ಜನರ ಭಾವನೆ ಕೆರಳಿಸಿದರೆ ಮಹಾರಾಷ್ಟ್ರ ಸಚಿವರ ವಿರುದ್ಧ ಕ್ರಮ: ಗೃಹ ಸಚಿವ ಜ್ಞಾನೇಂದ್ರ
ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದರೇನು? ಬೆಂಗಳೂರಿಗೂ ಬರಲಿ. ನಾವು ಬಾಂಬೆಗೂ ಹೋಗುತ್ತೇವೆ. ಯಾವ ಸಮಯಕ್ಕೆ ಬರಬೇಕು, ಯಾವ ಕಾರಣಕ್ಕೆ ಬರಬೇಕು ಅನ್ನುವುದು ಮುಖ್ಯವಾಗುತ್ತದೆ: ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು(ಡಿ.07): ಬೆಳಗಾವಿಗೆ ಬಂದು ಸುಮ್ಮನಿದ್ದವರನ್ನು ಕೆಣಕಿದರೆ, ಜನರ ಭಾವನೆಗಳನ್ನು ಕೆರಳಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ, ಗಡಿ ಸಾಮರಸ್ಯ ಹಾಗೂ ಇತರ ವಿಷಯಗಳ ಕುರಿತು ಚರ್ಚಿಸಿದರು. ನಂತರ ಮಾತನಾಡಿದ ಅವರು, ಇವತ್ತಿನ ಸಭೆಯಲ್ಲಿ ಗಡಿ ವಿಚಾರವಾಗಿ ಶಾಂತಿ ಸುವ್ಯವಸ್ಥೆ ಬಗ್ಗೆ ಚರ್ಚೆ ಮಾಡಿದ್ದೇವೆ. ಯಾರೇ ಆಗಲಿ ಜನರ ಭಾವನೆಯನ್ನು ಕೆರಳಿಸುವ ಕೆಲಸ ಮಾಡಬಾರದು ಎಂದು ಹೇಳಿದರು.
ಬೆಳಗಾವಿ ಗಡಿ ಗಲಾಟೆಗೆ ಶರದ್ ಪವಾರ್ ಕೆಂಡ, ಕರ್ನಾಟಕಕ್ಕೆ ತಾಳ್ಮೆ ಪರೀಕ್ಷಿಸದಂತೆ ಎಚ್ಚರಿಕೆ!
ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದರೇನು? ಬೆಂಗಳೂರಿಗೂ ಬರಲಿ. ನಾವು ಬಾಂಬೆಗೂ ಹೋಗುತ್ತೇವೆ. ಯಾವ ಸಮಯಕ್ಕೆ ಬರಬೇಕು, ಯಾವ ಕಾರಣಕ್ಕೆ ಬರಬೇಕು ಅನ್ನುವುದು ಮುಖ್ಯವಾಗುತ್ತದೆ. ಸಚಿವರಾಗಬಹುದು ಅಥವಾ ಸಾಮಾನ್ಯ ಜನರಾಗಬಹುದು ಕಾನೂನು ದೃಷ್ಟಿಯಲ್ಲಿ ಎಲ್ಲರೂ ಒಂದೇ. ಕಾನೂನಿನ ವಿರುದ್ಧವಾಗಿ ಹೋದರೆ ಕ್ರಮ ಆಗುತ್ತದೆ. ಶಾಂತಿ ಭಂಗ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ರಾಜ್ಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್‌ಸೂದ್, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್‌ಕುಮಾರ್, ದಯಾನಂದ, ಮಾಲಿನಿ ಕೃಷ್ಣಮೂರ್ತಿ, ಹಿತೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.