Asianet Suvarna News Asianet Suvarna News

ಕೋವಿಡ್ -19 ನಿರ್ವಹಣೆ ಕುರಿತು ತಜ್ಞ ವೈದ್ಯರೊಂದಿಗೆ ಸಿಎಂ ಸಭೆಯ ಮುಖ್ಯಾಂಶಗಳು

ಕೋವಿಡ್ -19 ನಿರ್ವಹಣೆ ಕುರಿತು ತಜ್ಞ ವೈದ್ಯರೊಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿದ್ದು, ಈ ವೇಳೆ ತಜ್ಞ ವೈದ್ಯರು ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ. ಅವು ಈ ಕೆಳಗಿನಂತಿವೆ.

highlights of CM BS Yediyurappa and specialist doctors Meeting Over Covid19 Control
Author
Bengaluru, First Published Jul 1, 2020, 5:31 PM IST

ಬೆಂಗಳೂರು, (ಜುಲೈ.01): ಕೋವಿಡ್ -19 ನಿರ್ವಹಣೆ ಕುರಿತು ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು (ಬುಧವಾರ) ಸಭೆ ನಡೆಸಿದರು.

ಸಭೆಯಲ್ಲಿ ಕೋವಿಡ್ ಚಿಕಿತ್ಸೆಗೆ ಹಾಗೂ ನಿರ್ವಹಣೆಗೆ ಅಳವಡಿಸಬೇಕಾದ ಮಾರ್ಗಸೂಚಿಗಳನ್ನು ನಿಗದಿ ಪಡಿಸುವ ಕುರಿತು ಚರ್ಚಿಸಲಾಯಿತು. ಅಲ್ಲದೇ ಸಭೆಯಲ್ಲಿ ವೈದ್ಯರು ರಾಜ್ಯ ಸರ್ಕಾರ ಕೆಲವಂದಿಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ. 

ಕೊರೋನಾ ಕಂಟ್ರೋಲ್‌ಗೆ ಅಂತರ್ ಜಿಲ್ಲೆ ಸಂಚಾರ ಬಂದ್ ಫಿಕ್ಸ್?

ಇನ್ನು ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ಏನೆಲ್ಲಾ ನಡೆಯಿತು..? ಎನ್ನುವ ಮುಖ್ಯಾಂಶಗಳು  ಈ ಕೆಳಗಿನಂತಿವೆ.

1. ಸಭೆಯಲ್ಲಿ ಕೋವಿಡ್ ಚಿಕಿತ್ಸೆಗೆ ಹಾಗೂ ನಿರ್ವಹಣೆಗೆ ಅಳವಡಿಸಬೇಕಾದ ಮಾರ್ಗಸೂಚಿಗಳನ್ನು ನಿಗದಿ ಪಡಿಸುವ ಕುರಿತು ಚರ್ಚಿಸಲಾಯಿತು.

2. ರೋಗ ಲಕ್ಷಣ ಇಲ್ಲದ ಅಥವಾ ಅತ್ಯಂತ ಕಡಿಮೆ ಜ್ವರದ ಲಕ್ಷಣಗಳಿದ್ದರೆ, ಅವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ (ಹೋಮ್ ಐಸೋಲೇಷನ್), ಅವರ ಆರೋಗ್ಯದ ಮೇಲೆ ನಿಗಾ ಇಡುವುದು ಸೂಕ್ತ. ಇದರಿಂದ ಆಸ್ಪತ್ರೆಗಳ ಮೇಲೆ ಒತ್ತಡ ತಡೆಯಬಹುದಾಗಿದೆ ಎಂದು ಬಹುತೇಕ ತಜ್ಞರು ಅಭಿಪ್ರಾಯಪಟ್ಟರು..

3. ತೀವ್ರ ಸೋಂಕಿನ ಲಕ್ಷಣಗಳು ಹೊಂದಿರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿರುವವರು ಸೋಂಕಿತರಾದಲ್ಲಿ, ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು ಎಂದು ತಜ್ಞರು ಸಲಹೆ ಮಾಡಿದರು.

4. ಪ್ರಕರಣ ದ್ವಿಗುಣಗೊಳ್ಳುವ ವೇಗ ತಗ್ಗಿಸಬೇಕು. ಮುಚ್ಚಿದ ಸ್ಥಳಗಳು, ನಿಕಟ ಸಂಪರ್ಕ ಹಾಗೂ ಜನಸಂದಣಿಯ ಸ್ಥಳಗಳಲ್ಲಿ ಜನತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

5. ಟೆಲಿ ಮೆಡಿಸಿನ್ ವ್ಯವಸ್ಥೆಯ ಮೂಲಕ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದು ಸಲಹೆ ನೀಡಿದ್ದಾರೆ.

6. ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಅಗತ್ಯವಿದೆ. ಸಂಪರ್ಕ ಪತ್ತೆ ಹಚ್ಚಲು ಹೆಚ್ಚುವರಿ ಮಾನವ ಸಂಪನ್ಮೂಲ ಅಗತ್ಯವಿದ್ದು, ಇತರ ಇಲಾಖೆಯ ಸಿಬ್ಬಂದಿ ಸೇವೆ ಬಳಸಿಕೊಳ್ಳಬೇಕು ಎಂಬ ಸಲಹೆಯೂ ಬಂದಿದೆ..

7. ಟೆಲಿ ಐಸಿಯು ಹಾಗೂ ಚಿಕಿತ್ಸೆಯ ನಿಗದಿತ ಮಾನದಂಡಗಳ ಕುರಿತು ಹೆಚ್ಚಿನ ತರಬೇತಿ ಅಗತ್ಯ.

8.ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಸರಪಣಿ ಹಾಗೂ ಹೊಸ ಔಷಧಿಗಳ ಪೂರೈಕೆ ಸರಪಣಿ ಅಬಾಧಿತವಾಗಿರಬೇಕು.

9. ರಾಜ್ಯದಲ್ಲಿ ಕೋವಿಡ್ ಕುರಿತು ಭೀತಿಯ ವಾತಾವರಣ ಸೃಷ್ಟಿಯಾಗಿದ್ದು, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕಿದೆ.

10. ತಜ್ಞರ ಈ ಅಭಿಪ್ರಾಯಗಳ ಕುರಿತು ಸರ್ಕಾರದ ಹಂತದಲಲ್ಲಿ ವಿವರವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

Follow Us:
Download App:
  • android
  • ios