ಬೆಂಗಳೂರು(ಸೆ.12): ಡ್ರಗ್ಸ್‌ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಲು ರಾಜ್ಯ ಸರ್ಕಾರವು ಸಮರ ಸಾರಿದ್ದು, ಇದರಲ್ಲಿ ಯಾರೇ ಶಾಮೀಲಾಗಿದ್ದರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

"

ಡ್ರಗ್ಸ್‌ ಜಾಲದಲ್ಲಿ ಹೊಸ ಹೊಸ ಹೆಸರುಗಳು ಕೇಳಿ ಬರುತ್ತಿವೆ. ಜಾಲವನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಲವರನ್ನು ಪ್ರಕರಣ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ. ಹವಾಲ ದಂಧೆಯು ದೊಡ್ಡ ಮಟ್ಟದಲ್ಲಿ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಬೇರೆ ಬೇರೆ ಆಯಾಮದಲ್ಲಿಯೂ ನಡೆಸಬೇಕು ಎಂದು ಪೊಲೀಸರಿಗೆ ಸೂಚಿಸಲಾಗಿದೆ. ಹಲವು ಮಾಹಿತಿಗಳು ಸಿಕ್ಕಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರಿಸಲಾಗಿದೆ ಎಂದಿದ್ದಾರೆ.

ಯಡಿಯೂರಪ್ಪ ಡ್ರಗ್ಸ್‌ ತನಿಖೆ ಹಾದಿ ತಪ್ಪಿಸ್ತಿದ್ದಾರೆ: ಸಿದ್ದರಾಮಯ್ಯ

ಮಾಧ್ಯಮ ಮತ್ತು ಇತರೆ ಕಡೆಯಿಂದ ಬರುವ ಮಾಹಿತಿಗಳನ್ನು ಸಂಗ್ರಹಿಸಿ, ಅದರ ಆಧಾರದ ಮೇಲೂ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಮೂಲಗಳಿಂದ ಹೆಸರುಗಳು ಕೇಳಿಬಂದರೆ ತನಿಖೆ ನಡೆಸಬೇಕು ಎಂದು ನಿರ್ದೇಶನ ನೀಡಲಾಗಿದೆ. ತನಿಖೆಯು ಸಹ ಪ್ರಗತಿಯಲ್ಲಿದೆ ಎಂದು ಹೇಳಿದರು.

ಡ್ರಗ್ಸ್‌ ಜಾಲ ಪ್ರಕರಣದಲ್ಲಿ ಶಾಸಕ ಜಮೀರ್‌ ಅಹಮ್ಮದ್‌ ಅವರನ್ನು ಏಕೆ ಬಂಧಿಸಿಲ್ಲ ಎಂಬ ಸಂಸದ ಪ್ರತಾಪ್‌ ಸಿಂಹ ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಾಕ್ಷ್ಯಾಧಾರಗಳು ಲಭ್ಯವಾಗುವವರೆಗೂ ತನಿಖಾಧಿಕಾರಿಗಳು ಸುಮ್ಮನೆ ಯಾರನ್ನೂ ಬಂಧಿಸುವುದಿಲ್ಲ. ಯಾರೇ ಇರಲಿ, ಎಷ್ಟೇ ಪ್ರಭಾವಿಗಳಾಗಲಿ ರಕ್ಷಣೆ ಕೊಡುವ ಪ್ರಶ್ನೆಯೇ ಇಲ್ಲ. ಯಾರೇ ಇದ್ದರೂ ಕಠಿಣ ಕ್ರಮ ಜರುಗಿಸಲಾಗುವುದು. ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತದೆ ಎಂದು ತಿಳಿಸಿದರು.