ಯಡಿಯೂರಪ್ಪ ಡ್ರಗ್ಸ್ ತನಿಖೆ ಹಾದಿ ತಪ್ಪಿಸ್ತಿದ್ದಾರೆ: ಸಿದ್ದರಾಮಯ್ಯ
ಪ್ರತಿಪಕ್ಷ ನಾಯಕನಿಂದ ‘ವೇಕ್ ಅಪ್ ಬಿಎಸ್‌ವೈ’ ಟ್ವೀಟ್ ಸರಣಿ| ಕೊರೋನಾ ಅಂತ್ಯವಾದ ಭ್ರಮೆಯಲ್ಲಿ ರಾಜ್ಯ ಸರ್ಕಾರ: ಆರೋಪ| ಮುಖ್ಯಮಂತ್ರಿಯಿಂದ ತನಿಖೆಯ ಮಾಹಿತಿ ಸೋರಿಕೆ| ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶ ಸರ್ಕಾರಕ್ಕೆ|
ಬೆಂಗಳೂರು(ಸೆ.12): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಡ್ರಗ್ಸ್ ದಂಧೆಯ ತನಿಖೆಯ ವಿವರಗಳನ್ನು ಸೋರಿಕೆ ಮಾಡಿ ಪೊಲೀಸ್ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ, ಡ್ರಗ್ಸ್ ಹಗರಣದ ತನಿಖೆಯ ಹಾದಿ ಗಮನಿಸಿದರೆ ಅಪರಾಧಿಗಳನ್ನು ಶಿಕ್ಷಿಸುವ ಉದ್ದೇಶಕ್ಕಿಂತಲೂ ಕೊರೋನಾ ಹಾವಳಿ ಮತ್ತು ಅತಿವೃಷ್ಟಿ ಪರಿಹಾರದ ತನ್ನ ವೈಫಲ್ಯಗಳಿಂದ ಜನರ ಮನವನ್ನು ಬೇರೆ ಕಡೆ ಸೆಳೆಯುವ ದುರುದ್ದೇಶ ಬಿಜೆಪಿ ಸರ್ಕಾರಕ್ಕೆ ಇರುವಂತೆ ಕಾಣುತ್ತಿದೆ ಎಂದೂ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಡಿಜೆ ಹಳ್ಳಿ ಗಲಭೆ ಬಗ್ಗೆ ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡಿ ತನಿಖೆಯ ಮೇಲೆ ಪ್ರಭಾವ ಬೀರಿದರು. ಈಗ ಡ್ರಗ್ಸ್ ಹಗರಣದ ತನಿಖೆಯ ವಿವರಗಳನ್ನು ಸೋರಿಬಿಟ್ಟು ಪೊಲೀಸ್ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ದೂರಿದ್ದಾರೆ. ಅಲ್ಲದೆ, ತನಿಖೆ ಬಗ್ಗೆ ಹಾದಿ ತಪ್ಪಿಸುವ ಹೇಳಿಕೆ ನೀಡುತ್ತಿರುವ ಯಡಿಯೂರಪ್ಪ ಅವರೇ, ನಿಮಗೆ ಯಾರ ಮೇಲೆ ವಿಶ್ವಾಸವಿಲ್ಲ? ಪೊಲೀಸರ ಮೇಲೋ ಅಥವಾ ಗೃಹ ಸಚಿವರ ಮೇಲೋ ಎಂದು ಪ್ರಶ್ನಿಸಿದ್ದಾರೆ.
ಡ್ರಗ್ ದಂಧೆ: ರಾಗಿಣಿ, ಸಂಜನಾ ಸೇರಿ 6 ಮಂದಿಗೆ ಬೇಲ್ ಇಲ್ಲ
ಸತ್ಯ ನಾಶ ಮಾಡಲಾಗದು:
ತಮ್ಮ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಪ್ರತಿಪಕ್ಷಗಳ ಮೇಲೆ ಹಾಗೂ ಅದರ ನಾಯಕರ ಮೇಲೆ ಸುಳ್ಳು ಆರೋಪ ಹೊರಿಸುವ ಕುತಂತ್ರವನ್ನು ಬಿಜೆಪಿ ಅನುಸರಿಸುತ್ತಾ ಬಂದಿದೆ. ಡ್ರಗ್ಸ್ ಹಗರಣದಲ್ಲಿ ಕೂಡ ಅದನ್ನೇ ಮಾಡುತ್ತಾ ಇದೆ. ಸತ್ಯವನ್ನು ಮುಚ್ಚಿಡಬಹುದು ಆದರೆ ನಾಶ ಮಾಡಲು ಆಗುವುದಿಲ್ಲ ಎಂಬುದು ನೆನಪಿರಲಿ ಎಂದು ಎಚ್ಚರಿಸಿದ್ದಾರೆ.
ಡ್ರಗ್ಸ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತಮ್ಮ ಪಕ್ಷದವರನ್ನು ರಕ್ಷಿಸುವ ಮತ್ತು ಈ ಹಗರಣವನ್ನು ಬಳಸಿಕೊಂಡು ವಿರೋಧಪಕ್ಷದ ನಾಯಕರ ಚಾರಿತ್ರ್ಯಹರಣ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇದನ್ನು ರಾಜ್ಯ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ನಿಮ್ಮ ಪಕ್ಷದ ನಾಯಕರ ಬಾಯಿ ಮುಚ್ಚಿಸಿ:
ಮಾದಕ ವಸ್ತುಗಳ ಹಾವಳಿ ನಿರ್ಮೂಲನೆಯ ಪ್ರಾಮಾಣಿಕ ಉದ್ದೇಶ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇದ್ದಂತಿಲ್ಲ. ಒಂದು ವೇಳೆ ಇದ್ದರೆ ಬೀದಿಯಲ್ಲಿ ನಿಂತು ವಿರೋಧಪಕ್ಷದ ನಾಯಕರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿ ತನಿಖೆಯ ಹಾದಿ ತಪ್ಪಿಸುತ್ತಿರುವ ಸಂಪುಟದ ಸಚಿವರು ಮತ್ತು ಪಕ್ಷದ ನಾಯಕರ ಬಾಯಿ ಮುಚ್ಚಿಸಿ ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಗಿಣಿ ಜೊತೆ ಪ್ರಚಾರಕ್ಕೆ ಟಾಂಗ್
ಡ್ರಗ್ ಪೆಡ್ಲರ್ ಜೊತೆಗಿನ ಜಮೀರ್ ಅಹಮದ್ ಖಾನ್ ಫೋಟೋ ಹರಿಬಿಟ್ಟಬಿಜೆಪಿಗರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಆರೋಪಿಗಳ ಜೊತೆಗಿನ ರಾಜಕಾರಣಿಗಳ ಫೋಟೊ ಹಾಕಿ ಅವರ ಹೆಸರನ್ನು ಹಗರಣದ ಜೊತೆ ಜೋಡಿಸುವುದು ಕೆಟ್ಟಚಾಳಿ. ಸಭೆ-ಸಮಾರಂಭಗಳಲ್ಲಿ ಜೊತೆಗೆ ನಿಂತವರೆಲ್ಲರ ಜಾತಕ ಬಿಡಿಸಿ ನೋಡಲಾಗುವುದಿಲ್ಲ. ಆದರೆ ಅಧಿಕೃತ ಸಮಾರಂಭಗಳಿಗೆ ಅಂತಹವರನ್ನು ಆಹ್ವಾನಿಸುವಾಗ, ಚುನಾವಣಾ ಪ್ರಚಾರಗಳಲ್ಲಿ ಬಳಸುವಾಗ ಎಚ್ಚರದಿಂದ ಇರಬೇಕು ಎಂದು ಬಿಜೆಪಿ ತನ್ನ ಪ್ರಚಾರಕ್ಕೆ ನಟಿ ರಾಗಿಣಿ ಅವರನ್ನು ಬಳಸಿಕೊಂಡ ವಿಚಾರ ಕುರಿತು ಪರೋಕ್ಷವಾಗಿ ತಿರುಗೇಟು ನೀಡಿದರು.
ಮನೆಗೆ ಕರೆಸಿಕೊಂಡು ಜಮೀರ್‌ಗೆ ಸಿದ್ದರಾಮಯ್ಯ ಫುಲ್ ಕ್ಲಾಸ್...!
ಸರ್ಕಾರ ನಿದ್ದೆ ಬಿಟ್ಟು ಕೊರೋನಾ ಸಮಸ್ಯೆ ನಿವಾರಿಸಲಿ: ಸಿದ್ದು
ರಾಜ್ಯದಲ್ಲಿ ಕೊರೋನಾ ಅಬ್ಬರ ತಾರಕಕ್ಕೇರಿದ್ದು, ವೈದ್ಯಕೀಯ ಸೇವೆ ದೊರೆಯದೆ ಜನರು ನರಳುತ್ತಿದ್ದಾರೆ. ಹೀಗಿದ್ದರೂ ರಾಜ್ಯ ಸರ್ಕಾರವು ಕೊರೋನಾ ಸಾಂಕ್ರಾಮಿಕ ರೋಗ ಅಂತ್ಯವಾಗಿದೆ ಎಂಬ ಭ್ರಮೆಯಲ್ಲಿದೆ. ರಾಜ್ಯ ಸರ್ಕಾರವು ನಿದ್ದೆಯಿಂದ ಎದ್ದು ಆರೋಗ್ಯ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಶುಕ್ರವಾರ ‘ವೇಕ್ ಅಪ್ ಬಿಎಸ್‌ವೈ’ ಹ್ಯಾಶ್‌ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಅವರು, ಸರ್ಕಾರ ಹಾಗೂ ಬಿ.ಎಸ್. ಯಡಿಯೂರಪ್ಪ ನಿದ್ದೆಯಿಂದ ಎಚ್ಚರಗೊಂಡು ಕೂಡಲೇ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿನ ಆರೋಗ್ಯ ಮೂಲಸೌಕರ್ಯ ವ್ಯವಸ್ಥೆ ನಾಚಿಕೆ ತರಿಸುವಂತಿದೆ. ಹಲವರು ತಮ್ಮವರ ಜೀವ ಉಳಿಸಲು ವೆಂಟಿಲೇಟರ್ ವ್ಯವಸ್ಥೆಗೆ ಅಲೆದಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಕೊರೋನಾ ರೋಗಿಗಳಿಗೆ ಪ್ರವೇಶ ನಿರಾಕರಿಸುತ್ತಿವೆ. ಹಣ ಉಳ್ಳವರನ್ನು ಮಾತ್ರ ದಾಖಲು ಮಾಡಿಕೊಂಡು ಬಡವರನ್ನು ವಾಪಸು ಕಳುಹಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಬಗ್ಗೆ ಪರಿಶೀಲಿಸಿ ಸಮಾಜದ ಎಲ್ಲಾ ವರ್ಗಗಳಿಗೂ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ರೋಗಿಗಳಿಗೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯಿಂದ ಯಾವುದೇ ನೆರವು ದೊರೆಯುತ್ತಿಲ್ಲ. ಹೀಗಾಗಿ ಯಡಿಯೂರಪ್ಪ ಅವರು ಆರೋಗ್ಯ ಮೂಲಸೌಕರ್ಯಗಳ ವ್ಯವಸ್ಥೆ ಬಗ್ಗೆ ನಿತ್ಯ ಬುಲೆಟಿನ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರವು ಕೊರೋನಾ ಸಾಂಕ್ರಾಮಿಕ ಪೀಡೆ ಅಂತ್ಯವಾಗಿರುವ ಭ್ರಮೆಯಲ್ಲಿದೆ. ನಿದ್ದೆಯಿಂದ ಎದ್ದು ಆರೋಗ್ಯ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು. ಸೋಂಕು ಲಕ್ಷಣಗಳಿಲ್ಲದವರು ಆಸ್ಪತ್ರೆಗೆ ದಾಖಲಾಗದೆ ಇರಬಹುದು. ಇದರ ಅರ್ಥ ಗಂಭೀರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಸೋಂಕಿತರು ಇಲ್ಲವೆಂದು ಅಲ್ಲ ಎಂದರು.
ಮಾಧ್ಯಮಗಳು ಎಚ್ಚರಿಸಬೇಕು: ಮಾಧ್ಯಮ ಸಂಸ್ಥೆಗಳು ಕೊರೋನಾ ವಿಷಯಗಳ ಬಗ್ಗೆ ಬೆಳಕು ಚೆಲ್ಲುವಾಗ ಸರ್ಕಾರ ಕನಿಷ್ಠ ಸ್ಪಂದಿಸಿ ಕೆಲಸ ಮಾಡುತ್ತಿತ್ತು. ಆದರೆ ಇದೀಗ ಸರ್ಕಾರದ ಅಸಮರ್ಥತೆ ಬಹಿರಂಗವಾಗುತ್ತಿಲ್ಲ. ಹೀಗಾಗಿ ಮಾಧ್ಯಮಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಎಚ್ಚರಿಸಬೇಕಿದೆ. ಮಾಧ್ಯಮಗಳು ಕೊರೋನಾ ನಿಯಂತ್ರಣ ವೈಫಲ್ಯ ಹಾಗೂ ಸಿದ್ಧತೆ ಬಗ್ಗೆಯೂ ಸಮಾನವಾಗಿ ಬೆಳಕು ಚೆಲ್ಲಬೇಕು ಎಂದು ಮನವಿ ಮಾಡಿದರು.