ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರೇ ಬಂದ್ರೂ ಸ್ವಾಗತ: ಗೃಹ ಸಚಿವ ಪರಮೇಶ್ವರ್
ಬಿಜೆಪಿಯವರಿಗೆ ಕಾಮಾಲೆ ಕಣ್ಣು. ಹೀಗಾಗಿ ಕಾಣೋದೆಲ್ಲಾ ಹಳದಿ ಅವರಿಗೆ. ನಾವು ಆರ್‌ಡಿ ಪಾಟೀಲ್‌ನನ್ನ ಬಿಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ಸುಮ್ಮನೆ ನಮ್ಮ ಮುಖಂಡರಾದ ಪ್ರಿಯಾಂಕ್ ಖರ್ಗೆ ವಿರುದ್ದ ಆರೋಪ ಮಾಡ್ತಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ತಿರುಗೇಟು ನೀಡಿದರು.
ಬೆಂಗಳೂರು (ನ.9): ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡರು ಯಾರೇ ಬಂದ್ರೂ ಸ್ವಾಗತ ಮಾಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.
ಅನ್ಯಪಕ್ಷದ ಶಾಸಕ ಪಕ್ಷಕ್ಕೆ ಬರುತ್ತಿರುವ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅನ್ಯ ಪಕ್ಷದ ಶಾಸಕರು ಕಾಂಗ್ರೆಸ್‌ಗೆ ಬರುವ ವಿಚಾರ ಅಧ್ಯಕ್ಷರಿಗೆ ಮಾಹಿತಿ ಇರಬಹುದು ಹಾಗಾಗಿ ಬಂದರೆ ಸ್ವಾಗತ ಮಾಡುತ್ತೇವೆ ಎಂದು ಹೇಳಿರಬಹುದು. ಪಕ್ಷದ ಸಿದ್ಧಾಂತ ಒಪ್ಪಿ ಬರೋರನ್ನ ನಾನು ಸಹ ಸ್ವಾಗತ ಮಾಡ್ತಿನಿ. ಆದ್ರೆ ನಮ್ಮಿಂದ ಕಳಿಸಿಕೊಡಲು ಕಷ್ಟ ಅಷ್ಟೇ ಎಂದರು.
ಪರೀಕ್ಷಾ ಅಕ್ರಮ ಕಿಂಗ್‌ಪಿನ್ ಪರಾರಿಗೆ ಪೊಲೀಸರ ಸಾಥ್? ತನಿಖೆಗೆ ಸೂಚನೆ!
ಇನ್ನು ಕಲಬುರಗಿ ಕೆಇಎ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಆರ್‌ಡಿ ಪಾಟೀಲ್ ನಾಪತ್ತೆಯಾಗಿರುವ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿರುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಬಿಜೆಪಿಯವರಿಗೆ ಕಾಮಾಲೆ ಕಣ್ಣು. ಹೀಗಾಗಿ ಕಾಣೋದೆಲ್ಲಾ ಹಳದಿ ಅವರಿಗೆ. ನಾವು ಆರ್‌ಡಿ ಪಾಟೀಲ್‌ನನ್ನ ಬಿಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ಸುಮ್ಮನೆ ನಮ್ಮ ಮುಖಂಡರಾದ ಪ್ರಿಯಾಂಕ್ ಖರ್ಗೆ ವಿರುದ್ದ ಆರೋಪ ಮಾಡ್ತಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಶೀಘ್ರ ಬಂಧಿಸದ ಪೊಲೀಸರ ವಿರುದ್ದವೂ ನಾವು ಕ್ರಮ ತೆಗೆದುಕೊಳ್ತಿದ್ದೇವೆ. ಇಬ್ಬರು ಪೋಲೀಸರ ವಿರುದ್ದ ಶಿಸ್ತುಕ್ರಮ ಜರುಗಿಸುತ್ತಿದ್ದೇವೆ ಎಂದರು.
ಆರ್‌ಡಿ ಪಾಟೀಲ್ ಕೇಸಲ್ಲಿ ನಿರ್ಲಕ್ಷ್ಯ ವಹಿಸಿದ್ರೆ ಕ್ರಮ: ಪೊಲೀಸರಿಗೆ ಪರಂ ವಾರ್ನಿಂಗ್
ಇನ್ನು ಜಾತಿಗಣತಿ ವಿಚಾರ ಪ್ರಸ್ತಾಪಿಸಿದ ಸಚಿವರು, ನೂರಾರು ಕೋಟಿ ಖರ್ಚು ಮಾಡಿ ಜಾತಿಗಣತಿ ಮಾಡಿಸಲಾಗಿದೆ. ಈಗ ವರದಿಯಲ್ಲಿ ಏನ್ ಇದೆ ಅಂತ ಗೊತ್ತಾಗಬೇಕು ಅಲ್ವಾ? ಒಳ ಮೀಸಲಾತಿ ವಿಚಾರದಲ್ಲಿ ಅದೇ ನಿಲುವನ್ನ ಹೊಂದಿದ್ದೇನೆ. ಸದಾಶಿವ ಆಯೋಗದ ವರದಿ ವಿಚಾರ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ನಾವು ಘೋಷಣೆ ಮಾಡಿದ್ವಿ. ನಾವು ಘೋಷಣೆ ಮಾಡಿದಂತೆ ಈಗ ನಡೆದುಕೊಳ್ಳಬೇಕು ಅಲ್ವಾ ಹಾಗೆ ನಡೆದುಕೊಳ್ಳುತ್ತೇವೆ. ಸದಾಶಿವ ಆಯೋಗದ ವರದಿಯಂತೆ ಜಾರಿ ಮಾಡುತ್ತೇವೆ ಎಂದರು.