ಪಿಎಸ್ಐ ಪರಶುರಾಮ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ; ಗೃಹ ಸಚಿವ ಪರಮೇಶ್ವರ

ಯಾದಗಿರಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಪಿಎಸ್‌ಐ ಪರಶುರಾಮ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.

Home Minister Dr G Parameshwara announced Rs 50 lakhs  compensation to PSI Parashurama family sat

ಕೊಪ್ಪಳ (ಆ.07): ಯಾದಗಿರಿಯಲ್ಲಿ ನಿಗೂಡವಾಗಿ ಮೃತಪಟ್ಟ ಪಿಎಸ್ಐ ಪರಶುರಾಮ ಅವರ ನಿವಾಸಕ್ಕೆ ಗೃಹ ಸಚಿವ ಡಾ.‌ಜಿ.ಪರಮೇಶ್ವರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರಲ್ಲದೇ, ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು‌. ಜೊತೆಗೆ, ಪರಶುರಾಮ ಅವರ ಕುಟುಂಬಕ್ಕೆ ಸರ್ಕಾರದಿಂದ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು‌.

ಕಾರಟಗಿಯ ಸೋಮನಾಳ ಗ್ರಾಮದಲ್ಲಿರುವ ಮೃತ ಪಿಎಸ್‌ಐ ಪರಶುರಾಮ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ‌. ತನಿಖೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಗೆ ನಿರೀಕ್ಷೆ ಮಾಡಲಾಗುತ್ತಿದೆ. ಎಫ್‌ಎಸ್‌ಎಲ್‌ನವರು ಪರಿಶೀಲನೆ ನಡೆಸಿ, ಸ್ಯಾಂಪಲ್ಸ್ ಸಂಗ್ರಹಿಸಿದ್ದಾರೆ‌. ಇಲಾಖೆಯ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಂಡಿದ್ದಕ್ಕೆ ನೋವಾಗುತ್ತಿದೆ ಎಂದು ಮರುಕ ವ್ಯಕ್ತಪಡಿಸಿದರು.

ಪರಶುರಾಮ ಅವರ ಕುಟುಂಬಕ್ಕೆ ಸಾಂತ್ವಾನ ಹೇಳುವುದು ನಮ್ಮ ಧರ್ಮ, ಕರ್ತವ್ಯ. ಪರಶುರಾಮ ತನ್ನ ಕುಟುಂಬದವರಿಗೆ ಎಲ್ಲವೂ ಆಗಿದ್ದ. ಎಲ್ಲ ಜವಾಬ್ಧಾರಿಗಳನ್ನು ಹೊತ್ತು ನೋಡಿಕೊಳ್ಳುತ್ತಿದ್ದ ಎಂಬುದನ್ನು ಆತನ ಸಹೋದರ ಹನುಮಂತ ಅವರಿಂದ ತಿಳಿದುಕೊಂಡಿದ್ದೇನೆ. ಕುಟುಂಬ ಸಂಕಷ್ಟವಲ್ಲದೆ, ಬೀದಿಗೆ ತಳ್ಳಿದಂತಾಗಿದೆ. ಕಠಿಣ ಪರಿಶ್ರಮದಿಂದ ಎಂಟು ಪರೀಕ್ಷೆಗಳನ್ನು ಪಾಸ್ ಮಾಡಿ, ಪಿಎಸ್ಐ ಉದ್ಯೋಗವನ್ನು ಆಯ್ಕೆ ಮಾಡಿಕೊಂಡಿದ್ದ. ಇಂತಹ ಅಧಿಕಾರಿಯನ್ನು ಕಳೆದುಕೊಂಡಿರುವುದು ನಮಗೂ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.  ಪರಶುರಾಮ ಅವರ ಪತ್ನಿ ಬಿಇ ವ್ಯಾಸಂಗ ಮಾಡಿದ್ದು, ಇಲಾಖೆಯಲ್ಲಿ ಸೂಕ್ತವಾದ ಉದ್ಯೋಗವನ್ನು ನೀಡುತ್ತೇವೆ. ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಥವಾ ಜೆಸ್ಕಾಂನಲ್ಲಿ ವ್ಯಾಸಂಗಕ್ಕೆ ಸೂಕ್ತವಾದ ಉದ್ಯೋಗ ಕಲ್ಪಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಬೇರೆ ಇಲಾಖೆಯಲ್ಲಿ ಉದ್ಯೋಗ ಕೋರಿರುವುದರಿಂದ ಮುಖ್ಯಮಂತ್ರಿಯವರು ನಿರ್ಧಾರ ತೆಗೆದುಕೊಳ್ಳಬೇಕು‌. ಈ ವಿಚಾರವನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು. ಪರಶುರಾಮ ಕೆಲಸಕ್ಕೆ ಸೇರಿದ ಏಳು ವರ್ಷದಲ್ಲಿಯೇ ಮೃತನಾಗಿದ್ದಾನೆ. ಡಿವೈಎಸ್‌ಪಿ ಹಂತದವರೆಗೆ ಹೋಗುತ್ತಿದ್ದ. ಸರ್ಕಾರದಿಂದ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು‌.

ಅಲ್ಲಿನ ಶಾಸಕ ಮತ್ತು ಪುತ್ರ ಪರಶುರಾಮ ಅವರ ಬಳಿ ಹಣಕ್ಕೆ ಒತ್ತಾಯಿಸಿದ್ದರು ಎಂದು ಕುಟುಂಬಸ್ಥರು ಆಪಾದನೆ ಮಾಡಿದ್ದಾರೆ.  ಈ ಕುರಿತು ಘಟನೆಯಾದ ದಿನವೇ ಪ್ರಕರಣ ದಾಖಲಿಸಿ, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ತನಿಖೆ ವೇಳೆ ಸ್ಥಳೀಯ ಪೊಲೀಸರ ಮೇಲೆ ಒತ್ತಡ ಬರಬಾರದು ಎಂಬ ಉದ್ದೇಶದಿಂದ. ನ್ಯಾಯ ಸಿಗುತ್ತದೆಯೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗಬಾರದು ಎಂಬ ನಿಟ್ಟಿನಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕುಟುಂಬದವರು ಹೇಳಿರುವುದು ನಿಜ. ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ.‌ ಈ ಬಗ್ಗೆ ಕುಟುಂಬಸ್ಥರಿಗೆ ಮನವರಿಕೆ ಮಾಡುತ್ತೇವೆ. ಮನೆಯವರು ಏನು ದೂರು ಕೊಟ್ಟಿದ್ದಾರೆ ಅದನ್ನು ಆಧರಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ನ್ಯಾಯ ಒದಗಿಸಿಕೊಡುತ್ತೇವೆ. ಪಿಎಸ್ಐ ವರ್ಗಾವಣೆ ಐಜಿ ಹಂತದಲ್ಲಿ ನಡೆಯುತ್ತದೆ. ಏಳು ತಿಂಗಳಲ್ಲಿ ಯಾಕೆ ವರ್ಗಾವಣೆಯಾಗಿದೆ ಎಂಬುದನ್ನು ಸಿಐಡಿ ತನಿಖೆಯಲ್ಲಿ ಹೊರ ಬರುತ್ತದೆ. ಇಲಾಖೆಯಲ್ಲಿ ಸಮರ್ಥ ಅಧಿಕಾರಿಗಳಿದ್ದಾರೆ. ಆಪಾದನೆಗಳು ಬರಬಾರದು ಎಂಬ ನಿಟ್ಟಿನಲ್ಲಿ ಸಿಐಡಿಗೆ ವಹಿಸಲಾಗಿದೆ. ಜಾತಿ ಆಧಾರದ ಮೇಲೆ ಪೋಸ್ಟಿಂಗ್ಸ್ ನೀಡುವುದಿಲ್ಲ. ಇದಕ್ಕೆ ಕಾನೂನಿನಲ್ಲಿ  ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿದರು.

Latest Videos
Follow Us:
Download App:
  • android
  • ios