ಫುಟ್‌ಪಾತ್‌ ಒತ್ತುವರಿಯಿಂದಾಗಿ ಪಾದಚಾರಿಗಳು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಪಾದಚಾರಿ ಮಾರ್ಗದಲ್ಲಿ ನಡೆಯುವುದು ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್‌ ಹೇಳಿದ್ದು, ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈ ಲೇಖನವು ಫುಟ್‌ಪಾತ್‌ಗಳ ಇತಿಹಾಸ, ಮಹತ್ವ ವಿವರಿಸುತ್ತದೆ.

- ರುದ್ರಯ್ಯ ಎಸ್‌.ಸೊಬರದಮಠ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಯ್ಯೋ... ಫುಟ್‌ಪಾತ್‌ ಸರಿ ಇದ್ದಿದ್ದರೆ ಆ ಜೀವ ಉಳಿಯುತ್ತಿತ್ತು!

ಫುಟ್‌ಪಾತ್‌ ಒತ್ತುವರಿಯಾದ ಕಡೆಗಳಲ್ಲೆಲ್ಲಾ ರಸ್ತೆಗಳಲ್ಲೇ ನಡೆಯುವ ಪಾದಚಾರಿಗಳು ಯಾವುದಾದರೂ ಅಪಘಾತಕ್ಕೆ ಬಲಿಯಾದಾಗ ಬರುವ ಮೊದಲ ಉದ್ಗಾರ ಇದು. ಪಾದಚಾರಿ ಮಾರ್ಗಗಳಲ್ಲಿ ಜನರು ನಡೆಯುವುದು ಕೂಡ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಅದರ ಬೆನ್ನಲ್ಲೇ ಬೆಂಗಳೂರಿನಲ್ಲಿ ವ್ಯಾಪಾರಿಗಳು ಸೇರಿದಂತೆ ಫುಟ್‌ಪಾತ್‌ನಿಂದ ಅಕ್ರಮ ಒತ್ತುವರಿಗಳನ್ನೆಲ್ಲಾ ಬುಲ್ಡೋಜರ್ ಬಳಸಿ ತೆರವು ಮಾಡಲಾಗುತ್ತಿದೆ. ಈ ಕಾರ್ಯಾಚರಣೆ ಬಗ್ಗೆ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಾಗಾದರೆ, ಈ ಫುಟ್‌ಪಾತ್‌ ಪರಿಕಲ್ಪನೆ ಬಂದಿದ್ದು ಹೇಗೆ? ಅವುಗಳ ಒತ್ತುವರಿಯಿಂದಾಗುತ್ತಿರುವ ಸಮಸ್ಯೆಗಳು ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಶುರುವಾಗಿದ್ದು ಯುರೋಪ್‌ನಿಂದ

17-18ನೇ ಶತಮಾನದಲ್ಲಿ ಕುದುರೆಗಾಡಿಗಳು ಹೆಚ್ಚಾದಂತೆ ಲಂಡನ್ ಮತ್ತು ಪ್ಯಾರಿಸ್ ನಗರಗಳಲ್ಲಿ ಪಾದಚಾರಿಗಳಿಗೆ ಸಮಸ್ಯೆ ಶುರುವಾಯಿತು. ಆ ವೇಳೆ ಜನರ ಓಡಾಟಕ್ಕೆ ಒತ್ತು ನೀಡಿ ರಸ್ತೆ ಪಕ್ಕದಲ್ಲಿ ಎತ್ತರದ ಮಾರ್ಗ ನಿರ್ಮಿಸುವ ಪರಿಕಲ್ಪನೆ ಆರಂಭವಾಯಿತು. ರೋಮ್‌ ನಗರದಲ್ಲಿ ಕಲ್ಲಿನ ಎತ್ತರದ ಅಂಚುಗಳನ್ನು ಕಟ್ಟಲಾಯಿತು. 19ನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಪ್ರಮುಖ ನಗರಗಳಲ್ಲಿ ಜನಸಂಖ್ಯೆ ಹೆಚ್ಚಿದ ಕಾರಣ ರಸ್ತೆ ಮತ್ತು ಫುಟ್ಪಾತ್‌ ಪ್ರತ್ಯೇಕತೆ ಪದ್ಧತಿ ವ್ಯಾಪಕವಾಯಿತು. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿಯೇ ರಸ್ತೆ ನಿರ್ಮಿಸುವಾಗ ಕಾಲುದಾರಿ ಕಡ್ಡಾಯಗೊಳಿಸಲಾಯಿತು. ಕೋಲ್ಕತ್ತಾ, ಮುಂಬೈ, ಮದ್ರಾಸ್‌ ನಗರಗಳಲ್ಲಿ ಯುರೋಪಿಯನ್ ಮಾದರಿಯಲ್ಲಿ ಫುಟ್ಪಾತ್‌ ನಿರ್ಮಾಣವಾದವು.

5 ವರ್ಷದಲ್ಲಿ 1.8 ಲಕ್ಷ ಜನರು ಬಲಿ

ಭಾರತದಲ್ಲಿ 2019ರಿಂದ 2024ರ ಅವಧಿಯಲ್ಲಿ 1.8 ಲಕ್ಷ ಪಾದಚಾರಿಗಳು ಮೃತಪಟ್ಟಿದ್ದಾರೆ. ಕಳೆದ 3 ವರ್ಷದಲ್ಲಿ ಬೆಂಗಳೂರಲ್ಲಿ ಸಾವಿರಾರು ಪಾದಚಾರಿಗಳು ಅಪಘಾತಕ್ಕೆ ತುತ್ತಾಗಿದ್ದು, ತಿಂಗಳಿಗೆ ಸರಾಸರಿ 100ಕ್ಕೂ ಹೆಚ್ಚು ಪಾದಚಾರಿ ಅಪಘಾತ ಕೇಸ್‌ ದಾಖಲಾಗಿವೆ. ಈ ಪೈಕಿ 750ಕ್ಕೂ ಜನರ ಮೃತಪಟ್ಟಿದ್ದಾರೆ ಎಂಬುದು ಆತಂಕಕಾರಿ. ಈ ಕೇಸ್‌ಗಳ ಅಧ್ಯಯನದ ವರದಿ ಪ್ರಕಾರ, ಒತ್ತುವರಿಗೊಂಡ ಅಥವಾ ಹಾಳಾಗಿರುವ ಫುಟ್‌ಪಾತ್‌ಗಳಿಂದಾಗಿ ಜನರು ರಸ್ತೆಯಲ್ಲಿ ನಡೆಯುವಂತೆ ಆಗಿರುವುದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಕೋರ್ಟ್‌ಗಳು ಹೇಳೋದೇನು?

ವಿವಿಧ ಪ್ರಕರಣಗಳಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ‘ಫುಟ್‌ಪಾತ್‌ನಲ್ಲಿ ನಡೆಯುವುದು ಜನರ ಹಕ್ಕು’ ಎಂದು ಸ್ಪಷ್ಟಪಡಿಸಿವೆ. ಫುಟ್‌ಪಾತ್‌ಗಳು ಸಾರ್ವಜನಿಕರ ಬಳಕೆಗಾಗಿ ಮಾತ್ರ ಮೀಸಲಾಗಿವೆ. ಫುಟ್‌ಪಾತ್‌ನಲ್ಲಿ ನಡೆಯುವುದು ಸಂವಿಧಾನದ ವಿಧಿ 19 (1) (ಮುಕ್ತ ಸಂಚಾರ ಸ್ವಾತಂತ್ರ್ಯ) ಮತ್ತು ವಿಧಿ 21ರ (ಜೀವಿಸುವ ಹಕ್ಕು) ಅಡಿಯಲ್ಲಿ ಜನರ ಹಕ್ಕಿನ ಭಾಗವಾಗಿದೆ. ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ಗುಣಮಟ್ಟದ ಫುಟ್‌ಪಾತ್‌ ನಿರ್ಮಿಸಿ ನಿರ್ವಹಿಸಬೇಕು. ಪಾದಚಾರಿ ಮಾರ್ಗದಲ್ಲಿ ಕಟ್ಟಡ, ಅಂಗಡಿ ನಿರ್ಮಾಣ, ವಾಹನ ನಿಲುಗಡೆ ಕಾನೂನು ಬಾಹಿರವಾಗಿದ್ದು, ಅಂತಹ ಒತ್ತುವರಿ ತೆರವು ಮಾಡುವುದು ಸ್ಥಳೀಯ ಸಂಸ್ಥೆಗಳ ಕರ್ತವ್ಯ, ಅಧಿಕಾರವಾಗಿದೆ ಎಂದು ನ್ಯಾಯಾಲಯಗಳು ಆದೇಶ ನೀಡಿವೆ.

ಬೆಂಗ್ಳೂರಲ್ಲಿ ಪಾದಚಾರಿ ಅಪಘಾತ 

ವರ್ಷ ಅಪಘಾತ ಸಾವುಗಳು

  • 2023 1,259 288
  • 2024 1,216 246
  • 2025 1,165 218

--

ಫುಟ್‌ಪಾತ್ ಏಕೆ ಅಗತ್ಯ?

ವಾಹನಗಳು ಓಡಾಡುವ ಮಾರ್ಗದಲ್ಲಿ ಪಾದಚಾರಿಗಳು ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಹೀಗಾಗಿ ಪಾದಚಾರಿಗಳ ಸುರಕ್ಷಿತ ನಡಿಗೆಗೆ ಫುಟ್‌ಪಾತ್‌ಗಳು ಬೇಕು.

ಫುಟ್‌ಪಾತ್‌ ಹೇಗಿರಬೇಕು?

ಇಂಡಿಯನ್‌ ರೋಡ್‌ ಕಾಂಗ್ರೆಸ್‌ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮಾರ್ಗಸೂಚಿಗಳ ಪ್ರಕಾರ, ರಸ್ತೆಯ ಎರಡೂ ಬದಿಗಳಲ್ಲೂ ಕನಿಷ್ಠ 1.8 ಮೀಟರ್, ಜನಸಂದಣಿ ಇರುವಲ್ಲಿ 2.5 ರಿಂದ 3 ಮೀಟರ್ ಅಗಲದ ಫುಟ್‌ಪಾತ್ ನಿರ್ಮಾಣ ಮಾಡಬೇಕು. ಮರಗಳು, ಸೈನ್ ಬೋರ್ಡ್‌ಗಳು, ತೂಗಾಡುವ ತಂತಿಗಳು ಅಡ್ಡಿಯಾಗದಂತೆ ವಿನ್ಯಾಸ ಮಾಡಬೇಕು. ತಗ್ಗು, ಗುಂಡಿ, ಬಿರುಕುಗಳು ಇರದೆ ಮೇಲ್ಮೈ ಸಮತಟ್ಟಾಗಿರಬೇಕು. ಮಳೆ ನೀರು ನಿಲ್ಲದಂತೆ ರಸ್ತೆಯ ಕಡೆಗೆ ಇಳಿಜಾರು ಮಾಡಬೇಕು.

ಕಣ್ತೆರೆಸಿದ ತಮಿಳುನಾಡು ಅಪಘಾತ

ತಮಿಳುನಾಡಿನಲ್ಲಿ 2014ರಲ್ಲಿ ತಂದೆಯ ಜತೆ 5 ವರ್ಷದ ಬಾಲಕನೊಬ್ಬ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ. ಫುಟ್ಪಾತ್‌ನಲ್ಲಿ ನಡೆಯಲು ಜಾಗವಿಲ್ಲದ್ದಕ್ಕೆ ರಸ್ತೆಯಲ್ಲೇ ಹೋಗುತ್ತಿದ್ದರು. ಆ ಟ್ಯಾಂಕರ್ ಡಿಕ್ಕಿ ಹೊಡೆದು ಮಗನು ತಂದೆ ಎದುರೇ ಮೃತಪಟ್ಟನು. ಮಗನ ಸಾವಿಗೆ ನ್ಯಾಯ ಕೇಳಿ ತಂದೆ ಸುಪ್ರೀಂಕೋರ್ಟ್‌ಗೆ ಹೋದಾಗ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠವು, ‘ಜನರು ಸುರಕ್ಷಿತವಾಗಿ ಓಡಾಡುವುದು ಸಂವಿಧಾನ ಬದ್ಧ ಮೂಲಭೂತ ಹಕ್ಕು’ ಎಂದು 2026ರ ಜೂ.19ರಂದು ಸ್ಪಷ್ಟ ಆದೇಶ ನೀಡುವುದರ ಜತೆಗೆ ‘ಮೃತನ ಕುಟುಂಬಕ್ಕೆ ₹11,44,628 ಪರಿಹಾರ ಪಾವತಿಸುವಂತೆ’ ಸೂಚಿಸಿತು. ಇದರಿಂದ ಎಚ್ಚೆತ್ತ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಫುಟ್ಪಾತ್‌ ಒತ್ತುವರಿ ತೆರವಿಗೆ ಮುಂದಾಗಿವೆ.

ವರ್ಷಕ್ಕೆ 300 ಜನ ಸಾವು

ಬೆಂಗಳೂರಲ್ಲಿ ಸಂಭವಿಸುವ ರಸ್ತೆ ಅಪಘಾತದಲ್ಲಿ ವರ್ಷಕ್ಕೆ 300 ಪಾದಚಾರಿಗಳು ಮೃತಪಡುತ್ತಿದ್ದು, ಸಾವಿರಾರು ಜನ ಅಂಗವಿಕಲರಾಗುತ್ತಿದ್ದಾರೆ. ಅಲ್ಲದೆ ಕೆಲವರು ಕೋಮಾಗೆ ಹೋಗಿದ್ದಾರೆ. ಆ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ಆದೇಶ, ಬೆಂಗಳೂರಿನ ನಾಗರಿಕರ ಒತ್ತಾಸೆ ಮೇರೆಗೆ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸುಂದರ, ಸುರಕ್ಷಿತ ನಗರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು.

ಕೃಷ್ಣ ಬೈರೇಗೌಡ, \Bಬೆಂಗಳೂರು ನಗರಾಭಿವೃದ್ಧಿ ಸಚಿವ

--

ಬೇರೆ ನಗರಗಳಲ್ಲಿ ಹೇಗಿದೆ ಸ್ಥಿತಿ?

ದೆಹಲಿ: ಕನ್ನಾಟ್ ಪ್ಲೇಸ್, ಚಾಂದನಿ ಚೌಕ್, ರಾಜಪಥ್ ಸೇರಿದಂತೆ ಹಲವೆಡೆ ಅಗಲವಾದ ವೀಲ್‌ಚೇರ್ ಸ್ನೇಹಿ, ಟೈಲ್ಸ್‌ ಇರುವ ಫುಟ್ಪಾತ್‌ ನಿರ್ಮಿಸಲಾಗಿದೆ. ಆದರೆ ಹಳೆ ದೆಹಲಿಯ ಮಾರುಕಟ್ಟೆ, ಸಾರ್ವಜನಿಕ ಪ್ರದೇಶಗಳಲ್ಲಿ ಕಿರಿದಾದ ಫುಟ್ಪಾತ್‌ಗಳಿದ್ದು, ವ್ಯಾಪಾರಿಗಳು ವಿಪರೀತ ಒತ್ತುವರಿ ಮಾಡಿದ್ದಾರೆ. 2025ರಲ್ಲಿ 2192 ಅಪಘಾತಗಳು ದಾಖಲಾಗಿದ್ದು, 649 ಪಾದಚಾರಿಗಳು ಮೃತಪಟ್ಟಿದ್ದಾರೆ.

ಮುಂಬೈ: ಸಾವಿರಾರು ಕಿ.ಮೀ. ರಸ್ತೆಗಳಲ್ಲಿ ಕಾಂಕ್ರೀಟ್, ಟ್ಯಾಕ್ಟೈಲ್ ಟೈಲ್ಸ್ ಬಳಸಿ ಅಗಲವಾದ ಅಂಗವಿಕಲ ಸ್ನೇಹಿ ಫುಟ್ಪಾತ್‌ ನಿರ್ಮಿಸಲಾಗಿದೆ. ಆದರೂ ಜನಸಾಂದ್ರತೆ ಹೆಚ್ಚಿದ್ದು, ಬೀದಿಬದಿ ವ್ಯಾಪಾರಿಗಳ ಒತ್ತುವರಿ ಅಧಿಕವಿದೆ. ಈ ಕಾರಣಕ್ಕಾಗಿ 2022ರಲ್ಲಿ 365, 2024ರಲ್ಲಿ 185 ಪಾದಚಾರಿಗಳು ಅಪಘಾತಕ್ಕೆ ಬಲಿಯಾಗಿದ್ದಾರೆ.

ಚೆನ್ನೈ: ರಸ್ತೆಬದಿ ವ್ಯಾಪಾರಿಗಳು, ವಾಹನಗಳು ಪಾದಚಾರಿ ಪಥಕ್ಕೆ ಅಡ್ಡಿಯಾಗಿದ್ದು, 2024ರಲ್ಲಿ ಸಂಭವಿಸಿದ ಸಾವಿರ ಅಪಘಾತಗಳಲ್ಲಿ 520 ಪಾದಚಾರಿಗಳು ಮೃತಪಟ್ಟಿದ್ದಾರೆ.

ಕೋಲ್ಕತಾ: ಅತಿಯಾದ ಜನಸಾಂದ್ರತೆ ಹಾಗೂ ಬೀದಿಬದಿ ವ್ಯಾಪಾರಿಗಳ ಕಾರಣದಿಂದ ಫುಟ್ಪಾತ್ ಒತ್ತುವರಿ ಸವಾಲಾಗಿದ್ದು, ಆಗಾಗ ತೆರವು ಕಾರ್ಯಾಚರಣೆ ನಡೆಯುತ್ತದೆ. 2024ರಲ್ಲಿ ರಸ್ತೆ ಅಪಘಾತಕ್ಕೆ ಮೃತಪಟ್ಟ 191 ಜನರ ಪೈಕಿ 79 ಮಂದಿ ಪಾದಚಾರಿಗಳಾಗಿದ್ದಾರೆ.

ಅಹಮದಾಬಾದ್: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1925ರಲ್ಲಿ ಅಹಮದಾಬಾದ್‌ ಪುರಸಭೆ ಅಧ್ಯಕ್ಷರಾಗಿದ್ದಾಗಲೇ ₹10135 ವೆಚ್ಚದಲ್ಲಿ ಫುಟ್ಪಾತ್‌ ಯೋಜನೆ ಜಾರಿಗೊಳಿಸಿದರು. ಇದೀಗ ಪಾದಚಾರಿ ಮತ್ತು ಸೈಕಲ್ ಸಂಚಾರಕ್ಕೆ ಆದ್ಯತೆ ನೀಡಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಅಗಲವಾದ ಫುಟ್ಪಾತ್‌ಗಳಿವೆ. ವೀಲ್‌ಚೇರ್ ರ್‍ಯಾಂಪ್‌, ಟೈಲ್ಸ್‌ ಅಳವಡಿಸಲಾಗಿದೆ. ದ್ವಿಚಕ್ರ ವಾಹನ, ಕಾರುಗಳ ಅಕ್ರಮ ಪಾರ್ಕಿಂಗ್ ಹಾಗೂ ವ್ಯಾಪಾರಿಗಳ ಒತ್ತುವರಿಯಿಂದ ಪಾದಚಾರಿಗಳಿಗೆ ತೊಂದರೆ ತಪ್ಪಿಲ್ಲ. 2024ರಲ್ಲಿ 180 ಪಾದಚಾರಿಗಳು, 25 ಜನ ಸೈಕಲ್ ಸವಾರರು ಮೃತಪಟ್ಟಿದ್ದಾರೆ.