ಬೆಂಗಳೂರು(ಜು.14): ನಗರದಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಿಬಿಎಂಪಿಯು ನೇರ ಸಂದರ್ಶನದ ಮೂಲಕ 240 ಮಂದಿ ವೈದ್ಯರು ಹಾಗೂ 23 ಸ್ಟಾಫ್‌ ನರ್ಸ್‌, 42 ಸಹಾಯಕ ಸಿಬ್ಬಂದಿ ಮತ್ತು 273 ಗ್ರೂಪ್‌-ಡಿ ಹುದ್ದೆ ಸಿಬ್ಬಂದಿ ಸೇರಿದಂತೆ ಒಟ್ಟು 578 ಮಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದೆ.

ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆರು ತಿಂಗಳ ಗುತ್ತಿಗೆ ಅವಧಿಗೆ ವೈದ್ಯರು, ಸ್ಟಾಫ್‌ ನರ್ಸ್‌, ಸಹಾಯಕ ಸಿಬ್ಬಂದಿ ಹಾಗೂ ಡಿ-ಗ್ರೂಪ್‌ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದಕ್ಕೆ ಅಧಿಸೂಚನೆ ಹೊರಡಿಸಿದೆ. ಜುಲೈ 10 ಹಾಗೂ 13ರಂದು ಪುರಭವನದಲ್ಲಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಂಡಿದೆ.

ಬಿಬಿಎಂಪಿ ನಂಬಿಕೊಂಡರೆ ನಗರದಲ್ಲಿ ಭೀಕರ ಸ್ಥಿತಿ ಸೃಷ್ಟಿ: ಹೈಕೋರ್ಟ್‌ ಕಿಡಿ

ಇವರಿಗೆ ಈಗಾಗಲೇ ನೇಮಕಾತಿ ಆದೇಶ ನೀಡಲಾಗಿದ್ದು, ಕೊರೋನಾ ಆರೈಕೆ ಕೇಂದ್ರಗಳಲ್ಲಿ ಸೇವೆಗೆ ನಿಯೋಜಿಸಲಾಗುವುದು. ಮಂಗಳವಾರ ಮತ್ತು ಬುಧವಾರ ಎರಡು ದಿನ ಸಂದರ್ಶನ ಮುಂದುವರೆಯಲಿದ್ದು, ಇನ್ನಷ್ಟುಮಂದಿ ವೈದ್ಯರು ಮತ್ತು ಸ್ಟಾಫ್‌ ನರ್ಸ್‌, ಸಹಾಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಅನ್ಬುಕುಮಾರ್‌ ಮಾಹಿತಿ ನೀಡಿದ್ದಾರೆ.

ಆಸಕ್ತರು ಸಂದರ್ಶನದಲ್ಲಿ ಭಾಗವಹಿಸಿ: ಬಿಬಿಎಂಪಿ

ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಇಚ್ಛಿಸುವವರು ಎಂಬಿಬಿಎಸ್‌, ಬಿಡಿಎಸ್‌ ಹಾಗೂ ಆಯುಷ್‌ ವೈದ್ಯರು ತಮ್ಮ ಸಂಬಂಧಿತ ಕೋರ್ಸ್‌ ಮುಗಿಸಿರಬೇಕು. ಸ್ಟಾಫ್‌ ನರ್ಸ್‌ ಹುದ್ದೆಗೆ ಬಿಎಸ್ಸಿ, ಜಿಎನ್‌ ಎಂ ಅಥವಾ ಇದಕ್ಕೆ ಸಮಾನವಾದ ವಿದ್ಯಾಭ್ಯಾಸ ಮಾಡಿರಬೇಕು. ಸಹಾಯಕ ಸಿಬ್ಬಂದಿ ಮೂರು ವರ್ಷ ಪ್ಯಾರಾ ಮೆಡಿಕಲ್‌ ವಿದ್ಯಾರ್ಹತೆ ಮತ್ತು ಡಿ ಗ್ರೂಪ್‌ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿರಬೇಕು. ಎಲ್ಲ ಹುದ್ದೆಗೆ 50 ವರ್ಷದ ಒಳಗಿನವರು ಮಾತ್ರ ಅರ್ಹರು.
ಜು.15ರವರೆಗೆ ಸರ್‌ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳು, ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.