Asianet Suvarna News Asianet Suvarna News

ಹಿಜಾಬ್‌ ಸಭೆ ಗೊತ್ತಿಲ್ಲ, ಸಮವಸ್ತ್ರ ವಿಚಾರದಲ್ಲಿ ಗೊಂದಲವಿಲ್ಲ: ಸಚಿವ ಮಧು ಬಂಗಾರಪ್ಪ

ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ವಿಚಾರಣೆ ನ್ಯಾಯಾಲಯದ ಹಂತದಲ್ಲಿ ನಡೆಯುತ್ತಿದೆ. ಈಗ ಅನ್ನು ವಾಪಸ್‌ ಪಡೆಯಬೇಕೋ, ಬೇಡವೋ ಎಂಬ ಬಗ್ಗೆ ಸಿಎಂ ಯಾವಾಗ ಸಭೆ ನಿಗದಿ ಮಾಡುತ್ತಾರೋ ಗೊತ್ತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. 
 

Hijab meeting is not known there is no confusion about uniforms Says Minister Madhu Bangarappa gvd
Author
First Published Dec 25, 2023, 5:43 AM IST

ಶಿವಮೊಗ್ಗ (ಡಿ.25): ನಾವು ಅಧಿಕಾರಕ್ಕೆ ಬರುವ ಮೊದಲೇ ಘೋಷಣೆ ಮಾಡಿದಂತೆ ಐದು ಗ್ಯಾರಂಟಿ ಯೋಜನೆಯಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇನ್ನುಳಿದ ಯುವನಿಧಿ ಯೋಜನೆಯನ್ನು ಜಾರಿಗೆ ಸರ್ಕಾರ ಮುಂದಾಗಿದೆ. ಜ.26ರಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವನಿಧಿಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ವಾಮಿ ವಿವೇಕಾನಂದ ಜಯಂತಿ ದಿನವಾದ ಜ.12ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ 5ನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಚಾಲನೆ ದೊರೆಯಲಿದೆ. 

ಡಿ.26ರಿಂದಲೇ ನೋಂದಣಿ ಆರಂಭವಾಗಲಿದೆ. ನೋಂದಣಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಿ ಸೌಲಭ್ಯ ಪಡೆಯಬೇಕು ಎಂದರು. ರಾಜ್ಯಮಟ್ಟದ ಕಾರ್ಯಕ್ರಮ ಆಗಿರುವುದರಿಂದ ಇದು ದೊಡ್ಡಮಟ್ಟದಲ್ಲಿ ನಡೆಯಲಿದೆ. ಅಂದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಸಚಿವ ಸಂಪುಟದ ಸಚಿವರು ಭಾಗವಹಿಸಲಿದ್ದಾರೆ‌ ಎಂದು ಮಾಹಿತಿ ನೀಡಿದರು. 

ಸಿಎಂ ಯೂಟರ್ನ್ ಹೇಳಿಕೆ ಹಿಂದುತ್ವ ಶಕ್ತಿಗೆ ಸಿಕ್ಕ ಜಯ: ಕೆ.ಎಸ್‌.ಈಶ್ವರಪ್ಪ

ಈಗಾಗಲೇ ಸರ್ಕಾರದಿಂದ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಸೌಲಭ್ಯ ಯಾರಿಗೆ ತಲುಪಿಲ್ಲವೋ, ಅದರ ಬಗ್ಗೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಗಮನಿಸಿ ಪರಿಹರಿಸಲಾಗುತ್ತಿದೆ. ಅಲ್ಲದೇ, ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಧಿಕಾರಿಗಳೇ ಹೋಗಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲಿದ್ದಾರೆ ಎಂದರು. ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ ತಲುಪದ ಊರಿಗೆ ಬಸ್ ಸಂಚಾರ ಆರಂಭಿಸುವ ಬಗ್ಗೆ ಗಮನಹರಿಸಲಾಗುತ್ತದೆ. ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವ ಬಗ್ಗೆ ರಾಜ್ಯಮಟ್ಟದಲ್ಲಿ ಸಾರಿಗೆ ಸಚಿವರು ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಶಾಲೆಯನ್ನು ಮಕ್ಕಳ ಮೂಲಕ ಸ್ವಚ್ಛಗೊಳಿಸುವ ಹಾಗಿಲ್ಲ: ಸರ್ಕಾರಿ ಶಾಲೆಗಳನ್ನು ಮಕ್ಕಳ ಮೂಲಕ ಸ್ವಚ್ಛಗೊಳಿಸುವ ಹಾಗಿಲ್ಲ. ಈ ಬಗ್ಗೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಈ ರೀತಿಯ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಂಡರೇ ಕಠಿಣ ಕ್ರಮ ಕೈಗೊಳ್ಳಲಾಗುವುದು. ಡಿ ದರ್ಜೆ ನೌಕರರ ಮೂಲಕ ಈ ಕೆಲಸ ಮಾಡಿಸಬೇಕು. ಅಗತ್ಯ ಬಿದ್ದರೆ ಪ್ರತಿ ಶಾಲೆಯಲ್ಲಿ ಡಿ ದರ್ಜೆ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ನೆಲದ ಮೇಲೆ‌ ಕುಳಿತು ಪಾಠ ಕೇಳುವಂತಿಲ್ಲ: ಶಾಲಾ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳಬಾರದು. ಇದಕ್ಕಾಗಿ ಎಲ್ಲ ಶಾಲೆಗಳಿಗೂ ಅಗತ್ಯವಾದ ಡೆಸ್ಕ್ ಸೌಲಭ್ಯ ಕಲ್ಪಿಸಲಾಗುವುದು. ಇನ್ನೆರಡು ವರ್ಷದಲ್ಲಿ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳ ಮಕ್ಕಳಿಗೆ ಕಡ್ಡಾಯವಾಗಿ ಡೆಸ್ಕ್ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.

ಹಿಜಾಬ್‌ ಸಭೆ ಗೊತ್ತಿಲ್ಲ, ಸಮವಸ್ತ್ರ ವಿಚಾರದಲ್ಲಿ ಗೊಂದಲವಿಲ್ಲ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ವಿಚಾರಣೆ ನ್ಯಾಯಾಲಯದ ಹಂತದಲ್ಲಿ ನಡೆಯುತ್ತಿದೆ. ಈಗ ಅನ್ನು ವಾಪಸ್‌ ಪಡೆಯಬೇಕೋ, ಬೇಡವೋ ಎಂಬ ಬಗ್ಗೆ ಸಿಎಂ ಯಾವಾಗ ಸಭೆ ನಿಗದಿ ಮಾಡುತ್ತಾರೋ ಗೊತ್ತಿಲ್ಲ. ಈ ವಿಷಯ ಇನ್ನು ಚರ್ಚೆ ಹಂತದಲ್ಲಿದ್ದು, ಕಾನೂನು ತಜ್ಞರ ಜೊತೆ ಚರ್ಚೆ ನಡೆಸಬೇಕು. ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದರು.

ಸಂಸದ ಪ್ರತಾಪ್‌ ಸಿಂಹ ಅಪ್ಪಟ ಹಿಂದುತ್ವವಾದಿ: ಕೆ.ಎಸ್.ಈಶ್ವರಪ್ಪ

ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಬೇಕು ಅಂದಿತ್ತು. ಬಿಜೆಪಿಯವರು ಬೇಡ ಅಂದಿದ್ರು. ಸರ್ಕಾರ ಬಂದಾಗ ಯಾರೋ ಕೇಳಿದ್ದಕ್ಕೆ ಹಿಜಾಬ್‌ ನಿಷೇಧ ವಾಪಸ್‌ ಪಡೆಯುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸದ್ಯಕ್ಕೆ ಸಮವಸ್ತ್ರದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಮೊದಲಿನಂತೆ ನಡೆಯುತ್ತದೆ. ಮಕ್ಕಳು ಗೊಂದಲಕ್ಕೆ ಒಳಗಾಗುವುದು ಬೇಡ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಆರ್.ಪ್ರಸನ್ನಕುಮಾರ್, ಜಿ.ಡಿ.ಮಂಜುನಾಥ್, ಎಸ್‌.ಪಿ. ದಿನೇಶ್ ಮತ್ತಿತರರು ಇದ್ದರು.

Follow Us:
Download App:
  • android
  • ios