ಬೇಸಿಗೆ ಬೇಗೆಗೆ ಜನರು ತತ್ತರ: ಇಂದು ನಾಳೆ ಮಧ್ಯ, ದಕ್ಷಿಣ ಕರ್ನಾಟಕಕ್ಕೂ ಬಿಸಿಗಾಳಿ
ಕಳೆದ ಹತ್ತು ದಿನಗಳಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೀಸುತ್ತಿದ್ದ ಬಿಸಿ ಗಾಳಿ ಇದೀಗ ದಕ್ಷಿಣ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ವ್ಯಾಪಿಸುತ್ತಿದ. ಭಾನುವಾರ ಹಲವು ಮಧ್ಯ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಶನಿವಾರ ಮುನ್ಸೂಚನೆ ನೀಡಿದೆ.
ಬೆಂಗಳೂರು (ಏ.07): ಕಳೆದ ಹತ್ತು ದಿನಗಳಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೀಸುತ್ತಿದ್ದ ಬಿಸಿ ಗಾಳಿ ಇದೀಗ ದಕ್ಷಿಣ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ವ್ಯಾಪಿಸುತ್ತಿದ. ಭಾನುವಾರ ಹಲವು ಮಧ್ಯ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಶನಿವಾರ ಮುನ್ಸೂಚನೆ ನೀಡಿದೆ.
ಮಳೆ ಕೊರತೆಯಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮದಿಂದ ಬಿಸಿಗಾಳಿ ಬೀಸುತ್ತಿದ್ದು, ಜನ ಜೀವನ ತತ್ತರಿಸಿ ಹೋಗಿದೆ. ಇದೀಗ ಬಿಸಿಗಾಳಿ ಮಧ್ಯ ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಿಗೆ ವ್ಯಾಪಿಸಿದ್ದು, ಭಾನುವಾರ ಮತ್ತು ಸೋಮವಾರ ಈ ಜಿಲ್ಲೆಗಳಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಲಬುರಗಿ 45 ಡಿಗ್ರಿ ಸೆಲ್ಸಿಯಸ್: ಬಿಸಿಲ ನಾಡು ಕಲಬುರಗಿಯಲ್ಲಿ ಶನಿವಾರ ಏಪ್ರಿಲ್ ತಿಂಗಳಿನ ಸಾರ್ವಕಾಲಿಕ ದಾಖಲೆ ಎನ್ನಬಹುದಾದ 44.7 ರಿಂದ 45 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಆಳಂದ ತಾಲೂಕಿನ ನಿಂಬರ್ಗಾ ತಾಂಡಾ, ಧುತ್ತರಗಾಂವ್, ಯಳಸಂಗಿ ಹಾಗೂ ಚಿಂಚೋಳಿ ತಾಲೂಕಿನ ಐನಾಪುರ, ಚಿಮ್ಮನಚೋಡ್ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಶನಿವಾರ 44.7ರಿಂದ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಬೆಂಗಳೂರಲ್ಲಿ ಎಂಟು ವರ್ಷದ ಗರಿಷ್ಠ ಉಷ್ಣಾಂಶ: ಉರಿ ಉರಿ ತಾಪ
ಇದಲ್ಲದೆ ಜಿಲ್ಲೆಯ ಬಹುತೇಕ ಹೋಬಳಿಗಳಲ್ಲಿ ತಾಪಮಾನ 44 ಡಿಗ್ರಿಗಿಂತಲೂ ಅಧಿಕವಾಗಿತ್ತು. ಅಫಜಲ್ಪುರ, ಚಿತ್ತಾಪುರ, ಸೇಡಂ, ಆಳಂದ ಇಲ್ಲೆಲ್ಲಾ ಉಷ್ಣತೆಯ ಮಟ್ಟ 43 ಡಿಗ್ರಿಗಿಂತಲೂ ಅಧಿಕವಾಗಿತ್ತು. ಇಡೀ ಜಿಲ್ಲಾದ್ಯಂತ ಉಷ್ಣ ಮಾರುತಗಳ ಅಬ್ಬರ ಜೋರಾಗಿದ್ದು, ಜನ- ಜಾನುವಾರು ತಾಪತ್ರಯ ಹೆಚ್ಚಿದೆ. ರಾಯಚೂರಿನಲ್ಲಿ 41.8, ಬಾದಾಮಿ ಹಾಗೂ ಬಾಗಲಕೋಟೆಯಲ್ಲಿ ತಲಾ 41.5, ವಿಜಯಪುರದಲ್ಲಿ 41, ಗದಗದಲ್ಲಿ 40.6, ಗಂಗಾವತಿಯಲ್ಲಿ 40.5 ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ದಾಖಲೆಯ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.