದಿರದವರ ಮಧ್ಯೆ ಕಂದಕ ಸೃಷ್ಟಿಸಿ ನಾಗರೀಕರ ಸಾಮಾಜಿಕ, ಮಾನಸಿಕ ಮತ್ತು ಆರ್ಥಿಕ ಶೋಷಣೆ ಮಾಡಲು ಅವಕಾಶ ನೀಡುತ್ತದೆ.
ವಿವಾಹ ನಂತರ ಹನಿಮೂನ್‌ಗೆ ವಿದೇಶಕ್ಕೆ ಹಾರುವ ನಟನಟಿಯರ ಮಧ್ಯೆ; ಕನ್ನಡದ ಕಂಪು ಅರಸಿ ಹೊರಟ ಮಳೆ ಹುಡುಗಿ ಪೂಜಾ ಗಾಂಧಿ!
ಪರ: ಕೆಲವು ವ್ಯಕ್ತಿಗಳು, ಶಕ್ತಿಗಳು, ಸಂಸ್ಥೆಗಳು ಈ ಕಾರ್ಡ್ ಹೊಂದದವರನ್ನು ಬೆದರಿಸುವ, ಹೆದರಿಸುವ, ತಾರತಮ್ಯದಿಂದ ನೋಡಬಹುದಾದ ಸಾಧ್ಯತೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಸರ್ಕಾರ ತನ್ನ ಯೋಜನೆಗಳಿಗೆ ಮಾತ್ರವೇ ಇದನ್ನು ಬಳಸುವಂತೆ ನಿಗಾವಹಿಸಬೇಕು. ಯಾವುದೇ ಖಾಸಗಿ ಕಂಪನಿ, ವ್ಯಕ್ತಿ ಅಥವಾ ಸಂಸ್ಥೆಗಳು ಕಾರ್ಡ್ ಇಲ್ಲದವರ ವಿರುದ್ಧ ತಾರತಮ್ಯ ಮಾಡಿದರೆ ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವಂತೆ ನೀತಿ ನಿರೂಪಿಸಬೇಕಾಗಿದೆ.
ಸ್ಥಳೀಯರಿಗೆ ಉದ್ಯೋಗದಲ್ಲಿ ಹಕ್ಕು ಎಲ್ಲಾ ರಾಜ್ಯಗಳೂ ಒಪ್ಪಿರುವ ತತ್ವವಾಗಿರುವುದರಿಂದ, ಸರೋಜಿನಿ ಮಹಿಷಿಯ ವರದಿಯಲ್ಲಿನ ಉದ್ಯೋಗದಲ್ಲಿನ ಮೀಸಲಾತಿ ಅನುಷ್ಠಾನಗೊಳಿಸಲು ಮತ್ತು ಅದರ ಅನುಷ್ಠಾನದ ಫಲಿತಾಂಶವನ್ನು ಅಳೆಯಲು ಕನ್ನಡ ಕಾರ್ಡ್ ಅತ್ಯಂತ ಸರಳ ಮತ್ತು ಬಲಿಷ್ಠ ಸಾಧನವಾಗಲಿದೆ.
ಅನನ್ಯ ಸಂಖ್ಯೆಯ ಕನ್ನಡ ಕಾರ್ಡ್ ಪರಭಾಷಿಕರಿಗೆ (ಪ್ರತಿಷ್ಠೆಯ ನೆಲೆಯಲ್ಲಿ ಮತ್ತು ಸರ್ಕಾರದ ಯೋಜನೆಗಳಲ್ಲಿ ಅವಕಾಶ ಎಂಬ ಎರಡು ಸ್ತರಗಳಲ್ಲಿ) ಕನ್ನಡವನ್ನು ಕಲಿಯಲು ಮತ್ತು ಬಳಸಲು ಖಂಡಿತವಾಗಿಯೂ ಉತ್ತೇಜನ ನೀಡುತ್ತದೆ.
ಈ ಯೋಜನೆಯಿಂದ ಪರಭಾಷಿಕರೂ ಕೂಡ ಕನ್ನಡ ಕಲಿತು ಕನ್ನಡಿಗರಾಗಲು ಮತ್ತು ಕನ್ನಡತನದೊಂದಿಗೆ ಬೆರೆಯಲು ಸಹಕಾರಿಯಾಗುತ್ತದೆ.
ಈ ಯೋಜನೆಯನ್ನು ಗಡಿಭಾಗದ ತಾಲೂಕುಗಳಲ್ಲಿ ಪ್ರಥಮವಾಗಿ ಮತ್ತು ಬೆಂಗಳೂರಿನಲ್ಲಿ ನಂತರ ಕಾರ್ಯರೂಪಕ್ಕೆ ತಂದು ಅದರ ಯಶಸ್ಸಿನ ಆಧಾರದ ಮೇಲೆ ಬೇರೆ ಪ್ರದೇಶಗಳಿಗೆ ವಿಸ್ತರಿಸಬಹುದು.