ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ಕಟ್ ಆಗಿ ಮೂರು ದಿನಗಳಿಂದ ಸುಮಾರು 2 ಟಿಎಂಸಿ ಕೃಷ್ಣಾ ನದಿ ನೀರು ಪೋಲು. ತಾಂತ್ರಿಕ ದೋಷದಿಂದ ದುರಸ್ತಿ ಕಾರ್ಯ ವಿಳಂಬವಾಗಿದ್ದು, 120 ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವದ ಭೀತಿ ಎದುರಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ
ಬಾಗಲಕೋಟೆ (ಜ.8): ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಇರುವ ಕೃಷ್ಣಾ ನದಿಯ ಬ್ಯಾರೇಜ್ ಗೇಟ್ ಕಟ್ ಆಗಿ ಇಂದಿಗೆ ಮೂರು ದಿನ ಕಳೆದರೂ ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ. ಕಳೆದ 40 ಗಂಟೆಗಳಿಂದ ನಿರಂತರವಾಗಿ ನೀರು ಪೋಲಾಗುತ್ತಿದ್ದು, ಅಂದಾಜು 2 ಟಿಎಂಸಿಯಷ್ಟು ಅಮೂಲ್ಯ ನೀರು ಪೋಲಾಗಿದೆ.ಜನವರಿ 6ರ ಮಧ್ಯಾಹ್ನ ಗೇಟ್ ತಾಂತ್ರಿಕ ಸಮಸ್ಯೆಯಿಂದ ಕಟ್ ಆಗಿದ್ದು, ಅಂದಿನಿಂದಲೂ ನೀರಿನ ಸೋರಿಕೆ ತಡೆಯಲು ಸಾಧ್ಯವಾಗಿಲ್ಲ.

ಸ್ಥಳಕ್ಕೆ ಜಿಲ್ಲಾಧಿಕಾರಿ, ಶಾಸಕರು ಭೇಟಿ
ಬ್ಯಾರೇಜ್ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಇಂದು ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಂದ ದುರಸ್ತಿ ಕಾರ್ಯದ ಪ್ರಗತಿಯ ಬಗ್ಗೆ ಮಾಹಿತಿ ಪಡೆದ ಅವರು, ಶೀಘ್ರ ಕೆಲಸ ಮುಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಈ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ದುರಸ್ತಿಗೆ ವಿಳಂಬವೇಕೆ? ತಾಂತ್ರಿಕ ಅಡಚಣೆಗಳೇನು?
ಗೇಟ್ ದುರಸ್ತಿ ಕಾರ್ಯಕ್ಕೆ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಆದರೆ, ಗೇಟ್‌ನ ಮಧ್ಯಭಾಗದ ಪ್ಲೇಟ್ ಡೆಂಟ್ ಆಗಿರುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಡೆಂಟ್ ಆಗಿರುವ ಪ್ಲೇಟ್ ಅನ್ನು ಹೊರತೆಗೆಯಲು ಸಾಧ್ಯವಾಗದ ಕಾರಣ ಹೊಸ ಗೇಟ್ ಅಳವಡಿಸಲು ವಿಳಂಬವಾಗುತ್ತಿದೆ. ನುರಿತ ತಾಂತ್ರಿಕ ತಂಡದೊಂದಿಗೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.

120 ಗ್ರಾಮಗಳ ಜೀವನಾಡಿ ಈ ಬ್ಯಾರೇಜ್
ಹಿಪ್ಪರಗಿ ಬ್ಯಾರೇಜ್ ಬರೀ ಅಣೆಕಟ್ಟಲ್ಲ, ಇದು ಅಥಣಿ, ಕಾಗವಾಡ, ಜಮಖಂಡಿ ಹಾಗೂ ಬನಹಟ್ಟಿ ಭಾಗದ ಸುಮಾರು 120 ಗ್ರಾಮಗಳ ಜೀವನಾಡಿ. ಈ ಬ್ಯಾರೇಜ್‌ನಿಂದಲೇ ಸಾವಿರಾರು ಎಕರೆ ಭೂಮಿಗೆ ನೀರಾವರಿ ಹಾಗೂ ನೂರಾರು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಈಗ ನೀರು ವ್ಯರ್ಥವಾಗುತ್ತಿರುವುದರಿಂದ ಬೇಸಿಗೆಯ ಆರಂಭದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಭೀತಿ ಎದುರಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರ ಆಕ್ರೋಶ
ಒಟ್ಟು 22 ಗೇಟ್ ಹೊಂದಿರುವ ಈ ಬ್ಯಾರೇಜ್‌ನಲ್ಲಿ 11 ಗೇಟ್ ಬಾಗಲಕೋಟೆ ಹಾಗೂ ಉಳಿದ 11 ಗೇಟ್ ಬೆಳಗಾವಿ ಜಿಲ್ಲಾ ವ್ಯಾಪ್ತಿಗೆ ಬರುತ್ತವೆ. ಕಳೆದ 2024 ರಲ್ಲೂ ಸಹ ಇದೇ ರೀತಿ ಗೇಟ್ ಕಟ್ ಆಗಿ ಸಮಸ್ಯೆ ಉಂಟಾಗಿತ್ತು. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಅಧಿಕಾರಿಗಳ ನಿರ್ವಹಣಾ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


