ವಾತಾಪಿ ಮೇಲೆ ಸಿದ್ದರಾಮಯ್ಯ ಪ್ರೀತಿ ಸಚಿವರುಗಳಿಗೂ ಈಗ ಬಾದಾಮಿ ಫೆವರೆಟ್| ಪ್ರವಾಸೋದ್ಯಮ ಕಚೇರಿನ್ನೇ ಬಾಗಲಕೋಟೆಯಿಂದ ಬಾದಾಮಿಗೆ ಶಿಫ್ಟ್ ಮಾಡಿಸಿದ ಸಿದ್ದರಾಮಯ್ಯ| ಸಿದ್ದರಾಮಯ್ಯ ಮಾದರಿ ಕ್ಷೇತ್ರದ ಕನಸಿಗೆ ನಮ್ಮ ಸಾಥ್ ಎಂದ ಸಚಿವ ಯು.ಟಿ.ಖಾದರ್| ಬಾದಾಮಿಯ ಅಂಜುಮನ್ ಸಂಸ್ಥೆಗೆ 50 ಲಕ್ಷ ವೈಯಕ್ತಿಕವಾಗಿ ನೀಡಲು ಮುಂದಾದ ಸಚಿವ ಜಮೀರ ಅಹ್ಮದ್
ಮಲ್ಲಿಕಾರ್ಜುನ್ ಹೊಸಮನಿ
ಬಾಗಲಕೋಟೆ(ಜ.06): ರಾಜ್ಯದಲ್ಲಿ ಉತ್ತರ ಕರ್ನಾಟಕ ಮೇಲಿಂದ ಮೇಲೆ ನಿರ್ಲಕ್ಷ್ಯಕ್ಕೊಳಗಾಗಿದೆ ಅನ್ನೋ ಮಾತು ಕೇಳಿ ಬರುತ್ತಲೇ ಇತ್ತು. ಇದಕ್ಕೆ ಐತಿಹಾಸಿಕ ಬಾದಾಮಿ ಸಹ ಹೊರತಾಗಿರಲಿಲ್ಲ.
ಆದ್ರೆ ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ಎನಿಸಿಕೊಂಡು ಇನ್ನೇನು ತಮ್ಮ ಸ್ವಕ್ಷೇತ್ರದಲ್ಲಿ ಸೋಲ್ತಾರೆ ಎಂದಾಗ ಉತ್ತರ ಕರ್ನಾಟಕದ ಬಾದಾಮಿ ಮಾಜಿ ಸಿಎಂ ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ ನೀಡಿತ್ತು.
ಇದರ ಋಣ ತೀರಿಸೋ ಕೆಲಸ ಮಾಡ್ತೀನಿ ಎಂದಿರೋ ಸಿದ್ದರಾಮಯ್ಯಗೆ ಇದೀಗ ಸಚಿವರು ಕೂಡ ಸಹ ಸಾಥ್ ನೀಡಿದ್ದಾರೆ. ಬಾದಾಮಿ ಮತಕ್ಷೇತ್ರ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ದೇಶ ವಿದೇಶಿಗರು ಭೇಟಿ ನೀಡುತ್ತಿರೋ ಬಾದಾಮಿ ತನ್ನ ಮಡಿಲಲ್ಲಿ ಜಗದ್ವಿಖ್ಯಾತ ಶಿಲ್ಪಕಲಾ ಹೊಂದಿದ ದೇವಾಲಯಗಳನ್ನ ಹೊಂದಿದ್ರೂ ಅಭಿವೃದ್ಧಿ ಕಂಡಿರಲಿಲ್ಲ.
ಆದ್ರೆ ಇದೀಗ ಈ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಗೆಲ್ಲಿಸಿಕೊಟ್ಟಿದ್ದೇ ತಡ ಬಾದಾಮಿ ಮೇಲೆ ಸಿದ್ದರಾಮಯ್ಯಗೆ ಇನ್ನಿಲ್ಲದ ಪ್ರೀತಿ ಶುರುವಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತಂತಾಗಿದೆ.
ಹೌದು,ಈ ಮದ್ಯೆ ರಾಜಕೀಯ ಚಾಣಾಕ್ಷ ನಡೆ ಚತುರನಾಗಿರೋ ಸಿದ್ದರಾಮಯ್ಯನವರ ಬೆಂಬಲಿಗರಾಗಿರೋ ಸಚಿವರು ಸಹ ಇದೀಗ ಅವರ ಕ್ಷೇತ್ರ ಅಭಿವೃದ್ಧಿಗೆ ಪಣ ತೊಟ್ಟು ಸ್ವಾಮಿನಿಷ್ಠೆ ಮೆರೆಯಲು ಮುಂದಾಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸ್ವಕ್ಷೇತ್ರ ಬಾದಾಮಿಗೆ ಬಂದಾಗಲೊಮ್ಮೆ ಸಚಿವರುಗಳು ಭೇಟಿ ನೀಡೋದು ಕಾಮನ್ ಆಗಿದೆ. ಅದರಲ್ಲೂ ಈ ಬಾರಿ ನಾಲ್ಕೈದು ಜನ ಸಚಿವರನ್ನ ಕರೆಯಿಸಿ ಸಭೆ ಮಾಡಿರೋದು ಇದಕ್ಕೆ ಸಾಕ್ಷಿ.
ಮೊದಲ ಹಂತವಾಗಿ ಈಗಾಗಲೇ ಬಾದಾಮಿ, ಕೆರೂರ ಸೇರಿದಂತೆ ಕೆಲವೆಡೆ ಆಲಮಟ್ಟಿ ಹಿನ್ನೀರಿನಿಂದ ನೀರು ಒದಗಿಸೋ 217ಕೋಟಿ ರೂಪಾಯಿ ಯೋಜನೆಗೆ ಸಿಎಂ ಕುಮಾರಸ್ವಾಮಿಯಿಂದಲೇ ಅಸ್ತು ಎನಿಸಿದ್ದರೆ, ಇತ್ತ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಚಿವ ಸಾ.ರಾ.ಮಹೇಶರನ್ನ ಕರೆಯಿಸಿ ಜಿಲ್ಲೆಯ ಐಹೊಳೆ , ಬಾದಾಮಿ, ಪಟ್ಟದಕಲ್ಲು ಗಳಿಗೆ ಭೇಟಿ ನೀಡಿ ಮೊದಲ ಹಂತವಾಗಿ ಯಾವ ಯಾವ ಅಭಿವೃದ್ಧಿ ಕಾಯ೯ ಕೈಗೊಳ್ಳಬೇಕೆನ್ನೋ ಚಿಂತನೆಯಲ್ಲಿದ್ದಾರೆ.
"
ಇದಕ್ಕಾಗಿಯೇ ಸಭೆ ನಡೆಸಿರೋ ಸಚಿವ ಸಾ.ರಾ.ಮಹೇಶ ಬಾದಾಮಿ, ಐಹೊಳೆ, ಪಟ್ಟದಕಲ್ಲು ಅಭಿವೃದ್ಧಿಗೆ 500 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ರೂಪಿಸಲು ಮುಂದಾಗಿದ್ದಾರೆ. ಸಾಲದ್ದಕ್ಕೆ ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿದ್ದ ಪ್ರವಾಸೋದ್ಯಮ ಇಲಾಖೆ ಉಪನಿದೆ೯ಶಕರ ಕಚೇರಿಯನ್ನೇ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿಗೆ ಶಿಫ್ಟ್ ಮಾಡಲು ಸಚಿವ ಸಾ.ರಾ.ಮಹೇಶ ತೀಮಾ೯ನಿಸಿದ್ದಾರೆ.
ಇನ್ನು ಬಾದಾಮಿ ನಗರ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಈ ಬಾರಿ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಗೆ ಬುಲಾವ್ ನೀಡಿದ್ರು. ಸಚಿವ ಖಾದರ್ ಬಾದಾಮಿಯಲ್ಲೇ ಸಿದ್ದರಾಮಯ್ಯ ನೇತೃತ್ವದಲ್ಲಿ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಬಾದಾಮಿ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡೋಕೆ ಪ್ಲ್ಯಾನ್ ರೂಪಿಸಿದ್ದಾರೆ.
ಈ ಮದ್ಯೆ ಸಿದ್ದರಾಮಯ್ಯನವರು ಕಂಡ ಬಾದಾಮಿ ಮಾದರಿ ಕ್ಷೇತ್ರದ ಕನಸನ್ನ ನನಸು ಮಾಡೋದೆ ನಮ್ಮ ಗುರಿ ಅಂತ ಹೇಳಿಕೆ ನೀಡುವ ಮೂಲಕ ಸಚಿವರುಗಳ ಪ್ರೀತಿ ಬಾದಾಮಿ ಮೇಲೆ ಹೆಚ್ಚಾಗಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ.
ಇತ್ತ ಸಿದ್ದರಾಮಯ್ಯ ಕರೆ ಮೇರೆಗೆ ಈ ಬಾರಿ ಬಾದಾಮಿಗೆ ಬಂದ ಮತ್ತೊಬ್ಬ ಸಚಿವ ಜಮೀರ ಅಹ್ಮದ್. ಸಿದ್ದರಾಮಯ್ಯ ಬಾದಾಮಿಗೆ ಬಂದ ದಿನವೇ ರಾತ್ರಿ ಬಾದಾಮಿಗೆ ಆಗಮಿಸಿದ್ದ ಸಚಿವ ಜಮೀರ ಅಹ್ಮದ್, ಸಿದ್ದು ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ಆಗಬಹುದಾದ ಎಲ್ಲ ಕೆಲಸ ಮಾಡಿಸಿ ಅಲ್ಪಸಂಖ್ಯಾತರ ಮನತಟ್ಟಲು ಮುಂದಾಗಿದ್ದಾರೆ.
ವಿಶೇಷ ಅಂದ್ರೆ ಕಳೆದ ಕೆಲವು ವಷ೯ಗಳಿಂದ ಬಾದಾಮಿಯ ಅಂಜುಮನ್ ಸಂಸ್ಥೆಯು ಶಿಕ್ಷಣಕ್ಕಾಗಿ ಸಾಲ ಮಾಡಿಕೊಂಡು ಕಟ್ಟಡ ಕಟ್ಟಿಸಿಕೊಂಡಿದ್ದು, ಅದಕ್ಕೆ ಹೊರೆಯಾಗಬಾರದೆನ್ನುವ ಉದ್ದೇಶದಿಂದಲೇ ಸಚಿವ ಜಮೀರ ಅಹ್ಮದ್ ತಮ್ಮ ಸ್ವಂತ ಹಣ ಅಂದ್ರೆ 50 ಲಕ್ಷ ರೂಪಾಯಿ ಅಂಜುಮನ್ ಗೆ ನೀಡಲು ಮುಂದಾಗಿದ್ದಾರೆ.
ಸಾಲದ್ದಕ್ಕೆ ಇಷ್ಟರಲ್ಲೇ ಬಾದಾಮಿ ಮತಕ್ಷೇತ್ರದ ಅಲ್ಪಸಂಖ್ಯಾತರನ್ನ ಒಂದೇ ವೇದಿಕೆಯಡಿ ಸೇರಿಸಿ ೫೦ ಲಕ್ಷ ರೂಪಾಯಿ ಹಣವನ್ನು ಅಂಜುಮನ್ ಸಂಸ್ಥೆಗೆ ಸಿದ್ದರಾಮಯ್ಯ ಸಮ್ಮುಖದಲ್ಲೇ ನೀಡಲು ಮುಂದಾಗಿದ್ದಾರೆ.
ಇನ್ನು ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ 64 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಅಸ್ತು ನೀಡಲಾಗಿದೆ.
"
ಇನ್ನು ಈ ಬಾರಿ ಬಾದಾಮಿಯ ಬನಶಂಕರಿ ದೇಗುಲಕ್ಕೆ ಭೇಟಿ ಕೊಟ್ಟ ಸಿದ್ದರಾಮಯ್ಯ ಬನಶಂಕರಿ ದೇವಿಗೆ ಅಬಿಷೇಕ ಪೂಜೆ ಮಾಡಿಸಿ ದೈವಿಕೃಪೆಗೂ ಪಾತ್ರರಾಗಿ ಪ್ರವಾಸೋದ್ಯಮ ಸ್ಥಳಗಳ ವೀಕ್ಷಣೆಗೆ ತೆರಳಿದ್ದು ಹಲವರ ಕೆಲವು ಕೌತುಕಗಳಿಗೂ ಕಾರಣವಾಯಿತು.
ಈಗಾಗಲೇ ರಾಜ್ಯದ ದೊರೆ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ರಾಜ್ಯ ಸಕಾ೯ರದ ಅನೇಕ ಸಚಿವರಿಗೆ ಸ್ವಕ್ಷೇತ್ರ ಅಭಿವೃದ್ಧಿಗಾಗಿ ಪತ್ರ ಬರೆದಿರೋ ಮಾಜಿ ಸಿಎಂ ಸಿದ್ದರಾಮಯ್ಯ ಗರಿಗೆದರಿದ ರಾಜಕೀಯ ಚಟುವಟಿಕೆಗಳಲ್ಲಿ ಮೈಲುಗೈ ಸಾಧಿಸಿದಂತೆ ಇತ್ತ ಸ್ವಕ್ಷೇತ್ರ ಅಭಿವೃದ್ಧಿ ಮಾಡುವಲ್ಲಿಯೂ ಮೇಲುಗೈ ಸಾಧಿಸುತ್ತಿದ್ದಾರೆ.
ಕೆಡಿಪಿ ಸಭೆಯಲ್ಲೂ ಅಧಿಕಾರಿಗಳನ್ನ ತರಾಟೆಗೆ ಪಡೆದು ಕೆಲವೊಬ್ಬರನ್ನ ಸಸ್ಪೆಂಡ್ ಮಾಡಿ ಇನ್ನುಳಿದವರಿಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
"
ಇವೆಲ್ಲವುಗಳ ಮದ್ಯೆ ಮಾಜಿ ಸಿದ್ದರಾಮಯ್ಯ ಬಾದಾಮಿಯಿಂದ ಶಾಸಕರಾಗಿ ಆಯ್ಕೆ ಆಗಿದ್ದೇ ತಡ ಉತ್ತರ ಕನಾ೯ಟಕದ ಬಾದಾಮಿ ಈಗ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರುಮಾಡಿ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ರಾಜ್ಯದ ಸಮ್ಮಿಶ್ರ ಸಕಾ೯ರದ ಸಚಿವರುಗಳ ಫೆವರೆಟ್ ತಾಣವಾಗಿ ಪರಿಣಮಿಸುವಂತೆ ಮಾಡಿದೆ..
ಅದೇನೆ ಇರಲಿ ಬಾದಾಮಿಯ ಜನ ಸಿದ್ದರಾಮಯ್ಯನವರ ಮೇಲೆ ಬಹಳಷ್ಟು ಅಭಿವೃದ್ಧಿಯ ನಂಬಿಕೆಯನ್ನಿಟ್ಟುಕೊಂಡಿದ್ದು ಮಾತ್ರ ಹುಸಿಯಾಗದಂತೆ ನೋಡಿಕೊಳ್ಳುವಂತಾಗಲಿ ಅನ್ನೋದೆ ಎಲ್ಲರ ಆಶಯ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 6, 2019, 3:58 PM IST