ಬೆಂಗಳೂರು(ಡಿ.03):  ರಾಜ್ಯ ವಿಪತ್ತು ನಿರ್ವಹಣೆ ಪಡೆಗೆ (ಎಸ್‌ಡಿಆರ್‌ಎಫ್‌) ಪ್ರತಿ ವರ್ಷ 100 ಮಾಜಿ ಸೈನಿಕರನ್ನು ನೇಮಕ ಮಾಡಿಕೊಳ್ಳಲಾಗುವುದು ಮತ್ತು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿಗೆ 1.57 ಕೋಟಿ ರು. ಆರ್ಥಿಕ ನೆರವು ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದ್ದಾರೆ.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್‌ಡಿಆರ್‌ಎಫ್‌ನಲ್ಲಿ ಈಗಾಗಲೇ 107 ಮಾಜಿ ಸೈನಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನು ಮುಂದೆ ಪ್ರತಿ ವರ್ಷ 100 ಮಾಜಿ ಸೈನಿಕರನ್ನು ನೇಮಕಾತಿ ಮಾಡಲಾಗುವುದು. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿಗೆ 1.57 ಕೋಟಿ ರು. ಆರ್ಥಿಕ ನೆರವು ನೀಡಲಾಗುವುದು. ಮಾಜಿ ಸೈನಿಕರಿಗೆ ಬಿಡಿಎ ನಿವೇಶನ ನೀಡುವ ಜತೆಗೆ ಸರ್ಕಾರದಿಂದ ಮನೆ ನಿರ್ಮಾಣ ಕಾರ್ಯವನ್ನು ಸಹ ಮಾಡುವ ಉದ್ದೇಶ ಇದೆ ಎಂದರು.

ಅತ್ಯಂತ ಮೌಲ್ಯಯುತ:

ಸೈನಿಕರ ಜೀವನ ಸರ್ಕಾರಿ ನೌಕರರ ಜೀವನಕ್ಕಿಂತ ವಿಭಿನ್ನ. ಕುಟುಂಬದಿಂದ ದೂರ ಉಳಿದು ದೇಶದಲ್ಲಿ ತೊಡಗುವುದರಿಂದ ಸೈನಿಕರ ಕೊಡುಗೆಗೆ ಬೆಲೆ ಕಟ್ಟಲಾಗದು. ಪ್ರತಿದಿನ ಸಾವನ್ನು ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸದಿಂದ ಜೀವನ ಸಾಗಿಸುವ ಸೈನಿಕರ ಬದುಕು ಅತ್ಯಂತ ಮೌಲ್ಯಯುತವಾಗಿದೆ ಎಂದು ಬಣ್ಣಿಸಿದರು.

ಇದೇ ವೇಳೆ ಭಯೋತ್ಪಾದರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಸುಬೇದಾರ್‌ ವೀರೇಶ್‌ ಕುರಹಟ್ಟಿಅವರ ಪತ್ನಿ ಲಲಿತಾ ವೀರೇಶ ಕುರಹಟ್ಟಿಅವರಿಗೆ ಆರ್ಥಿಕ ನೆರವು ನೀಡಿ ಸನ್ಮಾನಿಸಲಾಯಿತು. ಮರಾಠಾ ಲೈಟ್‌ ಇನ್ಫೆಂಟ್ರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೀರೇಶ ಅವರು ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ್ದರು.

ಅಧ್ಯಯನದ ಬಳಿಕ ಲಿಂಗಾಯತರಿಗೆ ಮೀಸಲು ತೀರ್ಮಾನ: ಸಚಿವ ಬೊಮ್ಮಾಯಿ

ಕಾರ್ಯಕ್ರಮದಲ್ಲಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಕಾರ್ಯದರ್ಶಿ ಡಿ.ರೂಪಾ, ನಿವೃತ್ತ ಏರ್‌ ಕಮೋಡರ್‌ ಚಂದ್ರಶೇಖರ್‌, ನಿವೃತ್ತ ಲೆಫ್ಟಿನೆಂಟ್‌ ವಿ.ಜೆ.ಸುಂದರಂ, ನಿವೃತ್ತ ಬ್ರಿಗೇಡಿಯರ್‌ ರವಿ ಮುನಿಸ್ವಾಮಿ ಇತರರಿದ್ದರು.

ಕೆಎಸ್‌ಆರ್‌ಟಿಸಿಗೆ ಸತತ 6ನೇ ಬಾರಿ ಪ್ರಶಸ್ತಿ

ರಾಜ್ಯ ಸರ್ಕಾರಿ ಸಂಸ್ಥೆಗಳ ಪೈಕಿ ಅತಿ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣಾ ಪ್ರಶಸ್ತಿ ಹಾಗೂ ಪಾರಿತೋಷಕವನ್ನು ಸತತವಾಗಿ ಆರನೇ ಬಾರಿ ಕೆಎಸ್‌ಆರ್‌ಟಿಸಿ ಪಡೆದುಕೊಂಡಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರಿಗೆ ಪಾರಿತೋಷಕ ನೀಡಿ ಗೌರವಿಸಿದರು. ಕೆಎಸ್‌ಆರ್‌ಟಿಸಿ ಸಂಸ್ಥೆಯು 18,45,069 ರು. ಸಂಗ್ರಹಿಸಿ ಮುಂಚೂಣಿಯಲ್ಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 4,98,800 ರು. ಸಂಗ್ರಹಿಸಿದೆ. ಹೆಚ್ಚಿನ ನಿಧಿ ಸಂಗ್ರಹಿಸಿದ ಜಿಲ್ಲೆಯಲ್ಲಿ ಮುಂದಿರುವ ಹಾಸನ ಜಿಲ್ಲೆ 6,72,380 ರು., ಉತ್ತರ ಕನ್ನಡ 6,34,653 ರು., ಚಿಕ್ಕಮಗಳೂರು 5,06,085 ರು., ಕೊಡಗು 4,65,463 ರು., ಕಲಬುರಗಿ 4,29,779 ರು. ಹಾಗೂ ತುಮಕೂರು ಜಿಲ್ಲೆ 4,05,726 ರು. ಸಂಗ್ರಹಿಸಿದೆ.

ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತ ಗೃಹ ಸಚಿವ

ಭಯೋತ್ಪಾದರ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರ ಮರಣವನ್ನಪ್ಪಿದ ಸುಬೇದಾರ್‌ ವೀರೇಶ್‌ ಕುರಹಟ್ಟಿಅವರ ಎರಡು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತಾವು ತೆಗೆದುಕೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ತಮ್ಮ ಟ್ರಸ್ಟ್‌ ಮೂಲಕ ವೀರೇಶ್‌ ಅವರ ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳಲಾಗುವುದು. ಪದವಿ ತನಕ ವಿದ್ಯಾಭ್ಯಾಸಕ್ಕೆ ಬೇಕಾಗಿರುವ ಎಲ್ಲ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದರು.