*   ಡಿ.10ರೊಳಗೆ ಸಂಪರ್ಕ ಕಲ್ಪಿಸಲು ಇಂಧನ ಇಲಾಖೆ ಆದೇಶ*  ಸಚಿವ ಸುನಿಲ್‌ ಟಿಪ್ಪಣಿ ಆಧರಿಸಿ ಸೂಚನೆ*  ಸೌಭಾಗ್ಯ ಯೋಜನೆಯಡಿಯಲ್ಲಿ ಒಟ್ಟು 4.29 ಲಕ್ಷ ಮನೆಗಳಿಗೆ ವಿದ್ಯುತ್‌ ಸಂಪರ್ಕ  

ಬೆಂಗಳೂರು(ಅ.04): ರಾಜ್ಯದಲ್ಲಿ ವಿದ್ಯುತ್‌ ಸಂಪರ್ಕ ಇಲ್ಲದ 23-25 ಸಾವಿರ ಬಡವರ ಮನೆಗಳಿಗೆ ಡಿಸೆಂಬರ್‌ 10ರೊಳಗಾಗಿ ವಿದ್ಯುತ್‌(Electricity) ಸಂಪರ್ಕ ಕಲ್ಪಿಸುವಂತೆ ಇಂಧನ ಇಲಾಖೆ ಆದೇಶಿಸಿದೆ.

ಇಂಧನ ಸಚಿವ ವಿ. ಸುನಿಲ್‌ಕುಮಾರ್‌(Sunil Kumar) ಟಿಪ್ಪಣಿ ಆಧಾರದ ಮೇಲೆ ಆದೇಶ ಹೊರಡಿಸಿದ್ದು, ವಿದ್ಯುತ್‌ ಸೌಲಭ್ಯವು ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದೆ. ಸದ್ಯದ ಕೊರೋನಾ(Coronavirus) ಪರಿಸ್ಥಿತಿಯಿಂದ ಮನೆಯಿಂದಲೇ ಕೆಲಸ ಮಾಡಲು ಹಾಗೂ ಆನ್‌ಲೈನ್‌ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಎಲ್ಲ ಬಡ ಕುಟುಂಬದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಅಗತ್ಯ ಹಾಗೂ ಸರ್ಕಾರದ ಆದ್ಯತೆ. ಪ್ರಾಥಮಿಕ ವರದಿಯಲ್ಲಿ ಸದ್ಯ 23-25 ಸಾವಿರ ಬಡ ಕುಟುಂಬಗಳಿಗೆ ವಿದ್ಯುತ್‌ ಇಲ್ಲ ಎಂದು ತಿಳಿದುಬಂದಿದೆ. ಇವರಿಗೆ ವಿದ್ಯುತ್‌ ಸರಬರಾಜು ಕಾಮಗಾರಿಗೆ ಮೀಸಲಿರುವ ಮೊತ್ತವನ್ನು ಬಳಸಿಕೊಂಡು ಡಿ.10ರೊಳಗಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು ಎಂದು ಆದೇಶಿಸಲಾಗಿದೆ.

ವಿದ್ಯುತ್‌ ಖಾಸಗೀಕರಣ: ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಿಷ್ಟು

ಬಡವರಿಗೆ ವಿದ್ಯುತ್‌ ಕಲ್ಪಿಸಲು ಚಾಲ್ತಿಯಲ್ಲಿದ್ದ ಕೇಂದ್ರ ಸರ್ಕಾರದ ದೀನದಯಾಳ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆ (ಡಿಡಿಯುಜಿಜೆವೈ) ಹಾಗೂ ಸೌಭಾಗ್ಯ ಯೋಜನೆಯಡಿಯಲ್ಲಿ ಒಟ್ಟು 4.29 ಲಕ್ಷ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದ್ದು, ಈ ಯೋಜನೆ ಡಿಸೆಂಬರ್‌ 2020ಕ್ಕೆ ಅಂತ್ಯಗೊಂಡಿದೆ. ಆದರೆ ಯೋಜನೆ ಮುಕ್ತಾಯಗೊಂಡ ಬಳಿಕ ವಿದ್ಯುತ್‌ ಸಂಪರ್ಕ ಪಡೆಯದೆ ಬಾಕಿ ಇರುವ ಮನೆಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲದಂತಾಗಿದೆ. ಅಂತಹವರಿಗೆ ಡಿಡಿಯುಜಿಜೆವೈ ಹಾಗೂ ಸೌಭಾಗ್ಯ ಯೋಜನೆಗಳ ಮಾದರಿಯಲ್ಲೇ ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಗ್ರಾಮ ಪಂಚಾಯಿತಿಯಿಂದ ಒದಗಿಸುವ ಪಟ್ಟಿಸೇರಿ ಅಗತ್ಯ ದಾಖಲಾತಿ ಪಡೆದು ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು ಎಂದು ಅಧೀನ ಕಾರ್ಯದರ್ಶಿ ಎನ್‌. ಮಂಗಳಗೌರಿ ಆದೇಶದಲ್ಲಿ ತಿಳಿಸಿದ್ದಾರೆ.